Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಅಮೋಘ ಆಟ ‘ಸಾರಂಗ’ದ ಜೈತ್ರಯಾತ್ರೆಯಲ್ಲಿ ಕನ್ನಡಿಗರ ಕೈಚಳಕ

ಬೆಂಗಳೂರು: ‘ಬಾನಂಗಳದಲ್ಲಿ ಹೆಲಿಕಾಪ್ಟರ್‌ ಮೂಲಕ ಚಮತ್ಕಾರ ನಡೆಸುವುದು ಅಪಾಯಕಾರಿ. ಇದನ್ನು ಪ್ರತಿಕ್ಷಣವೂ ಅನುಭವಿಸಿ, ಆನಂದಿಸುತ್ತಿದ್ದೇವೆ. ಇದು ನಮ್ಮ ಪಾಲಿಗೆ ಮುದ್ದಿನ ಉಕ್ಕಿನ ಹಕ್ಕಿ’ ಎಂದು  ‘ಸಾರಂಗ್’ ತಂಡದ ಉಪನಾಯಕ ವಿಂಗ್‌ ಕಮಾಂಡರ್‌ ಗಿರೀಶ್ ಕೊಮಾರ್‌ ಖುಷಿಯಿಂದ ಹೇಳಿಕೊಂಡರು.

ಆಕಾಶದಲ್ಲಿ  ಮಂಗಳವಾರ ಮೈನವಿರೇಳುವಂತೆ ಮಾಡಿದ  ಭಾರತ ವಾಯುಪಡೆಯ ‘ಸಾರಂಗ್’ ಪ್ರದರ್ಶನದಲ್ಲಿ ಕನ್ನಡಿಗರಿಬ್ಬರ ಕೈಚಳಕವೂ ಇತ್ತು. ಪ್ರದರ್ಶನದ ಮೊದಲ ದಿನ  ಈ ತಂಡ ‘ಅಮೋಘ ಆಟ’ದ ಮೂಲಕ ಸುಮಾರು 10 ನಿಮಿಷ ಜನರ ಹೃದಯ ಬಡಿತ ಹೆಚ್ಚಿಸಿತು. ಚಿತ್ತಾಕರ್ಷಕ ಪ್ರದರ್ಶನ ನೀಡಿ ಜನರ ಮನಸ್ಸು ಗೆದ್ದ ಆ   ತಂಡದಲ್ಲಿ ಕನ್ನಡಿಗರಾದ  ಗಿರೀಶ್‌ ಕೊಮಾರ್‌ ಹಾಗೂ ಪೆಮ್ಮಂಡ ಪೃಥ್ವಿ ಪೊನ್ನಪ್ಪ ಅವರೂ ಇದ್ದಾರೆ.

ಈ ಹೆಲಿಕಾಪ್ಟರ್ ಜತೆಗೆ ಗಿರೀಶ್‌ ಅವರಿಗೆ ಏಳು ವರ್ಷಗಳ ನಂಟು ಇದೆ. ಪೊನ್ನಪ್ಪ ಅವರಿಗೆ ಮೂರನೇ ಏರೊ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿರುವ ಸಂಭ್ರಮೋಲ್ಲಾಸ.

ಗಿರೀಶ್‌ ಅವರು ಬಾಗಲಕೋಟೆಯವರು. ತಂದೆ ವಿ.ಎಸ್‌.ಕೊಮಾರ್ ಸೇನಾಪಡೆ­ಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ವಾಯುಪಡೆಗೆ ಸೇರಲು ಅಪ್ಪನೇ ಸ್ಫೂರ್ತಿ ಎನ್ನುವ ಅವರೀಗ ತಂಡದ ಪ್ರಮುಖ ಸದಸ್ಯ. ಅವರು ಕಲಿತದ್ದು ವಿಜಯಪುರದ ಸೈನಿಕ ಶಾಲೆಯಲ್ಲಿ. ಬಳಿಕ ಪೈಲಟ್ ಆಗಿ ವಾಯುಪಡೆಗೆ ಸೇರಿದರು.

