Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಗೋವಾ, ಮಣಿಪುರ ಹೈಜಾಕ್‌! ಸರ್ಕಾರ ರಚನೆಗೆ ಮುಂದಾದ ಬಿಜೆಪಿ

ಪಣಜಿ/ನವದೆಹಲಿ: ಭಾನುವಾರದ ನಾಟಕೀಯ ಬೆಳವಣಿಗೆಗಳಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಿದ್ದ ಗೋವಾ ಮತ್ತು ಮಣಿಪುರ ರಾಜ್ಯಗಳೆರಡೂ ಬಿಜೆಪಿ ತೆಕ್ಕೆಗೆ ಬೀಳುವುದು ಖಚಿತವಾಗಿದೆ.

ಗೋವಾದಲ್ಲಿ ರಕ್ಷಣಾ ಸಚಿವ ಮನೋಹರ್‌ ಪರ್ರಿಕರ್‌ ಅವರೇ ಮುಖ್ಯಮಂತ್ರಿಯಾಗುವುದು ಖಚಿತವಾಗಿದ್ದು, ಈಗಾಗಲೇ ರಾಜ್ಯಪಾಲರ ನಿವಾಸಕ್ಕೆ ಹೋಗಿ, ಸರ್ಕಾರ ರಚನೆಯ ಹಕ್ಕನ್ನೂ ಮಂಡಿಸಿದ್ದಾರೆ.

ಫ‌ಲಿತಾಂಶ ಹೊರಬಿದ್ದ ತಕ್ಷಣ, ಗೋವಾಗೆ ತೆರಳಿದ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಮತ್ತು ರಕ್ಷಣಾ ಸಚಿವ ಮನೋಹರ್‌ ಪರ್ರಿಕರ್‌ ಅವರು, ಸರ್ಕಾರ ರಚನೆಗಾಗಿ ಎಲ್ಲ ಸಿದ್ಧತೆ ನಡೆಸಿದರು. ಜತೆಗೆ ಹಳೇ ದೋಸ್ತಿ ಮಹಾರಾಷ್ಟ್ರವಾದಿ ಗೋಮಾಂತಕ್‌ ಪಾರ್ಟಿ(ಎಂಜಿಪಿ) ಮತ್ತು ಗೋವಾ ಫಾರ್ವರ್ಡ್‌ ಬ್ಲಾಕ್‌ ಪಕ್ಷಗಳು ತಲಾ 3 ಸ್ಥಾನಗಳನ್ನು ಹೊಂದಿದ್ದು, ಇವೆರಡೂ ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿವೆ. ಇದರ ಜತೆಗೆ ಒಬ್ಬ ಪಕ್ಷೇತರ ಕೂಡ ಬೆಂಬಲ ಘೋಷಿಸಿದ್ದಾರೆ. ಹೀಗಾಗಿ ಒಟ್ಟಾರೆಯಾಗಿ ಬಿಜೆಪಿ ಬಲ 20ಕ್ಕೇರಿದ್ದು, ಸರ್ಕಾರ ರಚನೆಯ ಹಾದಿ ಸುಗಮವಾಗಿದೆ. ಇನ್ನು ಇಬ್ಬರು ಪಕ್ಷೇತರರು ಬಾಕಿ ಉಳಿದಿದ್ದು ಇವರ ಮನವೊಲಿಕೆಯೂ ನಡೆಯುತ್ತಿದೆ.

