Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ನವೋದ್ಯಮಗಳ ಉತ್ತೇಜನಕ್ಕಾಗಿ-1,500 ಕೋಟಿ ನಿಧಿ ಸ್ಥಾಪನೆ: ಪರಿಕ್ಕರ್‌ ದೇಶೀ ತಂತ್ರಜ್ಞಾನ ಆವಿಷ್ಕಾರಕ್ಕೆ ಆದ್ಯತೆ

ಬೆಂಗಳೂರು: ‘ರಕ್ಷಣಾ ಸಾಮಗ್ರಿಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವುದೇ ನಮ್ಮ ಗುರಿಯಾಗಿದ್ದು, ನವೋದ್ಯಮಗಳಿಗೆ ಹೊಸ ತಂತ್ರಜ್ಞಾನದ ಶೋಧಕ್ಕಾಗಿ ಪ್ರೋತ್ಸಾಹಿಸಲು 1,500 ಕೋಟಿ ಆರಂಭಿಕ ಮೊತ್ತದೊಂದಿಗೆ ಆವಿಷ್ಕಾರ ನಿಧಿ ಸ್ಥಾಪಿಸಿದ್ದೇವೆ’ ಎಂದು ರಕ್ಷಣಾ ಸಚಿವ ಮನೋಹರ ಪರಿಕ್ಕರ್‌ ಹೇಳಿದರು.

ಯಲಹಂಕ ವಾಯುನೆಲೆಯಲ್ಲಿ ಮಂಗಳವಾರ ‘ಏರೋ ಇಂಡಿಯಾ’ ವೈಮಾನಿಕ ಪ್ರದರ್ಶನಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

‘ರಕ್ಷಣಾ ಸಾಧನಗಳ ಉತ್ಪಾದನೆಯಲ್ಲಿ ತೊಡಗುವ ಖಾಸಗಿ ಉದ್ಯಮಗಳಿಗೆ ಹೆಚ್ಚಿನ ಪ್ರಮಾಣದ ಪರವಾನಗಿ ಸಿಗುತ್ತಿರುವುದು ನಮ್ಮ ಆದ್ಯತೆಗೆ ದ್ಯೋತಕ’ ಎಂದು ಪ್ರತಿಪಾದಿಸಿದರು.

‘ಭಾರತದಲ್ಲೇ ಉತ್ಪಾದಿಸಿ ಎನ್ನುವುದು ನಮ್ಮ ಸರ್ಕಾರದ ಮೂಲಮಂತ್ರ. ಈ ನಿಟ್ಟಿನಲ್ಲಿ ಮುಂದಡಿ ಇಟ್ಟಿರುವ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಈಗ ಕಾಲಮಿತಿಯಲ್ಲಿ ಲಘು ಯುದ್ಧ ಹೆಲಿಕಾಪ್ಟರ್‌ಗಳನ್ನು ನಿರ್ಮಿಸುತ್ತಿದೆ. ತರಬೇತಿ ವಿಮಾನವನ್ನು ಎಚ್‌ಎಎಲ್‌ ದಾಖಲೆಯ 15 ತಿಂಗಳ ಅವಧಿಯಲ್ಲೇ ನಿರ್ಮಿಸಿಕೊಟ್ಟಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ವಾಯುಪಡೆಗೆ ಅಗತ್ಯ ಯುದ್ಧ ವಿಮಾನಗಳ ಖರೀದಿಗೆ ಸಂಬಂಧಿಸಿದಂತೆ ಸದ್ಯದಲ್ಲೇ ನಿರ್ಣಯ ಕೈಗೊಳ್ಳುತ್ತೇವೆ’ ಎಂದರು.

