Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಚಿತ್ರಗಳು- ಸಿ.ಟಿ. ರವಿ, ಶೋಭಾ ಕರಂದ್ಲಾಜೆ ಜತೆ ಬೆಟ್ಟಿಂಗ್‌ ದಂಧೆ ಆರೋಪಿ ಕಾಂಚನ್‌ಗೌಡ!

ಬೆಂಗಳೂರು: ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿರುವ ಬಿಜೆಪಿ ಯುವ ಮೋರ್ಚಾ ಚಿಕ್ಕಮಗಳೂರು ನಗರ ಘಟಕದ ಅಧ್ಯಕ್ಷ ಕಾಂಚನ್‌ಗೌಡ ಅಲಿಯಾಸ್‌ ರಾಕಿ (28) ಶಾಸಕ ಸಿ.ಟಿ. ರವಿ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಅವರ ಜತೆಗಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಸಿ.ಟಿ. ರವಿ ಮತ್ತು ಶೋಭಾ ಕರಂದ್ಲಾಜೆ ಅವರ ಜತೆಗೆ ಕಾಂಚನ್‌ಗೌಡ ತೆಗೆಸಿಕೊಂಡಿರುವ ಚಿತ್ರಗಳನ್ನು ಪೋಸ್ಟ್‌ ಮಾಡುವ ಜತೆಗೆ ಬಿಜೆಪಿಯ ಈ ಮುಖಂಡರ ಪ್ರಾಮಾಣಿಕತೆಯನ್ನು ಕೆಲವರು ವ್ಯಂಗ್ಯದ ಮೂಲಕ ಪ್ರಶ್ನಿಸಿದ್ದಾರೆ.

ಕಾಂಚನ್‌ಗೌಡ ಚಿತ್ರಗಳ ಜತೆಗಿರುವ ಮುನೀರ್‌ ಕಾಟಿಪಳ್ಳ ಅವರ ಫೇಸ್‌ಬುಕ್‌ ಪೋಸ್ಟ್ ಅನ್ನು ಗಾಯತ್ರಿ ಎಚ್‌.ಎನ್‌. ಮತ್ತು ಚೇತನಾ ತೀರ್ಥಹಳ್ಳಿ ರೀಪೋಸ್ಟ್‌ ಮಾಡಿದ್ದಾರೆ. ಫೇಸ್‌ಬುಕ್‌ನಲ್ಲಿ ನೂರಾರು ಮಂದಿ ಈ ಪೋಸ್ಟ್ ಶೇರ್‌ ಮಾಡಿದ್ದಾರೆ. ಸದ್ಯ ಈ ಚಿತ್ರಗಳು ಮತ್ತು ಪೋಸ್ಟ್‌ ಫೇಸ್‌ಬುಕ್‌ನಲ್ಲಿ ಚರ್ಚೆಯಾಗುತ್ತಿದೆ.

ಕಾಂಚನ್‌ಗೌಡ 3 ವರ್ಷದ ಹಿಂದೆ ಬಿಜೆಪಿ ಯುವ ಮೋರ್ಚಾದ ಚಿಕ್ಕಮಗಳೂರು ನಗರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದ. ಈತ ಚಿಕ್ಕಮಗಳೂರಿನ ಕಾಫಿ ಬೆಳೆಗಾರರ ಕುಟುಂಬಕ್ಕೆ ಸೇರಿದವನು. ಈತ ಐಡಿಎಸ್‌ಜಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಕಾಂಚನ್‌ಗೌಡ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿದ್ದಾನೆ. ಈತ ಈ ಹಿಂದೆ ದರೋಡೆ ಪ್ರಕರಣ ಒಂದರಲ್ಲಿ ಬಂಧನಕ್ಕೊಳಗಾಗಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಬಂಧಿತರ ಸಂಖ್ಯೆ 10ಕ್ಕೆ ಏರಿಕೆ
ಕಾಂಚನ್‌ಗೌಡ ಜತೆಗೆ ಇತರೆ ಮೂರು ಮಂದಿಯನ್ನೂ ಶುಕ್ರವಾರ ಪೊಲೀಸರು ಬಂಧಿಸಿರುವುದರಿಂದ ಪ್ರಕರಣದಲ್ಲಿ ಇದುವರೆಗೆ ಬಂಧಿತರಾದವರ ಸಂಖ್ಯೆ 10ಕ್ಕೇರಿದೆ.

ಬೆಟ್ಟಿಂಗ್‌ ದಂಧೆಯ ಪ್ರಮುಖ ಸೂತ್ರಧಾರ ಬೆಂಗಳೂರಿನ ರಾಜರಾಜೇಶ್ವರಿ ನಗರದ ವಾಸಿ ಚೇತನ್‌ ಸೇಟ್‌ (34), ಡಿವೈಎಸ್‌ಪಿ ಕಲ್ಲಪ್ಪ ಆತ್ಮಹತ್ಯೆ ಮತ್ತು ತೇಜಸ್‌ ಅಪಹರಣ ಪ್ರಕರಣದಲ್ಲಿ ಸಿಐಡಿ ವಿಚಾರಣೆ ಎದುರಿಸಿದ್ದ ವಿಜಯಪುರ ವಾಸಿ ಶೋಅಪ್‌ ಶಿವು ಅಲಿಯಾಸ್‌ ಶಿವದತ್ತ (43), ಗ್ರೀನ್‌ ಹೋಟೆಲ್‌ ಮಾಲೀಕ ನರಗನಹಳ್ಳಿಯ ಗಿರೀಶ್‌ (36) ಇತರೆ ಬಂಧಿತ ಆರೋಪಿಗಳು.

