Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ಉಡುಪಿಯಲ್ಲಿ ಮರೈನ್ ಪೊಲೀಸ್ ತರಬೇತಿ ಕೇಂದ್ರ: ಗೃಹ ಸಚಿವ ಡಾ.ಜಿ.ಪರಮೇಶ್ವರ್

ಉಡುಪಿ: ಕರಾವಳಿ ಕಾವಲು ಪೊಲೀಸರಿಗೆ ವಿಶೇಷ ತರಬೇತಿ ನೀಡುವ ಉದ್ದೇಶದಿಂದ ಉಡುಪಿಯಲ್ಲಿ ಮರೈನ್ ಪೊಲೀಸ್ ತರಬೇತಿ ಕೇಂದ್ರ ತೆರೆಯಲಾಗುವುದು ಎಂದು ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಅವರು ಶುಕ್ರವಾರ ಗಂಗೊಳ್ಳಿಯಲ್ಲಿ ಕರಾವಳಿ ಕಾವಲು ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಕರಾವಳಿ ಪ್ರದೇಶದಲ್ಲಿ ನಡೆಯುವ ಅಪರಾಧ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದ ಕರಾವಳಿ ಕಾವಲು ಪಡೆಗೆ ವಿಶೇಷ ತರಬೇತಿ ನೀಡುವ ಅವಶ್ಯಕತೆಯಿದೆ, ಕರಾವಳಿ ಪೊಲೀಸರಿಗೆ ಸಮುದ್ರದಲ್ಲಿ ಈಜುವ ಬಗ್ಗೆ, ಸಮುದ್ರದಲ್ಲಿ ಆಪತ್ತಿನಲ್ಲಿರುವವರನ್ನು ರಕ್ಷಿಸುವ ಬಗ್ಗೆ ವಿಶೇಷ ತರಬೇತಿಯ ಅಗತ್ಯವಿದೆ; ಈ ಕುರಿತು ಮರೈನ್ ಪೊಲೀಸ್ ತರಬೇತಿ ಕೇಂದ್ರ ಪ್ರಾರಂಭಿಸಲು ಈಗಾಗಲೇ ಐರೋಡಿ ಕೋಡಿಯಲ್ಲಿ 25 ಎಕರೆ ಜಾಗ ಗುರುತಿಸಲಾಗಿದೆ, ಅಲ್ಲದೇ ಸಮುದ್ರದ ಬಗ್ಗೆ ಮಾಹಿತಿ ಇರುವವರನ್ನು ಈ ಪಡೆಗೆ ಸೇರಿಸಿಕೊಳ್ಳುವ ಉದ್ದೇಶದಿಂದ ಕರಾವಳಿ ತೀರದ ಅರ್ಹ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಆದ್ಯತೆ ನೀಡಲಾಗುವುದು ಹಾಗೂ ಕರಾವಳಿ ಕಾವಲು ಪಡೆಯ ಸಮವಸ್ತ್ರವನ್ನು ಬದಲಾಯಿಸುವ ಚಿಂತನೆ ಇದೆ ಎಂದು ಸಚಿವರು ತಿಳಿಸಿದರು.

ರಾಜ್ಯದ 350ಕಿ.ಮೀ ವ್ಯಾಪ್ತಿಯ ಕರಾವಳಿ ಪ್ರದೇಶದಲ್ಲಿ ಸೂಕ್ತ ಭದ್ರತೆ ಮಾತ್ರವಲ್ಲದೇ, ಸಮುದ್ರದಲ್ಲಿ ಸಂಕಷ್ಟದಲ್ಲಿರುವ ಮೀನುಗಾರರನ್ನು ರಕ್ಷಿಸುವ ಉದ್ದೇಶದಿಂದ ಕರಾವಳಿ ಕಾವಲು ಪಡೆಗೆ ಹೆಲಿಕ್ಯಾಪ್ಟರ್ ಒಗದಿಸುವ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.

