Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಮಹಿಳಾ ವಿಶ್ವಕಪ್‌ ಅರ್ಹತಾ ಟೂರ್ನಿಯ ಫೈನಲ್: ಜಯ ತಂದುಕೊಟ್ಟ ಕೌರ್‌ ರೋಚಕ ಹೋರಾಟ; ಭಾರತಕ್ಕೆ ಪ್ರಶಸ್ತಿ

ಕೊಲಂಬೊ:  ರೋಚಕ ಅಂತ್ಯಕಂಡ ಫೈನಲ್‌ ಪಂದ್ಯದಲ್ಲಿ ಗೆಲುವು ಯಾರಿಗೆ ಎನ್ನುವ ಕುತೂಹಲವಿತ್ತು. ಕೊನೆಯ ಎರಡು ಎಸೆತಗಳಲ್ಲಿ ಅಗತ್ಯವಿದ್ದ ಎಂಟು ರನ್‌ಗಳನ್ನು ಬಾರಿಸಿದ ಹರ್ಮನ್‌ಪ್ರೀತ್ ಕೌರ್ ಅವರ ಅಮೋಘ ಆಟದಿಂದ ಭಾರತ ಮಹಿಳಾ ತಂಡಕ್ಕೆ ವಿಶ್ವಕಪ್‌ ಅರ್ಹತಾ ಟೂರ್ನಿಯಲ್ಲಿ ಪ್ರಶಸ್ತಿ ಲಭಿಸಿತು.

ಫೈನಲ್‌ನಲ್ಲಿ ಆಡಿದ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಈ ಪಂದ್ಯಕ್ಕೂ ಮೊದಲೇ ವಿಶ್ವಕಪ್‌ಗೆ ಅರ್ಹತೆ ಪಡೆದಿದ್ದವು. ಆದ್ದರಿಂದ ಉಭಯ ತಂಡಗಳಿಗೂ ಪ್ರಶಸ್ತಿ ಸುತ್ತಿನ ಹೋರಾಟ ಪ್ರತಿಷ್ಠೆಯ ಕಣವಾಗಿತ್ತು.

ಮಂಗಳವಾರ ನಡೆದ ಅರ್ಹತಾ ಸುತ್ತಿನ ಫೈನಲ್‌ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 49.4 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 244 ರನ್ ಕಲೆಹಾಕಿತು. ಈ ಗುರಿಯನ್ನು ಭಾರತ  50 ಓವರ್‌ಗಳಲ್ಲಿ 9 ವಿಕೆಟ್‌  ಕಳೆದುಕೊಂಡು ಮುಟ್ಟಿತು.

ರೋಚಕ ಹೋರಾಟ: ಆರಂಭದಿಂದ ಉತ್ತಮ ಹೋರಾಟ ತೋರಿದ ಭಾರತ ಗೆಲುವು ಪಡೆಯಲು ಕೊನೆಯ ಓವರ್‌ನಲ್ಲಿ ಒಂಬತ್ತು ರನ್‌ಗಳನ್ನು ಗಳಿಸಬೇಕಿತ್ತು. ಉಳಿದಿದ್ದು ಎರಡೇ ವಿಕೆಟ್‌. ಆದ್ದರಿಂದ ವಿಜಯದ ಮಾಲೆ ಯಾರಿಗೆ ಎನ್ನುವ ಕುತೂಹಲವಿತ್ತು.

ಕೊನೆಯ ಓವರ್‌ನ ಮೊದಲ ಎಸೆತದಲ್ಲಿ ಹರ್ಮನ್‌ಪ್ರೀತ್ ಡೀಪ್‌ ಮಿಡ್‌ವಿಕೆಟ್‌ ಬಳಿ ಚೆಂಡನ್ನು ಹೊಡೆದು ಎರಡು ರನ್ ಗಳಿಸಲು ಓಡಿದರು. ಆಗ ಇನ್ನೊಂದು ಬದಿಯ ಬ್ಯಾಟ್ಸ್‌ವುಮನ್‌ ಪೂನಮ್‌ ಯಾದವ್‌ ರನ್‌ ಔಟ್‌ ಬಲೆಗೆ ಬಿದ್ದರು. ಆದ್ದರಿಂದ ಉಳಿದ ಒಂದು ಕೊನೆಯ ವಿಕೆಟ್‌ನಲ್ಲಿ ಎಂಟು ರನ್ ಗಳಿಸಬೇಕಾದ ಸವಾಲು ಭಾರತದ ಮುಂದಿತ್ತು.

