Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ಕುಡಿಯುವ ನೀರು ಸಮಸ್ಯೆ ಪರಿಹರಿಸಲು ಸಜ್ಜಾಗಿ- ಮಹೇಶ್ವರ ರಾವ್

ಉಡುಪಿ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿಭಾಯಿಸಲು ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಅಧಿಕಾರಿಗಳು ಹೇಳಿದರು.
ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಕೃಷಿ ಇಲಾಖೆ ಕಾರ್ಯದರ್ಶಿಗಳಾದ ಎಂ. ಮಹೇಶ್ವರ ರಾವ್ ಅವರು, ಇಂದು ಜಿಲ್ಲಾದಿಕಾರಿಗಳ ಕಚೇರಿಯಲ್ಲಿ ಜಿಲ್ಲೆಯ ಕಂದಾಯ ಇಲಾಖೆ ಕಾರ್ಯಕ್ರಮ ಹಾಗೂ ಇತರ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದರು.

ಜಿಲ್ಲೆಯಲ್ಲಿ ನೀರಿನ ಅಭಾವ ಎದುರಿಸಲು ಶಾಶ್ವತ ಪರಿಹಾರ ರೂಪಿಸಿರುವ ಬಗ್ಗೆ, ಹಾಗೂ ಪ್ರಸಕ್ತ ಜಿಲ್ಲೆ ಎದುರಿಸುತ್ತಿರುವ ನೀರಿನ ಸಮಸ್ಯೆ ಪರಿಹಾರಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಹೇಶ್ವರ ರಾವ್ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದರು.

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಇನ್ನೂ ಟ್ಯಾಂಕರ್ ಮೂಲಕ ನೀರು ನೀಡಲು ಆರಂಭಿಸಿಲ್ಲ ಎಂದು ನಗರಸಭೆ, ನಗರಾಡಳಿತ ಹಾಗೂ ಗ್ರಾಮೀಣಾಭಿವೃದ್ಧಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಏಪ್ರಿಲ್ ಮತ್ತು ಮೇಯಲ್ಲಿ ನೀರಿನ ಅಭಾವ ತಲೆದೋರಲಿದ್ದು, ನಗರಸಭಾ ವ್ಯಾಪ್ತಿಯಲ್ಲಿ 8 ಬೋರ್‍ವೆಲ್, 9 ತೆರೆದ ಬಾವಿಗಳನ್ನು ನೀರಿಗೋಸ್ಕರ ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ ಎಂದು ನಗರಸಭೆ ಆಯುಕ್ತರು ಸಭೆಗೆ ಮಾಹಿತಿ ನೀಡಿದರು. ಅಮೃತ್ ಯೋಜನೆಯಡಿ ಶಿಂಬ್ರಕ್ಕೆ ವೆಂಟೆಡ್ ಡ್ಯಾಂ ನಿರ್ಮಿಸಲು 108 ಕೋಟಿ ರೂ. ಬಿಡುಗಡೆಯಾಗಿದೆ. ಇದರಿಂದ ಮುಂದಿನ ವರ್ಷಗಳಲ್ಲಿ ನಗರಸಭಾ ವ್ಯಾಪ್ತಿಯಲ್ಲಿ ನೀರಿಗೆ ತೊಂದರೆ ಇಲ್ಲ ಎಂದೂ ಅವರು ಮಾಹಿತಿ ನೀಡಿದರು.

ಕುಂದಾಪುರ, ಕಾರ್ಕಳ, ಸಾಲಿಗ್ರಾಮ, ಕಾಪುವಿನಲ್ಲೂ ನೀರಿನ ಸಮಸ್ಯೆ ಸದ್ಯಕ್ಕಿಲ್ಲ ಎಂದು ಅಧಿಕಾರಿಗಳು ಹೇಳಿದರು. ಉಡುಪಿ ನಗರಸಭೆಗೆ 50 ಲಕ್ಷ ರೂ. ಹೆಚ್ಚಿನ ಅನುದಾನವನ್ನು ಆಯುಕ್ತರು ಕೋರಿದರು.

