Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಫೆ. 10,11, 12: ಮಂಗಳೂರಿನಲ್ಲಿ ಕೊಂಕಣಿ ಲೋಕೋತ್ಸವ

ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಫೆ. 10, 11, 12ರಂದು ಮಂಗಳೂರಿನ ಪುರಭವನದಲ್ಲಿ ಕೊಂಕಣಿ ಲೋಕೋತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, 3 ದಿನಗಳ ಈ ಉತ್ಸವವು ಕೊಂಕಣಿ ಮಾತೃ ಭಾಷೆಯ 41 ಸಮುದಾಯಗಳ ಸಾಂಸ್ಕೃತಿಕ ಹಿರಿಮೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಿದೆ.

ಲೋಕೋತ್ಸವದ ಸಿದ್ಧತೆ ಕುರಿತು ನಗರದ ಕೊಡಿಯಾಲ್‌ಬೈಲ್‌ನ ಬಿಷಪ್ಸ್‌ ಹೌಸ್‌ ಸಭಾಂಗಣದಲ್ಲಿ ಶನಿವಾರ ಅಕಾಡೆಮಿಯ ಅಧ್ಯಕ್ಷ ರೋಯ್‌ ಕ್ಯಾಸ್ತಲಿನೊ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಲೋಕೋತ್ಸವದಲ್ಲಿ  1,000 ಕಲಾವಿದರು, ವಿವಿಧ ವಿಭಾಗಗಳ ತಲಾ 12 ಮಂದಿ ವಿದ್ಯಾರ್ಥಿಗಳ 36 ತಂಡಗಳು ಪ್ರತಿಭಾ ಪ್ರದರ್ಶನ ನೀಡಲಿವೆ. ಅಕಾಡೆಮಿಯ ಗೌರವ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಹುಮಾನ ವಿತರಣೆ ನಡೆಯಲಿದೆ ಎಂದು ವಿವರಿಸಿದರು.

ಫೆ. 8: ಚಪ್ಪರ ಮುಹೂರ್ತ
ಉತ್ಸವದ ಚಪ್ಪರ ಮುಹೂರ್ತವು ಫೆ. 8ರಂದು ಬೆಳಗ್ಗೆ 9 ಗಂಟೆಗೆ ಪುರಭವನದ ಅಂಗಳದಲ್ಲಿ  ನೆರವೇರಲಿದೆ. ಲೋಕೋತ್ಸವದ ಪ್ರಚಾರಾರ್ಥ ಬೈಕ್‌ ರ್ಯಾಲಿ ನಡೆಯಲಿದ್ದು, ಇದರ ದಿನಾಂಕ ಮತ್ತು ಸಮಯವನ್ನು ಮುಂದೆ ತಿಳಿಸಲಾಗುವುದು ಎಂದರು.

ಕಾರ್ಯಕ್ರಮಗಳ ಯಶಸ್ಸಿಗಾಗಿ 12 ಸಮಿತಿಗಳು ಕಾರ್ಯ ಪ್ರವೃತ್ತವಾಗಿದ್ದು, ಸಾಂಸ್ಕೃತಿಕ ಸಮಿತಿಯ ವತಿಯಿಂದ ನಗರದ ಬಿಷಪ್ಸ್‌ ಹೌಸ್‌ನಲ್ಲಿ ಸಂಗೀತ  ಕಲಾವಿದರಾದ ಎರಿಕ್‌ ಒಝೇರಿಯೋ ಮತ್ತು ವಸಂತಿ ಆರ್‌. ನಾಯಕ್‌ ಅವರ ನೇತೃತ್ವದಲ್ಲಿ  100 ಜನರ ತಂಡಕ್ಕೆ  ಸಂಗೀತಾಭ್ಯಾಸ ನಡೆಯುತ್ತಿದೆ. ಉದ್ಘಾಟನೆಯ ವೇಳೆ 3 ಹಾಡುಗಳನ್ನು ಮತ್ತು ಸಮಾರೋಪದಲ್ಲಿ 2 ಹಾಡುಗಳನ್ನು ಈ ತಂಡ ಪ್ರಸ್ತುತ ಪಡಿಸಲಿದೆ ಎಂದು ವಿವರಿಸಿದರು.

ಉತ್ಸವದಲ್ಲಿ ವಿವಿಧ ಕೊಂಕಣಿ ಸಮುದಾಯಗಳ ಜನಪದ ಕಲಾ ಪ್ರದರ್ಶನ, ನೃತ್ಯ ಪ್ರಕಾರಗಳು, ಸಾಹಿತ್ಯ ಸಂವಾದ, ಕವಿಗೋಷ್ಠಿ, ಕಲಾ ಕುಂಚ ಗಾಯನ, ಸಾಹಿತ್ಯಿಕ ವಿಚಾರ ಸಂಕಿರಣಗಳು ಜರಗಲಿವೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಕ್ಕಳು, ಮಹಿಳೆಯರು, ಯುವಜನರು ಮತ್ತು ಪುರುಷರು ಎಂಬ 4 ವಿಭಾಗಗಳಲ್ಲಿ  ತಲಾ 10 ಮಂದಿಯನ್ನು  ಗೌರವಿಸಲಾಗುವುದು ಎಂದರು.

ಕೊಂಕಣಿಯ ಸಾಂಪ್ರದಾಯಿಕ ಉಡುಗೆ ತೊಡುಗೆಗಳು, ಸಾಂಪ್ರದಾಯಿಕ ವಸ್ತುಗಳು, ವಿಶಿಷ್ಟ ಮತ್ತು ಸ್ವಾದಿಷ್ಟ ಖಾದ್ಯಗಳು, ದಿನ ಬಳಕೆಯ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇರುತ್ತದೆ ಎಂದು ತಿಳಿಸಿದರು.