ಆಗ ಅಬ್ಬರಿಸಿದ ಹರ್ಮನ್‌ಪ್ರೀತ್ ಕೌರ್ ಐದನೇ ಎಸೆತದಲ್ಲಿ ಡೀಪ್‌ ಮಿಡ್‌ವಿಕೆಟ್‌ ಬಳಿ ಸಿಕ್ಸರ್‌ ಸಿಡಿಸಿದರು. ಕೊನೆಯ ಎಸೆತದಲ್ಲಿ ಅಗತ್ಯವಿದ್ದ ಎರಡು ರನ್‌ ಕೂಡ  ಗಳಿಸಿ ಭಾರತದ ಪಾಳೆಯದಲ್ಲಿ ಸಂಭ್ರಮ ತುಂಬಿದರು.

ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಅಜೇಯವಾಗಿ ಫೈನಲ್ ತಲುಪಿದ್ದ ಭಾರತ ತಂಡಕ್ಕೆ ದಕ್ಷಿಣ ಆಫ್ರಿಕಾ ಕಠಿಣ ಸವಾಲು ಒಡ್ಡಿತು. ಈ ಸವಾಲನ್ನು ಮಿಥಾಲಿ ಪಡೆ ದಿಟ್ಟತನದಿಂದ ಎದುರಿಸಿತು.

ದೀಪ್ತಿ, ಮೆಷ್ರಮ್ ಜತೆಯಾಟ: ಗುರಿ ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭ ದೊರೆಯಿತು. ತಿರುಷ್ ಕಾಮಿನಿ (10) ಮರಿಜನ್ನೆ ಕಪ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ಜತೆಯಾದ ಮೋನಾ ಮೆಷ್ರಮ್ (59) ಹಾಗೂ ದೀಪ್ತಿ ಶರ್ಮಾ (71) ಎರಡನೇ ವಿಕೆಟ್‌ಗೆ 124 ರನ್ ಕಲೆಹಾಕಿ ಎದುರಾಳಿ ತಂಡದ ಮೇಲೆ ಒತ್ತಡ ಹೇರಿದರು. ಮೆಷ್ರಮ್ 7 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದರೆ, ದೀಪ್ತಿ 8 ಬೌಂಡರಿ ಬಾರಿಸಿದರು.

ಕರ್ನಾಟಕದ ವೇದಾ ಕೃಷ್ಣಮೂರ್ತಿ 31 ರನ್ ಗಳಿಸಿ ಔಟಾದ ಬಳಿಕ  ಇತರ ಆಟಗಾರ್ತಿಯರು ‘ಪೆವಿಲಿಯನ್ ಪರೇಡ್’ ಆರಂಭಿಸಿದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ವುಮನ್‌ ಗಳಾದ ವೇದಿಕಾ ವೈದ್ಯ ಹಾಗೂ ಸುಷ್ಮಾ ವರ್ಮಾ ಖಾತೆ ತೆರೆಯದೇ ಔಟಾದರು.

ಮಿಥಾಲಿ ರಾಜ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತ ಹರ್ಮನ್‌ಪ್ರೀತ್ ಕೌರ್ (41) ಜಾಣ್ಮೆಯಿಂದ ತಂಡವನ್ನು ಗೆಲುವಿನ ದಡ ಸೇರಿಸಿದರು.

ಸಂಘಟಿತ ಆಟ: ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಸಂಘಟಿತ ಹೋರಾಟದಿಂದ 200 ರನ್‌ಗಳ ಗಡಿ ದಾಟಿತು.
ಮೆಗ್ನಾನ್‌ ಡು ಪ್ರೆಜ್‌ (40) ಈ ತಂಡದ ಅಧಿಕ ಸ್ಕೋರರ್ ಎನಿಸಿದರು.

