Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಕೂಡಲಸಂಗಮದಲ್ಲಿ ಬ್ರಿಗೇಡ್‌ ಶಕ್ತಿ ಪ್ರದರ್ಶನ

ಬಾಗಲಕೋಟೆ: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿ ಹಲವರ ವಿರೋಧದ ನಡುವೆಯೇ ಕೂಡಲ ಸಂಗಮದಲ್ಲಿ ಸಂಗೊಳ್ಳಿ ರಾಯಣ್ಣ ಬಲಿದಾನ ದಿನ ಹಾಗೂ ಬ್ರಿಗೇಡ್‌ ಸಮಾವೇಶ ಗುರುವಾರ ನಡೆದಿದೆ.

ಸಹಸ್ರಾರು ಸಂಖ್ಯೆಯಲ್ಲಿ ಜನರನ್ನು ಸೇರಿಸುವ ಮೂಲಕ ಬ್ರಿಗೇಡ್‌ ಸಂಸ್ಥಾಪಕ ಕೆ.ಎಸ್‌.ಈಶ್ವರಪ್ಪ, ತಮ್ಮ ಶಕ್ತಿ ಪ್ರದರ್ಶಿಸಿದಂತಾಯಿತು.

ಬ್ರಿಗೇಡ್‌ನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಬಿಜೆಪಿಯ ಹಲವರಿಗೆ ನಡುಕ ಹುಟ್ಟಿದೆ ಎಂದು ಟಾಂಗ್‌ ನೀಡಿದ ಈಶ್ವರಪ್ಪ, ಇದು ಕೇವಲ ಕೆಲ ಜಿಲ್ಲೆಗಳ ವ್ಯಾಪ್ತಿಯ ಸಮಾವೇಶ. ಮುಂದೆ ರಾಜ್ಯಮಟ್ಟದ ಬ್ರಿಗೇಡ್‌ ಸಮಾವೇಶ ನಡೆಸಲಾಗುವುದು. ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗುವುದು ಎಂದು  ತಿಳಿಸಿದ್ದಾರೆ.

ಕೂಡಲಸಂಗಮದ ಬಸವಣ್ಣನವರ ವೇದಿಕೆಯಲ್ಲಿ  ರಾಯಣ್ಣ ಬ್ರಿಗೇಡ್‌ನಿಂದ ರಾಯಣ್ಣ ಬಲಿದಾನ ದಿನ ಹಾಗೂ ಸಮಾವೇಶ ನಡೆಯಿತು. ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಬೀದರ, ಕಲಬುರಗಿ, ರಾಯಚೂರು, ಬಳ್ಳಾರಿ, ಉತ್ತರ ಕನ್ನಡ ಹಾಗೂ ಯಾದಗಿರಿ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಿಂದ ಜನತೆ ಅಪಾರ ಸಂಖ್ಯೆಯಲ್ಲಿ ಆಗಮಿಸಿತ್ತು.

ಸಮಾವೇಶವನ್ನು ಉದ್ಘಾಟಿಸಿದ ಈಶ್ವರಪ್ಪ, ಬ್ರಿಗೇಡ್‌ ಮೇಲೆ ನಂಬಿಕೆ- ವಿಶ್ವಾಸವಿಟ್ಟು 2 ಲಕ್ಷಕ್ಕೂ ಅಧಿಕ ಜನ ಸೇರಿ ವಿಶ್ವರೂಪ ದರ್ಶನ ಮಾಡಿಸಿದ್ದೀರಿ. ಇದು 9 ಜಿಲ್ಲೆಗಳ ವ್ಯಾಪ್ತಿ ಸಮಾವೇಶ. ಮುಂದೆ ರಾಜ್ಯ ಸಮಾವೇಶ ನಡೆಸಿ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಆಹ್ವಾನಿಸಲಾಗುವುದು ಎಂದರು.

ಕೃಷ್ಣ ಹೊಟ್ಟೆಯಲ್ಲಿದ್ದಾಗಲೇ ಕಂಸನಿಗೆ ನಡುಕ ಹುಟ್ಟಿತ್ತು. ಬ್ರಿಗೇಡ್‌ ಹುಟ್ಟಿ ಕೇವಲ ಆರು ತಿಂಗಳಾಗಿದೆ. ಕೃಷ್ಣ ಬಾಯಿ ಬಿಟ್ಟಾಗ ಬ್ರಹ್ಮಾಂಡ ಕಾಣಿಸಿದಂತೆ ಇಡೀ ಸಮಾಜದ ಎಲ್ಲ ಜಾತಿಯ ಜನರಿಗಾಗಿ ಬ್ರಿಗೇಡ್‌ ಹೋರಾಟ ನಡೆಸಲಿದೆ. ಬ್ರಿಗೇಡ್‌ ಕಂಡರೆ ಸಿಎಂ ಸಿದ್ದರಾಮಯ್ಯ ಸಹಿತ, ಬಿಜೆಪಿಯ ಕೆಲವರಿಗೆ ನಡುಕ ಉಂಟಾಗಿದೆ. ಇದು ಏಕೆ? ಎಂದು ಪ್ರಶ್ನಿಸಿದ ಅವರು, ಬ್ರಿಗೇಡ್‌ ಯಾವುದೇ ವ್ಯಕ್ತಿ- ಪಕ್ಷದ ಪರವಾಗಿಲ್ಲ. ಹಿಂದುಳಿದವರು, ದಲಿತರಿಗೆ ಉದ್ಯೋಗ, ಶಿಕ್ಷಣ ಹಾಗೂ ಸೂರು ಒದಗಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಹೋರಾಟ ಎಂದರು.