ಪ್ರಥಮ ದಿನ – ಮಕ್ಕಳ, ಮಹಿಳೆಯರ ದಿನ
ಉತ್ಸವವನ್ನು ಫೆ. 10 ರಂದು ಜಿಲ್ಲಾ  ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಲಿದ್ದು, ಶಾಸಕ ಜೆ.ಆರ್‌. ಲೋಬೊ ಅಧ್ಯಕ್ಷತೆ ವಹಿಸುವರು. ಈ ದಿನವು ಮಕ್ಕಳ ಮತ್ತು ಮಹಿಳೆಯರ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮೀಸಲಾಗಿದೆ.

ಫೆ. 11: ಯುವಜನೋತ್ಸವ
ದ್ವಿತೀಯ ದಿನ ಯುವಜನರಿಗೆ ಮಿಸಲಿಡಲಾಗಿದ್ದು, ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಪ್ರದರ್ಶನ, ಕ್ವಿಜ್‌, ಯುವ ಸಾಹಿತ್ಯದ ಬಗ್ಗೆ ಸಂವಾದ, ವಿಚಾರ ಸಂಕಿರಣ ನಡೆಯಲಿದೆ. ಬಲ್ಮಠ ಮಿಶನ್‌ ಕಾಂಪೌಂಡ್‌ನಿಂದ ಪುರಭವನಕ್ಕೆ ಕೊಂಕಣಿ ಜನಪದ ಮತ್ತು ಸಂಸ್ಕೃತಿಯ ಪ್ರದರ್ಶನದ ಭವ್ಯ ಮೆರವಣಿಗೆ ಅಂದಿನ ವಿಶೇಷತೆ. ಚಿತ್ರ ನಟಿ ಎಸ್ತೆರ್‌ ನೊರೋನ್ಹಾ ಉದ್ಘಾಟಿಸಲಿದ್ದು, ಸುಮಾರು 400 ಮಂದಿ ಕಲಾವಿದರು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ಕೈಗಾರಿಕಾ ಸಚಿವ ಆರ್‌.ವಿ. ದೇಶಪಾಂಡೆ ಅಧ್ಯಕ್ಷತೆ ವಹಿಸುವರು.
ಫೆ. 12: ಸಮಸ್ತ ಕೊಂಕಣಿಗರ ಉತ್ಸವ- ತೃತೀಯ ದಿನವು ಸಮಸ್ತ ಕೊಂಕಣಿಗರ ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮೀಸಲಾಗಿದೆ.

ಕೊಂಕಣಿ ಸಂಘ ಸಂಸ್ಥೆಗಳಿಂದ ನೃತ್ಯ, ಜನಪದ ಕಲೆಗಳ ಪ್ರದರ್ಶನ, ಕವಿಗೋಷ್ಟಿ, ಕಾವ್ಯ- ಕುಂಚ, ಜಾದೂ, ನಾಟಕ, ಸಮೂಹ ಗಾಯನ, ಹಾಸ್ಯ ಮತ್ತು ಅಕಾಡೆಮಿಯ ಗೌರವ ಪ್ರಶಸ್ತಿ, ಪುಸ್ತಕ ಬಹುಮಾನ ಕಾರ್ಯಕ್ರಮಗಳು ನಡೆಯಲಿವೆ. ಅಂದಿನ ಕಾರ್ಯಕ್ರಮಕ್ಕೆ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರನ್ನು ಆಹ್ವಾನಿಸಲಾಗಿದೆ. ಕನ್ನಡ ಸಂಸ್ಕೃತಿ ಸಚಿವೆ ಉಮಾಶ್ರೀ, ನಾಗಾಲ್ಯಾಂಡ್‌ ರಾಜ್ಯಪಾಲ ಪಿ.ಬಿ.ಆಚಾರ್ಯ, ಗೋವಾದ ಮಾಜಿ ಮುಖ್ಯ ಮಂತ್ರಿ ದಿಗಂಬರ ಕಾಮತ್‌, ಬಿಷಪ್‌ ಅಲೋಶಿಯಸ್‌ ಪಾವ್‌ ಡಿ’ಸೋಜಾ ಮುಂತಾದ ಗಣ್ಯನು ಪಾಲ್ಗೊಳ್ಳುವರು.

ಪತ್ರಿಕಾಗೋಷ್ಟಿಯಲ್ಲಿ  ಅಕಾಡೆಮಿಯ ಸದಸ್ಯ ಲಾರೆನ್ಸ್‌ ಡಿ’ಸೋಜಾ, ಎರಿಕ್‌ ಒಝೇರಿಯೊ, ವಸಂತಿ ಆರ್‌.ನಾಯಕ್‌, ಊಟೋಪಚಾರ ಸಮಿತಿಯ ಸಂಚಾಲಕರಾದ ಗೀತಾ ಸಿ.ಕಿಣಿ, ಪ್ರಚಾರ ಸಮಿತಿಯ ಸಂಚಾಲಕ ಇ. ಫೆರ್ನಾಂಡಿಸ್‌, ದಾಖಲಾತಿ ಸಮಿತಿಯ ಸಂಚಾಲಕ ವಿಕ್ಟರ್‌ ಮಥಾಯಸ್‌ ಉಪಸ್ಥಿತರಿದ್ದರು.

No Comments

Leave A Comment