Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಆತ್ಮವಿಶ್ವಾಸದಿಂದ ಬದುಕು ಕಟ್ಟಿಕೊಳ್ಳಿ-ಡಾ.ಶಿಕಲಾ ಪಿ. ಕೃಷ್ಣಮೂರ್ತಿ

ದಾವಣಗೆರೆ: ವಿದ್ಯಾರ್ಥಿಗಳು ತಮ್ಮಲ್ಲಿನ ಕೀಳಿರಿಮೆ ಬದಿಗಿಟ್ಟು ಸಕರಾತ್ಮಕ ಚಿಂತನೆ, ಆತ್ಮವಿಶ್ವಾಸ ಬೆಳೆಸಿಕೊಳ್ಳುವ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಎಸ್‌.ಎಸ್‌. ಹೈಟೆಕ್‌ ವೈದ್ಯಕೀಯ ಮಹಾವಿದ್ಯಾಲಯದ ಫೆಥಾಲಜಿ ವಿಭಾಗದ ಮುಖ್ಯಸ್ಥೆ ಡಾ,ಶಶಿಕಲಾ ಪಿ. ಕೃಷ್ಣಮೂರ್ತಿ ಸಲಹೆ ನೀಡಿದ್ದಾರೆ.

ಬುಧವಾರ ಮಹಿಳಾ ಸೇವಾ ಸಮಾಜದಲ್ಲಿ ಚೈತನ್ಯದ ಚಿಣ್ಣರಿಗೆ ಸದಾವಕಾಶ…ವಿಷಯ ಕುರಿತು ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದೇವೆ, ನಾವು ಬಡವರು… ಇಂಥಹ ಕೀಳಿರಿಮೆ ಭಾವನೆ ತೊರೆಯಬೇಕು.

ಜೀವನದ ಗುರಿ ಮುಟ್ಟುವಂತಾಗಲು ಆತ್ಮವಿಶ್ವಾಸದೊಂದಿಗೆ ಸಕರಾತ್ಮಕ ಚಿಂತನೆ ಮೈಗೂಡಿಸಿಕೊಳ್ಳಬೇಕು ಎಂದರು. ಇಂದಿನ ವಾತಾವರಣದಲ್ಲಿ ಮಕ್ಕಳು ಚಲನಚಿತ್ರ, ಟಿವಿ, ಕಂಪ್ಯೂಟರ್‌, ಮೊಬೈಲ್‌ ವೀಕ್ಷಣೆಗೇ ಆಸಕ್ತಿ ತೋರುತ್ತಾರೆ. ಅದೇ ರೀತಿ ಓದು- ಬರೆಯುವುದಕ್ಕೆ ಆಸಕ್ತಿ ತೋರಬೇಕು.

ಪರೀಕ್ಷೆಯನ್ನು ಯುದ್ಧ ಎಂಬುದಾಗಿ ಭಾವಿಸದೆ ಹಬ್ಬದ ರೀತಿ ಸಂಭ್ರಮಿಸಬೇಕು. ಸಾಧಿಸುವ ಛಲ, ಏಕಾಗ್ರತೆಯೊಂದಿಗೆ ಚೆನ್ನಾಗಿ ಅಭ್ಯಾಸ ಮಾಡುವ ಮೂಲಕ ಪರೀಕ್ಷೆಯಲ್ಲಿ ಯಶ ಸಾಧಿಸಬೇಕು ಎಂದು ತಿಳಿಸಿದರು. ದೈಹಿಕ ಮತ್ತು ಮಾನಸಿಕ ಚೈತನ್ಯ ಒಂದೇ ನಾಣ್ಯದ ಎರಡು ಮುಖ. ದೈಹಿಕ ಚೈತನ್ಯ ಇದ್ದಲ್ಲಿ ಮಾನಸಿಕ ಚೈತನ್ಯವೂ ಇರುತ್ತದೆ.