ಏಪ್ರಿಲ್ ಮೇ ತಿಂಗಳಲ್ಲಿ ನೀರಿನ ಅಭಾವ ನಿವಾರಿಸಲು ಸರ್ಕಾರಿ ಜಲಸಂಪನ್ಮೂಲಗಳಲ್ಲದೆ ಖಾಸಗಿ ಬೋರ್‍ವೆಲ್ ಅಥವಾ ಬಾವಿಗಳಿಂದ ಬಾಡಿಗೆ ನೀಡಿ ನೀರು ಪಡೆಯಿರಿ ಎಂದು ಉಸ್ತುವಾರಿ ಕಾರ್ಯದರ್ಶಿಗಳು ಸಲಹೆ ಮಾಡಿದರು.

ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ ಒಟ್ಟು 131 ಹಳ್ಳಿಗಳಲ್ಲಿ ನೀರಿನ ಕ್ಷಾಮವಿರುವುದನ್ನು ಗುರುತಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಯೋಜನಾಧಿಕಾರಿಗಳು ಹೇಳಿದರು.

ಜಿಲ್ಲಾ ಪಂಚಾಯತ್‍ನ ಪಿಆರ್‍ಇಡಿ ಅಧಿಕಾರಿಗಳು ಇನ್ನಷ್ಟು ಚುರುಕಾಗಿ ಕರ್ತವ್ಯನಿರ್ವಹಿಸಬೇಕೆಂದು ಸೂಚಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮುಂದಿನ ತಿಂಗಳ ಸಭೆಗೆ ನಿಗದಿತ ಗುರಿ ಸಾಧಿಸಲು ಆದೇಶಿಸಿದರು.

ನಬಾರ್ಡ್ ಯೋಜನೆಯಡಿ ಕೈಗೊಂಡ ಯೋಜನೆಗಳ ಮಾಹಿತಿ ಹಾಗೂ ಕೈಗೊಳ್ಳಬೇಕಾದ ಯೋಜನೆಗಳ ಅಂದಾಜುಪಟ್ಟಿಯನ್ನು ಜಿಲ್ಲಾಧಿಕಾರಿ ಮುಖಾಂತರ ತಮಗೆ ಸಲ್ಲಿಸಲು ಅವರು ಈ ಸಂದರ್ಭದಲ್ಲಿ ಹೇಳಿದರು.

ಕಡಲ್ಕೊರೆತ ಕಾಮಗಾರಿಗಳಿಗೆ 4 ಕೋಟಿ ರೂ. ಅನುದಾನದಡಿ 87 ತುರ್ತು ಕಾಮಗಾರಿಗಳನ್ನು ನಿರ್ವಹಿಸಿದ್ದು, 12 ಕೋಟಿಯ ಬೇಡಿಕೆ ಸಲ್ಲಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದರು.

ಜಿಲ್ಲೆಯಲ್ಲಿ ಬೀಜೋತ್ಪಾದನೆಗೆ ಹೆಚ್ಚಿನ ಒತ್ತು ನೀಡಲು ಬೀಜೋತ್ಪಾದನೆ ಮಾಡುತ್ತಿರುವ ಖಾಸಗಿ ಕಂಪೆನಿಗಳಿಗೆ ಪ್ರೋತ್ಸಾಹ ನೀಡಲು ಕೃಷಿ ಇಲಾಖಾಧಿಕಾರಿಗಳಿಗೆ ಸೂಚಿಸಿದರು. ಕೆಡಿಪಿ ಸಭೆಯಲ್ಲಿ ನಡೆದ ಚರ್ಚೆಗಳ ಬಗ್ಗೆ ಮಾಹಿತಿ ಪಡೆದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

No Comments

Leave A Comment