ನಾನು ಹುಟ್ಟಾ ಕಾಂಗ್ರೆಸಿಗ, ನನಗಿದು ಘರ್ ವಾಪಸಿ: ನವಜ್ಯೋತ್ ಸಿಧು
ಹೊಸದಿಲ್ಲಿ : ‘ನಾನೋರ್ವ ಹುಟ್ಟಾ ಕಾಂಗ್ರೆಸಿಗ; ಹಾಗಾಗಿ ನಾನು ಕಾಂಗ್ರೆಸ್ಗೆ ಮರಳಿರುವುದು ನನ್ನ ಪಾಲಿಗೆ ಘರ್ ವಾಪಸಿ ಆಗಿದೆ’ ಎಂದು ಕಾಂಗ್ರೆಸ್ ಪಕ್ಷ ಸೇರಿರುವ ಮಾಜಿ ಬಿಜೆಪಿ ಸಂಸದ, ಮಾಜಿ ಕ್ರಿಕೆಟಿಗ, ನವಜ್ಯೋತ್ ಸಿಂಗ್ ಸಿಧು ಹೇಳಿದ್ದಾರೆ.
‘ಪಂಜಾಬಿನಲ್ಲಿ ಮಾದಕ ದ್ರವ್ಯ ನಿಜಕ್ಕೂ ಒಂದು ಜ್ವಲಂತ ಸಮಸ್ಯೆಯಾಗಿದೆ. ಅಕಾಲಿಗಳು ಈ ಪಿಡುಗನ್ನು ನಿವಾರಿಸುವಲ್ಲಿ ವಿಫಲರಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಇಲ್ಲಿನ ಡ್ರಗ್ ಪಿಡುಗನ್ನು ಸಂಪೂರ್ಣವಾಗಿ ನಿವಾರಿಸಲಾಗುವುದು’ ಎಂದು ಸಿಧು ಈ ಸಂದರ್ಭದಲ್ಲಿ ಹೇಳಿದರು.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ತರುವಾಯ ಸಿಧು ಅವರು, ಪಂಜಾಬ್ ವಿಧಾನಸಭಾ ಚುನಾವಣೆಗೆ ಮುನ್ನವೇ ಕಾಂಗ್ರೆಸ್ ಸೇರಿದ್ದಾರೆ. ಅವರು ಅಮೃತಸರ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಸ್ಫರ್ಧಿಸಲಿರುವುದಾಗಿ ತಿಳಿದು ಬಂದಿದೆ.
ಸಿಧು ಅವರ ಪತ್ನಿ ನವಜ್ಯೋತ್ ಕೌರ್ ಅವರು ಕಳೆದ ವರ್ಷ ನವೆಂಬರ್ನಲ್ಲೇ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡಿದ್ದಾರೆ.