Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಚೆನ್ನೈ ಬೀಚ್ ನಲ್ಲಿ ತೈಲ ಸೋರಿಕೆ; ಈ ವರೆಗೂ ಸುಮಾರು 40 ಟನ್ ತೈಲ ಹೊರಕ್ಕೆ

ಚೆನ್ನೈ: ಇತ್ತೀಚೆಗಷ್ಟೇ ಎರಡು ಸರಕು ಸಾಗಣಾ ಹಡಗುಗಳು ಡಿಕ್ಕಿ ಹೊಡೆದ ಪರಿಣಾಮ ಸಮುದ್ರದಲ್ಲಿ ಉಂಟಾಗಿದ್ದ ಕಚ್ಚಾ ತೈಲ ಸೋರಿಕೆ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಸಮುದ್ರದಿಂದ ತೈಲವನ್ನು ಹೊರತೆಗೆಯುವ  ಕರಾವಳಿ ಭದ್ರತಾ ಪಡೆಯ ಕಾರ್ಯಾಚರಣೆ ಕುರಿತಂತೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ಕಡಲ ತೀರದಲ್ಲಿ ಕಚ್ಚಾ ತೈಲ ಸೋರಿಕೆಯಾದರೆ ಅದನ್ನು ಹೊರತೆಗೆಯಲು ಕರಾವಳಿ ಪಡೆ ಎಷ್ಟರ ಮಟ್ಟಿಗೆ ಸಿದ್ಧವಾಗಿದೆ ಎನ್ನುವ ಪ್ರಶ್ನೆಗೆ ಚೆನ್ನೈ ಮರೀನಾ ಬೀಚ್ ನ ಪ್ರಕರಣ ಸ್ಪಷ್ಟ ನಿದರ್ಶನವಾಗಿದ್ದು, ತೈಲ ಹೊರ ತೆಗೆಯಲು  ಸೂಕ್ತ ವ್ಯವಸ್ಥೆ ಇಲ್ಲದೇ ಬಕೆಟ್ ಗಳಿಂದಲೇ ತೈಲವನ್ನು ತೆಗೆಯುತ್ತಿರುವ ದೃಶ್ಯ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚಿತವಾಗುತ್ತಿದೆ. ಕಳೆದ 6 ದಿನಗಳಿಂದ ಕಾರ್ಯಾಚರಣೆ ನಡೆಯುತ್ತಿದ್ದರೂ ಈ ವರೆಗೂ ಸಮಾಧಾನಕ ಫಲ  ಮಾತ್ರ ದೊರೆತಿಲ್ಲ.ಮೂಲಗಳ ಪ್ರಕಾರ ಸುಮಾರು 60 ಟನ್ ಕಚ್ಚಾತೈಲ ಸಮುದ್ರ ಸೇರಿದ್ದು, ಈ ಪೈಕಿ ಕಳೆದ ಆರು ದಿನಗಳಿಂದ ಕೇವಲ 40 ಟನ್ ತೈಲವನ್ನು ಮಾತ್ರ ಹೊರ ತೆಗೆಯಲಾಗಿದೆ.

ತೈಲ ಹೊರತೆಗೆಯಲು ಸುಮಾರು 1 ಸಾವಿರಕ್ಕೂ ಅಧಿಕ  ಮಂದಿ ಕಾರ್ಯಾಚರಣೆ ನಡೆಸುತ್ತಿದ್ದು, ಕಾರ್ಯಾಚರಣೆಯಲ್ಲಿ ಕರಾವಳಿ ಭದ್ರತಾ ಪಡೆ, ಸ್ಥಳೀಯ ಮೀನುಗಾರರು ಮತ್ತು ಸ್ವಯಂ ಪ್ರೇರಿತ ಕಾರ್ಯಕರ್ತರು ಮತ್ತು ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಸೇರಿದ್ದಾರೆ. ಏತನ್ಮಧ್ಯೆ  ಇಂಡಿಯನ್ ಆಯಿಲ್ ಸಂಸ್ಥೆಯ ಆರ್ ಅಂಡ್ ಡಿ ಕೇಂದ್ರದ ನುರಿತ ಸಿಬ್ಬಂದಿಗಳು ಚೆನ್ನೈನಲ್ಲಿ ನಡೆಯುತ್ತಿರುವ ತೈಲ ಹೊರ ತೆಗೆಯುವ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಸೂಚನೆ  ನೀಡಿದೆ. ಈ ನಿಟ್ಟಿನಲ್ಲಿ ನುರಿತ ತಜ್ಞರು ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲ್ಲಿದ್ದು, ಕಾರ್ಯಾಚರಣೆ ವೇಗ ಪಡೆಯುವ ಸಾಧ್ಯತೆ ಇದೆ.

