ಜೈಪುರ : ಕಾರು-ಟ್ರಕ್ ಮುಖಾಮುಖೀ ಢಿಕ್ಕಿ: ಸ್ಥಳದಲ್ಲೇ ಐವರ ಸಾವು
ಜೈಪುರ : ವೇಗವಾಗಿ ಧಾವಿಸಿ ಬರುತ್ತಿದ್ದ ಟ್ರಕ್ ಒಂದಕ್ಕೆ ಕಾರೊಂದು ನೇರವಾಗಿ ಢಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಮೃತಪಟ್ಟು, ಓರ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಝಂಜುನು ಜಿಲ್ಲೆಯಿಂದ ವರದಿಯಾಗಿದೆ.
ನಿನ್ನೆ ಬುಧವಾರ ತಡರಾತ್ರಿ ಸಂಭವಿಸಿದ ಈ ಅವಘಡದಲ್ಲಿ ಮೃತಪಟ್ಟವರನ್ನು ರಾಹುಲ್ ಜಾಂಗೀದ್ 17, ಕೃಷ್ಣಕಾಂತ್ 21, ಮುಕೇಶ್ ರೇವಾಲ್ 28, ಸಂದೀಪ್ ಜಾಂಗೀದ್ 22 ಮತ್ತು ಸಂದೀಪ ಮೀಲ್ 22 ಎಂದು ಗುರುತಿಸಲಾಗಿದೆ. ಕಾರು ಸೂರಜ್ಗಢದಿಂದ ಬರುತ್ತಿತ್ತು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ಜೋಗೇಂದ್ರ ಸಿಂಗ್ ತಿಳಿಸಿದ್ದಾರೆ.
ಕಾರಿನಲ್ಲಿದ್ದ ದುರ್ದೈವಿಗಳು ಝಂಜುನು ನಲ್ಲಿ ಮದುವೆ ಸಮಾರಂಭ ಮುಗಿಸಿ ಮರಳುತ್ತಿದ್ದರು. ಅಪಘಾತದ ತೀವ್ರತೆಯಲ್ಲಿ ಎಲ್ಲ ಐದು ಮಂದಿ ಸ್ಥಳದಲ್ಲೇ ಮೃತಪಟ್ಟರು; ಟ್ರಕ್ ಚಾಲಕ ಗಾಯಗೊಂಡ. ಶವಗಳನ್ನು ಸಂಬಂಧಿತರ ಕುಟುಂಬದವರಿಗೆ ಬಿಟ್ಟುಕೊಡಲಾಗಿದೆ. ವೇಗವಾಗಿ ನಿರ್ಲಕ್ಷ್ಯದಿಂದ ಟ್ರಕ್ ಚಲಾಯಿಸುತ್ತಿದ್ದ ಚಾಲಕ ಹರೇಂದ್ರ ಕುಮಾರ್ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಜೋಗೇಂಧ್ರ ಸಿಂಗ್ ತಿಳಿಸಿದ್ದಾರೆ.