Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಶಶಿಕಲಾ ಸ್ವಾಗತಕ್ಕೆ ಸಿದ್ಧವಾದ ಪರಪ್ಪನ ಅಗ್ರಹಾರ!

ಬೆಂಗಳೂರು: ಆಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ನಿಂದ ಜೈಲು ಶಿಕ್ಷೆ ಗುರಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ಅವರು ಶಿಕ್ಷೆ ಅನುಭವಿಸಲಿರುವ ಬೆಂಗಳೂರಿನ ಪರಪ್ಪನ  ಅಗ್ರಹಾರದಲ್ಲಿ ಎಲ್ಲ ಬಗೆಯ ಸಿದ್ಧತೆಗಳನ್ನು ಆರಂಭಿಸಲಾಗಿದೆ.

ಶಶಿಕಲಾ ನಟರಾಜನ್‌ ಅವರಿಗೆ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಮಹಿಳಾ ಕೈದಿಗಳ ಬ್ಯಾರಕ್‌ನಲ್ಲಿರುವ ಕೊಠಡಿಯಲ್ಲಿಡಲು ಕಾರಾಗೃಹದ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಈ ಸೆಲ್‌ನಲ್ಲಿ ಶಶಿಕಲಾ ಅವರ ಭದ್ರತೆಗೆ  10 ಮಂದಿ ಮಹಿಳಾ ಸಿಬ್ಬಂದಿ​ಯನ್ನು ನಿಯೋಜನೆ ಮಾಡಲು ನಿರ್ಧರಿಸಲಾಗಿದ್ದು, 24 ಗಂಟೆಗಳ ಕಾಲ ಶಸ್ತ್ರಸಜ್ಜಿತವಾಗಿ ಸಿಬ್ಬಂದಿಗಳು ಕಾರ್ಯ​ನಿರ್ವಹಿಸಲಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

ಇದುವರೆಗೆ ತಮಿಳುನಾಡು ಎಐಎ​ಡಿಎಂಕೆ ನಾಯಕಿ ಶಶಿಕಲಾ ಅವರು ನ್ಯಾಯಾಲಯಕ್ಕೆ ಶರಣಾಗುವ ಬಗ್ಗೆ ಅಧಿಕೃತವಾಗಿ ಮಾಹಿತಿ ಬಂದಿಲ್ಲ. ಆದರೆ ಪಕ್ಷದ ಮೂಲಗಳು ತಿಳಿಸಿರುವಂತೆ ಅವರು ಇಂದು ಮಧ್ಯಾಹ್ನದ ವೇಳೆಗೆ  ನ್ಯಾಯಾಲಯಕ್ಕೆ ಶರಣಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಅವರು ಜೈಲಿಗೆ ಬಂದ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗು​ತ್ತದೆ ಎಂದು ರಾಜ್ಯ ಕಾರಾಗೃಹ ಇಲಾಖೆಯ ಡಿಜಿಪಿ ಎಚ್‌.ಎನ್‌. ಸತ್ಯ  ನಾರಾಯಣ್‌ ರಾವ್‌  ತಿಳಿಸಿದ್ದಾರೆ.

ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ಸಂಬಂಧ 2014ರಲ್ಲಿ ಶಿಕ್ಷೆ ಗುರಿಯಾಗಿದ್ದ ಶಶಿಕಲಾ ಹಾಗೂ ಇಳವರಸಿ ಅವರಿಗೆ ನೀಡಲಾಗಿದ್ದ ಸೆಲ್‌ ಅನ್ನೇ ಈಗಲೂ ಅವರಿಗೆ ನಿಗದಿಪಡಿಸಲಾಗಿದ್ದು, ಆಗ ಅನಾರೋಗ್ಯ ಕಾರಣಕ್ಕೆ ಜಯಲಲಿತಾ  ಅವರು ಮಹಿಳಾ ಬ್ಯಾರೆಕ್‌ನಲ್ಲಿರುವ ಆಸ್ಪತ್ರೆ ಕಟ್ಟಡದಲ್ಲಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಅತ್ತ ಸುಪ್ರೀಂಕೋರ್ಟ್‌ನಲ್ಲಿ ಶಶಿಕಲಾ ಅವರ ವಿರುದ್ಧ ತೀರ್ಪು ಪ್ರಕಟಗೊಂಡ ಬೆನ್ನೆಲ್ಲೇ ಮಂಗಳವಾರ ಸತ್ಯನಾರಾ​ಯಣ್‌ ರಾವ್‌  ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆದಿದ್ದು, ಈ ಸಭೆಯಲ್ಲಿ ಶಶಿಕಲಾ ಅವರಿಗೆ ಯಾವುದೇ ರೀತಿಯ ಜೀವಕ್ಕೆ ತೊಂದರೆ ಉಂಟಾಗದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ. 

ಶಶಿಕಲಾ ಅವರ ಜತೆ ಇಳವರಸಿ ಸಹ ಇರಲಿದ್ದು, ಮತ್ತೊಬ್ಬ ಕೈದಿ ಸುಧಾಕರ್‌ ಅವರಿಗೆ ಪುರುಷರ ಬ್ಯಾರ​ಕ್‌ನ ವಿವಿಐಪಿ ವಿಭಾಗದಲ್ಲಿ ಸೆಲ್‌ ನಿಗದಿಪಡಿಸಲಾಗಿದೆ.

ಪರಪ್ಪನ ಆಗ್ರಹಾರದ ಸುತ್ತಮುತ್ತ ವ್ಯಾಪಕ ಭದ್ರತೆ…..

ಇನ್ನು ಶಶಿಕಲಾ ಅವರು ಜೈಲಿಗೆ ಆಗಮಿಸುವ ಸಂದರ್ಭ​ದಲ್ಲಿ ಎಐಎಡಿಎಂಕೆ ಪಕ್ಷದ ಜನಪ್ರತಿ​ನಿಧಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಳ್ಳಬಹುದು. ಇದೇ ಕಾರಣಕ್ಕೆ ಈಗಾಗಲೇ ಪರಪ್ಪನ ಅಗ್ರಹಾರದ  ಸುತ್ತಮುತ್ತ ವ್ಯಾಪಕ ಭದ್ರತೆ ವಹಿಸಲಾಗಿದೆ.

ಹೆಚ್ಚುವರಿ ಸಿಬ್ಬಂದಿಗಳು ಭದ್ರತೆ ನಿಯೋಜಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಆರ್ ಎಎಫ್ ತಂಡ ಸನ್ನದ್ಧವಾಗಿರುತ್ತದೆ.

ಇದಲ್ಲದೆ ಜೈಲಿನ ಮುಂಭಾಗದಲ್ಲಿ ನಾಲ್ಕು ಕೆಎಸ್‌ಆರ್‌ಪಿ  ತುಕಡಿಗಳನ್ನು ಭದ್ರತೆ ನಿಯೋಜಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಗಡಿಯಲ್ಲೂ ಭದ್ರತೆ ಹೆಚ್ಚಳ

ಇದೇ ವೇಳೆ ಗಡಿ ಪ್ರದೇಶದ ಮೇಲೂ ನಿಗಾ ವಹಿಸಿರುವ ಕರ್ನಾಟಕ ಪೊಲೀಸರು ಕರ್ನಾಟಕ ಮತ್ತು ತಮಿಳುನಾಡು ಗಡಿ ಹೊಸೂರು ಚೆಕ್ ಪೋಸ್ಟ್  ಬಳಿ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಿದ್ದಾರೆ ಎಂದು ತಿಳಿದುಬಂದಿದೆ.

No Comments

Leave A Comment