ಪಂಜಾಬ್ ಮಾಜಿ ಮುಖ್ಯಮಂತ್ರಿ ಸುರ್ಜಿತ್ ಸಿಂಗ್ ಬರ್ನಾಲ್ ನಿಧನ
ಚಂಡೀಗಢ: ಪಂಜಾಬ್ ಮಾಜಿ ಮುಖ್ಯಮಂತ್ರಿ ಸುರುಜಿತ್ ಸಿಂಗ್ ಬರ್ನಾಲ್ ಶನಿವಾರ ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು.
ಅವರು ಕೆಲ ದಿನಗಳ ಹಿಂದೆ ಅಸೌಖ್ಯದಿಂದ ಚಂಡೀಗಢದ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯ ಸ್ನಾತಕೋತ್ತರ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಅವರು ಪತ್ನಿ, ಸುರ್ಜಿತ್ ಕೌರ್, ಇಬ್ಬರು ಪುತ್ರರು ಮತ್ತು ಪುತ್ರಿಯನ್ನಗಲಿದ್ದಾರೆ.
ಬರ್ನಾಲ್ ಅವರು ತಮಿಳು ನಾಡು, ಉತ್ತರಾಖಂಡ, ಆಂಧ್ರ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ರಾಜ್ಯಪಾಲರಾಗಿ ಮತ್ತು ಸಂಪುಟ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಹರ್ಯಾಣದ ಅಟೆಲಿಯಲ್ಲಿ ಜನಿಸಿದ ಬರ್ನಾಲ್ 1946ರಲ್ಲಿ ಲಕ್ನೋ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಗಳಿಸಿದ್ದರು. 1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದರು.
1952ರಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬರ್ನಾಲ್ ಆಗ ಸೋತಿದ್ದರು. ನಂತರ ಸಂಸತ್ ಚುನಾವಣೆಗೆ 1977ರಲ್ಲಿ ಸ್ಪರ್ಧಿಸಿ ಮೊರಾರ್ಜಿ ದೇಸಾಯಿ ಸರ್ಕಾರದಲ್ಲಿ ಕೃಷಿ ಸಚಿವರಾಗಿ ಸೇರಿಕೊಂಡಿದ್ದರು.
ಅಮೃತಸರದಲ್ಲಿ ಗುರು ನಾನಕ್ ದೇವ್ ವಿಶ್ವವಿದ್ಯಾಲಯ ಸ್ಥಾಪಿಸಿದ ಕೀರ್ತಿ ಬರ್ನಾಲ್ ಅವರಿಗೆ ಸಲ್ಲುತ್ತದೆ.
ಸುರ್ಜಿತ್ ಸಿಂಗ್ ಬರ್ನಾಲ್ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದಾರೆ. ಅವರ ಸೇವೆ ಮತ್ತು ಕೊಡುಗೆಯನ್ನು ದೇಶ ಸದಾ ಸ್ಮರಿಸುತ್ತದೆ. ಅವರ ನಿಧನದ ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಹೇಳಿದ್ದಾರೆ.
ಇದೀಗ ಬರ್ನಾಲ್ ಅವರ ಕಳೇಬರವನ್ನು ಅವರ ನಿವಾಸಕ್ಕೆ ತೆಗೆದುಕೊಂಡು ಬರಲಾಗಿದೆ.