Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಗಾಯಗೊಂಡಿದ್ದ ರಾಜ್ಯಮಟ್ಟದ ಕುಸ್ತಿಪಟು ನಿಧನ

ಹುಬ್ಬಳ್ಳಿ: ರಾಜ್ಯ ಒಲಿಂಪಿಕ್ಸ್‌ ಕ್ರೀಡಾಕೂಟದ ಕುಸ್ತಿ ಪಂದ್ಯಾವಳಿಯಲ್ಲಿ ಬಲಗಾಲಿನ ಮೂಳೆ ಮುರಿದುಕೊಂಡು ಗಂಭೀರವಾಗಿ ಗಾಯ ಗೊಂಡಿದ್ದ ಧಾರವಾಡ ಜಿಲ್ಲೆ ಚಿಕ್ಕಮಲ್ಲಿಗವಾಡ ಗ್ರಾಮದ ಸಂತೋಷ ದ್ಯಾಮಣ್ಣ ಹೊಸಮನಿ (21) ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಗ್ಗೆ ಇಲ್ಲಿನ ಕಿಮ್ಸ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಫೆ. 8ರಂದು ಧಾರವಾಡದಲ್ಲಿ ನಡೆದ ಲೀಗ್‌ ಹಂತದ 97 ಕೆ.ಜಿ. ಗ್ರೀಕೋ ರೋಮನ್‌ ವಿಭಾಗದ ಪಂದ್ಯದಲ್ಲಿ ದಾವಣಗೆರೆಯ ಮೊಹ್ಮದ ಅಲಿ ಜತೆ ಸೆಣಸಾಡುವಾಗ ಸಂತೋಷನ ಬಲಗಾಲಿನ ತೊಡೆಯಲ್ಲಿ 2-3 ಕಡೆ ಮೂಳೆ ಮುರಿತ ಉಂಟಾಗಿ ತೀವ್ರ ವಾಗಿ ಗಾಯಗೊಂಡಿದ್ದರು. ತತ್‌ಕ್ಷಣ ಅವರನ್ನು ಧಾರವಾಡದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್‌ ಆಸ್ಪತ್ರೆಗೆ ಕರೆತರಲಾಗಿತ್ತು.

ಕಿಮ್ಸ್‌ನ ತಜ್ಞ ವೈದ್ಯರು ಸೋಮವಾರ ಸತತ 8 ತಾಸುಗಳ ಸುದೀರ್ಘ‌ ಶಸ್ತ್ರ ಚಿಕಿತ್ಸೆ  ನಡೆಸಿ, ಸಂತೋಷ ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿದ್ದರು. ಆದರೆ ಮಂಗಳವಾರ ಬೆಳಗ್ಗೆ ಸಂತೋಷ್‌ ಹೃದಯ ಬಡಿತದಲ್ಲಿ ಏರಿಕೆ ಆಗಿ ಅಸ್ವಸ್ಥಗೊಂಡರು. ಕೊಬ್ಬಿನ ಅಂಶ ರಕ್ತನಾಳದಲ್ಲಿ ಸೇರಿ, ರಕ್ತ ಪರಿಚಲನೆ ಸ್ಥಗಿತಗೊಂಡ ಕಾರಣ ಬೆಳಗ್ಗೆ 11.35ರ ಸುಮಾರಿಗೆ ಹೃದಯ ಸ್ತಂಭನದಿಂದ ಸಂತೋಷ್‌ ಹೊಸಮನಿ ಮೃತಪಟ್ಟ ರೆಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಫ್ಯಾಟ್‌ ಎಂಬೋಲಿಸಂ ಕಾರಣ- ಕಿಮ್ಸ್‌  ಅಧೀಕ್ಷಕ: ಸಂತೋಷ ಹೊಸಮನಿ ಸಾವಿಗೆ ಫ್ಯಾಟ್‌ ಎಂಬೋಲಿಸಮ್‌ ಕಾರಣ ಎಂದು ಕಿಮ್ಸ್‌ನ ವೈದ್ಯಕೀಯ ಅಧೀಕ್ಷಕ ಡಾ| ಶಿವಪ್ಪ ಅನೂರಶೆಟ್ಟರ ತಿಳಿಸಿದ್ದಾರೆ. ಆತನ ಬಲಗಾಲಿನ ತೊಡೆ ಭಾಗದಲ್ಲಿ 2-3 ಕಡೆ ಮೂಳೆ ತುಂಡಾಗಿದ್ದವು. ಸೋಮವಾರ 8 ತಾಸು ಸುದೀರ್ಘ‌ ಶಸ್ತ್ರಚಿಕಿತ್ಸೆ ನಡೆಸಿ ಐಸಿಯುಗೆ ಸ್ಥಳಾಂತರಿಸಲಾಗಿತ್ತು.

ಮಂಗಳವಾರ ಬೆಳಗ್ಗೆ  ಸಂತೋಷನ ಹೃದಯ ಬಡಿತ ಏರಿ ತೀವ್ರ ಅಸ್ವಸ್ಥ ರಾದರು. ಕೊಬ್ಬಿನ ಅಂಶ ರಕ್ತನಾಳ ಸೇರಿ ರಕ್ತ ಪರಿಚಲನೆ ಕಾರ್ಯ ಸ್ಥಗಿತಗೊಂಡು ಹೃದಯಸ್ತಂಭನದಿಂದಾಗಿ 11:35ರ ಸುಮಾರಿಗೆ ಮೃತಪಟ್ಟರು. ಓರ್ವ ಉತ್ತಮ ಕುಸ್ತಿಪಟು ಮೃತಪಟ್ಟಿದ್ದು ನೋವು ತಂದಿದೆ ಎಂದು ಹೇಳಿದ್ದಾರೆ.

No Comments

Leave A Comment