ಭಾನುವಾರ ಬೆಳಗ್ಗೆಯೇ, ಚುನಾವಣೆಯಲ್ಲಿ ಗೆದ್ದ ಶಾಸಕರು ಬಿಜೆಪಿ ವರಿಷ್ಠರಿಗೆ ಪತ್ರ ಬರೆದು, ಮನೋಹರ್‌ ಪರ್ರಿಕರ್‌ ಅವರನ್ನು ವಾಪಸ್‌ ಗೋವಾಗೆ ಕಳುಹಿಸುವಂತೆ ಒತ್ತಾಯಿಸಿದ್ದರು. ಅಲ್ಲದೆ ಪರ್ರಿಕರ್‌ ಅವರು ವಾಪಸ್‌ ಬಂದಲ್ಲಿ ಸರ್ಕಾರ ರಚನೆ ಹಾದಿ ಸುಗಮವಾಗಲಿದೆ ಎಂದೂ ಹೇಳಿದ್ದರು.  ಈ ಹಿನ್ನೆಲೆಯಲ್ಲಿಯೇ, ನಿತಿನ್‌ ಗಡ್ಕರಿ ಮತ್ತು ಪರ್ರಿಕರ್‌ ಅವರು, ಸರಣಿ ಸಭೆಗಳನ್ನು ನಡೆಸಿದ್ದರು. ಈ ವೇಳೆಯಲ್ಲೇ ಎಂಜಿಪಿ ಮತ್ತು ಗೋವಾ ಫಾರ್ವರ್ಡ್‌ ಬ್ಲಾಕ್‌ ಪಕ್ಷಗಳೂ, ಪರ್ರಿಕರ್‌ ಅವರು ಸಿಎಂ ಆಗುವುದಿದ್ದರೆ ಮಾತ್ರ ಬೆಂಬಲ ನೀಡುವುದಾಗಿ ಘೋಷಿಸಿದವು. ಕಡೆಗೆ, ನಿತಿನ್‌ ಗಡ್ಕರಿ ಅವರು, ಪ್ರಧಾನಿ ಮೋದಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೊಂದಿಗೆ ಮಾತನಾಡಿ ಈ ಪ್ರಸ್ತಾಪದ ಬಗ್ಗೆ ಚರ್ಚೆ ನಡೆಸಿದರು. ಇದಕ್ಕೆ ಒಪ್ಪಿಗೆ ದೊರೆತ ತಕ್ಷಣವೇ, ಗಡ್ಕರಿ ಅವರು ಪತ್ರಿಕಾಗೋಷ್ಠಿ ನಡೆಸಿ, ಸರ್ಕಾರ ರಚನೆಯ ಬಗ್ಗೆ ಅಧಿಕೃತ ಮಾಹಿತಿ ನೀಡಿದರು.

ಅಲ್ಲದೆ, ಸದ್ಯ ಪರ್ರಿಕರ್‌ ಅವರು ರಕ್ಷಣಾ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿಲ್ಲ. ಅವರು ಪ್ರಮಾಣವಚನ ಸ್ವೀಕಾರದ ವರೆಗೂ ಸಚಿವ ಸ್ಥಾನದಲ್ಲೇ ಇರಲಿದ್ದಾರೆ. ಅಲ್ಲದೆ ಅವರಿಗೇ ರಕ್ಷಣಾ ಸಚಿವ ಸ್ಥಾನ ಅಥವಾ ಮುಖ್ಯಮಂತ್ರಿ ಹುದ್ದೆಯ ಆಯ್ಕೆಯ ಅವಕಾಶ ನೀಡಲಾಗಿದೆ. ಇದರಲ್ಲಿ ಯಾವುದನ್ನು ಆರಿಸಿಕೊಂಡರೂ ಸ್ವಾಗತವಿದೆ ಎಂದು ಹೇಳಿದರು.

ಇದಾದ ಬಳಿಕ ಗಡ್ಕರಿ ಮತ್ತು ಪರ್ರಿಕರ್‌ ಅವರು, ರಾಜ್ಯಪಾಲರ ನಿವಾಸಕ್ಕೆ ತೆರಳಿ ಸರ್ಕಾರ ರಚನೆಯ ಹಕ್ಕು ಮಂಡಿಸಿದರು. ತಮ್ಮ ಬಳಿ ಬಹುಮತಕ್ಕೆ ಬೇಕಾದ ಸಂಖ್ಯೆ ಇವೆ. ಹೀಗಾಗಿ ಅವಕಾಶ ನೀಡುವಂತೆ ಕೋರಿಕೊಂಡರು. ಎಲ್ಲವೂ ಅಂದುಕೊಂಡಾಂತಾದರೆ ಮಂಗಳವಾರವೇ ಗೋವಾದಲ್ಲಿ ಹೊಸ ಸರ್ಕಾರ ರಚನೆಯಾಗುವ ಸಂಭವವಿದೆ.