ಕಾರ್ಯಾಚರಣೆಗೆ ಸಿದ್ಧರಾಗುವಂತೆ ಕರಾವಳಿ ತೀರದ ರಾಜ್ಯಗಳಿಗೆ ಸೂಚನೆ

ಇನ್ನು ಸಮುದ್ರದಲ್ಲಿ ಹಡುಗಗಳ ಅಪಘಾತದ ಸಂದರ್ಭದಲ್ಲಿ ಉಂಟಾಗುವ ತೈಲ ಸೋರಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ಹಿಂದೆ ಹಲವು ಭಾರಿ ಚರ್ಚೆಗಳನ್ನು ನಡೆಸಲಾಗಿತ್ತು. ದೆಹಲಿಯಲ್ಲಿ ನಡೆದ ಕರಾವಳಿ ಭದ್ರತಾ ಪಡೆಯ  21ನೇ ಸಭೆಯಲ್ಲೂ ಈ ಬಗ್ಗೆ ಚರ್ಚಿಸಲಾಗಿತ್ತು. ಆದರೆ ಈ ವರೆಗೂ ಕರಾವಳಿ ತೀರದ ರಾಜ್ಯಗಳಲ್ಲಿ ಸಮುದ್ರದಲ್ಲಿ ಸೋರಿಕೆಯಾಗುವ ತೈಲ ಹೊರ ತೆಗೆಯುವ ಯೋಜನೆಗಳು ಗರಿಗೆದರಿಲ್ಲ. ಕರಾವಳಿ ಪ್ರದೇಶ ನಿರ್ವಹಣೆ  ಪ್ರಾಧಿಕಾರದ 86 ಮತ್ತು 87ನೇ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆಸಲಾಗಿತ್ತು. ಆದರೂ ಈ ಬಗ್ಗೆ ಆಯಾ ರಾಜ್ಯಗಳು ಯಾವುದೇ ರೀತಿಯ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಹೀಗಾಗಿ ಎಲ್ಲ ಕರಾವಳಿ ರಾಜ್ಯಗಳಿಗೆ ತೈಲ  ಹೊರತೆಗೆಯುವ ಕಾರ್ಯಾಚರಣೆಗೆ ಸಿದ್ಧರಿರುವಂತೆ ಸೂಚನೆ ನೀಡಲಾಗಿದೆ. ಅದರಂತೆ ಸಮುದ್ರದಲ್ಲಿನ ತೈಲ ಹೊರತೆಗೆಯುವ ವಿಶೇಷ ದಳಗಳು ಇನ್ನು ರಚನೆಯಾಗಲಿದೆ. ಆದರೆ ಈ ಯೋಜನೆ ಸಂಬಂಧ ಸಂಪೂರ್ಣ ಮಾಹಿತಿ  ಲಭ್ಯವಾಗಿಲ್ಲವಾದರೂ, ಯಾಂತ್ರಿಕವಾಗಿ ಮತ್ತು ತಂತ್ರಜ್ಞಾನದ ಪರಿಣಾಮಕಾರಿ ಬಳಕೆಯಿಂದಾಗಿ ಹೇಗೆ ತೈಲ ಹೊರ ತೆಗೆಯ ಬಹುದು ಎಂಬುದುರ ಕುರಿತ ತಜ್ಞರು ಚಿಂತನೆ ನಡೆಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ನ ತಿರುವಳ್ಳೂರು ಜಿಲ್ಲಾಧಿಕಾರಿ ಇ ಸುಂದರವಲ್ಲಿ ಅವರು, ತೈಲ ಹೊರತೆಗೆಯುವ ಕುರಿತಂತೆ ಅಧಿಕೃತ ಯೋಜನೆಗಳು ಇಲ್ಲವಾದರೂ, ನಮ್ಮದೇ ಆದ ರೀತಿಯಲ್ಲಿ ಯೋಜನೆ ಹಾಕಿಕೊಂಡು ನಾವು  ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

ತೈಲ ಸೋರಿಕೆಯಾಗಿ ಕಲುಷಿತಗೊಂಡ ವ್ಯಾಪ್ತಿಯಲ್ಲಿ ಹಲವು ಸಮುದ್ರ ಪ್ರಾಣಿಗಳು ಸಾವಿಗೀಡಾಗಿವೆ ಎಂದು ಪರಿಸರ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ತೈಲ ಸೋರಿಕೆಯಿಂದ ಆಮ್ಲಜನಕ ಪೂರೈಕೆಯಾಗದೆ ಹಲವು ಜಲಚರಗಳು  ಸಾವಿಗೀಡಾಗಿರುವ ಸಂಭವವಿದೆ. ಆದರೆ, ಈ ಬಗ್ಗೆ ಯಾವುದೇ ಖಚಿತ ಮಾಹಿತಿಯಿಲ್ಲ ಎಂದು ಪರಿಸರ ತಜ್ಞ ಎಮಿಲಿ ಟೈಟಸ್‌ ಹೇಳಿದ್ದಾರೆ. ಮೀನುಗಳು ಸತ್ತಿವೆ ಎಂಬ ವದಂತಿ­ಯಿಂದ ಮೀನುಗಾರಿಕೆ ವಹಿ ವಾಟಿನ ಮೇಲೆಯೂ  ಪರಿಣಾಮ ಬೀರಿದೆ. ತೈಲ ಸೋರಿಕೆಯಿಂದಾಗಿ ಜನ ಮೀನು ಕೊಳ್ಳುವುದೇ ಬಿಟ್ಟಿದ್ದಾರೆ ಎಂದು ಮಾರಾಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

No Comments

Leave A Comment