Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಮತ್ತೊಮ್ಮೆ ಅಕ್ಕನ ಸವಾಲು ಮೀರಿನಿಂತ ತಂಗಿ ಸೆರೆನಾಗೆ ಮತ್ತೊಂದು ಕಿರೀಟ

ಮೆಲ್ಬರ್ನ್‌ : ಅಮೆರಿಕಾದ ಸೆರೆನಾ ವಿಲಿಯಮ್ಸ್‌ ಅವರು ಶನಿವಾರ ಟೆನಿಸ್‌ ಲೋಕದಲ್ಲಿ ಹೊಸ ಭಾಷ್ಯ ಬರೆದಿದ್ದಾರೆ. ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ನಲ್ಲಿ ಟ್ರೋಫಿ ಎತ್ತಿಹಿಡಿದ ಅವರು ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಗಳಲ್ಲಿ ಹೆಚ್ಚು ಪ್ರಶಸ್ತಿ ಗೆದ್ದ ಹಿರಿಮೆಗೆ ಪಾತ್ರರಾಗಿದ್ದಾರೆ.

ರಾಡ್‌ ಲೆವರ್‌ ಅರೆನಾದಲ್ಲಿ ನಡೆದ ಫೈನಲ್‌ನಲ್ಲಿ ಸೆರೆನಾ 6–4, 6–4ರಲ್ಲಿ ಅಕ್ಕ ವೀನಸ್‌ ವಿಲಿಯಮ್ಸ್‌ ಅವರನ್ನು ಹಣಿದರು. ಈ ಮೂಲಕ 23ನೇ ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿ ಜಯಿಸಿ ಜರ್ಮನಿಯ ಸ್ಟೆಫಿಗ್ರಾಫ್‌ ಹೆಸರಿನಲ್ಲಿದ್ದ  ದಾಖಲೆ  ಅಳಿಸಿ ಹಾಕಿದರು. ಜೊತೆಗೆ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದರು. ಹೋದ ವರ್ಷದ ಸೆಪ್ಟೆಂಬರ್‌ನಲ್ಲಿ ಸೆರೆನಾ ಅಗ್ರಪಟ್ಟ ಕಳೆದುಕೊಂಡಿದ್ದರು.

18 ವರ್ಷಗಳ ಹಿಂದೆ (1999) ಮೊದಲ ಗ್ರ್ಯಾಂಡ್‌ಸ್ಲಾಮ್‌ ಕಿರೀಟ ಮುಡಿಗೇರಿಸಿಕೊಂಡಿದ್ದ ಸೆರೆನಾ ಹೋದ ವರ್ಷ ನಡೆದ ವಿಂಬಲ್ಡನ್‌ ಟೂರ್ನಿಯಲ್ಲಿ ಟ್ರೋಫಿಗೆ ಮುತ್ತಿಕ್ಕಿ ಸ್ಟೆಫಿ ಗ್ರಾಫ್‌ ಹೆಸರಿನಲ್ಲಿದ್ದ (22 ಪ್ರಶಸ್ತಿ)  ದಾಖಲೆ ಸರಿಗಟ್ಟಿದ್ದರು. ಶನಿವಾರ ಮೆಲ್ಬರ್ನ್‌ ಪಾರ್ಕ್‌ನಲ್ಲಿ ಅಕ್ಕನ ಸವಾಲು ಮೀರಿ ನಿಂತು ಚಾರಿತ್ರಿಕ ಸಾಧನೆಯ ಕನಸು ಸಾಕಾರಗೊಳಿಸಿಕೊಂಡರು. ಮಾರ್ಗರೇಟ್‌ ಕೋರ್ಟ್‌ ಅವರ ಹೆಸರಿನಲ್ಲಿರುವ ಸಾರ್ವಕಾಲಿಕ (24 ಪ್ರಶಸ್ತಿ) ದಾಖಲೆ ಮೀರಿ ನಿಲ್ಲಲು 35 ವರ್ಷದ  ಅಮೆರಿಕಾದ ಆಟಗಾರ್ತಿ ಇನ್ನೆರಡು ಪ್ರಶಸ್ತಿ ಗೆಲ್ಲಬೇಕಿದೆ.

ವೀನಸ್‌ ಎದುರು 17–11ರ ಗೆಲುವಿನ ದಾಖಲೆ ಹೊಂದಿದ್ದ ಸೆರೆನಾ ಮೊದಲ ಸೆಟ್‌ನ ಆರಂಭಿಕ ಗೇಮ್‌ನಲ್ಲೇ ಅಕ್ಕನ ಸರ್ವ್‌ ಮುರಿದು ಮುನ್ನಡೆ ಗಳಿಸಿದರು. ಮರು ಗೇಮ್‌ನಲ್ಲಿ ವೀನಸ್‌ , ತಂಗಿಯ ಸರ್ವ್‌ ಮುರಿದರು. ಆರನೇ ಗೇಮ್‌ವರೆಗೂ ಹೀಗೆ ಜಿದ್ದಾಜಿದ್ದಿನ ಪೈಪೋಟಿ ಮುಂದುವರಿದಿತ್ತು.