‘ಭಾರತ ಈಗ ಜಗತ್ತಿನಲ್ಲೇ ಬಹುದೊಡ್ಡ ವೈಮಾನಿಕ ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ಮುಂದಿನ ಹತ್ತು ವರ್ಷಗಳಲ್ಲಿ ದೇಶಕ್ಕೆ ಸಾವಿರ ನಾಗರಿಕ ವಿಮಾನಗಳು ಬೇಕು. 300 ಯುದ್ಧ ವಿಮಾನಗಳ ಅಗತ್ಯವಿದೆ. 800ಕ್ಕೂ ಅಧಿಕ ಹೆಲಿಕಾಪ್ಟರ್‌ಗಳು ಹಾಗೂ ಐದು ಸಾವಿರ ಎಂಜಿನ್‌ಗಳು ಬೇಕು. ಆದ್ದರಿಂದಲೇ ಭಾರತದಲ್ಲಿ ಉತ್ಪಾದನೆಗೆ ಒತ್ತು ನೀಡುತ್ತಿದ್ದೇವೆ’ ಎಂದು ಅವರು ವಿವರಿಸಿದರು.

‘ಹಿಂದಿನ ಸರ್ಕಾರ ಈ ನಿಟ್ಟಿನಲ್ಲಿ ಯೋಚನೆಯನ್ನೇ ಮಾಡಿರಲಿಲ್ಲ’ ಎಂದ ಅವರು, ‘ರಕ್ಷಣಾ ಕ್ಷೇತ್ರದಲ್ಲಿ ಬಂಡವಾಳ ಹೂಡುವ ವಿದೇಶಿ ಕಂಪೆನಿಗಳನ್ನು ಸ್ವಾಗತಿಸಲು ನಾವು ಸಿದ್ಧ. ತಂತ್ರಜ್ಞಾನ ಹಂಚಿಕೊಳ್ಳುವುದಾದರೆ ಶೇ 100ರಷ್ಟು ಬಂಡವಾಳ ಹೂಡಿಕೆಗೂ ಅವಕಾಶ ನೀಡುತ್ತೇವೆ’ ಎಂದು ಹೇಳಿದರು.

‘ಭಾರತದಲ್ಲಿ ಉತ್ಪಾದನಾ ಘಟಕ ಸ್ಥಾಪಿಸುವ ವಿದೇಶಿ ಕಂಪೆನಿಗಳು ತಮ್ಮ ಸರ್ಕಾರದಿಂದ ಪರವಾನಗಿ ಪತ್ರ ತರುವುದು ಕಡ್ಡಾಯ. ಹೊಸ ಸರ್ಕಾರಗಳು ಬಂದಾಗ ನೀತಿಯಲ್ಲಿ ಬದಲಾದರೆ ನಮ್ಮ ಯೋಜನೆಗಳು ಬಾಧಿತವಾಗದಿರಲು ಈ ಷರತ್ತು ವಿಧಿಸಲಾಗಿದೆ’ ಎಂದರು.

‘ವಿದೇಶಿ ಬಂಡವಾಳ ಹೂಡಿಕೆ ಸಂಬಂಧಿಸಿದಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ವ್ಯಕ್ತಪಡಿಸಿರುವ ಕಳವಳವನ್ನು ಗಣನೆಗೆ ತೆಗೆದುಕೊಳ್ಳುತ್ತೇವೆ. ಬಂಡವಾಳ ಆಕರ್ಷಿಸುವ ಭರದಲ್ಲಿ ರಾಷ್ಟ್ರೀಯ ಹಿತ ಕಡೆಗಣಿಸುವುದಿಲ್ಲ’ ಎಂದು ಹೇಳಿದರು.

ಅಪಾಯ ಎದುರಿಸಲು ಸನ್ನದ್ಧ
‘ಚೀನಾ ಹಾಗೂ ಪಾಕಿಸ್ತಾನದ ಕಡೆಯಿಂದ ಎದುರಾಗಬಹುದಾದ ಸಂಭಾವ್ಯ ಅಪಾಯಕ್ಕೆ ತಕ್ಕ ಉತ್ತರ ನೀಡಲು ರಕ್ಷಣಾ ವ್ಯವಸ್ಥೆ ಸನ್ನದ್ಧವಾಗಿದೆ’ ಎಂದು ರಕ್ಷಣಾ ಸಚಿವರು ಹೇಳಿದರು.

