Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಉಪಚುನಾವಣೆಯಲ್ಲಿ ಸ್ಪರ್ಧಿಸದಂತೆ ನನಗೆ ಕಿರುಕುಳ ನೀಡುತ್ತಿದ್ದಾರೆ: ದೀಪಾ ಜಯಕುಮಾರ್

ಚೆನ್ನೈ: ಆರ್.ಕೆ. ನಗರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸದಂತೆ ನನಗೆ ಕಿರುಕುಳ ನೀಡುತ್ತಿದ್ದಾರೆಂದು ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ಸೋದರನ ಪುತ್ರಿ (ಸೋದರ ಸೊಸೆ) ದೀಪಾ ಜಯಕುಮಾರ್ ಅವರು ಭಾನುವಾರ ಆರೋಪಿಸಿದ್ದಾರೆ.

ಎಐಎಡಿಎಂಕೆ ಮುಖ್ಯಸ್ಥೆ ವಿ.ಕೆ. ಶಶಿಕಲಾ ಅವರ ಬೆಂಬಲಿಗರ ಮೇಲೆ ಆರೋಪ ಮಾಡಿರುವ ಅವರು, ಆರ್.ಕೆ ನಗರ ವಿಧಾನಸಭೆ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುತ್ತೇನೆಂದು ಘೋಷಿಸಿದ ದಿನದಿಂದಲೂ ನನಗೆ ಪರೋಕ್ಷವಾಗಿ ಕಿರುಕುಳ ನೀಡುತ್ತಿದ್ದಾರೆಂದು ಹೇಳಿದ್ದಾರೆ.

ಪ್ರಸ್ತುತ ನಾನು ನನ್ನ ಮನೆಯಲ್ಲಿಯೂ ಕೂಡ ಇಲ್ಲ. ಪ್ರತೀನಿತ್ಯ ಗೂಂಡಾಗಳನ್ನು ನನ್ನ ಮನೆಗೆ ಕಳುಹಿಸುತ್ತಿದ್ದಾರೆ. ಆ ಗೂಂಡಾಗಳು ಯಾರೆಂಬುದು ನನಗೆ ಗೊತ್ತಿಲ್ಲ. ಉಪಚುನಾವಣೆಯಲ್ಲಿ ಸ್ಪರ್ಧೆಗಿಳಿಯದಂತೆ ನನ್ನ ವಿರುದ್ಧ ಸಾಕಷ್ಟು ಪಿತೂರಿಗಳನ್ನು ಮಾಡುತ್ತಿದ್ದಾರೆಂದು ತಿಳಿಸಿದ್ದಾರೆ.

ಜಯಲಲಿತಾ ಅವರು ಆಸ್ಪತ್ರೆಯಲ್ಲಿದ್ದಾಗಲೂ ಶಶಿಕಲಾ ಬಳಗ ದೀಪಾ ಜಯಕುಮಾರ್ ಅವರನ್ನು ಜಯಲಲಿತಾ ಅವರನ್ನು ನೋಡಲು ಅವಕಾಶ ನೀಡಿರಲಿಲ್ಲ. ಜಯಲಲಿತಾ ಅವರಿಂದ ದೀಪಾ ಅವರನ್ನು ದೂರವಿಡಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದರು. ಅಂತಿಮ ಸಂಸ್ಕಾರದಲ್ಲೂ ಭಾಗಿಯಾಗಲು ದೀಪಾ ಅವರಿಗೆ ಅವಕಾಶ ನೀಡಿರಲಿಲ್ಲ. ನಂತರ ಅಂತಿಮ ಸಂಸ್ಕಾರ ನಡೆದ ಮರುದಿನ ಮರೀನಾ ಬೀಚ್ ಬಳಿ ಬಂದ ದೀಪಾ ಜಯಕುಮಾರ್ ಅವರು ಸ್ಮಾರಕಕ್ಕೆ ಪೂಜೆ ಸಲ್ಲಿಸಿದ್ದರು.

ಇದಾದ ಕೆಲವೇ ದಿನಗಳಲ್ಲಿ ಮಾಜಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಅವರು ಫೆ.7 ರಂದು ಜಯಾ ಸ್ಮಾರಕದ ಎದುರು ಕುಳಿತು ಕಣ್ಣೀರು ಹಾಕಿದ್ದರು. ನಂತರ ಶಶಿಕಲಾ ವಿರುದ್ಧ ಬಂಡಾಯವೆದ್ದಿದ್ದರು. ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಪ್ರಸ್ತುತ ವಿ.ಕೆ. ಶಶಿಕಲಾ ಜೈಲುವಾಸ ಅನುಭವಿಸುತ್ತಿದ್ದಾರೆ.

ಜಯಲಲಿತಾ ನಿಧನದ ನಂತರ ತಮಿಳುನಾಡಿನಲ್ಲಿ ನಡೆದ ರಾಜಕೀಯ ಮೇಲಾಟಗಳ ಬಳಿಕ ದೀಪಾ ಹೊಸ ಪಕ್ಷವನ್ನು ಕಟ್ಟಿದ್ದರು. ಫೆ.24ರಂದು ಜಯಾಲಲಿತಾ ಅವರ 69ನೇ ಹುಟ್ಟಹಬ್ಬ ದಿನವೇ ‘ಎಂಜಿಆರ್ ಅಮ್ಮ ದೀಪಾ ಪೆರವೈ’ ಪಕ್ಷವನ್ನು ಸ್ಥಾಪನೆ ಮಾಡಿದ್ದರು. ನಂತರ ಜಯಾ ಪ್ರತಿನಿಧಿಸುತ್ತಿದ್ದ ಆರ್.ಕೆ.ನಗರ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದರು.

ಏಪ್ರಿಲ್ 12ರಂದು ಆರ್.ಕೆ ನಗರ ವಿಧಾನಸಭಾ ಕ್ಷೇತ್ರಕ್ಕೆ ಮತದಾನ ನಡೆಯಲಿದ್ದು, ಮಾರ್ಚ್ 16ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಸಲ್ಲಿಕೆಗೆ ಮಾರ್ಚ್ 23 ಕಡೆ ದಿನವಾಗಿದ್ದು, ಏಪ್ರಿಲ್ 15ರಂದು ಮತ ಎಣಿಕೆ ನಡೆಯಲಿದೆ.

No Comments

Leave A Comment