Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಮಕ್ಕಳ ಸುರಕ್ಷತೆಗಾಗಿ ಲಸಿಕೆ ಹಾಕಿಸಿ- ವದಂತಿಗಳಿಗೆ ಕಿವಿಗೊಡಬೇಡಿ: ಡಾ ರೋಹಿಣಿ

ಉಡುಪಿ: ಮಕ್ಕಳಿಗೆ ದಡಾರ ನಿರ್ಮೂಲನೆ ಹಾಗೂ ರುಬೆಲ್ಲಾ (ಎಂಆರ್) ನಿಯಂತ್ರಣಕ್ಕೆ ಫೆ. 7ರಿಂದ 28ರವರೆಗೆ ಅತ್ಯಂತ ಸುವ್ಯವಸ್ಥಿತವಾಗಿ ಆಯೋಜಿಸಿರುವ ಲಸಿಕಾ ಕಾರ್ಯಕ್ರಮವನ್ನು ವದಂತಿಗಳಿಗೆ ಕಿವಿಗೊಡದೆ ಯಶಸ್ವಿಯಾಗಿಸಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ರೋಹಿಣಿ ಹೇಳಿದರು.

ಇಂದು ಅವರ ಕಚೇರಿಯಲ್ಲಿ ಜಿಲ್ಲೆಯ ಮುಸ್ಲಿಮ್ ಮುಖಂಡರಿಗೆ ಈ ಸಂಬಂಧ ವಿಶೇಷ ಅರಿವು ಸಭೆಯನ್ನು ಆಯೋಜಿಸಿ, ವದಂತಿಗೆ ಕಿವಿಗೊಡದೆ ಎಲ್ಲ ಮಕ್ಕಳಿಗೂ ಲಸಿಕೆ ಹಾಕಿಸುವಂತೆ ಧಾರ್ಮಿಕ ಗುರುಗಳ ಮೂಲಕ ಸಂದೇಶ ನೀಡುವಂತೆ ಡಿಎಚ್‍ಒ ವಿನಂತಿಸಿದರು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಡಾ ಸತೀಶ್ಚಂದ್ರ ಅವರು ಲಸಿಕೆಯ ಅಗತ್ಯದ ಬಗ್ಗೆ ಹಾಗೂ ಅತ್ಯಂತ ಸುರಕ್ಷಿತವಾಗಿ ಹಾಕುವ ಲಸಿಕೆ ಹಾಕುವ ವಿಧಾನದ ಬಗ್ಗೆ ಸಭೆಗೆ ಸವಿವರ ಮಾಹಿತಿ ನೀಡಿದರು. ಪಲ್ಸ್ ಪೋಲಿಯೋದಂತಿರದೆ ಒಂದೇ ಸಾರಿ ನಡೆಸುವ ಅಭಿಯಾನ ಇದಾಗಿದ್ದು, ಅಭಿಯಾನದ ಯಶಸ್ಸಿಗೆ ಎಲ್ಲರ ನೆರವು ಮುಖ್ಯ ಎಂದರು.

ಮಕ್ಕಳ ತಜ್ಞರ ಅಭಿಪ್ರಾಯಗಳನ್ನು ಪಿಪಿಟಿಯಲ್ಲಿ ತೋರಿಸಲಾಯಿತು. ಈ ಹಿನ್ನಲೆಯಲ್ಲಿ ಎಲ್ಲ ಧರ್ಮಗುರುಗಳು, ಮುಖ್ಯಸ್ಥರು, ಸಂಘಟಕರು ಹೆತ್ತವರ ಸಂದೇಹ ಪರಿಹರಿಸಿ, ಮಕ್ಕಳಿಗೆ ಮಾರಣಾಂತಿಕವಾಗಿರುವ ಕಾಯಿಲೆ ತಡೆಗೆ ನೆರವಾಗಿ ಎಂದು ಆರೋಗ್ಯ ಇಲಾಖೆ ಮುಖ್ಯಸ್ಥರು ಮನವಿ ಮಾಡಿದರು. ಸಭೆಯಲ್ಲಿ ಉಪಸ್ಥಿತರಿದ್ದವರ ಹಲವು ಸಂದೇಹಗಳಿಗೂ ಈ ವೇಳೆ ಡಾ ಸತೀಶ್ಚಂದ್ರ ಸಮರ್ಪಕ ಉತ್ತರ ನೀಡಿದರು.

ದಡಾರ ನಿರ್ಮೂಲನೆ ಮತ್ತು ರುಬೆಲ್ಲಾ ನಿಯಂತ್ರಣ 2020ರ ಗುರಿಯಾಗಿದ್ದು, ಈಗ ಭಾರತ ಪೋಲಿಯೋ ಮುಕ್ತವಾದಂತೆ ದಡಾರ ರುಬೆಲ್ಲಾ ಮುಕ್ತವಾಗಿಸಬೇಕೆಂದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳು ಹಾಗೂ ದಡಾರ ಚುಚ್ಚು ಮದ್ದಿಗೆ ಅಲರ್ಜಿ ಇರುವ ಮಕ್ಕಳನ್ನು ಹೊರತುಪಡಿಸಿ ಉಳಿದವರೆಲ್ಲರಿಗೂ ಇದೇ ಸಂದರ್ಭದಲ್ಲಿ ಲಸಿಕೆ ಹಾಕಿಸಿ ಎಂದು ಪ್ರಶ್ನೆಯೊಂದಕ್ಕೆ ಸತೀಶ್ಚಂದ್ರ ಉತ್ತರಿಸಿದರು.

ಮಕ್ಕಳ ತಜ್ಞ ಡಾ ಅಮರನಾಥ ಶಾಸ್ತ್ರಿ ಮಾತನಾಡಿದರು. ನೌರಿನ್ , ನಕ್ವಾ ಯಾಹ್ಯಾ ಸಾಹೇಬ್, ಉಡುಪಿಯ ವಕ್ಫ್ ಅಧಿಕಾರಿ ಮುಝಾಹಿದ್ ಪಾಶಾ, ಆರ್‍ಸಿಹೆಚ್ ಡಾಕ್ಟರ್ ಎಂ ಜಿ ರಾಮ ಉಪಸ್ಥಿತರಿದ್ದರು.

No Comments

Leave A Comment