Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಸರ್ಕಾರಿ ಪಾನೀಯವಾಗಿ ಎಳನೀರು ಹುಳಿಯಾರಿನಲ್ಲಿ ರಾಜ್ಯದ ಮೊದಲ ಎಳನೀರು ಕೆಫೆ

ತುಮಕೂರು: ಕಾಫಿ ಕೆಫೆ ಕೇಳಿದ್ದೀವಿ, ಆದರೀಗ ರಾಜ್ಯದ ಮೊದಲ ಎಳನೀರು ಕೆಫೆಗಳು ತಿಪಟೂರು– ತುಮಕೂರು ನಡುವಿನ ಕೊಂಡ್ಲಿಕ್ರಾಸ್‌ ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರಿನಲ್ಲಿ ಆರಂಭವಾಗುತ್ತಿವೆ.

ನಮ್ಮ ತೆಂಗು ಉತ್ಪಾದಕರ ಕಂಪೆನಿ ಈ ಕೆಫೆಗಳನ್ನು ಆರಂಭ ಮಾಡುತ್ತಿದೆ. ಆರಂಭದ ಬಂಡವಾಳವಾಗಿ ಪ್ರತಿ ಕೆಫೆಗೆ ₹ 5 ಲಕ್ಷ ಹೂಡಿಕೆ ಮಾಡಿದೆ. ಎಳನೀರಿಗೆ ವಿವಿಧ ಸ್ವಾದಗಳನ್ನು ಬೆರೆಸಿ ನೀಡಲಾಗುತ್ತದೆ.

‘ಬಹುರಾಷ್ಟ್ರೀಯ ಕಂಪೆನಿಗಳ ಲಘು ಪಾನೀಯಗಳನ್ನು ನಿಷೇಧಿಸಿ ಎಂದು ನಾವು ಕೇಳುತ್ತಿಲ್ಲ, ಬದಲಿಗೆ ಎಳನೀರನ್ನು ಸರ್ಕಾರಿ ಪಾನೀಯ ಎಂದು ಘೋಷಣೆ ಮಾಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಇದನ್ನು ಸರ್ಕಾರಕ್ಕೆ ತಲುಪಿಸುವ ಸಲುವಾಗಿ ಮಾರ್ಚ್‌ 15ರಂದು ಹುಳಿಯಾರಿನಲ್ಲಿ ರಾಜ್ಯ ಮಟ್ಟದ ಎಳನೀರು  ಮೇಳ ಆಯೋಜಿಸಲಾಗಿದೆ. ಈ ಮೇಳದ ದಿನವೇ ಮೊದಲ ಎಳನೀರು ಕೆಫೆಯ ಉದ್ಘಾಟನೆ ನಡೆಯಲಿದೆ.  ಈ ತಿಂಗಳ ಕೊನೆಯಲ್ಲಿ ಕೊಂಡ್ಲಿ ಕ್ರಾಸ್‌ನಲ್ಲಿಯೂ ಇನ್ನೊಂದು ಕೆಫೆ ಆರಂಭಿಸಲಾಗುವುದು’ ಎಂದು ನಮ್ಮ ತೆಂಗು  ಉತ್ಪಾದಕರ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಣ್ಣೆಕಟ್ಟೆ ವಿಶ್ವನಾಥ್‌ ‘ಪ್ರಜಾವಾಣಿ’ಗೆ ಸೋಮವಾರ ತಿಳಿಸಿದರು.

‘ಜನರು ಎಳನೀರು ಕುಡಿಯುವುದನ್ನು ಪ್ರೋತ್ಸಾಹಿಸುವ ಜತೆಗೆ ಎಳನೀರು ಮಾರಾಟ ಮಾಡುವುದಕ್ಕೆ ರೈತರನ್ನು ಉತ್ತೇಜಿಸುವುದು ಕೂಡ ನಮ್ಮ ಉದ್ದೇಶವಾಗಿದೆ. ರೈತರು ಎಳನೀರು ಮಾರುವುದನ್ನು ಅವಮಾನ ಅಂದುಕೊಂಡಿದ್ದಾರೆ. ಈ ಮನೋಸ್ಥಿತಿ ಬದಲಾಗಬೇಕಾಗಿದೆ. ಕುಡಿಯುವವರು ಹಾಗೂ ಮಾರುವವರು ಹೀಗೆ ಇಬ್ಬರಲ್ಲೂ ಜಾಗೃತಿ ಮೂಡಿಸುವುದು ಎಳನೀರು ಮೇಳದ ಮುಖ್ಯ ಉದ್ದೇಶ’ ಎನ್ನುತ್ತಾರೆ ಅವರು.

ಬೇಕರಿ ಉತ್ಪನ್ನಗಳು: ಎಳನೀರು ಮಾತ್ರವಲ್ಲ ತೆಂಗಿನ ಹಿಟ್ಟು ಬಳಸಿದ ಬೇಕರಿಯ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡುವುದು ಈ ಕೆಫೆಗಳ ವಿಶೇಷವಾಗಿದೆ.

