Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

ಹೃದಯ ವೈಶಾಲ್ಯದಿಂದ ವಿಶ್ವ ಮಾನವರಾಗೋಣ: ಡಾ. ವೀರೇಂದ್ರ ಹೆಗ್ಗಡೆ

ಮೂಡಬಿದಿರೆ: ಮುಂದಿನ ಜನಾಂಗವು ಸುಖವಾಗಿ, ಕ್ಷೇಮವಾಗಿ ಬಾಳುವಂತಾಗಲು ಈ ನೆಲ, ಜಲ, ಸಂಸ್ಕೃತಿಯನ್ನು ಸುವ್ಯವಸ್ಥಿತವಾಗಿ ಹಸ್ತಾಂತರ ಮಾಡುವ ಹೊಣೆಗಾರಿಕೆ ನಮ್ಮ ಮೇಲಿದೆ. ಅದಕ್ಕೆ ಸಂಸ್ಕಾರ ಬೇಕು; ಸಂಸ್ಕೃತಿ ಪ್ರೀತಿ ಬೇಕು. ನಾವು ಆರ್ಜಿಸುವ ಜ್ಞಾನ ನಮ್ಮಲ್ಲಿ ಅಂಥ ಸಂಸ್ಕಾರವನ್ನು ಬೆಳೆಸಬೇಕು. ವಿರಾಸತ್‌ನಂಥ ಸಾಂಸ್ಕೃತಿಕ ಉತ್ಸವ ಇಂಥ ಆಶಯಕ್ಕೆ ಸಾಕ್ಷಿಯಾಗಿದೆ’ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ವಿದ್ಯಾಗಿರಿ ಸನಿಹ ಪುತ್ತಿಗೆಯ ವಿವೇಕಾನಂದ ನಗರದಲ್ಲಿ ಶುಕ್ರವಾರ ಸಂಜೆ ಪ್ರಾರಂಭವಾದ 23ನೇ ವರ್ಷದ ‘ಆಳ್ವಾಸ್‌ ವಿರಾಸತ್‌-2017’ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ವಿರಾಸತ್‌ ಪ್ರಶಸ್ತಿ ಪ್ರದಾನ
ವಿಶ್ವಪ್ರಸಿದ್ಧ ಭರತನಾಟ್ಯ ಕಲಾವಿದ ಪದ್ಮಭೂಷಣ ವಿ.ಪಿ. ಧನಂಜಯನ್‌ ಅವರಿಗೆ ಡಾ| ವೀರೇಂದ್ರ ಹೆಗ್ಗಡೆ ಹಾಗೂ ಗಣ್ಯರ ಸಮ್ಮುಖ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವರು 1 ಲಕ್ಷ ರೂ. ನಗದು, ಮಾನಪತ್ರ, ಯಕ್ಷ ಸ್ಮರಣಿಕೆ ಸಹಿತ 2017ರ ಸಾಲಿನ ಆಳ್ವಾಸ್‌ ವಿರಾಸತ್‌ ಪ್ರಶಸ್ತಿ ಪ್ರದಾನಗೈದರು. ಆಳ್ವಾಸ್‌ ಕನ್ನಿಕೆಯರು ಧನಂಜಯನ್‌ಗೆ ಆರತಿ ಬೆಳಗಿದರು. ಭರತನಾಟ್ಯ ಕಲಾವಿದೆ ಶಾಂತಾ ಧನಂಜಯನ್‌ ಜತೆಗಿದ್ದರು.

ಶಾಸಕ ಕೆ. ಅಭಯಚಂದ್ರ, ಸಂಸದ ನಳಿನ್‌ಕುಮಾರ್‌ ಕಟೀಲು, ವಿಧಾನ ಪರಿಷತ್‌ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌, ಮಾಜಿ ಸಚಿವ ಮುರುಗೇಶ್‌ ನಿರಾಣಿ, ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ – ಜಯಶ್ರೀ ಎ. ಶೆಟ್ಟಿ ದಂಪತಿ, ತೇಜಸ್ವಿನೀ ಅನಂತಕುಮಾರ್‌, ಕರ್ಣಾಟಕ ಬ್ಯಾಂಕ್‌ ಎಂ.ಡಿ., ಸಿಇಒ ಜಯರಾಮ ಭಟ್‌, ಕೆನರಾ ಬ್ಯಾಂಕ್‌ ಜಿ.ಎಂ. ವಿರೂಪಾಕ್ಷ, ಅದಾನಿ ಯುಪಿಸಿಎಲ್‌ ಕಾ.ನಿ. ಅಧಿಕಾರಿ ಕಿಶೋರ್‌ ಆಳ್ವ, ಅಮೆರಿಕದ ರಾನ್‌ ಸೋಮರ್ಸ್‌, ವರುಣ್‌ ಜೈನ್‌, ಹೊಟೇಲ್‌ ಗೋಲ್ಡ್‌ಫಿಂಚ್‌ನ ಎಂ.ಡಿ. ಪ್ರಕಾಶ್‌ ಶೆಟ್ಟಿ, ಧನಲಕ್ಷ್ಮೀ ಕ್ಯಾಶ್ಯೂಸ್‌ನ ಕೆ. ಶ್ರೀಪತಿ ಭಟ್‌, ರಾಜೇಶ್ವರೀ ಇನ್‌ಫ್ರಾಟೆಕ್‌ನ ದೇವಿ ಪ್ರಸಾದ್‌ ಶೆಟ್ಟಿ, ಭಾರತ್‌ ಇನ್‌ಫ್ರಾಟೆಕ್‌ನ ಮುಸ್ತಾಫ ಎಸ್‌.ಎಂ., ಮೀನಾಕ್ಷಿ – ಜಯಕರ ಆಳ್ವ ದಂಪತಿ, ರಾಮಚಂದ್ರ ಶೆಟ್ಟಿ ವೇದಿಕೆಯಲ್ಲಿದ್ದರು. ಡಾ| ಎಂ. ಮೋಹನ ಆಳ್ವ ಸ್ವಾಗತಿಸಿದರು. ಪಿಆರ್‌ಒ ಡಾ| ಪದ್ಮನಾಭ ಶೆಣೈ ಅವರು ಮಾನಪತ್ರ ವಾಚಿಸಿದರು. ದೀಪಾ ಕೊಟ್ಟಾರಿ ನಿರೂಪಿಸಿದರು.

