Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಕರ್ನಲ್ ಬಿ. ರಾಮಚಂದ್ರ ರಾವ್ – ಮಾಲತಿ ರಾವ್ ದಂಪತಿಗೆ ಸೇವಾಭೂಷಣ ಪ್ರಶಸ್ತಿ

ಯಕ್ಷಗಾನ ಕಲಾರಂಗ (ರಿ.) ಉಡುಪಿ ನಾಲ್ಕು ವರ್ಷಗಳಿಂದ ನಡೆಸಿಕೊಂಡು ಬಂದ ಎಸ್. ಗೋಪಾಲಕೃಷ್ಣ ಸಂಸ್ಮರಣ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಸಂಸ್ಥೆಯ ಕಛೇರಿಯಲ್ಲಿ ಫೆಬ್ರವರಿ 8, 2017 ಬುಧವಾರ ಸಂಜೆ 5.30 ಗಂಟೆಗೆ ಸಂಪನ್ನಗೊಳ್ಳಲಿದೆ.

27ವರ್ಷ ಸಂಸ್ಥೆಯ ಕೋಶಾಧಿಕಾರಿಯಾಗಿ ಪ್ರಾಮಾಣಿಕ ಸೇವೆಯ ಮೂಲಕ ಸಂಸ್ಥೆಯ ಉತ್ಕರ್ಷಕ್ಕೆ ಕಾರಣರಾಗಿದ್ದ ಎಸ್. ಗೋಪಾಲಕೃಷ್ಣ ನೆನಪಿನ ಸೇವಾಭೂಷಣ ಪ್ರಶಸ್ತಿಯನ್ನು ಭೂಸೇನೆಯಲ್ಲಿ ಅಧಿಕಾರಿಯಾಗಿ ನಿವೃತ್ತಿಯ ನಂತರ ಉಡುಪಿಯಲ್ಲಿ ನೆಲೆಸಿ ಸಾಮಾಜಿಕ ಸಂಘಟನೆಗಳ ಮೂಲಕ ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಕರ್ನಲ್ ಬಿ. ರಾಮಚಂದ್ರ ರಾವ್ ಮತ್ತು ಶ್ರೀಕೃಷ್ಣ ಬಾಲನಿಕೇತನ ವಸತಿ ಶಾಲೆಯಲ್ಲಿ ಮೇಲ್ವಿಚಾರಕಿಯಾಗಿ ಅನಾಥ ಮಕ್ಕಳಿಗೆ ಆಶಾಕಿರಣವಾಗಿರುವ ಶ್ರೀಮತಿ ಮಾಲತಿ ರಾವ್ ಅವರಿಗೆ ಪ್ರದಾನ ಮಾಡಲಾಗುವುದು.

ಇದೇ ಸಂದರ್ಭದಲ್ಲಿ ತಾಳಮದ್ದಲೆ ಅರ್ಥಧಾರಿ ಹಿರಿಯ ಚಿಂತಕ ಕೂರಾಡಿ ಸದಾಶಿವ ಕಲ್ಕೂರ ಅವರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಕೆ. ಗಣೇಶ್ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಮಾಜಿಕ ಸೇವೆಗೆ ತಮ್ಮನ್ನು ತೊಡಗಿಸಿಕೊಂಡ ಅಪೂರ್ವ ಜೋಡಿ…

ಕರ್ನಲ್ ಬಿ. ರಾಮಚಂದ್ರ ರಾವ್ ಮತ್ತು ಮಾಲತಿ ರಾವ್ ನಿವೃತ್ತಿಯ ನಂತರ ಉಡುಪಿಯಲ್ಲಿ ವಾಸ್ತವ್ಯವಿದ್ದು ಇಲ್ಲಿಯ ಸಾಮಾಜಿಕ ಸಾರ್ವಜನಿಕ ಕಾರ್ಯಗಳಲ್ಲಿ ಭಾಗಿಯಾಗುತ್ತಾ, ಅದರಲ್ಲಿ ಸಂತೋಷ ಕಾಣುತ್ತಾ ಸಂತೃಪ್ತಿಯ ಬದುಕು ಸಾಗಿಸುತ್ತಿರುವ ಹೆಮ್ಮೆಯ ಹಿರಿಯ ನಾಗರಿಕರು.