ಕ್ರಿಕೆಟ್ ಬೆಟ್ಟಿಂಗ್ ಸಂಬಂಧ ಕಾಯಿರವಿ, ಪ್ರಶಾಂತ, ಅಭಿ ಮತ್ತು ಹೊಯ್ಸಳ ಎಂಬುವವರ ವಿರುದ್ಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಫೆ.5ರಂದು ಪ್ರಕರಣ ದಾಖಲಾಗಿತ್ತು. ನ್ಯಾಯಾಂಗ ಬಂಧನದಲ್ಲಿದ್ದ ಕಾಯಿರವಿ (40), ಪ್ರಶಾಂತ (34), ಅಭಿಷೇಕ್ ಗೌಡ (28), ವೆಂಕಟೇಶ್ (42), ಅಫ್ಜಲ್ (30), ಮೋಹನ (34) ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

‘ಆರೋಪಿಗಳಿಂದ ಈವರೆಗೆ ₹2.12 ಲಕ್ಷ ನಗದು, 1 ಲ್ಯಾಪ್‌ಟಾಪ್, 1 ಕಾರು, 16 ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ತಿಳಿಸಿದ್ದಾರೆ.

ಡಿ.ಜೆ. ಚೇತನ್‌ ಸೇಟ್‌
ಬೆಂಗಳೂರಿನ ರಾಜರಾಜೇಶ್ವರಿ ನಗರದ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ ಚಿಕ್ಕಮಗಳೂರು ನಗರದ ಎಂ.ಜಿ.ರಸ್ತೆಯ ಚಿನ್ನಾಭರಣ ವ್ಯಾಪಾರಿಯ ಮಗ ಚೇತನ್‌ ಸೇಟ್‌ ಅಲಿಯಾಸ್‌ ಸಂತು ಈ ಪ್ರಕರಣದ ಪ್ರಮುಖ ಆರೋಪಿ. ಬೆಂಗಳೂರಿನಲ್ಲಿ ಡಿ.ಜೆ. (ಡಿಸ್ಕೊ ಜಾಕಿ) ಆಗಿದ್ದ ರೆಸಾರ್ಟ್‌, ಕ್ಲಬ್‌, ಪಂಚತಾರ ಹೋಟೆಲ್‌ಗಳಲ್ಲಿ ಹಾಗೂ ಶ್ರೀಮಂತರ ಮದುವೆ ಸಮಾರಂಭಗಳಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದ.

2012ರಿಂದ ಬೆಟ್ಟಿಂಗ್‌ ದಂಧೆಯಲ್ಲಿ ತೊಡಗಿದ್ದ. ಆರೋಪಿಯ ಮೊಬೈಲ್‌ ವಶಕ್ಕೆ ಪಡೆದಿದ್ದು, ಬೆಟ್ಟಿಂಗ್‌ ಜಾಲದಲ್ಲಿ ಭಾಗಿಯಾಗಿರುವ ದೊಡ್ಡ ಕುಳಗಳ ಬಗ್ಗೆ ಮಹತ್ವದ ಸುಳಿವುಗಳು ದೊರಕಿವೆ ಎಂದು ಮೂಲಗಳು ತಿಳಿಸಿವೆ.

‘ಚೇತನ್‌ ಬೆಂಗಳೂರು ಹಾಟ್‌ಲೈನ್‌ ಮೂಲಕ ಚಿಕ್ಕಮಗಳೂರು ಸೇರಿದಂತೆ ಮಲೆನಾಡಿನ ಭಾಗದಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ನಿಯಂತ್ರಿಸುತ್ತಿದ್ದ. ಈತ ಆರಂಭದಲ್ಲಿ ‘ಸಂತು’ ಎಂಬ ರಹಸ್ಯ ಹೆಸರಿನಲ್ಲಿ ಬೆಟ್ಟಿಂಗ್‌ ದಂಧೆ ನಡೆಸಿದ್ದ. ನಂತರದ ದಿನಗಳಲ್ಲಿ ಈ ಹೆಸರು ಬದಲಿಸಿ ‘ಕತ್ತೆ’ ಹೆಸರಿನ ಕೋಡ್‌ವರ್ಡ್‌ ಬಳಸಿ ಬೆಟ್ಟಿಂಗ್‌ ನಡೆಸುತ್ತಿದ್ದ. ಈತನ ಅಧೀನದಲ್ಲಿ ಬಿಜೆಪಿ ಮುಖಂಡ, ನಗರಸಭೆ ಸದಸ್ಯ ಕಾಯಿರವಿ ಬೆಟ್ಟಿಂಗ್‌ ದಂಧೆ ನಿರ್ವಹಿಸುತ್ತಿದ್ದುದು ತನಿಖೆಯಿಂದ ತಿಳಿದುಬಂದಿದೆ’ ಎನ್ನುತ್ತವೆ ಮೂಲಗಳು.

‘ಬೆಂಗಳೂರು, ಮೈಸೂರು ಮತ್ತು ಸಕಲೇಶಪುರ ಲೈನ್‌ ಮೂಲಕ ನಡೆಯುತ್ತಿದ್ದ ಬೆಟ್ಟಿಂಗ್‌ ದಂಧೆಗೆ ಚೇತನ್‌ ಪ್ರಮುಖ ಸೂತ್ರಧಾರನಾಗಿದ್ದ. ಈ ಜಾಲದಲ್ಲಿ ಸಕಲೇಶಪುರದ ಇನ್ನಿಬ್ಬರು ಭಾಗಿಯಾಗಿರುವುದು ಆರೋಪಿ ಕಾಯಿರವಿಯಿಂದ ವಶಪಡಿಸಿಕೊಂಡಿದ್ದ ಮೊಬೈಲ್‌ ಸಿಕ್ಕಿರುವ ಮಾಹಿತಿಗಳಿಂದ ಖಾತ್ರಿಯಾಗಿತ್ತು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

No Comments

Leave A Comment