Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಇನ್ನೂ ಅನುಷ್ಠಾನವಾಗದ ಪಶ್ಚಿಮವಾಹಿನಿ ಯೋಜನೆ

ಮಂಗಳೂರು: ಕರಾವಳಿಯಲ್ಲಿ ವರ್ಷದಿಂದ ವರ್ಷಕ್ಕೆ ಮಳೆ ಮತ್ತು ಅಂತರ್ಜಲ ಮಟ್ಟ ಕಡಿಮೆಯಾಗುತ್ತಲೇ ಬರುತ್ತದೆ. ಆದರೆ ಇಲ್ಲಿನ ಅತ್ಯಾವಶ್ಯ, ಅನಿವಾರ್ಯ ಯೋಜನೆ ಪಶ್ಚಿಮವಾಹಿನಿಗೆ ರಾಜ್ಯ ಸರಕಾರ ಇನ್ನೂ ಸರಿಯಾಗಿ ಮನಸ್ಸು ಮಾಡಿಲ್ಲ. ಈ ಬಾರಿಯ ಬಜೆಟ್‌ನಲ್ಲಾದರೂ ಅನುದಾನ ಲಭಿಸುತ್ತದೆಯೇ ಎಂಬುದು ಯಕ್ಷಪ್ರಶ್ನೆಯಾಗಿದೆ.

ಮುಂದಿನ ಅರ್ಥಿಕ ಸಾಲಿನ ರಾಜ್ಯ ಬಜೆಟ್‌ಗೆ ಅಂತಿಮ ರೂಪ ಕೂಡುವ ಕಾರ್ಯ ನಡೆಯುತ್ತಿದೆ. ಮುಖ್ಯಮಂತ್ರಿಯವರು ಬಜೆಟ್‌ ಕುರಿತಂತೆ ಅಭಿಪ್ರಾಯ ಸಂಗ್ರಹಕ್ಕೆ ಪೂರ್ವಭಾವಿ ಸಭೆಯನ್ನು ಈಗಾಗಲೇ ನಡೆಸಿದ್ದಾರೆ. ದ.ಕ.ಜಿಲ್ಲೆಯ ಆಡಳಿತ ಪಕ್ಷದ ಸದಸ್ಯರ ನಿಯೋಗ ಮುಂಖ್ಯಮಂತ್ರಿಯವರನ್ನು ಭೇಟಿಯಗಿ ಅವಶ್ಯ ಅಭಿವೃದ್ದಿ ಯೋಜನೆಗಳ ಬಗ್ಗೆ ಮನವಿಯನ್ನೂ ಅರ್ಪಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿದೆ. ದ.ಕನ್ನಡ ಜಿಲ್ಲೆಯಲ್ಲಿ ನೇತ್ರಾವತಿ ನದಿ ವರ್ಷದಿಂದ ವರ್ಷಕ್ಕೆ ಸೊರಗುತ್ತಿದೆ. ಎತ್ತಿನಹೊಳೆ ಯೋಜನೆ ಇದರ ತೀವ್ರತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಉಡುಪಿ ನಗರ ಸಭೆಯ ವ್ಯಾಪ್ತಿಗೆ ಕುಡಿಯುವ ನೀರಿಗೆ ಮೂಲಧಾರವಾಗಿರುವ ಸ್ವರ್ಣನದಿ ಕೂಡ ವರ್ಷದಿಂದ ವರ್ಷಕ್ಕೆ ಬರಿದಾಗುತ್ತಿದೆ. ಕಳೆದ ಬಾರಿ ನಗರವನ್ನು ಕಾಡಿದ ನೀರಿನ ಸಮಸ್ಯೆ ಈ ವರ್ಷ ಇನ್ನಷ್ಟು ತೀವ್ರತೆಯನ್ನು ಪಡೆದುಕೊಳ್ಳುವ ಎಲ್ಲ ಸಾಧ್ಯತೆ ಕಂಡುಬಂದಿದೆ. ಉಡುಪಿ ನಗರಕ್ಕೆ ಏಕೈಕ ಕುಡಿಯುವ ನೀರಿನ ಮೂಲವಾಗಿರುವ ಬಜೆ ಡ್ಯಾಂನಿಂದ ಎಪ್ರಿಲ್‌ವರೆಗೆ ಮಾತ್ರ ನೀರು ಲಭಿಸುವ ಲಭಿಸುವುದಾಗಿ ಅಂದಾಜಿಸಲಾಗಿದೆ.