ಕರ್ನಲ್ ಬಿ. ರಾಮಚಂದ್ರ ರಾವ್…
ಶ್ರೀಯುತರು ಶ್ರೀ ಬಿ. ಸುಬ್ಬ ರಾವ್ ಮತ್ತು ಶ್ರೀಮತಿ ಸತ್ಯಭಾಮ ಅವರ ಪುತ್ರರಾಗಿ 1933 ರಲ್ಲಿ ಜನಿಸಿದರು. ಬಡಾನಿಡಿಯೂರು ಇವರ ಹುಟ್ಟೂರು. ಕಲ್ಯಾಣಪುರದ ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಯಲ್ಲಿ ಆರಂಭದ ವಿದ್ಯಾಭ್ಯಾಸ. ಮಂಗಳೂರಿನ ಸೈಂಟ್ ಅಲೋಷಿಯಸ್ ಕಾಲೇಜಿನಲ್ಲಿ ಮುಂದಿನ ವ್ಯಾಸಂಗ. ಮುಂದೆ ಮದ್ರಾಸ್ ವೆಟರನರಿ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪಡೆದು ಮೂರು ವರ್ಷ ಮದ್ರಾಸ್ ಪ್ರಾಂತ್ಯದಲ್ಲಿ ಸೇವೆ ಸಲ್ಲಿಸಿದರು. 1960 ರಲ್ಲಿ ಭೂಸೇನೆಯನ್ನು ಸೇರಿದರು. ಲೆಪ್ಟಿನೆಂಟ್, ಕ್ಯಾಪ್ಟನ್, ಮೇಜರ್ ಲೆಪ್ಟಿನೆಂಟ್ ಹಾಗೂ ಕರ್ನಲ್ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ದಿಲ್ಲಿಯ ಸೇನಾ ಪ್ರಧಾನ ಕಛೇರಿಯಲ್ಲಿ ನಿವೃತ್ತಿ ಹೊಂದಿದರು. ಈ ಅವಧಿಯಲ್ಲಿ 1962 ರಲ್ಲಿ ನಡೆದ ಚೀನಾ ದಾಳಿ, 1965 ರಲ್ಲಿ ಪಾಕಿಸ್ತಾನದೊಂದಿಗಿನ ಹೋರಾಟ ಹಾಗೂ 1972 ರಲ್ಲಿ ಬಾಂಗ್ಲಾ ದೇಶದ ನಿರ್ಮಾಣದ ಹೋರಾಟಗಳಲ್ಲೂ ಭಾಗವಹಿಸಿದ್ದರು.

ನಿವೃತ್ತಿಯ ಬಳಿಕ ಉಡುಪಿಗೆ ಬಂದು ಮಾಜಿ ಸೈನಿಕರ ವೇದಿಕೆ, ಪೂರ್ಣಪ್ರಜ್ಞಾ ಕಾಲೇಜಿನ ಆಡಳಿತ ಮಂಡಳಿ, ಶ್ರೀಕೃಷ್ಣ ಬಾಲನಿಕೇತನ ಹಾಗೂ ಮಿಲಾಗ್ರಿಸ್ ಶಾಲೆಗಳಲ್ಲಿ ಹಲವಾರು ರಚನಾತ್ಮಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಈ ದಂಪತಿಗಳು ‘ನವೀನ್ ಪೇಜಾವರ ಟ್ರಸ್ಟ್’ ಮೂಲಕ ಬಡವರಿಗೆ ಆಸರೆಯಾಗಿದ್ದಾರೆ.