‘ಪ್ರತಿ ಪ್ರದರ್ಶನಕ್ಕೆ ಮುನ್ನ ದಿನಗಟ್ಟಲೇ ಅಭ್ಯಾಸ ಮಾಡಬೇಕಾಗುತ್ತದೆ. ಅಭ್ಯಾಸ ನಡೆಸುವ ವೇಳೆ ಉತ್ಸಾಹ ಇಮ್ಮಡಿಯಾಗುತ್ತದೆ’ ಎಂದು ಗಿರೀಶ್ ಹೇಳಿಕೊಂಡರು.

‘ನಮ್ಮ ತಂಡ ಇಲ್ಲಿಯವರೆಗೆ ನೂರಾರು ಪ್ರದರ್ಶನಗಳನ್ನು ಕೊಟ್ಟಿದೆ. ಪ್ರತಿವರ್ಷ 14ರಿಂದ 15 ಪ್ರದರ್ಶನಗಳಲ್ಲಿ ವೈಮಾನಿಕ ಕಸರತ್ತುಗಳನ್ನು ನಡೆಸುತ್ತೇವೆ.  ಇಂಗ್ಲೆಂಡ್‌, ಬರ್ಲಿನ್, ಬಹರೇನ್‌ಗಳಲ್ಲಿ ಪ್ರದರ್ಶನ ನೀಡಿದ್ದೇವೆ. ಮುಂದಿನ ತಿಂಗಳು ಮಲೇಷ್ಯಾದಲ್ಲಿ ನಡೆಯಲಿರುವ  ಏರ್‌ ಶೋದಲ್ಲಿ ಪಾಲ್ಗೊಳ್ಳಲಿದ್ದೇವೆ. ನಮ್ಮ ಯಶಸ್ಸಿನ ಗುಟ್ಟು ತಂಡದ ಸದಸ್ಯರ ಪರಸ್ಪರ ಹೊಂದಾಣಿಕೆ ಹಾಗೂ ನಿತ್ಯ ಗಂಟೆಗಟ್ಟಲೆ ಅಭ್ಯಾಸದಲ್ಲಿದೆ’ ಎಂದು ಅವರು ಬಹಿರಂಗಪಡಿಸಿದರು.

ಪೊನ್ನಪ್ಪ ಅವರು ಕೊಡಗಿನ ಶ್ರೀಮಂಗಲದವರು. ಅವರ ತಂದೆ  ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ (ಜಿಕೆವಿಕೆ) ಪ್ರಾಧ್ಯಾಪಕರಾಗಿದ್ದರು. ತಾಯಿ ಎಂ.ಡಿ. ಮುತ್ತಮ್ಮ ಅವರು ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕಿಯಾಗಿದ್ದರು. ಬಾಲ್ಯದಿಂದಲೂ ಪೈಲಟ್ ಆಗಬೇಕೆಂಬ ಕನಸಿನ ಸಾಕಾರಕ್ಕೆಂದೇ ವಿಜಯಪುರದ ಸೈನಿಕ್‌ ಶಾಲೆಗೆ ಸೇರಿಕೊಂಡರು.

ಆ ನಂತರ  ಪುಣೆಯ ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಯಲ್ಲಿ ತರಬೇತಿ ಪಡೆದರು. ಸಾರಂಗ್‌ ತಂಡ ಸೇರಿದ್ದು 2013ರಲ್ಲಿ. ಆಗ ಅವರು ಹೆಚ್ಚುವರಿ ಪೈಲಟ್‌ ಆಗಿದ್ದರು. ಏರೊ ಇಂಡಿಯಾದಲ್ಲಿ ಮೊದಲ ಸಲ ಪ್ರದರ್ಶನ ನೀಡಿದ್ದು 2015ರಲ್ಲಿ. ಈಗ ತಾಯ್ನಾಡಿನಲ್ಲಿ ಎರಡನೇ ವೈಮಾನಿಕ ಪ್ರದರ್ಶನ ನೀಡುತ್ತಿರುವ ಪುಳಕ.

