Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಮಧುರ ಮಧುರವೀ ಮಂಜುಳಗಾನ- ಡಾ.ಬಿ.ಕೆ. ಸುಮಿತ್ರ ಸಂಗೀತ ತರಬೇತಿ ಕಾರ್ಯಕ್ರಮ

ಉಡುಪಿ: ‘ಸಂಗೀತವೇ ನನ್ನ ದೇವರು ಹಾಗೂ ಸಂಗೀತ ಸೇವೆಯೇ ಪೂಜೆ.’ ತರಬೇತಿ ಶಿಬಿರಗಳ ಮೂಲಕ ಸಂಗೀತ ಜ್ಞಾನವನ್ನು ಆಸಕ್ತರಿಗೆ ಹಂಚುವುದೇ ತಮ್ಮ ಬದುಕಿನ ಗುರಿಯಾಗಿದೆ ಎಂದು ಖ್ಯಾತ ಚಲನಚಿತ್ರ ಗಾಯಕಿ ನಾಡೋಜ ಡಾ. ಬಿ.ಕೆ. ಸುಮಿತ್ರ ಅಭಿಪ್ರಾಯಪಟ್ಟರು.

ಅವರು ಹಿರಿಯಡಕದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಳ್ಳಿ ಶ್ರೀನಿವಾಸ ಹೆಗ್ಡೆ ಟ್ರಸ್ಟ್ (ರಿ) ಹಾಗೂ ಕಾಲೇಜಿನ ಮಾನವತಾ ಮತ್ತು ಐ.ಕ್ಯೂ.ಎ.ಸಿ. ವತಿಯಿಂದ ನಡೆದ ‘ಮಧುರ ಮಧುರವೀ ಮಂಜುಳಗಾನ’ ಎಂಬ ಎರಡು ದಿನಗಳ ಸಂಗೀತ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಶಿಬಿರದಲ್ಲಿ ಉಡುಪಿ ಜಿಲ್ಲೆಯ ಸುಮಾರು 200 ಸಂಗೀತಾಸಕ್ತರುಡಾ. ಬಿ.ಕೆ. ಸುಮಿತ್ರ ಹಾಗೂ ಖ್ಯಾತ ಸಂಗೀತ ನಿರ್ದೇಶಕ ಬಿ.ವಿ. ಶ್ರೀನಿವಾಸ ಇವರಿಂದ ತರಬೇತಿಯನ್ನು ಪಡೆದರು. ಇವರುಗಳು ಶಿಬಿರಾರ್ಥಿಗಳಿಗೆ ಭಾವಗೀತೆ, ಜನಪದಗೀತೆ, ದಾಸರ ಪದಗಳು ಹಾಗೂ ಭಕ್ತಿಗೀತೆಗಳನ್ನು ಒಳಗೊಂಡಂತೆ ಹಲವು ಹಾಡುಗಳನ್ನು ಕಲಿಸಿಕೊಟ್ಟರು.

ಈ ಶಿಬಿರವು ಡಾ. ಬಿ.ಕೆ. ಸುಮಿತ್ರ ಮತ್ತು ಬಿ.ವಿ. ಶ್ರೀನಿವಾಸ ನಡೆಸಿಕೊಟ್ಟ 521ನೇಯ ಸಂಗೀತ ತರಬೇತಿ ಶಿಬಿರವಾಗಿತ್ತು. ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಜಿ.ವಿ. ಅಯ್ಯರ್ ಪ್ರಶಸ್ತಿ ಪಡೆದ ಗಾನಕೋಗಿಲೆ ಡಾ. ಬಿ.ಕೆ. ಸುಮಿತ್ರ ಇವರನ್ನು ಕಾಲೇಜಿನ ವತಿಯಿಂದ ಗೌರವಿಸಲಾಯಿತು.