ಬಿಜೆಪಿ ಮೈತ್ರಿಕೂಟ: 22

ಬಿಜೆಪಿ 13, ಎಂಜಿಪಿ 3, ಜಿಎಫ್ಬಿ 3,ಎನ್‌ಸಿಪಿ1, ಇತರೆ 2
18 ಕಾಂಗ್ರೆಸ್‌ ಇತರೆ 1 (ಇನ್ನೂ ನಿರ್ಧಾರ ಆಗಿಲ್ಲ)

ಮಣಿಪುರದಲ್ಲೂ ಕೇಸರಿ ಕಹಳೆ
ಇಂಫಾಲ್‌:
ಅಸ್ಸಾಂ, ಅರುಣಾಚಲ ಪ್ರದೇಶದ ನಂತರ, ಮಣಿಪುರ ಕೂಡ ಬಿಜೆಪಿ ಮಡಿಲಿಗೆ ಬೀಳುವುದು ನಿಶ್ಚಿತವಾಗಿದೆ. ಕಾಂಗ್ರೆಸ್‌ನ ಒಬ್ಬ ಹಾಗೂ ಟಿಎಂಸಿಯ ಏಕೈಕ ಶಾಸಕ ಬಿಜೆಪಿ ಸೇರಲಿದ್ದು, ಸರ್ಕಾರ ರಚನೆಯ ಹಾದಿ ಸುಗಮವಾಗಿದೆ.

ಬಿಜೆಪಿಯೇ ಸರ್ಕಾರ ರಚಿಸುವ ಬಗ್ಗೆ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ಈಶಾನ್ಯ ರಾಜ್ಯಗಳ ಉಸ್ತುವಾರಿ ರಾಮ್‌ ಮಾಧವ್‌ ಅವರೇ ದೃಢಪಡಿಸಿದ್ದಾರೆ. ಈಗಾಗಲೇ ಬಿಜೆಪಿಗೆ 30 ಸದಸ್ಯರ ಬೆಂಬಲ ಸಿಕ್ಕಿದ್ದು, ಇನ್ನೊಬ್ಬರ ಬೆಂಬಲ ಅಗತ್ಯವಿದೆ. ಈ ಒಂದು ಸ್ಥಾನದ ಬೆಂಬಲವೂ ನಮಗೇ ದೊರೆತಿದ್ದು, ಬಹುಮತ ಸಾಬೀತು ಪಡಿಸುವ ವೇಳೆ ಪ್ರಕಟ ಮಾಡಲಿದ್ದೇವೆ. ಹೀಗಾಗಿ ಬಿಜೆಪಿಯೇ ಸರ್ಕಾರ ರಚಿಸಲಿದೆ ಎಂದು ಅವರು ಸ್ಪಷ್ಟವಾಗಿ ಹೇಳಿದ್ದರು.

ಆದರೆ ಭಾನುವಾರ ರಾತ್ರಿ ವೇಳೆಗೆ ಕಾಂಗ್ರೆಸ್‌ ಟಿಕೆಟ್‌ನಿಂದ ಗೆದ್ದಿದ್ದ ಟಿ ಶ್ಯಾಮ್‌ ಕುಮಾರ್‌ ಅವರು ಬಿಜೆಪಿ ಸೇರುವುದಾಗಿ ಘೋಷಿಸಿದ್ದು, ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲಿದ್ದಾರೆ. ಹೀಗಾಗಿ 60 ಸದಸ್ಯ ಬಲದ ವಿಧಾನಸಭೆ 59ಕ್ಕೆ ಕುಸಿಯಲಿದೆ. ಜತೆಗೆ ಟಿಎಂಸಿಯ ಏಕೈಕ ಶಾಸಕ ಕೂಡ ಬಿಜೆಪಿಗೆ ಸೇರಲಿದ್ದಾರೆ. ಈ ಮೂಲಕ ಬಿಜೆಪಿಯ ಬಲ 32ಕ್ಕೆ ಏರಿಕೆಯಾಗಿದ್ದು, ಸರ್ಕಾರ ರಚನೆ ಪಕ್ಕಾ ಆಗಿದೆ.

