Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

ಯಡಿಯೂರಪ್ಪ ಬೆಂಬಲಿಗರಿಂದ ಹೈಕಮಾಂಡ್‌ಗೆ ಪತ್ರ ಈಶ್ವರಪ್ಪ ವಿರುದ್ಧ ದೂರು

 

ಬೆಂಗಳೂರು: ರಾಯಣ್ಣ ಬ್ರಿಗೇಡ್‌ ಸಂಘಟನೆ ಮುಂದುವರಿಸುವ ಮೂಲಕ ಪಕ್ಷಕ್ಕೆ ಹಾನಿ ಉಂಟು ಮಾಡುತ್ತಿರುವ ಹಿರಿಯ ಮುಖಂಡ ಕೆ.ಎಸ್‌. ಈಶ್ವರಪ್ಪ ವಿರುದ್ಧ ತಕ್ಷಣ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಬಣದ ಮುಖಂಡರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರಿಗೆ ಪತ್ರ ಬರೆದಿದ್ದಾರೆ.

 

ಕೇಂದ್ರ ಸಚಿವರಾದ ಅನಂತಕುಮಾರ್‌, ರಮೇಶ ಜಿಗಜಿಣಗಿ, ಡಿ.ವಿ.ಸದಾನಂದ ಗೌಡ, ಸಂಸದರಾದ ಪ್ರಹ್ಲಾದ ಜೋಶಿ, ನಳಿನ್‌ಕುಮಾರ್‌ ಕಟೀಲು ಅವರನ್ನು ಬಿಟ್ಟು ಉಳಿದ ಸಂಸದರು ಪತ್ರಕ್ಕೆ ಸಹಿ ಹಾಕಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್‌ ಮೂಲಕ ಈ ಪತ್ರವನ್ನು ಷಾ ಅವರಿಗೆ ಈಗಾಗಲೇ ತಲುಪಿಸಲಾಗಿದೆ.

ಕಲಬುರ್ಗಿಯಲ್ಲಿ ನಡೆದ ಎರಡು ದಿನಗಳ ಬಿಜೆಪಿ ಕಾರ್ಯಕಾರಿಣಿಯಲ್ಲಿ ಭಾಗವಹಿಸಿದ್ದ ರಾಜ್ಯದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಮುರಳೀಧರರಾವ್‌ ಅವರ ಮುಖಾಂತರ ಪತ್ರವನ್ನು ಪಕ್ಷದ ಅಧ್ಯಕ್ಷರಿಗೆ ತಲುಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪಕ್ಷದ 31 ಶಾಸಕರು, 94 ಮಾಜಿ ಶಾಸಕರು ಇಂತಹದೇ ಇನ್ನೊಂದು ಪತ್ರ ಬರೆದಿದ್ದು, ಸದ್ಯದಲ್ಲೆ ನಿಯೋಗದಲ್ಲಿ ದೆಹಲಿಗೆ ತೆರಳಿ ಈ ಪತ್ರವನ್ನು ಷಾ ಅವರಿಗೆ ತಲುಪಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಲಬುರ್ಗಿಯಲ್ಲಿ ನಡೆದ ಕಾರ್ಯಕಾರಣಿಯಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ಮಧ್ಯೆ ನಡೆದ ಗುದ್ದಾಟವನ್ನೂ ಈ ಪತ್ರಗಳಲ್ಲಿ ಉಲ್ಲೇಖಿಸಲಾಗಿದೆ.
‘ಈಶ್ವರಪ್ಪ ಅವರ ಪಕ್ಷ ವಿರೋಧಿ ಚಟುವಟಿಕೆಯಿಂದ ಬಿಜೆಪಿ ರಾಜ್ಯದಲ್ಲಿ ದುರ್ಬಲವಾಗುತ್ತಿದೆ. ಇತ್ತೀಚಿಗೆ ಪರಿಸ್ಥಿತಿ ತೀರಾ ಹದಗೆಟ್ಟಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಅವಕಾಶವನ್ನು ಈಶ್ವರಪ್ಪ ತಪ್ಪಿಸುತ್ತಿದ್ದಾರೆ. ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳದಿದ್ದರೆ ಭಾರಿ ಬೆಲೆ ತೆರಬೇಕಾಗುತ್ತದೆ’ ಎಂದೂ ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ ಎಂದು ಗೊತ್ತಾಗಿದೆ.

ಈ ಪತ್ರದ ಜೊತೆಯಲ್ಲಿ ಈಶ್ವರಪ್ಪ ಅವರು ಇತ್ತೀಚೆಗೆ ನೀಡಿದ ಪಕ್ಷ ವಿರೋಧಿ ಹೇಳಿಕೆಗಳನ್ನು ಒಳಗೊಂಡಿರುವ ಪತ್ರಿಕಾ ತುಣುಕುಗಳನ್ನೂ ಲಗತ್ತಿಸಲಾಗಿದೆ.
‘ಬಿಜೆಪಿ ಅಧಿಕಾರಕ್ಕೆ ತರುವುದು ರಾಯಣ್ಣ ಬ್ರಿಗೇಡ್‌ ಸಂಘಟನೆಯ ಉದ್ದೇಶವಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೂ ಒಂದೇ, ಬಾರದಿದ್ದರೂ ಒಂದೇ ಎಂದೆಲ್ಲಾ ಈಶ್ವರಪ್ಪ ಅವರು ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರ ವಿರುದ್ಧ ಯಾವುದೇ ವಿಳಂಬ ಮಾಡದೆ ಕ್ರಮ ಕೈಗೊಳ್ಳಬೇಕು. ಮುಂದಿನ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಮಾತ್ರ ಬಾಕಿ ಉಳಿದಿದ್ದು, ಈ ನಿಟ್ಟಿನಲ್ಲಿ ತ್ವರಿತ ಕ್ರಮ ತೆಗೆದುಕೊಳ್ಳಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ.

No Comments

Leave A Comment