ಹಾಗಾಗಿ ವಿದ್ಯಾರ್ಥಿಗಳು ಇತಿಮಿತಿಯಾಗಿ ಉತ್ತಮ ಗುಣಮಟ್ಟ, ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ಪರೀಕ್ಷೆ ಭಯದಲ್ಲಿ ಉಪವಾಸ ಇರುವುದು ಸಲ್ಲದು. ಪರೀಕ್ಷೆ ದಿನವೂ ಚೆನ್ನಾಗಿ ಊಟ ಮಾಡಬೇಕು. ಜಂಕ್‌ಫುಡ್‌ ಸಂಸ್ಕೃತಿ ಸರಿಯಲ್ಲ. ಜಂಕ್‌ ಫುಡ್‌ ಅನೇಕ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ ಎಂದು ತಿಳಿಸಿದರು.

ಒಂದು ಸಮೀಕ್ಷೆ ಪ್ರಕಾರ ಯಾವ ಮಕ್ಕಳು ಶಾಲೆಗೆ ಉಪವಾಸ ಬರುತ್ತಾರೋ ಅಂಥಹವರು ವಿದ್ಯೆ, ಕಲಿಕೆಯಲ್ಲಿ ಹಿಂದೆ ಬೀಳುತ್ತಾರೆ ಎಂಬುದು ತಿಳಿದು ಬಂದಿದೆ. ಹಾಗಾಗಿ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ತಿಂಡಿ, ಊಟ ಮಾಡಬೇಕು. ಇದರಿಂದ ದೇಹಕ್ಕೆ ಶಕ್ತಿ, ಚೈತನ್ಯ ದೊರೆಯುತ್ತದೆ.

ಕ್ರಿಯಾಶೀಲತೆಯಿಂದ ಎಲ್ಲ ಚಟುವಟಿಕೆಯಲ್ಲಿ ಪಾಲ್ಗೊಳ್ಳಲಿಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಶಾಲಾ-ಕಾಲೇಜು ಸಮಯದಲ್ಲಿ ನೈಸರ್ಗಿಕ ಕರೆಗೆ ಹೋಗಬೇಕಾಗುತ್ತದೆ ಎಂಬ ಕಾರಣಕ್ಕಾಗಿಯೇ ಬಹುತೇಕ ವಿದ್ಯಾರ್ಥಿನಿಯರು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದೇ ಇಲ್ಲ. ಇದು ಸರಿಯಲ್ಲ. ನೀರು ಕುಡಿಯದೇ ಇದ್ದಲ್ಲಿ ಕ್ರಮೇಣವಾಗ ರೋಗ ನಿರೋಧಕ ಶಕ್ತಿ, ಚೈತನ್ಯ ಕಡಿಮೆ ಆಗುತ್ತದೆ.

ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕು. ಬೇಸಿಗೆಯಲ್ಲಿ ಬೀದಿ ಬದಿಯ ತಿಂಡಿ-ತಿನಿಸು ತಿನ್ನಕೂಡದು. ಹಸಿರು ಸೊಪ್ಪು, ತರಕಾರಿ, ಮೊಸರು, ಮಜ್ಜಿಗೆ ಹೆಚ್ಚಾಗಿ ಬಳಸಬೇಕು. ದೇಹ ಮತ್ತು ಮಾನಸಿಕ ಸದೃಢತೆ, ಸಮತೋಲನ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ಮಹಿಳಾ ಸಮಾಜದ ಅಧ್ಯಕ್ಷೆ ಕಂಚೀಕೆರೆ ಸುಶೀಲಮ್ಮ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕಲಿಕೆಗೆ ಹೆಚ್ಚಿನ ಗಮನ ನೀಡಬೇಕು. ಓದುವುದು, ಬರೆಯುವುದು ಕರ್ತವ್ಯದಂತೆ ಮಾಡುವ ಮೂಲಕ ಉತ್ತಮ ಸಾಧನೆ ಮಾಡಬೇಕು ಎಂದು ತಿಳಿಸಿದರು. ಮಹಿಳಾ ಸಮಾಜದ ಐರಣಿ ಜಯಶೀಲಮ್ಮ, ಪುಟ್ಟಮ್ಮ ಮಹಾರುದ್ರಯ್ಯ, ಆಡಳಿತಾಧಿಕಾರಿ ವಾಮದೇವಪ್ಪ ಇದ್ದರು.

No Comments

Leave A Comment