ಶನಿವಾರದ ಫ‌ಲಿತಾಂಶದ ಪ್ರಕಾರ, ಬಿಜೆಪಿ, ಎನ್‌ಪಿಪಿ ಮತ್ತು ಎಲ್‌ಜೆಪಿ ಮೈತ್ರಿಕೂಟಕ್ಕೆ 26 ಸ್ಥಾನಗಳು ದೊರೆತಿವೆ. ಕಾಂಗ್ರೆಸ್‌ 28ರಲ್ಲಿ ಗೆದ್ದಿದ್ದು, ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ನಾಲ್ಕು ಸ್ಥಾನಗಳಲ್ಲಿ ಜಯಗಳಿಸಿರುವ ಎನ್‌ಪಿಎಫ್ ಬಿಜೆಪಿಗೇ ಬೆಂಬಲ ನೀಡಲಿದ್ದು, ಈ ಬಗ್ಗೆ ಈಗಾಗಲೇ ರಾಜ್ಯಪಾಲರಿಗೆ ಪತ್ರವನ್ನೂ ರವಾನಿಸಿದೆ. ಹೀಗಾಗಿ ಬಿಜೆಪಿಗೆ 30 ಸದಸ್ಯರ ಬಲ ಸಿಕ್ಕಿದ್ದು, ಇನ್ನೊಬ್ಬರ ಬೆಂಬಲ ಮಾತ್ರ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ರಾಜ್ಯಪಾಲರನ್ನು ಭೇಟಿ ಮಾಡಿರುವ ಬಿಜೆಪಿ, ಸರ್ಕಾರ ರಚನೆಗೆ ಹಕ್ಕು ಮಂಡಿಸಿದೆ.

ಆದರೆ 28 ಸ್ಥಾನ ಗಳಿಸಿರುವ ಕಾಂಗ್ರೆಸ್‌ಗೆ ತೃಣಮೂಲ ಕಾಂಗ್ರೆಸ್‌ನ ಶಾಸಕ ಬೆಂಬಲ ಘೋಷಿಸಿದ್ದಾರೆ. ಹೀಗಾಗಿ ಅವರ ಬೆಂಬಲ 29ಕ್ಕೇರಿದೆ. ಬಹುಮತಕ್ಕೆ ಇನ್ನೂ ಇಬ್ಬರ ಬೆಂಬಲ ಬೇಕಾಗಿದೆ. ಈ ಹಿನ್ನೆಲೆಯಲ್ಲಿಯೇ ಮುಖ್ಯಮಂತ್ರಿ ಒಕ್ರಮ್‌ ಇಬೋಬಿ ಸಿಂಗ್‌ ಅವರು ಶನಿವಾರ ರಾತ್ರಿಯೇ ರಾಜ್ಯಪಾಲರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಪಕ್ಷೇತರಗೆ ಭಾರಿ ಬೇಡಿಕೆ
ಮಣಿಪುರದ ಜಿರಿಬಮ್‌ ಕ್ಷೇತ್ರದಿಂದ ಪಕ್ಷೇತರನಾಗಿ ಗೆದ್ದಿರುವ ಅಶಬ್‌ ಉದ್ದೀನ್‌ ಅವರು ಇನ್ನೂ ಯಾವ ಪಕ್ಷಕ್ಕೂ ಬೆಂಬಲ ಘೋಷಿಸಿಲ್ಲ. ಆದರೆ ಇದುವರೆಗೂ ಅವರು ಯಾರ ಕೈಗೂ ಸಿಕ್ಕಿಲ್ಲ. ಈ ಬಗ್ಗೆ  ಭಾನುವಾರ ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುಜೇìವಾಲ, ಬಿಜೆಪಿ ಇವರನ್ನು ಅಪಹರಿಸಿದೆ ಎಂದು ಆರೋಪಿಸಿದ್ದರು. ಆದರೆ ಇದನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್‌ ಯಾದವ್‌ ತಳ್ಳಿಹಾಕಿದ್ದಾರೆ.
ಬಿಜೆಪಿ ಮೈತ್ರಿ ಕೂಟ – 32
ಬಿಜೆಪಿ- 21, ಟಿಎಂಸಿ-1, ಎನ್‌ಪಿಎಫ್-4,ಎಲ್‌ಜೆಪಿ-1, ಎನ್‌ಪಿಪಿ-4, ಕಾಂಗ್ರೆಸ್‌ -1
ಕಾಂಗ್ರೆಸ್‌-28 (-1)
ಇತರೆ 1(ಯಾರಿಗೂ ಬೆಂಬಲವಿಲ್ಲ)

No Comments

Leave A Comment