ಶ್ರೀಮತಿ ಮಾಲತಿ ರಾವ್ …
ಮಂಗಳೂರಿನಲ್ಲಿ ನ್ಯಾಯವಾದಿಯಾಗಿದ್ದ ಪೇಜಾವರ ಶ್ರೀಧರ್ ರಾವ್ ಮತ್ತು ಶ್ರೀಮತಿ ಜಾನಕಿ ಬಾೈ ದಂಪತಿಗಳ ಸುಪುತ್ರಿ. ಮಂಗಳೂರಿನಲ್ಲಿ ತಮ್ಮ ವಿದ್ಯಾಭ್ಯಾಸ ನಡೆಸಿ ಸೈಂಟ್ ಆ್ಯಗ್ನೆಸ್ ಕಾಲೇಜಿನಲ್ಲಿ ಪದವಿ ಪಡೆದವರು. 1961 ರಲ್ಲಿ ಕರ್ನಲ್ ರಾಮಚಂದ್ರ ರಾವ್‍ರೊಡನೆ ವಿವಾಹವಾಗಿ ಪತಿಯೊಟ್ಟಿಗೆ ವಿವಿಧ ಪ್ರದೇಶಗಳಲ್ಲಿ ಗೃಹಿಣಿಯಾಗಿ ಬದುಕು ಸಾಗಿಸಿದವರು. 1988 ರಲ್ಲಿ ಪತಿಯ ನಿವೃತ್ತಿಯ ನಂತರ ಸ್ವಂತ ಊರಾದ ಉಡುಪಿಗೆ ಬಂದು ನೆಲೆನಿಂತರು. ಪತಿಯೊಂದಿಗೆ ರೊಟರಿ ಮೊದಲಾದ ಸೇವಾ ಸಂಸ್ಥೆಗಳಲ್ಲಿ ಸಕ್ರೀಯರು. ಮುಖ್ಯವಾಗಿ ಪೇಜಾವರ ಶ್ರೀಗಳು ನಡೆಸುತ್ತಿರುವ ಶ್ರೀಕೃಷ್ಣ ಬಾಲನಿಕೇತನ ವಸತಿ ಶಾಲೆಯ ಮೇಲ್ವಿಚಾರಕಿಯಾಗಿ ಅವರು ನೀಡಿದ ಸೇವೆ ಗಮನಾರ್ಹ. ಯಾವ ಪ್ರತಿಫಲದ ಅಪೇಕ್ಷೆಯಿಲ್ಲದೆ ಅನಾಥ ಮಕ್ಕಳಿಗೆ ತಾಯಿಯ ಸ್ಥಾನದಲ್ಲಿ ನಿಂತು ಇವರು ನೀಡುತ್ತಿರುವ ಮಾರ್ಗದರ್ಶನ, ಸ್ಥೆರ್ಯ ಅವರ ಬಾಳಿಗೆ ಹೊಸ ದಿಕ್ಕು ಕಲ್ಪಿಸುವಲ್ಲಿ ಸಹಕಾರಿಯಾಗಿದೆ. ಇವರು ಮೂವರು ಮಕ್ಕಳು ಉನ್ನತ ವ್ಯಾಸಂಗ ಮಾಡಿ ಒಳ್ಳೆಯ ಉದ್ಯೋಗಗಳಲ್ಲಿದ್ದಾರೆ.

ಈ ದಂಪತಿಗಳ ಸಾಮಾಜಿಕ ಕಳಕಳಿ ಮತ್ತು ಸೇವಾ ಮನೋಭಾವವನ್ನು ಗುರುತಿಸಿ ಯಕ್ಷಗಾನ ಕಲಾರಂಗ ಎಸ್. ಗೋಪಾಲಕೃಷ್ಣರ ಸಂಸ್ಮರಣಾ ‘ಸೇವಾಭೂಷಣ ಪ್ರಶಸ್ತಿ’ಯನ್ನು ನೀಡಿ ಗೌರವಿಸುತ್ತಿದೆ. ಈ ಸಮಾರಂಭ ಫೆಬ್ರವರಿ 8, 2017 ರ ಬುಧವಾರ ಸಂಜೆ 5.00 ಗಂಟೆಗೆ ಕಲಾರಂಗದ ಕಛೇರಿಯಲ್ಲಿ ಸಂಪನ್ನಗೊಳ್ಳಲಿದೆ. 

No Comments

Leave A Comment