‘ಸಣ್ಣ ವಯಸ್ಸಿನಿಂದಲೇ ಹೆಲಿಕಾಪ್ಟರ್‌ ಎಂದರೆ ನನಗೆ ಬಹಳ ಇಷ್ಟ. ಹೆಲಿಕಾಪ್ಟರ್‌ ಸದ್ದು ಕೇಳಿಸಿ­ದಾಗಲೆಲ್ಲಾ ಮನೆಯಿಂದ ಹೊರಬಂದು ತುಂಬಾ ಹೊತ್ತು ಆಗಸ ನೋಡುತ್ತಾ ನಿಲ್ಲುತ್ತಿದ್ದೆ. ನಾನು ಸಹ ಒಮ್ಮೆ ಹೆಲಿಕಾಪ್ಟರ್‌ನಲ್ಲಿ ಕುಳಿತು ಪ್ರಯಾಣಿಸಬೇಕು ಎಂಬ ಆಸೆ ಉಂಟಾಗುತ್ತಿತ್ತು. ಛಲದಿಂದ ಮುನ್ನಡೆದೆ.  ಕನಸು ಸಾಕಾರಗೊಂಡಿತು’ ಎಂದು ಪೊನ್ನಪ್ಪ ತಿಳಿಸಿದರು.

‘ಪ್ರತಿ ಪ್ರದರ್ಶನದಲ್ಲೂ  ಸಾಮರ್ಥ್ಯವನ್ನು ಉತ್ತಮಪಡಿಸುವುದು ನನ್ನ ಮುಂದಿರುವ ಗುರಿ’ ಎಂದು ಹೇಳುತ್ತಾರೆ ಅವರು.

‘ತಂಡ ಇಲ್ಲಿ ಪ್ರತಿದಿನ 2 ಪ್ರದರ್ಶನಗಳನ್ನು ನೀಡಲಿದೆ. ಕನ್ನಡ ನೆಲದಲ್ಲಿ ಪ್ರದರ್ಶನ ನೀಡುವ ವೇಳೆ ದುಪ್ಪಟ್ಟು ಉತ್ಸಾಹ ಮೂಡುತ್ತದೆ’ ಎಂದು ಅವರು ಹೇಳಿದರು.

ಧಾರಾವಾಹಿ ನೋಡಿ ಚಿಗುರಿತು ಕನಸು

‘ನಾನು ಬಾಲ್ಯದಲ್ಲಿ ನೋಡಿದ ಧಾರಾವಾಹಿಯಲ್ಲಿ ವಾಯುಪಡೆ ಸೇರಲು ಹಂಬಲಿಸುವ ಮಹಿಳೆಯ ಪಾತ್ರವೊಂದಿತ್ತು. ಅದರಿಂದ ಪ್ರೇರಿತಳಾಗಿ ವಾಯುಪಡೆಗೆ ಸೇರಿದೆ’ ಎನ್ನುತ್ತಾರೆ ಸಾರಂಗ್‌ ತಂಡದ ತಾಂತ್ರಿಕ ಅಧಿಕಾರಿ ಸಂದೀಪಾ ಸಿಂಗ್‌.
ಹೆಲಿಕಾಪ್ಟರ್‌ಗಳು ಹಾರಾಟಕ್ಕೆ ಯೋಗ್ಯವಾಗಿವೆಯೇ ಎಂಬುದನ್ನು ಖಚಿತಪಡಿಸುವುದು ಇವರ ಕೆಲಸ. ಕೆಲವೊಮ್ಮೆ ಹೆಲಿಕಾಪ್ಟರ್‌ಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡರೆ ತಕ್ಷಣ ದುರಸ್ತಿಗೊಳಿಸುವ ಜವಾಬ್ದಾರಿಯೂ ಇವರದು. ಅವರ ಕೈಕೆಳಗೆ 40  ಸಿಬ್ಬಂದಿ ಇದ್ದಾರೆ.
ನೋಯ್ಡಾದ ಎಎಂಐಟಿವೈ ಕಾಲೇಜಿನಲ್ಲಿ ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌ ಪದವೀಧರೆಯಾದ ಸಿಂಗ್‌, 2014ರಲ್ಲಿ ವಾಯುಪಡೆಗೆ ಸೇರಿದರು. ಇವರು ಹರಿಯಾಣದವರು. ಇವರ ತಾಯಿ ಅನಿತಾಸಿಂಗ್ ವಾಲಿಬಾಲ್‌ ಕೋಚ್‌, ತಂದೆ ತೇಜ್‌ ಸಿಂಗ್‌ ರಾಷ್ಟ್ರಮಟ್ಟದ ಬಾಕ್ಸಿಂಗ್‌ಪಟು.

