Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ನಿವೇಶನದ ಭೂತ ಲೋಕಾಯುಕ್ತಕ್ಕೆ ನ್ಯಾ.ಶೆಟ್ಟಿ ರಾಜ್ಯಪಾಲರ ಹಿಂದೇಟು

ಬೆಂಗಳೂರು: ರಾಜ್ಯ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರನ್ನು ಲೋಕಾಯುಕ್ತ ಹುದ್ದೆಗೆ ನೇಮಿಸಲು ರಾಜ್ಯಪಾಲ ವಜುಭಾಯಿ ವಾಲಾ ಅವರು ಹಿಂದೇಟು ಹಾಕಿದ್ದಾರೆ.

ಈ ಸಂಬಂಧ ರಾಜ್ಯ ಸರ್ಕಾರ  ಕಳುಹಿಸಿದ್ದ ಶಿಫಾರಸನ್ನು ಸೋಮವಾರ  ರಾಜ್ಯಪಾಲರು ಹಿಂತಿರುಗಿಸಿದ್ದಾರೆ. ಲೋಕಾಯುಕ್ತ ಆಯ್ಕೆ ಪ್ರಕ್ರಿಯೆ ಸಮಂಜಸವಾಗಿ ನಡೆದಿಲ್ಲ ಎಂದೂ ಅಸಮಾಧಾನ ವ್ಯಕ್ತಪಡಿಸಿ ಸುದೀರ್ಘ ಪತ್ರ ಬರೆದಿದ್ದಾರೆ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಲೋಕಾಯುಕ್ತ ಆಯ್ಕೆಗೆ ಸಂಬಂಧಿಸಿದ ಉನ್ನತಾಧಿಕಾರ ಸಮಿತಿಯ ಮೊದಲ ಸಭೆಯಲ್ಲಿಯೇ ನ್ಯಾಯಮೂರ್ತಿ  ಶೆಟ್ಟಿ ಹೆಸರನ್ನು ಆಯ್ಕೆ ಮಾಡಲಾಗಿದೆ. ಅವರ ವಿರುದ್ಧ  ‘ಸಮಾಜ ಪರಿವರ್ತನಾ ಸಮುದಾಯ’ದ ಎಸ್‌.ಆರ್. ಹಿರೇಮಠ ಅವರು ವಿಶ್ವನಾಥ ಶೆಟ್ಟಿ ವಿರುದ್ಧ ದೂರು ಕೊಟ್ಟಿದ್ದಾರೆ’ ಎಂದೂ ರಾಜ್ಯಪಾಲರು ಪತ್ರದಲ್ಲಿ ಹೇಳಿದ್ದಾರೆ ಎಂದು ಗೊತ್ತಾಗಿದೆ.

ರಾಜಭವನಕ್ಕೆ ಹಿರೇಮಠ ಅವರು ಸಲ್ಲಿಸಿದ್ದ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ರಾಜ್ಯಪಾಲರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಮುಖ್ಯಮಂತ್ರಿ ನೇತೃತ್ವದ ಉನ್ನತಾಧಿಕಾರ ಆಯ್ಕೆ ಸಮಿತಿ ಇದೇ 9ರಂದು ನ್ಯಾಯಮೂರ್ತಿ  ಶೆಟ್ಟಿ ಅವರ ಹೆಸರನ್ನು ಲೋಕಾಯುಕ್ತ ಹುದ್ದೆಗೆ ಒಮ್ಮತದಿಂದ ಅನುಮೋದಿಸಿತ್ತು.

ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಭಾಸ್ಕರ್‌ ರಾವ್‌ ಅವರು ಭ್ರಷ್ಟಾಚಾರ ಆರೋಪದಲ್ಲಿ ರಾಜೀನಾಮೆ (2015ರ ಡಿ. 8) ನೀಡಿದ ಬಳಿಕ ಕಳೆದ 13 ತಿಂಗಳಿಂದ ಈ ಹುದ್ದೆ ಖಾಲಿ ಇದೆ.

‘ಲೋಕಾಯುಕ್ತ ಸಂಸ್ಥೆಯ ಸಮಗ್ರತೆ ಕಾಯ್ದುಕೊಳ್ಳುವುದು ಅತಿ ಅಗತ್ಯ. ನ್ಯಾಯಮೂರ್ತಿ ಶೆಟ್ಟಿ ಅವರ ಹೆಸರನ್ನು ಶಿಫಾರಸು ಮಾಡುವ ಮೊದಲು ಅವರ ಪೂರ್ವಾಪರ ಪರಿಶೀಲಿಸುವುದು ಅಗತ್ಯ. ಆದರೆ, ಸರ್ಕಾರ ಆ ಕೆಲಸ ಮಾಡಿದಂತಿಲ್ಲ’ ಎಂದೂ ಪತ್ರದಲ್ಲಿ ರಾಜ್ಯಪಾಲರು ತಿಳಿಸಿದ್ದಾರೆ ಎನ್ನಲಾಗಿದೆ.

