Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಸುಪ್ರೀಂಕೋರ್ಟ್‌ ಆದೇಶ ಪಾಲನೆಗೆ ಮುಂದಾದ ಅಬಕಾರಿ ಇಲಾಖೆ: ಹೆದ್ದಾರಿ ಬದಿ ಮದ್ಯದಂಗಡಿಗಳಿಗೆ ನೋಟಿಸ್


ಬೆಂಗಳೂರು: ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ 500 ಮೀಟರ್ ವ್ಯಾಪ್ತಿಯೊಳಗಿರುವ  ಮದ್ಯದಂಗಡಿಗಳನ್ನು ಸುಪ್ರೀಂ ಕೋರ್ಟ್‌ ಆದೇಶದಂತೆ ಸ್ಥಳಾಂತರಿಸಬೇಕೆಂದು ಅಬಕಾರಿ ಇಲಾಖೆ ಅಂಗಡಿ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಿದೆ.

‘ಹೆದ್ದಾರಿಗಳ ಎರಡೂ ಬದಿಗಳಲ್ಲಿರುವ ಎಲ್ಲ ಮದ್ಯದ ಅಂಗಡಿಗಳನ್ನು ಮಾ.31ರೊಳಗೆ ಸ್ಥಳಾಂತರಿಸಬೇಕು. ಅಲ್ಲದೆ, ಮದ್ಯದಂಗಡಿ ಇದೆ ಎಂಬ ಸೂಚನಾ ಫಲಕಗಳನ್ನೂ ತೆರವುಗೊಳಿಸಬೇಕು’ ಎಂದು  ಅಬಕಾರಿ ಇಲಾಖೆ ನೋಟಿಸ್‌ನಲ್ಲಿ ಹೇಳಿದೆ.

20 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಹೆದ್ದಾರಿಗಳ ಬದಿ ಮದ್ಯದಂಗಡಿ ತೆರೆಯಲು ಅಬಕಾರಿ ಕಾಯ್ದೆಯಲ್ಲಿದ್ದ ವಿನಾಯಿತಿಯನ್ನು ಸುಪ್ರೀಂ ಕೋರ್ಟ್‌ ರದ್ದು ಮಾಡಿರುವುದರಿಂದ ಅಂಗಡಿಗಳನ್ನು ಸ್ಥಳಾಂತರಿಸುವಂತೆ  ನೋಟಿಸ್‌ನಲ್ಲಿ ಹೇಳಲಾಗಿದೆ.

ಹೆದ್ದಾರಿ ಬದಿಯ ಎಲ್ಲ ಮದ್ಯದ ಅಂಗಡಿಗಳಿಗೆ ನೋಟಿಸ್‌ ಜಾರಿ ಮಾಡುತ್ತಿರುವ  ಇಲಾಖೆ ಆಕ್ಷೇಪಣೆ  ಸಲ್ಲಿಸಲು 15 ದಿನ ಕಾಲಾವಕಾಶ ನೀಡಿದೆ. ವಿವರಣೆ ನೀಡದಿದ್ದರೆ ಆದೇಶಕ್ಕೆ ಒಪ್ಪಿಗೆ ಇದೆ ಎಂದು ಪರಿಗಣಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದೂ ತಿಳಿಸಿದೆ.

6 ಸಾವಿರ ಮದ್ಯದಂಗಡಿ: ಸುಪ್ರೀಂ ಕೋರ್ಟ್ ಆದೇಶದಿಂದ  6 ಸಾವಿರ ಮದ್ಯದಂಗಡಿಗಳು ಸ್ಥಳಾಂತರ ಆಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಒಟ್ಟಾರೆ ಹತ್ತು ಸಾವಿರ ಮದ್ಯದ ಅಂಗಡಿಗಳು ಇವೆ ಎಂದು ಅಬಕಾರಿ ಇಲಾಖೆ ಅಂದಾಜಿಸಿದೆ.

ಬಹಳಷ್ಟು ತಾಲ್ಲೂಕು ಕೇಂದ್ರಗಳು, ಹೋಬಳಿ  ಕೇಂದ್ರಗಳ ಮಧ್ಯದಲ್ಲಿಯೇ ಒಂದಲ್ಲ ಒಂದು ಹೆದ್ದಾರಿ ಹಾದು ಹೋಗಿದೆ.  ರಸ್ತೆ ಬದಿ ಇರುವ ಮದ್ಯದ ಅಂಗಡಿಗಳನ್ನು ಮುಚ್ಚಿಸಿದರೆ ಸರ್ಕಾರದ ಬೊಕ್ಕಸಕ್ಕೆ ಬರುವ ಆದಾಯದಲ್ಲಿ ಎಷ್ಟು ಕಡಿಮೆ ಆಗಲಿದೆ ಎಂಬುದನ್ನು ನಿಖರವಾಗಿ ತಿಳಿಯಲು  ಅಧಿಕಾರಿಗಳು ಸಮೀಕ್ಷೆ ನಡೆಸುತ್ತಿದ್ದಾರೆ.