ಸ್ವಾಮೀಜಿ- ನಾಯಕರಿಗೆ ಫೋನ್‌ ಬೆದರಿಕೆ:
ಸಮಾವೇಶಕ್ಕೆ ಹಲವಾರು ಸ್ವಾಮೀಜಿಗಳು, ರಾಜಕೀಯ ನಾಯಕರು ಬರುವವರಿದ್ದರು. ಆದರೆ, ಅವರಿಗೆಲ್ಲ ಫೋನ್‌ ಮಾಡಿ, ಬ್ರಿಗೇಡ್‌ ಸಮಾವೇಶಕ್ಕೆ ಯಾರೂ ಹೋಗಬೇಡಿ ಎಂಬ ಬೆದರಿಕೆ ಹಾಕಲಾಗಿದೆ. ಎಲ್ಲ ಮಠಾಧೀಶರಿಗೂ ಗೌರವ ಸಿಗಬೇಕು. ಅಲ್ಲಿವರೆಗೂ ಬ್ರಿಗೇಡ್‌ ಹೋರಾಟ ನಡೆಯಲಿದೆ ಎಂದರು.

ವರದಿ ಜಾರಿ ಮಾಡಿ:
ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿಗಳು, ತಾವು ಸದನದಲ್ಲಿ ಹೇಳಿದ್ದನ್ನು ತಕ್ಷಣ ಜಾರಿಗೆ ತರಬೇಕು. ಜನಸಂಖ್ಯೆವಾರು ಮೀಸಲಾತಿ ನೀಡುವ ಕುರಿತು ಹಾಗೂ ಕಾಂತರಾಜ್‌ ವರದಿಯನ್ನು  ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಗಣ್ಯರು ಭಾಗಿ
ಮೇಲ್ಮನೆ ಸದಸ್ಯ ಸೋಮಣ್ಣ ಬೇವಿನಮರದ, ಮಾಜಿ ಸಚಿವರಾದ ಎಸ್‌.ಎ. ರವೀಂದ್ರನಾಥ, ಸೊಗಡು ಶಿವಣ್ಣ, ಮಾಜಿ ಶಾಸಕರಾದ ನೇಮಿರಾಜ ನಾಯ್ಕ, ಬಸವರಾಜ ನಾಯಕ, ಶಿವಯೋಗಿಸ್ವಾಮಿ, ಜಗದೀಶ್‌ ಮೆಟಗುಡ್ಡ, ಬ್ರಿಗೇಡ್‌ ರಾಜ್ಯಾಧ್ಯಕ್ಷ ಕೆ.ವಿರೂಪಾಕ್ಷಪ್ಪ, ಕೆ.ಮುಕುಡಪ್ಪ, ಐಪಿಎಸ್‌ ನಿವೃತ್ತ ಅಧಿಕಾರಿ ಸಂಗ್ರಾಮ್‌ಸಿಂಗ್‌, ಕನಕ ಗುರುಪೀಠ ತಿಂಥಣಿ ಶಾಖಾ ಮಠದ ಸಿದ್ದರಾಮಾನಂದಪುರಿ ಸ್ವಾಮೀಜಿ, ಬೆಂಗಳೂರಿನ ಮಾಚಿದೇವ ಪೀಠದ ಶಿವಾನಂದಪುರಿ ಸ್ವಾಮೀಜಿ ಸೇರಿದಂತೆ 15ಕ್ಕೂ ಹೆಚ್ಚು ಸ್ವಾಮೀಜಿಗಳು ಪಾಲ್ಗೊಂಡಿದ್ದರು.

ಯಡಿಯೂರಪ್ಪ ಸಿಎಂ ಆಗಲಿ
ಈಶ್ವರಪ್ಪ ಭಾಷಣದ ವೇಳೆ ಜನತೆ ನೀವೇ ಸಿಎಂ ಆಗಬೇಕು ಎಂದು ಕೂಗಿದರು. ಆಗ ಉತ್ತರಿಸಿದ ಈಶ್ವರಪ್ಪ, ನನ್ನ ವೈಯಕ್ತಿಕ ಸ್ವಾತಂತ್ರ್ಯ, ನನ್ನ ಪಕ್ಷ ನಿಷ್ಠೆಗೆ ಯಾರೂ ಅಡ್ಡ ಬರಬೇಡಿ. ಬಿಜೆಪಿಯ ಮುಂದಿನ ಸಿಎಂ ಅಭ್ಯರ್ಥಿ ಯಡಿಯೂರಪ್ಪ ಅಂತ ನಮ್ಮ ನಾಯಕರು ಘೋಷಿಸಿದ್ದಾರೆ. ನಾವು ಅದಕ್ಕೆ ಬದ್ಧರಾಗಿದ್ದೇವೆ. ಯಡಿಯೂರಪ್ಪ ಅವರೇ ಸಿಎಂ ಆಗಲಿ. ಆದರೆ, ಹಿಂದುಳಿದವರು, ದಲಿತರು ಹಾಗೂ ಎಲ್ಲ ವರ್ಗಗಗಳಲ್ಲಿ ಇರುವ ಬಡವರನ್ನು ನಿರ್ಲಕ್ಷ್ಯ ಮಾಡಿದರೆ, ಬ್ರಿಗೇಡ್‌ ಸುಮ್ಮನೆ ಇರಲ್ಲ ಎಂದು ಗುಡುಗಿದರು.

No Comments

Leave A Comment