ಕರಾವಳಿ ತೀರದ ಪ್ರದೇಶಗಳಲ್ಲಿ ಬೇಸಗೆಯಲ್ಲಿ ಜಲಮಟ್ಟ ಕ್ಷೀಣಿಸುವುದರಿಂದ ಸಮುದ್ರ ಸಮೀಪ ನದಿಗಳಲ್ಲಿ ಉಪ್ಪು ನೀರಿನ ಒರತೆ ಉಂಟಾಗುತ್ತದೆ. ಒಳನಾಡಿನಲ್ಲಿ ಕೆಲವು ಕೊಳವೆ ಬಾವಿಗಳು ಫೆಬ್ರವರಿ ತಿಂಗಳಿನಲ್ಲಿ ಸಂಪೂರ್ಣವಾಗಿ ಬತ್ತಿ ಹೋಗುತ್ತಿದ್ದು ಕುಡಿಯುವ ನೀರಿನ ತತ್ವಾರ ಎದುರಾಗುತ್ತಿದೆ ಮತ್ತು ಪ್ರತಿ ವರ್ಷ ಕೋಟ್ಯಂತರ ರೂಪಾಯಿಯನ್ನು ನಗರಸಭೆ, ಪಂಚಾಯತ್‌ಗಳು ತಾತ್ಕಾಲಿಕ ವ್ಯವಸ್ಥೆಗಾಗಿ ವ್ಯಯಿಸಬೇಕಾಗುತ್ತದೆ. ಪಶ್ಚಿಮವಾಹಿನಿ ಯೋಜನೆ ಸುಮಾರು 15 ವರ್ಷಗಳ ಹಿಂದಿನ ಯೋಜನೆ. ಕರಾವಳಿ ಜಿಲ್ಲೆ ಬೇಸಗೆಯಲ್ಲಿ ನೀರಿನ ಕ್ಷಾಮ ಎದುರಿಸುವ ಸಂದರ್ಭದಲ್ಲಿ ಯೋಜನೆ ಪ್ರಸ್ತಾವನೆಗೆ ಬಂದು ಮಳೆಗಾಲ ಪ್ರಾರಂಭವಾದ ಕೂಡಲೇ ಮಳೆನೀರಿನಲ್ಲಿ ಹರಿದು ಹೋಗುತ್ತಿದೆ.

ದ.ಕ., ಉಡುಪಿ ಪ್ರಮುಖ ಫಲಾನುಭವಿ ಜಿಲ್ಲೆ
ಅಂಕಿ-ಅಂಶದ ಪ್ರಕಾರ ದ.ಕನ್ನಡ ಜಿಲ್ಲೆಯ 5 ನದಿಗಳಿಂದ 657.21 ಟಿಎಂಸಿ, ಉಡುಪಿ ಜಿಲ್ಲೆಯ 13 ನದಿಗಳಿಂದ 582.48 ಟಿಎಂಸಿ ಉತ್ತರ ಕನ್ನಡ ಜಿಲ್ಲೆಗಳ ನದಿಗಳಿಂದ 240.31 ಟಿಎಂಸಿ ಸೇರಿದಂತೆ 1480 ಟಿಎಂಸಿ ನೀರು ಹರಿಯುತ್ತಿದೆ. ದ.ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಪಶ್ಚಿಮವಾಹಿನಿ ಯೋಜನೆಯಲ್ಲಿ ಸೇರಿವೆ.

ನೇತ್ರಾವತಿ, ಫಲ್ಗುಣಿ , ಸ್ವರ್ಣಾ, ಶರಾವತಿ, ಚಕ Å, ಕಾಳಿ ಸೇರಿದಂತೆ ಈ ಜಿಲ್ಲೆಗಳ ಪ್ರಮುಖ ನದಿಗಳು ಇದರಲ್ಲಿ ಒಳಗೊಂಡಿವೆ. ಮೂಲಯೋಜನೆ ಪರಿಷ್ಕೃತಗೊಂಡು 707 ಅಣೆಕಟ್ಟು ಹಾಗೂ 74 ಉಪ್ಪುನೀರು ತಡೆ ಕಿಂಡಿ ಅಣೆಕಟ್ಟು ಪ್ರಸ್ತಾವನೆ ಹೊಂದಿದೆ. 20 ನಗರಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶ ಹೊಂದಲಾಗಿದೆ. ಇದರಿಂದ 23,269 ಹೆಕ್ಟೇರ್‌ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಯೋಜನೆ ಸಿದ್ದಪಡಿಸಲಾಗಿದೆ. ಯೋಜನೆಯ ವೆಚ್ಚ 1000 ಕೋ.ರೂ. ಎಂದು ಅಂದಾಜಿಸಲಾಗಿದೆ.

ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿಗೆ ಅಲ್ಲಲ್ಲಿ ಕಿಂಡಿ ಆಣೆಕಟ್ಟುಗಳನ್ನು ನಿರ್ಮಿಸಿ ನೀರು ಸಂಗ್ರಹಿಸುವುದು ಯೋಜನೆಯ ಮೂಲ ಉದ್ದೇಶ. ಕೃಷಿ ಹಾಗೂ ಕುಡಿಯುವ ಉದ್ದೇಶಗಳಿಗೆ ನೀರಿನ ಲಭ್ಯತೆ ಹಾಗೂ ಅಂತರ್ಜಲ ವೃದ್ದಿಗೆ ಇದು ಪೂರಕವಾಗಿರುತ್ತದೆ. ಮೇಲ್ಮೈ ನೀರು ಸೌಲಭ್ಯದಿಂದಾಗಿ ಕೊಳವೆ ಬಾವಿ ಕೊರೆಯುವುದನ್ನು ತಪ್ಪಿಸಬಹುದಾಗಿದೆ.

