Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಕಾಸರಗೋಡು: ಹರತಾಳ; ಜನಜೀವನ ಅಸ್ತವ್ಯಸ್ತ

ಕಾಸರಗೋಡು: ಸಿಪಿಎಂನ ಹಿಂಸೆ ಮತ್ತು ಅಸಹಿಷ್ಣುತೆಯನ್ನು ಪ್ರತಿಭಟಿಸಿ ಬಿಜೆಪಿ ತೃಕ್ಕರಿಪುರ ವಿಧಾನಸಭಾ ಕ್ಷೇತ್ರ ಸಮಿತಿ ನೇತೃತ್ವದಲ್ಲಿ ಚೆರ್ವತ್ತೂರಿನಿಂದ ಆರಂಭಿಸಿದ ಪಾದಯಾತ್ರೆಗೆ ಸೋಮವಾರ ಸಿಪಿಎಂ ಕಾರ್ಯಕರ್ತರು ನಡೆಸಿದ ಕಲ್ಲೆಸೆತ ಪ್ರತಿಭಟಿಸಿ ಬಿಜೆಪಿ ಕರೆ ನೀಡಿದ ಕಾಸರಗೋಡು ಜಿಲ್ಲಾ ಹರತಾಳದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿತು. ಅಲ್ಲಲ್ಲಿ ಹಿಂಸೆ, ಕಲ್ಲೆಸೆತ, ವಾಹನಗಳಿಗೆ ತಡೆ ಹಿನ್ನೆಲೆಯಲ್ಲಿ ಪೊಲೀಸರು ಲಾಠಿಪ್ರಹಾರ, ಅಶ್ರುವಾಯು ಪ್ರಯೋಗ ಮಾಡಿದರು. ಹರತಾಳ ಸಂದರ್ಭದಲ್ಲಿ ಪೊಲೀಸ್‌ ಮತ್ತು ಬಿಜೆಪಿ ಕಾರ್ಯಕರ್ತನೋರ್ವ ಗಾಯಗೊಂಡಿದ್ದಾರೆ.

ಬೃಹತ್‌ ಮೆರವಣಿಗೆ: ಮಂಗಳವಾರ ಬೆಳಗ್ಗೆ ಕರಂದಕ್ಕಾಡ್‌ನ‌ಲ್ಲಿರುವ ಬಿಜೆಪಿ ಜಿಲ್ಲಾ ಕಾರ್ಯಾಲಯ ಪರಿಸರದಿಂದ ಬಿಜೆಪಿ ಕಾರ್ಯಕರ್ತರು ನಡೆಸಿದ ಬೃಹತ್‌ ಮೆರವಣಿಗೆ ಕಾಸರಗೋಡು ನಗರದ ಪ್ರಮುಖ ಬೀದಿಯಲ್ಲಿ ಸಾಗಿ ಕಾರ್ಯಾಲಯದ ಬಳಿ ಸಮಾಪನಗೊಂಡಿತು. ಮೆರವಣಿಗೆಗೆ ಬಿಜೆಪಿ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಸುರೇಂದ್ರನ್‌, ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್‌, ನೇತಾರರಾದ ವಿ. ಬಾಲಕೃಷ್ಣ ಶೆಟ್ಟಿ, ಪಿ. ರಮೇಶ್‌, ರವೀಶ ತಂತ್ರಿ ಕುಂಟಾರು ಮೊದಲಾದವರು ನೇತೃತ್ವ ನೀಡಿದರು.

ಹರತಾಳದ ಹಿನ್ನೆಲೆಯಲ್ಲಿ ರಸ್ತೆಗಿಳಿದ ವಾಹನಗಳನ್ನು ಬಿಜೆಪಿ ಕಾರ್ಯಕರ್ತರು ತಡೆದರು. ತೆರೆದು ಕಾರ್ಯಾಚರಿಸುತ್ತಿದ್ದ ಅಂಗಡಿಗಳು, ಬ್ಯಾಂಕ್‌ ಮೊದಲಾದ ಸಂಸ್ಥೆಗಳನ್ನು ಮುಚ್ಚಿಸಿದರು. ನಗರದಲ್ಲಿ ಅಂಗಡಿಮುಂಗಟ್ಟುಗಳು ಪೂರ್ಣವಾಗಿ ಮುಚ್ಚಿದ್ದು ಸಾರಿಗೆ ಮತ್ತು ಖಾಸಗಿ ಬಸ್‌ಗಳು ರಸ್ತೆಗಿಳಿಯಲಿಲ್ಲ. ಕಾಸರಗೋಡು – ಮಂಗಳೂರು ಬಸ್‌ಗಳು ಓಡಲಿಲ್ಲ. ಸರಕಾರಿ ಕಚೇರಿಗಳು ಬಹುತೇಕ ಮುಚ್ಚಿದ್ದವು. ಕೆಲವು ಕಚೇರಿಗಳಲ್ಲಿ ಹಾಜರಾತಿ ಕಡಿಮೆಯಾಗಿತ್ತು. ಶಾಲಾ ಕಾಲೇಜುಗಳು ತೆರೆಯಲಿಲ್ಲ.

ಕಲ್ಲೆಸೆತ, ಹಾನಿ: ಎಂ.ಜಿ. ರೋಡ್‌ನ‌ ಸಿಪಿಎಂ ಲೋಕಲ್‌ ಸಮಿತಿ ಕಚೇರಿಗೆ ಕಲ್ಲೆಸೆಯಲಾಯಿತು. ನಗರದಲ್ಲಿ ಸ್ಥಾಪಿಸಿದ್ದ ಇತರ ರಾಜಕೀಯ ಪಕ್ಷಗಳ ಫ್ಲೆಕ್ಸ್‌ಗಳು, ಬ್ಯಾನರ್‌ಗಳನ್ನು ಹಾನಿಗೊಳಿಸಲಾಯಿತು. ಪಿಲಿಕುಂಜೆಯಲ್ಲಿ ತೆರೆದಿದ್ದ ಲ್ಯಾಬ್‌ಗೆ ಕಲ್ಲೆಸೆಯಲಾಯಿತು. ಸಿಪಿಎಂ ನಿಯಂತ್ರಣದಲ್ಲಿರುವ ಕಾಸರಗೋಡು ಸರ್ವೀಸ್‌ ಸಹಕಾರಿ ಬ್ಯಾಂಕ್‌ ಕಟ್ಟಡಕ್ಕೆ, ಇಂಡಿಯನ್‌ ಕಾಫಿ ಹೌಸ್‌ಗೆ ಕಲ್ಲೆಸೆಯಲಾಯಿತು. ಕಲ್ಲೆಸೆತದಿಂದ ಕಾಸರಗೋಡು ನಗರ ಠಾಣೆಯ ಪೊಲೀಸ್‌ ಸಜೀವನ್‌ ಕಳತ್ತಿಲ್‌ (38) ಗಾಯಗೊಂಡಿದ್ದಾರೆ. ಲಾಠಿ ಪ್ರಹಾರದಲ್ಲಿ ಬಿಜೆಪಿ ಕಾರ್ಯಕರ್ತ ಗಾಯಗೊಂಡಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ.

No Comments

Leave A Comment