ಸಮಾರಂಭದಲ್ಲಿ ಮಾತನಾಡಿದ ‘ಎದೆ ತುಂಬಿ ಹಾಡಿದೆನು’ ಕಾರ್ಯಕ್ರಮದಲ್ಲಿ ಹಾಡುಗಾರರನ್ನು ತರಬೇತುಗೊಳಿಸುವ ಸಂಗೀತ ನಿರ್ದೇಶಕ ಬಿ.ವಿ. ಶ್ರೀನಿವಾಸ ಅವರು ಮಾತನಾಡಿ ‘ಸಂಗೀತಕ್ಕೆ ಎಲ್ಲರನ್ನೂ ಆಕರ್ಷಿಸುವ ಶಕ್ತಿಯಿದೆ. ಸಂಗೀತವನ್ನು ಆರಾಧಿಸುವ ಮನಸ್ಸೂ ಎಲ್ಲರಲ್ಲಿ ಇರುತ್ತದೆ. ಅಂತೆಯೇ ಸಂಗೀತ ಕಲಿಯಬೇಕು, ಹಾಡಬೇಕು ಎನ್ನುವ ಆಸೆಯೂ ಹಲವರಲ್ಲಿ ಇರುತ್ತದೆ. ಸಂಗೀತಾಸಕ್ತಿ ಇರುವ ಮನಸ್ಸುಗಳನ್ನು ಸಂಗೀತದ ಕಡೆ ಹೊರಳಿಸಲು ಸಂಗೀತ ಶಿಬಿರಗಳು ನೆರವಾಗುತ್ತದೆ. ಎರಡು ದಿನಗಳ ಸಂಗೀತ ತರಬೇತಿಯಿಂದ ಯಾರೂ ಎಸ್. ಜಾನಕಿ, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಬಿ.ಕೆ. ಸುಮಿತ್ರ ಆಗಲು ಸಾಧ್ಯವಿಲ್ಲ ಆದರೆ ಉತ್ತಮ ಹಾಡುಗಾರರಾಗುವ ದಿಸೆಯಲ್ಲಿ ಇಡುವ ಸ್ಪಷ್ಟ ಹೆಜ್ಜೆಗಳಾಗಲಿವೆ’ ಎಂದುಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ತಾವುತರಬೇತು ಪಡೆದ ಎಲ್ಲ ಹಾಡುಗಳನ್ನು ಹಾಡಿದ್ದು ನೆರೆದವರನ್ನು ಒಂದು ವಿಶಿಷ್ಟ ಗಾನಲೋಕಕ್ಕೆ ಕೊಂಡೊಯ್ದ ಅನುಭವವನ್ನು ನೀಡಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ನಟರಾಜ್, ಶಿಕ್ಷಕರು ಇವರು ಇಂತಹ ಸದಭಿರುಚಿಯ ಚಿಂತನೆಗಳು ಸಂಸ್ಥೆಯಲ್ಲಿ ನಡೆಯುತ್ತಿರುವುದರ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದರು ಹಾಗೂ ನೆರೆದ ಶ್ರೋತೃಗಳನ್ನು ಡಿ.ವಿ.ಜಿಯವರ ಅಂತಃಪುರ ಗೀತೆಯನ್ನು ಹಾಡುವುದರ ಮೂಲಕ ರಂಜಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಸೋಜನ್‍ಕೆ.ಜಿ. ವಹಿಸಿದ್ದರು.
ಕನ್ನಡ ಉಪನ್ಯಾಸಕರಾದ ಮಮತಾ ಸ್ವಾಗತಿಸಿ, ಸುಜಾತ ಟಿ. ವಂದನಾರ್ಪಣೆಗೈದು, ರತಿ ಶೆಟ್ಟಿ ಮತ್ತು ಮಲ್ಲಿಕಾ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಐ.ಕ್ಯೂಎ.ಸಿ ಸಂಚಾಲಕಿ ಆಶಾ ಹಾಗೂ ಮಾನವತಾ ಸಂಚಾಲಕಿ ಸುಜಯಾಕೆ.ಎಸ್. ಉಪಸ್ಥಿತರಿದ್ದರು.

No Comments

Leave A Comment