ಮಹತ್ವದ ನಿರ್ಧಾರ – ಹಿರೇಮಠ: ಲೋಕಾಯುಕ್ತ ಹುದ್ದೆಗೆ ರಾಜ್ಯ ಸರ್ಕಾರ ಶಿಫಾರಸು ಮಾಡಿದ್ದ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಹೆಸರನ್ನು ರಾಜ್ಯಪಾಲರು ಸರ್ಕಾರಕ್ಕೆ ವಾಪಸ್‌ ಕಳುಹಿಸಿದ್ದು ಅತ್ಯಂತ ಮಹತ್ವದ ನಿರ್ಧಾರ ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ  ಹಿರೇಮಠ  ಅವರು ಪ್ರತಿಕ್ರಿಯಿಸಿದ್ದಾರೆ.

‘ನ್ಯಾ. ವಿಶ್ವನಾಥ ಶೆಟ್ಟಿ ಮತ್ತು ಅವರ ಕುಟುಂಬ ಅಕ್ರಮವಾಗಿ ಜಮೀನು, ಗೋಮಾಳ ಜಮೀನನ್ನು ಕಾನೂನು ಬಾಹಿರವಾಗಿ ಹೊಂದಿದ್ದಾರೆ. ಅವರ ಹೆಸರು ವಾಪಸ್‌ ಕಳುಹಿಸಿರುವುದನ್ನು  ನಾವು ಸ್ವಾಗತಿಸುತ್ತೇವೆ’ ಎಂದರು.

‘ಇದೇ ರೀತಿ ಅಕ್ರಮಗಳನ್ನು ಮಾಡಿದಂತಹ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್‌ ಮತ್ತು ನ್ಯಾಯಮೂರ್ತಿ ಎಸ್‌.ಆರ್‌. ನಾಯಕ್‌ ಅವರ ಹೆಸರನ್ನು ಲೋಕಾಯುಕ್ತ ಹುದ್ದೆಗೆ ಈ ಹಿಂದೆ ಶಿಫಾರಸು ಮಾಡಿದಾಗಲೂ ರಾಜ್ಯಪಾಲರು ವಾಪಸ್‌ ಕಳುಹಿಸಿದ್ದರು. ಹೀಗಾಗಿ ಸರ್ಕಾರ ಇನ್ನು ಮುಂದೆ ಎಚ್ಚೆತ್ತುಕೊಂಡು ಸೂಕ್ತ ವ್ಯಕ್ತಿಗಳ ಹೆಸರನ್ನು ಮಾತ್ರ ಶಿಫಾರಸು ಮಾಡಬೇಕು’ ಎಂದು ಹಿರೇಮಠ ಅವರು ಆಗ್ರಹಿಸಿದರು.

ಲೋಕಾಯುಕ್ತಕ್ಕೆ ನಿವೇಶನದ ಭೂತ..!
* ತಮ್ಮ ವಿರುದ್ಧ ನಿವೇಶನ ಪಡೆದ ಆರೋಪ ಕೇಳಿಬಂದ ಕೂಡಲೇ ನ್ಯಾಯಮೂರ್ತಿ ಶಿವರಾಜ್‌ ಪಾಟೀಲ್‌ ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೆ, ನಿವೇಶನವನ್ನೂ ಸರ್ಕಾರಕ್ಕೆ ಹಿಂದಿರುಗಿಸಿದ್ದರು.
* ಉಪ ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಗುರುರಾಜನ್‌ ಅವರಿಗೂ ನಿವೇಶನದ ಭೂತ ಕಾಡಿತ್ತು. ಕಾನೂನುಬಾಹಿರವಾಗಿ ನಿವೇಶನ ಖರೀದಿಸಿದ್ದಾರೆ ಎಂಬ ಆರೋಪ ಕೇಳಿಬಂದ ಕೂಡಲೇ ಅವರು ಅನಾರೋಗ್ಯದ ಕಾರಣ ನೀಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
* ಸಿದ್ದರಾಮಯ್ಯ ಸರ್ಕಾರ ನಿವೃತ್ತ  ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್‌.ಆರ್‌.ನಾಯಕ ಅವರ ಹೆಸರನ್ನು ಎರಡು ಬಾರಿ ಶಿಫಾರಸು ಮಾಡಿ ರಾಜ್ಯಪಾಲರಿಗೆ ಕಳುಹಿಸಿತ್ತು. ಆದರೆ ರಾಜ್ಯಪಾಲರು ಎರಡೂ ಬಾರಿ ಇದನ್ನು ವಾಪಸು ಕಳುಹಿಸಿದ್ದರು

No Comments

Leave A Comment