ಒಂಬತ್ತನೇ ಗೇಮ್‌ನ ನಂತರ ಸೆರೆನಾ  ಆಟ ರಂಗೇರಿತು.  ಆಕರ್ಷಕ ಫೋರ್ ಹ್ಯಾಂಡ್‌ ಹೊಡೆತಗಳ ಮೂಲಕ ಅಂಗಳಲ್ಲಿ ಮಿಂಚು ಹರಿಸಿದ ಅವರು ವೀನಸ್‌ ಸರ್ವ್‌ ಮುರಿದು 4–3ರ ಮುನ್ನಡೆ ಗಳಿಸಿದರು. ಮರು ಗೇಮ್‌ನಲ್ಲಿ  ಸರ್ವ್‌ ಕಾಪಾಡಿಕೊಂಡು ಮುನ್ನಡೆಯನ್ನು 5–3ಕ್ಕೆ ಹೆಚ್ಚಿಸಿಕೊಂಡರು.

10ನೇ ಗೇಮ್‌ನಲ್ಲೂ ತುಂಬು ವಿಶ್ವಾಸದಿಂದ ಆಡಿದ 35 ವರ್ಷದ ಸೆರೆನಾ ಸತತವಾಗಿ ಏಸ್‌ಗಳನ್ನು ಸಿಡಿಸಿದರು. ಇದರಿಂದ ಒತ್ತಡಕ್ಕೆ ಒಳಗಾದಂತೆ ಕಂಡ ವೀನಸ್‌ ಹಲವು ಸ್ವಯಂಕೃತ ತಪ್ಪುಗಳನ್ನು ಮಾಡಿ 41 ನಿಮಿಷದಲ್ಲಿ ಸೆಟ್‌ ಕೈಚೆಲ್ಲಿದರು.

ಎರಡನೇ ಸೆಟ್‌ನ ಶುರುವಿನಲ್ಲಿ ವೀನಸ್‌ 2–1ರ ಮುನ್ನಡೆ ಹೊಂದಿದ್ದರು. ಆದರೆ ಸೆರೆನಾ ಅಷ್ಟು ಸುಲಭವಾಗಿ ಸೆಟ್‌ ಬಿಟ್ಟುಕೊಡಲು ಸಿದ್ಧರಿದ್ದಂತೆ ಕಾಣಲಿಲ್ಲ. ನಾಲ್ಕನೇ ಗೇಮ್‌ನಲ್ಲಿ ಅಕ್ಕನಿಗೆ ತಿರು ಗೇಟು ನೀಡಿದ ಅವರು 2–2ರಲ್ಲಿ ಸಮಬಲ ಮಾಡಿಕೊಂಡರು. ಟೂರ್ನಿ ಯಲ್ಲಿ ಎರಡನೇ ಶ್ರೇಯಾಂಕ ಹೊಂದಿದ್ದ ಸೆರೆನಾ ಆ ನಂತರವೂ  ಪರಾಕ್ರಮ ಮೆರೆದರು. 

10ನೇ ಗೇಮ್‌ನಲ್ಲಿ ಸೆರೆನಾ 15–30ರಿಂದ ಹಿಂದಿದ್ದರು. ಬಳಿಕ 30–30ರಲ್ಲಿ  ಸಮಬಲ ಮಾಡಿಕೊಂಡರು. ಈ ಹಂತದಲ್ಲಿ ವೀನಸ್‌ ಮಾಡಿದ ತಪ್ಪಿನ ಲಾಭ ಎತ್ತಿಕೊಂಡ ಸೆರೆನಾ ಚಾಂಪಿಯನ್‌ ಷಿಪ್‌ ಪಾಯಿಂಟ್‌ ಕಲೆಹಾಕುತ್ತಿದ್ದಂತೆ ಅವರ ಕಣ್ಣುಗಳು ತುಂಬಿ ಬಂದವು. ಇನ್ನೊಂದು ಬದಿಯಲ್ಲಿದ್ದ  ವೀನಸ್‌ ತಂಗಿಯನ್ನು  ಅಪ್ಪಿಕೊಂಡು ಅಭಿನಂದಿಸಿದರು.

 

ಎಲ್ಲಾ ಸಾಧನೆಗೆ ಅಕ್ಕ ವೀನಸ್‌ ಅವರೇ ಸ್ಫೂರ್ತಿ. ಅವರೇ ನನಗೆ ಮಾದರಿ
-ಸೆರೆನಾ ವಿಲಿಯಮ್ಸ್‌,
ಅಮೆರಿಕಾದ ಆಟಗಾರ್ತಿ

No Comments

Leave A Comment