ಆರಂಭದಲ್ಲಿ 300ರ ಗಡಿ ದಾಟುವ ಸೂಚನೆ ನೀಡಿದ್ದ ದಕ್ಷಿಣ ಆಫ್ರಿಕಾ ತಂಡದ ಬ್ಯಾಟ್ಸ್‌ವುಮನ್‌ಗಳನ್ನು ಕರ್ನಾಟಕದ ಬೌಲರ್ ರಾಜೇಶ್ವರಿ ಗಾಯಕವಾಡ್ (51ಕ್ಕೆ3) ಕಟ್ಟಿ ಹಾಕಿದರು. ಇವರಿಗೆ ಶಿಖಾ ಪಾಂಡೆ (41ಕ್ಕೆ 2)  ನೆರವಾದರು.

ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ: 49.4 ಓವರ್‌ಗಳಲ್ಲಿ 244 (ಮೆಗ್ನಾನ್ ಡು ಪ್ರೈಜ್ 40; ರಾಜೇಶ್ವರಿ ಗಾಯಕವಾಡ್ 51ಕ್ಕೆ 3, ಶಿಖಾ ಪಾಂಡೆ 41ಕ್ಕೆ2). ಭಾರತ: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 245 (ಮೋನಾ ಮೆಷ್ರಮ್ 59, ದೀಪ್ತಿ ಶರ್ಮಾ 71, ಹರ್ಮನ್‌ಪ್ರೀತ್ ಕೌರ್ 41; ಮರಿಜನ್ನೆ ಕಪ್ 36ಕ್ಕೆ 2). ಫಲಿತಾಂಶ: ಭಾರತಕ್ಕೆ 1 ವಿಕೆಟ್‌ ಜಯ.

ಟೂರ್ನಿಯ ಪ್ರಮುಖ ಅಂಶಗಳು
* ಭಾರತ  ಟೂರ್ನಿಯಲ್ಲಿ ಆಡಿದ ಏಳು ಪಂದ್ಯಗಳಲ್ಲಿ ಶ್ರೀಲಂಕಾ, ಥಾಯ್ಲೆಂಡ್, ಐರ್ಲೆಂಡ್, ಜಿಂಬಾಬ್ವೆ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಪಾಕಿಸ್ತಾನ ತಂಡಗಳನ್ನು ಮಣಿಸಿ ಫೈನಲ್ ತಲುಪಿತ್ತು.
*ದೀಪ್ತಿ ಶರ್ಮಾ ಏಳು ಪಂದ್ಯಗಳಲ್ಲಿ 253 ರನ್‌ಗಳಿಸಿದ್ದಾರೆ. ಟೂರ್ನಿಯಲ್ಲಿ ಒಟ್ಟು ಹೆಚ್ಚು ರನ್ ಗಳಿಸಿದ ಎರಡನೇ  ಬ್ಯಾಟ್ಸ್‌ವುಮನ್‌ ಎನಿಸಿದ್ದಾರೆ.
* ಏಕ್ತಾ ಬಿಷ್ಟ್‌ 6 ಪಂದ್ಯಗಳಲ್ಲಿ 18 ವಿಕೆಟ್ ಪಡೆದಿದ್ದಾರೆ. ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿದ್ದಾರೆ.
* ಪಾಯಿಂಟ್ಸ್ ಪಟ್ಟಿಯಲ್ಲಿ ಕ್ರಮವಾಗಿ ಮೊದಲ ನಾಲ್ಕು ಸ್ಥಾನ ಪಡೆದ ಭಾರತ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಪಾಕಿಸ್ತಾನ ತಂಡಗಳು ವಿಶ್ವಕಪ್ ಅರ್ಹತೆ ಪಡೆದವು.
* ಐದು ಮತ್ತು ಆರನೇ ಸ್ಥಾನದಲ್ಲಿರುವ ಬಾಂಗ್ಲಾದೇಶ ಹಾಗೂ ಐರ್ಲೆಂಡ್ ಮುಂದಿನ ನಾಲ್ಕು ವರ್ಷಗಳಿಗೆ ಐಸಿಸಿ ಏಕದಿನ ಸ್ಥಾನಮಾನ ಉಳಿಸಿಕೊಂಡಿವೆ.

No Comments

Leave A Comment