ಭರವಸೆ ಈಡೇರಲೇ ಇಲ್ಲ
ಪಶ್ಚಿಮ ವಾಹಿನಿ ಯೋಜನೆಗೆ ಸುಮಾರು 15 ವರ್ಷಗಳ ಇತಿಹಾಸವಿದೆ. ಆದರೆ ಎತ್ತಿನಹೊಳೆ ಯೋಜನೆ ಆರಂಭಗೊಂಡಾಗ ಪಶ್ಚಿಮವಾಹಿನಿ ಯೋಜನೆಯನ್ನು ಮತ್ತೆ ಪ್ರಸ್ತಾವಿಸಲಾಯಿತು. ಎತ್ತಿನಹೊಳೆ ವಿರುದ್ಧ ಹೋರಾಟ ತೀವ್ರಗೊಂಡಾಗ ಇದನ್ನು ಶಮನಗೊಳಿಸುವ ನಿಟ್ಟಿನಲ್ಲಿ ಬೃಹತ್‌ ನೀರಾವರಿ ಸಚಿವ ಎಂ.ಬಿ.ಪಾಟೀಲ್‌ ಅವರು ಕರಾವಳಿ ಭಾಗದಲ್ಲಿ ಪಶ್ಚಿಮವಾಹಿನಿ ಯೋಜನೆಯನ್ನು ಕೈಗೆತ್ತಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಅಶ್ವಾಸನೆ ನೀಡಿ 2 ವರ್ಷಗಳು ಕಳೆದಿವೆ. ಮುಖ್ಯಮಂತ್ರಿಗಳು ಜಿಲ್ಲೆಗೆ ಬಂದ ಸಂದರ್ಭಗಳಲ್ಲಿ ಪಶ್ಚಿಮವಾಹಿನಿ ಯೋಜನೆಯ ಬಗ್ಗೆ ಪ್ರಸ್ತಾವನೆ ಮಾಡಿ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡುತ್ತಲೇ ಬಂದಿದ್ದಾರೆ. ದ.ಕ. ಹಾಗೂ ಉಡುಪಿ ಜಿಲ್ಲೆಯ ಸಚಿವರುಗಳು ಕೂಡ ಯೋಜನೆ ಅನುಷ್ಠಾನದ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದರು. ಆದರೆ ವಾಸ್ತವವದಲ್ಲಿ ಪ್ರಸ್ತಾವನೆ ಮೂಲ ಸ್ಥಿತಿಯಲ್ಲೇ ಉಳಿದುಕೊಂಡಿದೆ. ಈ ಹಿಂದಿನಂತೆ ಕೇವಲ ಭರವಸೆಯಲ್ಲೇ ಯೋಜನೆ ತೇಲಿ ಹೋಗದಿರಲಿ ಎಂಬುದು ಹಾರೈಕೆಯಾಗಿದೆ.

ಕರಾವಳಿಗೆ ನೀರಾವರಿ ನಿಗಮ ಅವಶ್ಯ
ಕರಾವಳಿಯಲ್ಲಿ ಬೀಳುವ ಮಳೆ ನೀರನ್ನು ಸಂಗ್ರಹಿಸಿ ನಿರ್ವಹಿಸುವ ನಿಟ್ಟಿನಲ್ಲಿ ರಾಜ್ಯದ ಇತರ ಭಾಗದಲ್ಲಿರುವಂತೆ ಈ ಭಾಗದಲ್ಲೂ ಕರಾವಳಿ ನೀರಾವರಿ ನಿಗಮದ ಆವಶ್ಯಕತೆ ಇದೆ. ಪಶ್ಚಿಮವಾಹಿನಿ, ಬಹುಗ್ರಾಮ ಕಡಿಯುವ ನೀರಿನ ಯೋಜನೆ ಮುಂತಾದ ಮಧ್ಯಮ ಹಾಗೂ ಸಣ್ಣ ಯೋಜನೆಗಳನ್ನು ನಿಗಮದ ಮೂಲಕ ಕೈಗೆತ್ತಿಕೊಂಡು ದ.ಕ., ಉಡುಪಿ, ಉತ್ತರಕನ್ನಡ ಜಿಲ್ಲೆಯ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ. ಇದಕ್ಕೆ ಉಳಿದ ಯೋಜನೆಗಳಂತೆ ಸಾವಿರಾರು ಕೋಟಿ ರೂ. ಅಗತ್ಯವಿರಲಾರದು. ಈ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯಬೇಕಾಗಿದೆ.

No Comments

Leave A Comment