Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಮರಕ್ಕೆ ಕಾರು ಢಿಕ್ಕಿ: ಮಂಗಳೂರಿನ ಇಬ್ಬರ ಸಾವು

ಮಂಗಳೂರು: ಗೋವಾ- ಕರ್ನಾಟಕ ಗಡಿ ಭಾಗ‌ ಕಾಣ್‌ಧಿಕೋಣದಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ  ರವಿವಾರ ಮುಂಜಾನೆ ಕಾರುಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಮಂಗಳೂರಿನ ಇಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ವೀಡಿಯೋಗ್ರಾಫರ್‌ ಸಂತೋಷ್‌ ನಾಯಕ್‌ (35) ಮತ್ತು ಕರ್ಣಾಟಕ ಬ್ಯಾಂಕ್‌ನ ಗೋವಾ ಶಾಖೆ  ಉದ್ಯೋಗಿ ಚರಣ್‌ (29) ಮೃತಪಟ್ಟವರು.

ವೀಡಿಯೋ ಗ್ರಾಫರ್‌ಗಳಾದ ದೀಕ್ಷಿತ್‌ ಮತ್ತು ಪ್ರವೀಣ್‌ ಅಂಚನ್‌ ಹಾಗೂ ಕಾರು ಚಾಲಕ ಅರ್ಚಿತ್‌ ಗಾಯಗೊಂಡವರು.
ಸಂತೋಷ್‌ ನಾಯಕ್‌ ಮೂಲತಃ ಕುಂಬಳೆಯವರಾಗಿದ್ದು, ಚರಣ್‌ ಮಂಜೇಶ್ವರ ಮೂಲದವರು. ಪ್ರಸ್ತುತ ಇಬ್ಬರೂ ಮಂಗಳೂರಿನಲ್ಲಿ ವಾಸ ಮಾಡುತ್ತಿದ್ದರು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರ ವಿವರ: ಮೃತ ಸಂತೋಷ್‌ ನಾಯಕ್‌ ಮೂಲತಃ ಕುಂಬಳೆಯವರಾಗಿದ್ದರೂ ಕಳೆದ ಹಲವು ವರ್ಷಗಳಿಂದ ಮಂಗಳೂರಿನ ಬೋಳೂರು ಮಠದಕಣಿಯ ತಿಲಕನಗರದಲ್ಲಿ ವಾಸಿಸುತ್ತಿದ್ದರು. ಕಳೆದ 10 ವರ್ಷಗಳಿಂದ ನಗರದ ರಥಬೀದಿಯಲ್ಲಿ ವೀಡಿಯೋಗ್ರಫಿ ಮತ್ತು  ಫೋಟೋಗ್ರಫಿ ಕೆಲಸ ಮಾಡುತ್ತಿದ್ದರು. ಜತೆಗೆ ಮನೆ ಮನೆಗೆ ಆಹಾರ ಪೂರೈಸುವ ಕ್ಯಾಟರಿಂಗ್‌ ಕೆಲಸವನ್ನೂ ನಿರ್ವಹಿಸುತ್ತಿದ್ದರು. ಕೆಲವು ಸಂಘ ಸಂಸ್ಥೆಗಳಲ್ಲೂ ಸಕ್ರಿಯರಾಗಿದ್ದು, ಕ್ರಿಕೆಟ್‌ ಆಟದಲ್ಲಿ  ಹೆಚ್ಚು ಆಸಕ್ತಿ ಹೊಂದಿದ್ದರು. ಅವರು ಪತ್ನಿ, ಇಬ್ಬರು ಪುತ್ರರು, ತಂದೆ, ತಾಯಿ, ಅಕ್ಕ ಮತ್ತು ತಂಗಿ ಹಾಗೂ ಕಿರಿಯ ಸೋದರನನ್ನು ಅಗಲಿದ್ದಾರೆ.

ಮೃತ ಚರಣ್‌ ಮಂಜೇಶ್ವರ ಮೂಲದವರಾಗಿದ್ದರೂ ಹಲವು ವರ್ಷಗಳಿಂದ ಮಂಗಳೂರಿನ ನಿರೇಶ್ವಾಲ್ಯದಲ್ಲಿ ವಾಸಿಸುತ್ತಿದ್ದರು. ಗೋವಾದ ಪಣಜಿಯಲ್ಲಿ ಕರ್ಣಾಟಕ ಬ್ಯಾಂಕ್‌ನ ನೌಕರರಾಗಿದ್ದ ಅವರ ಸೇವೆ ವರ್ಷದ ಹಿಂದೆ ಖಾಯಂಗೊಂಡಿತ್ತು. ಶುಕ್ರವಾರ ಊರಿಗೆ ಬರಲು ಬಸ್‌ ಟಿಕೆಟ್‌ ಬುಕ್‌ ಮಾಡಿದ್ದರು. ಆದರೆ ಸಂತೋಷ್‌ ಮತ್ತಿತರರು ಗೋವಾಕ್ಕೆ ಬಂದ ವಿಷಯ ತಿಳಿದು ಅವರ ಜತೆ  ಕಾರಲ್ಲಿ ಊರಿಗೆ ತೆರಳುವ ನಿರ್ಧಾರ ತಳೆದು ಒಂದ ದಿನ ವಿಳಂಬವಾಗಿ ಹೊರಟಿದ್ದರು. ಅವರು ತಂದೆ ತಾಯಿಗೆ ಏಕೈಕ ಪುತ್ರ. ಅವರು ಅವಿವಾಹಿತರಾಗಿದ್ದು, ತಂದೆ, ತಾಯಿ ಹಾಗೂ ತಂಗಿಯನ್ನು ಅಗಲಿದ್ದಾರೆ.

ವೀಡಿಯೋಗ್ರಾಫಿಗೆ ತೆರಳಿದ್ದರು
ಚರಣ್‌, ಪ್ರವೀಣ್‌, ದೀಕ್ಷಿತ್‌ ಮತ್ತು ಅರ್ಚಿತ್‌ ಶುಕ್ರವಾರ ಗೋವಾದ ಮಡಗೈ ನವದುರ್ಗಾ ದೇವಸ್ಥಾನದ ಖಾಸಗಿ ಕಾರ್ಯಕ್ರಮದ ವೀಡಿಯೋಗ್ರಾಫಿಗಾಗಿ ತೆರಳಿದ್ದರು. ಅಲ್ಲಿ ಕೆಲಸ ಮುಗಿಸಿ ಶನಿವಾರ ರಾತ್ರಿ ಕಾರಿನಲ್ಲಿ ಮಂಗಳೂರಿಗೆ ಹೊರಟಿದ್ದರು. ಈ ಸಂದರ್ಭ ಗೋವಾದಲ್ಲಿ  ಬ್ಯಾಂಕ್‌ ಉದ್ಯೋಗಿಯಾಗಿದ್ದ ಚರಣ್‌ ಕೂಡ ತನ್ನ ಸ್ನೇಹಿತರ ಜತೆಗೆ ಅದೇ ಕಾರಿನಲ್ಲಿ ಸೇರಿಕೊಂಡಿದ್ದರು. ಅವರು ಪ್ರಯಾಣಿಸುತ್ತಿದ್ದ ಕಾರು ಕಾಣ್‌ಕೋಣದಲ್ಲಿ ನಿಯಂತ್ರಣ ತಪ್ಪಿ  ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಸಂತೋಷ್‌ ಮತ್ತು ಚರಣ್‌ ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ. ಢಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ.

No Comments

Leave A Comment