ಸಾಂಸ್ಕೃತಿಕ: ಕೊಳಲು – ಬಾನ್ಸುರಿ ಜುಗಲ್‌ಬಂದಿಯು ಶಶಾಂಕ್‌ ಸುಬ್ರಹ್ಮಣ್ಯಂ (ಕೊಳಲು), ಪ್ರವೀಣ್‌ ಗೋಡ್ಕಿಂಡಿ (ಬಾನ್ಸುರಿ), ವಿದ್ವಾನ್‌ ಭಕ್ತವತ್ಸಲಂ (ಮೃದಂಗ), ಪಂ. ಶುಭಂಕರ್‌ ಬ್ಯಾನರ್ಜಿ (ತಬ್ಲಾ)ಇವರ ಕೂಡುವಿಕೆಯಿಂದ ಜರಗಿತು. ಬಳಿಕ ಆಳ್ವಾಸ್‌ವಿದ್ಯಾಥಿಗಳು ಒರಿಸ್ಸಾದ ಗೋಟಿಪುವಾ, ನಿಯೋ ಕಥಕ್‌, ಗುಜರಾತಿನ ಹುಡೋರಾಸ್‌, ಬಡಗು ಯಕ್ಷಗಾನ ಮಧುಮಾಸದ ರೂಪಕ ಹಾಗೂ ಕೇರಳದ ಅರ್ಜುನ ಮುಟ್ಟು ಪ್ರಸ್ತುತಪಡಿಸಿದರು.

ಆಳ್ವಾಸ್‌ ವಿರಾಸತ್‌ : ಇಂದಿನ (ಜ. 14) ಕಾರ್ಯಕ್ರಮ
ಪುತ್ತಿಗೆ ವಿವೇಕಾನಂದ ನಗರ (ವಿದ್ಯಾಗಿರಿ ಬಳಿ) ನಡೆಯುತ್ತಿರುವ ಆಳ್ವಾಸ್‌ ವಿರಾಸತ್‌ ಉತ್ಸವದಲ್ಲಿ ಶನಿವಾರ ಸಂಜೆ 6ರಿಂದ ನಡೆಯುವ ಟ್ರಿನಿಟಿ ನಾದಮಾಧುರ್ಯ ಕಾರ್ಯಕ್ರಮದಲ್ಲಿ  ಪುರ್ಬಯಾನ್‌ ಚಟರ್ಜಿ (ಸಿತಾರ್‌), ಯು. ರಾಜೇಶ್‌ (ಮ್ಯಾಂಡೋಲಿನ್‌), ರಂಜಿತ್‌ ಬೇರಟ್‌ (ಡ್ರಮ್ಸ್‌), ಗುಲ್‌ರಾಜ್‌ ಸಿಂಗ್‌ (ಕೀಬೋರ್ಡ್‌), ಮೋಹಿನಿ ಡೇ (ಬೇಸ್‌ ಗಿಟಾರ್‌) ಮತ್ತು ಭೂಷಣ್‌ ಪರ್ಚುರೆ (ತಬ್ಲಾ) ಭಾಗವಹಿಸಲಿರುವರು.

ರಾತ್ರಿ 8.50ರ ಬಳಿಕ ಬೆಂಗಳೂರಿನ ಬಾಲಪ್ರತಿಭೆ ಮಾ| ರಾಹುಲ್‌ ವೆಲ್ಲಾಲ್‌ರಿಂದ ದೇವರ ನಾಮ, ಭುವನೇಶ್ವರದ ಕಲಾವಿದರಿಂದ ಒಡಿಸ್ಸಿ, ಗೋಟಿಪುವಾ ನೃತ್ಯ, ಆಳ್ವಾಸ್‌ನ 210 ಮಂದಿ ವಿದ್ಯಾರ್ಥಿಗಳಿಂದ ರೋಪ್‌, ಮಲ್ಲಕಂಬ, ಕಥಕ್‌, ಮಣಿಪುರದ ದೋಲ್‌ಚಲೋಮ್‌ ಹಾಗೂ ಶ್ರೀಲಂಕನ್‌ ನೃತ್ಯ ಕಾರ್ಯಕ್ರಮಗಳಿವೆ. ಜತೆಗೆ, ದಿನವಿಡೀ ವಿರಾಸತ್‌ ಮುಖ್ಯ ವೇದಿಕೆಯ ಬಳಿ ಆಳ್ವಾಸ್‌ ಶಿಲ್ಪ ವಿರಾಸತ್‌ ಮತ್ತು ವರ್ಣ ವಿರಾಸತ್‌ ಶಿಬಿರಗಳಲ್ಲಿ ರೂಪಿತ ಕಲಾಕೃತಿಗಳನ್ನು ವೀಕ್ಷಿಸಬಹುದು.

No Comments

Leave A Comment