ಬೆಂಗಳೂರಿನ ವೈಮಾನಿಕ ಪ್ರದರ್ಶನದ ಭಾಗವಾಗಿರುವುದು ಹೆಮ್ಮೆಯ ವಿಷಯ ಎಂದು ಅವರು ತಿಳಿಸಿದರು.

ಮುಂಬೈನ ಸ್ನೇಹಾ ಕುಲಕರ್ಣಿ ತಂಡದಲ್ಲಿರುವ ಏಕೈಕ ಮಹಿಳಾ ಪೈಲಟ್‌. ‘ಕಾರ್ಯಕ್ರಮ ಸಂಯೋಜಕಿ ಆಗಬೇಕೆಂದು ಬಾಲ್ಯದಲ್ಲಿ ಬಯಸಿದ್ದೆ. ನನ್ನಣ್ಣ ಸೇನೆಯನ್ನು ಸೇರಿದ. ಸೇನೆಯ ಸಮವಸ್ತ್ರ, ಅವರ ಶಿಸ್ತು ನೋಡಿ ನನಗೂ ಸೇನೆ ಸೇರಬೇಕೆಂದು ಮನಸ್ಸಾಯಿತು. ನಿಜಕ್ಕೂ ನಾನು ಪೈಲಟ್‌ ಆಗುವ ಕನಸು ಕಂಡಿರಲೇ ಇಲ್ಲ’ ಎನ್ನುತ್ತಾರೆ ಸ್ನೇಹಾ.

ಬಿಎಸ್ಸಿ ಪದವೀಧರೆಯಾಗಿರುವ ಸ್ನೇಹಾ ಅಸ್ಸಾಂ ಹಾಗೂ ಹೈದರಾಬಾದ್‌ನಲ್ಲಿ ನೆರೆಸಂತ್ರಸ್ತರ ರಕ್ಷಣಾ ಕಾರ್ಯದಲ್ಲೂ  ಭಾಗವಹಿಸಿದ್ದಾರೆ. ಒಟ್ಟು 2 ಸಾವಿರಕ್ಕೂ ಹೆಚ್ಚು ಗಂಟೆಹಾರಾಟ ನಡೆಸಿದ ಅನುಭವವಿದೆ.

ಕೇರಳದ ಕೊಟ್ಟಾಯಂನ ಟಿಂಜು ಥಾಮಸ್‌ ಸಾರಂಗ್‌ ತಂಡದ ಧ್ವನಿ ಇದ್ದಂತೆ. ತಂಡವು ಪ್ರದರ್ಶನ ನೀಡುವಾಗ ವೀಕ್ಷಕ ವಿವರಣೆ ನೀಡುವುದು ಇವರ ಕೆಲಸ. 2013ರಿಂದ ಹೆಚ್ಚುವರಿ ಪೈಲಟ್‌ ಆಗಿದ್ದಾರೆ. ಕೆಲವೊಮ್ಮೆ  ಹೆಲಿಕಾಪ್ಟರ್‌ ಹಾರಾಟವನ್ನೂ ನಡೆಸಿದ್ದೂ ಇದೆ.

 ತಂಡದ ಮಹಿಳಾ ಮಣಿಗಳು

20 ಮಂದಿಯನ್ನು ಒಳಗೊಂಡ ಸಾರಂಗ್‌ ತಂಡದಲ್ಲಿ ಮೂವರು ಮಹಿಳೆಯರೂ ಇದ್ದಾರೆ.   ಸ್ನೇಹಾ ಕುಲಕರ್ಣಿ ಪೈಲೆಟ್‌ ಆಗಿ, ಸಂದೀಪಾ ಸಿಂಗ್‌  ತಾಂತ್ರಿಕ ವಿಭಾಗದ ಮುಖ್ಯಸ್ಥೆಯಾಗಿ ಹಾಗೂ ಟಿಂಜು ಥಾಮಸ್‌ ಅವರು ಉದ್ಘೋಷಕಿಯಾಗಿ ತಂಡದ ಪ್ರದರ್ಶನಗಳಿಗೆ ನೆರವಾಗುತ್ತಿದ್ದಾರೆ.

No Comments

Leave A Comment