ರಾಜ್ಯದಲ್ಲಿ ಪೊಲೀಸರ ವೇತನ ಹೆಚ್ಚಳ ಕುರಿತಂತೆ ಔರಾದ್ಕರ್ ಸಮಿತಿ ನೀಡಿರುವ ವರದಿಯಲ್ಲಿನ ಶಿಫಾರಸ್ಸುಗಳನ್ನು ವೇತನ ಆಯೋಗ ರಚನೆಯ ಸಂದರ್ಭದಲ್ಲಿ ಸೇರಿಸಲಾಗುವುದು, 2017 ರಲ್ಲಿ ವೇತನ ಅಯೋಗ ರಚನೆಯಾಗಲಿದೆ, ಪೊಲೀಸರಿಗೆ ಫೆಬ್ರವರಿ ಮಾಹೆಯಿಂದ ರೂ.2,000 ಗಳ ವಿಶೇಷ ಭತ್ಯೆಯನ್ನು ಮಂಜೂರು ಮಾಡಲಾಗುವುದು, ಪೊಲೀಸ್ ಇಲಾಖೆ ಶಿಸ್ತಿಗೆ ಹೆಸರಾಗಿದ್ದು, ಯಾವುದೇ ಕಾರಣಕ್ಕೂ ಪೊಲೀಸರ ಶಿಸ್ತು ಉಲ್ಲಂಘನೆ ಸಲ್ಲದು, ಪೊಲೀಸ್ ಸಿಬ್ಬಂದಿಯ ಎಲ್ಲಾ ರೀತಿಯ ಮನವಿಗಳಿಗೆ ಸ್ಪಂದಿಸಲಾಗುವುದು ಎಂದು ಸಚಿವರು ಹೇಳಿದರು.

ತಮ್ಮ ಸರ್ಕಾರ ಬಂದ ನಂತರ ೨೦೦೦೦ ಕಾನ್ಸ್‌ಟೇಬಲ್‌ಗಳ ನೇಮಕ ಆಗಿದೆ, 1000ಎಸ್.ಐ ಗಳ ನೇಮಕ ಪ್ರಕ್ರಿಯೆ ನಡೆಯುತ್ತಿದೆ, ಪೊಲೀಸರಿಗೆ 11,000ಮನೆಗಳ ವಸತಿ ಗೃಹ ನಿರ್ಮಾಣ ಕಾಮಗಾರಿ ನಡೆಯುತ್ತಿದೆ, ಪೊಲೀಸ್ ಸಿಬ್ಬಂದಿ ಕೊರತೆ ನೀಗಿಸಲಾಗಿದೆ, ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಮಹಿಳಾ ಪೊಲೀಸ್ ಠಾಣೆಗಳನ್ನು ಪ್ರಾರಂಭಿಸಲಾಗುತ್ತಿದ್ದು, ಈ ಠಾಣೆಗಳಲ್ಲಿ ಮಹಿಳಾ ಪೊಲೀಸರೇ ಎಲ್ಲಾ ರೀತಿಯ ಕರ್ತವ್ಯ ನಿರ್ವಹಿಸಲಿದ್ದಾರೆ, 10ವರ್ಷ ಸೇವೆ ಸಲ್ಲಿಸಿದ ಪ್ರತಿಯೊಬ್ಬರಿಗೂ ಪ್ರಮೋಷನ್ ನೀಡಲು ಕ್ರಮ ಕೈಗೊಂಡಿದ್ದು, 11,000 ಮಂದಿಗೆ ಪ್ರಮೋಷನ್ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಬೈಂದೂರು ಶಾಸಕ ಗೋಪಾಲ ಪೂಜಾರಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.

ಆಂತರಿಕಾ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಧಾನ ಪರಿಷತ್ ಶಾಸಕ ಕೆ.ಪ್ರತಾಪಚಂದ್ರ ಶೆಟ್ಟಿ, ರಾಜ್ಯ ಅಲ್ಪ ಸಂಖ್ಯಾತರ ನಿಗಮ ಅಧ್ಯಕ್ಷ ಗಫೂರ್, ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಹರಿಶೇಖರನ್ ಪಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್, ಗಂಗೊಳ್ಳಿ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ ಬಾಲಕೃಷ್ಣ ಸ್ವಾಗತಿಸಿದರು, ಕರಾವಳಿ ಕಾವಲು ಪಡೆಯ ಪೊಲೀಸ್ ಉಪಾಧೀಕ್ಷಕ ಟಿ.ಆರ್. ಜೈಶಂಕರ್ ವಂದಿಸಿದರು. ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ನ ಬಿ. ಮನಮೋಹನ ರಾವ್ ನಿರೂಪಿಸಿದರು.

No Comments

Leave A Comment