‘ಶಾಂತವಾಗಿದ್ದ ಮಾತ್ರಕ್ಕೆ ಸಿದ್ಧತೆ ಮಾಡಿಕೊಂಡಿಲ್ಲ ಎಂದರ್ಥವಲ್ಲ. ನಮ್ಮ ಸಿದ್ಧತೆ ದೇಶದ ರಕ್ಷಣೆಗಾಗಿಯೇ ಹೊರತು ಮತ್ತೊಬ್ಬರ ಮೇಲಿನ ಆಕ್ರಮಣಕ್ಕಲ್ಲ’ ಎಂದು ತಿಳಿಸಿದರು.

‘ಜನರಲ್‌ ಖಮರ್‌ ಬಾಜ್ವಾ ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥರಾದ ಬಳಿಕ ಗಡಿಯಲ್ಲಿ ಶಾಂತ ವಾತಾವರಣ ನೆಲೆಸಿದೆ. ಇದರಿಂದ ಸಮಾಧಾನವಾಗಿದೆ. ಹಾಗೆಂದು ನಾವು ಸುಮ್ಮನೇ ಕುಳಿತಿಲ್ಲ’ ಎಂದರು.

‘ಭಾರತದ ಗಡಿಗಳಲ್ಲಿ ಚೀನಾ ಬಾಂಬರ್‌ಗಳನ್ನು ನಿಯೋಜನೆ ಮಾಡುತ್ತಿದೆಯಲ್ಲ’ ಎಂಬ ಪ್ರಶ್ನೆ ತೂರಿಬಂದಾಗ, ‘ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲು ನಾನು ಸ್ವತಂತ್ರನಲ್ಲ. ಆದರೆ, ಆತಂಕ ಎದುರಾದಾಗ ರಕ್ಷಿಸಿಕೊಳ್ಳುವ ಸಾಮರ್ಥ್ಯ ದೇಶಕ್ಕಿದೆ. ಅದನ್ನು ರಕ್ಷಣಾ ವ್ಯವಸ್ಥೆ ಮಾಡುತ್ತದೆ’ ಎಂದು ಪ್ರತಿಕ್ರಿಯಿಸಿದರು.

‘ಯಾರಿಗೆ ಕೇಳಲ್ಲ ಕೈ ಎತ್ತಿ’
ಪತ್ರಿಕಾ ಗೋಷ್ಠಿ ನಡೆದ ಹಾಲ್‌ನಲ್ಲಿ ಧ್ವನಿವರ್ಧಕ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಸರಿಯಾಗಿ ಕೇಳುತ್ತಿರಲಿಲ್ಲ. ಪತ್ರಕರ್ತರು ಈ ಕುರಿತು ಆಕ್ಷೇಪಿ
ಸಿದಾಗ, ‘ಯಾರಿಗೆ ನನ್ನ ಧ್ವನಿ ಕೇಳುತ್ತಿಲ್ಲ ಕೈ ಎತ್ತಿ’ ಎಂದು ಮನೋಹರ ಪರಿಕ್ಕರ್‌ ಹೇಳಿದರು. ಬಹುತೇಕ ಪತ್ರಕರ್ತರು ಕೈ ಎತ್ತಿದರು. ‘ಎಲ್ಲರಿಗೂ ನನ್ನ ಧ್ವನಿ ಕೇಳುತ್ತಿದೆಯಲ್ಲ’ ಎಂದು ಅವರು ಉದ್ಗಾರ ತೆಗೆದಾಗ ಸಭೆ ನಗೆಗಡಲಲ್ಲಿ ಮುಳುಗಿತು.

No Comments

Leave A Comment