‘ಫಿಲಿಪ್ಪೀನ್ಸ್‌ ದೇಶದಲ್ಲಿ ಮೈದಾಗೆ ಬದಲಿಯಾಗಿ ತೆಂಗಿನ ಹಿಟ್ಟನ್ನು ಬಳಸಲಾಗುತ್ತದೆ. ತೆಂಗಿನ ಎಣ್ಣೆ ತೆಗೆದ ಬಳಿಕ ಉಳಿಯುವ ತೌಡನ್ನು ಹಿಟ್ಟಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ. ಇದಕ್ಕಾಗಿ ವಿಶೇಷ ತರಬೇತಿ ಸಹ ಪಡೆಯಲಾಗಿದೆ. ತೆಂಗಿನ ಹಿಟ್ಟು ಬಳಸಿ ಬೇಕರಿ ತಿನಿಸು  ಮಾಡಿರುವುದು ದೇಶದಲ್ಲೇ ಮೊದಲ ಪ್ರಯೋಗ’ ಎನ್ನುತ್ತಾರೆ ಅಣ್ಣೆಕಟ್ಟೆ ವಿಶ್ವನಾಥ್.

ತಿಪಟೂರು ತಾಲ್ಲೂಕಿನ ಬಿಳಿಗೆರೆಯಲ್ಲಿ 2009ರಲ್ಲಿ ಎಳನೀರು ಮೇಳ ಮಾಡಲಾಗಿತ್ತು. ಈಗ ನಡೆಯುತ್ತಿರುವುದು ಎರಡನೇ ಮೇಳವಾಗಿದೆ.

‘ಕೇರಳದಲ್ಲಿ ಎಳನೀರು ಕೆಫೆಗಳು ಸಾಕಷ್ಟಿವೆ. ವಿವಿಧ ಆಕರ್ಷಕ ಪ್ಯಾಕೇಟ್‌ಗಳಲ್ಲೂ ಎಳನೀರು ಮಾರಲಾಗುತ್ತದೆ. ಕೇರಳದ ಮಾದರಿಯಲ್ಲೇ ರಾಜ್ಯದಲ್ಲೂ ಎಳನೀರು ಕೆಫೆಗಳು ಹೆಚ್ಚಾಗಬೇಕಾಗಿದೆ. ಇದು ತೆಂಗು, ಕೊಬ್ಬರಿ ಬೆಲೆಗೆ ಸ್ಥಿರತೆ ತಂದುಕೊಡಬಲ್ಲದು. ಇಂಥ ಕೆಫೆಗಳನ್ನು ಸರ್ಕಾರ ಪ್ರೋತ್ಸಾಹಿಸಬೇಕು. ಬೆಂಗಳೂರಿನಂಥ ಮಹಾನಗರಗಳಲ್ಲಿ ಇಂಥ ಕೆಫೆಗಳನ್ನು ನಡೆಸಲು ತೆಂಗು ಬೆಳೆಗಾರರ ಒಕ್ಕೂಟಗಳಿಗೆ ಉಚಿತವಾಗಿ ಭೂಮಿ ನೀಡಬೇಕು’ ಎಂದು ಬೆಲೆ ಕಾವಲು ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಎಸ್‌.ಗಂಗಾಧರಯ್ಯ  ಹೇಳಿದರು.

ಮೊದಲ ಎಳನೀರು ಮೇಳ ತೆಂಗು ಬೆಳೆಗಾರರ ಸಂಘಟನೆಗೆ ದೊಡ್ಡ ಕೊಡುಗೆ ನೀಡಿತು. ಈ ಮೇಳದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 3000 ತೆಂಗು ಬೆಳೆಗಾರರು ಭಾಗವಹಿಸುವ ನಿರೀಕ್ಷೆ ಇದೆ ಎನ್ನುತ್ತಾರೆ ಮೇಳದ ಸಂಘಟಕರು.

ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ತೆಂಗು ಉತ್ಪಾದಕರ ಕಂಪೆನಿಗಳ ಸದಸ್ಯರು ಮೇಳದಲ್ಲಿ ಭಾಗವಹಿಸುವರು. ಬೆಂಗಳೂರಿನಲ್ಲಿ ಎಳನೀರು ಮಾರಾಟ ಮಾಡುವ ವರ್ತಕರೊಂದಿಗೆ ರೈತರು ಒಪ್ಪಂದ ಮಾಡಿಕೊಳ್ಳುವ ಅವಕಾಶ ಸಹ ಕಲ್ಪಿಸಲಾಗಿದೆ. ವಿವಿಧ ತಜ್ಞರು, ವಿಜ್ಞಾನಿಗಳು ಎಳನೀರು ಮೌಲ್ಯವರ್ಧನೆ, ಉಪಯೋಗ, ಮಾರುಕಟ್ಟೆಯ ಸಾಧ್ಯತೆಗಳ ಕುರಿತು ಮಾತನಾಡುವರು.

ಏನೇನು ಸಿಗಲಿದೆ
ನಿಂಬೆ ರಸ, ಜೇನು ತುಪ್ಪ, ಕಲ್ಲು ಸಕ್ಕರೆ ಬೆರೆಸಿದ ಎಳನೀರು ಹಾಗೂ ಉಪ್ಪು ಬೆರೆಸಿದ ಎಳನೀರು ಕೆಫೆಯಲ್ಲಿ ಸಿಗಲಿದೆ. ತೆಂಗಿನ ಹಿಟ್ಟು ಬೆರೆಸಿ ಮಾಡಿದ ವಿವಿಧ ರೀತಿಯ ಕೇಕ್‌ಗಳು ಸೇರಿ 34 ಬಗೆಯ ಬೇಕರಿ ಉತ್ಪನ್ನಗಳು ಸಿಗಲಿವೆ.

No Comments

Leave A Comment