ದೇಶದ ಎಲ್ಲ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಬದಿ ಇರುವ  ಮದ್ಯದ ಅಂಗಡಿಗಳ ಪರವಾನಗಿಯನ್ನು 2017ರ ಮಾ.31ರ ನಂತರ ನವೀಕರಿಸದಂತೆ ಸುಪ್ರೀಂ ಕೋರ್ಟ್‌ 2016ರ ಡಿಸೆಂಬರ್‌ 15ರಂದು ಆದೇಶ ನೀಡಿದೆ.

ನೋಟಿಸ್‌ಗೆ ಉತ್ತರ: ಬೆಂಗಳೂರು ಸೇರಿದಂತೆ ಕೆಲವು ಪ್ರಮುಖ ನಗರಗಳಲ್ಲಿ ನೋಟಿಸ್‌ಗೆ ಉತ್ತರ ಕೊಟ್ಟಿರುವ ಮದ್ಯದ ಅಂಗಡಿಗಳ ಮಾಲೀಕರು ತಮ್ಮ ಅಂಗಡಿಗಳು ರಾಷ್ಟ್ರೀಯ ಅಥವಾ ರಾಜ್ಯ ಹೆದ್ದಾರಿ ಮೇಲೆ ಇಲ್ಲ. ಪಾಲಿಕೆ ವ್ಯಾಪ್ತಿಯ ರಸ್ತೆಗಳ ಮೇಲಿದೆ. ಇದರಿಂದಾಗಿ ಸುಪ್ರೀಂ ಕೋರ್ಟ್‌ ತೀರ್ಪು ಅನ್ವಯ ಆಗುವುದಿಲ್ಲ ಎಂದು ಉತ್ತರ ಕೊಟ್ಟಿದ್ದಾರೆ. ರಾಜ್ಯ ಸರ್ಕಾರ ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಸಿದ್ಧತೆ
ಮದ್ಯದ ಅಂಗಡಿ ಸ್ಥಳಾಂತರಿಸಲು  ನೀಡಿರುವ ಆದೇಶ  ಮರುಪರಿಶೀಲಿಸಲು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.

ಹೆದ್ದಾರಿ ಬದಿ ಇರುವ ಮದ್ಯದ ಅಂಗಡಿಗಳ ಸಂಖ್ಯೆ, ಅವುಗಳನ್ನು ಮುಚ್ಚುವುದರಿಂದ ಸರ್ಕಾರದ ಬೊಕ್ಕಸಕ್ಕೆ ಆಗಲಿರುವ ನಷ್ಟದ ವಿವರವನ್ನು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡಲು ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ. ಅಡ್ವೊಕೇಟ್ ಜನರಲ್‌ ಎಂ.ಆರ್‌. ನಾಯಕ್‌ ಅವರ ಮೂಲಕ ಒಂದು ವಾರದಲ್ಲಿ ಅರ್ಜಿ ಸಲ್ಲಿಸುವುದಾಗಿ ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತೆರಿಗೆ ಗುರಿ ಹೆಚ್ಚಳ ಸಂಭವ
ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ತಿಂಗಳು ವಿಧಾನಸಭೆಯಲ್ಲಿ ಮಂಡಿಸಲಿರುವ ಬಜೆಟ್‌ನಲ್ಲಿ ಅಬಕಾರಿ ತೆರಿಗೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಈಗಾಗಲೇ ಅಬಕಾರಿ ತೆರಿಗೆ ಹೆಚ್ಚಳ ಮಾಡುವ ಸುಳಿವು ನೀಡಿದ್ದಾರೆ. ಈ ವರ್ಷ ಅಬಕಾರಿ ಬಾಬ್ತಿನಿಂದ  16,510 ಕೋಟಿ ತೆರಿಗೆ ಸಂಗ್ರಹ ಗುರಿ ಇದೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಆಗಿಲ್ಲ. ಮುಂದಿನ ವರ್ಷ ಇದು 18,500 ಕೋಟಿಗೆ ನಿಗದಿಯಾಗುವ ಸಂಭವವಿದೆ ಎಂದೂ ಮೂಲಗಳು ಸುಳಿವು ನೀಡಿವೆ.

ಮುಖ್ಯಾಂಶಗಳು
* ಸ್ಥಳಾಂತರ ಆಗಲಿರುವ ಸುಮಾರು 6 ಸಾವಿರ ಮದ್ಯದಂಗಡಿ
* 15 ದಿನಗಳಲ್ಲಿ ಲಿಖಿತ ವಿವರಣೆ ನೀಡಲು ಅವಕಾಶ
* ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಲು ರಾಜ್ಯದ ನಿರ್ಧಾರ

No Comments

Leave A Comment