Log In
BREAKING NEWS >
ಕೇಂದ್ರ ಸಚಿವ ಅನಂತ್ ಕುಮಾರ್ ನಿಧನ; ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಿಗೆ ರಜೆ 3 ದಿನ ಶೋಕಾಚರಣೆ........20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಮಂಡ್ಯ: ಜೆಡಿಎಸ್‌ ಕಾರ್ಯಕರ್ತನ ಕೊಲೆ; ಮನೆ ಧ್ವಂಸ, ವಾಹನಗಳಿಗೆ ಬೆಂಕಿ

01-krpet-03

ಕೆ.ಆರ್‌.ಪೇಟೆ: ಮಂಡ್ಯ ಜಿಲ್ಲೆಯಲ್ಲಿ ರಾಜಕೀಯ ವೈಷಮ್ಯದಿಂದ ಮತ್ತೂಬ್ಬ ಜೆಡಿಎಸ್‌ ಕಾರ್ಯಕರ್ತನ ಕೊಲೆಯಾಗಿದೆ. ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆ ತಾಲೂಕಿನ ಮುರುಕನಹಳ್ಳಿ ಗ್ರಾಮದಲ್ಲಿ ಹೊಸ ವರ್ಷದ ಆಚರಣೆಗೆ ಕೆಲವೇ ಕ್ಷಣಗಳ ಮುನ್ನ ಘಟನೆ ನಡೆದಿದೆ.

ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಆರೋಪಿಗಳ ಮನೆ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದಾರೆ. ಹೊಸ ವರ್ಷಾಚರಣೆ ಆಕ್ರೋಶಕ್ಕೆ ತಿರುಗಿದಂತಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಈ ಘಟನೆಯಿಂದ ಜಿಲ್ಲೆಯಲ್ಲಿ ಡಿಸೆಂಬರ್‌ ಮಾಸದಲ್ಲೇ ಜೆಡಿಎಸ್‌ ಕಾರ್ಯಕರ್ತರ ನಾಲ್ಕನೇ ಕೊಲೆಯಾದಂತಾಗಿದೆ.

ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್‌.ವಿಜಯಕುಮಾರ್‌ ಅವರ ಸಂಬಂಧಿ ಹರೀಶ್‌ ಅಲಿಯಾಸ್‌ ಗುಂಡ (32) ಎಂಬಾತನೇ ಕೊಲೆಯಾದವ. ಗ್ರಾಮದ ಕಾಂಗ್ರೆಸ್‌ ಮುಖಂಡ ಎಂ.ಸಿ.ಕುಮಾರ್‌ ಅವರ ಪುತ್ರ ಎಂ.ಸಿ.ರಕ್ಷಿತ್‌(22) ಮತ್ತು ವೆಂಕಟೇಶ್‌ ಎನ್ನುವವರ ಪುತ್ರ ಯೋಗೇಶ್‌(28) ತಮ್ಮ ಇತರೆ ಸ್ನೇಹಿತರೊಡಗೂಡಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆಂದು ಕೊಲೆಯ ಪ್ರತ್ಯಕ್ಷ ಸಾಕ್ಷಿ ಎನ್ನಲಾದ ಹರೀಶನ ಸ್ನೇಹಿತ ಕೃಷ್ಣೇಗೌಡ ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಘಟನೆಯ ವಿವರ: ಡಿಸೆಂಬರ್‌ 31ರ ರಾತ್ರಿ 11.30ರ ಸುಮಾರಿಗೆ ಹರೀಶ್‌ ತನ್ನ ಮನೆಗೆ ಬಂದು ಬೈಕ್‌ನ್ನು ನಿಲ್ಲಿಸಿ ಹೊಸ ವರ್ಷದ ಆಚರಣೆಯಲ್ಲಿ ಪಾಲ್ಗೊಳ್ಳಲು ಗ್ರಾಮದ ಮುಂಭಾಗದ ಮೈಸೂರು-ಚನ್ನರಾಯಪಟ್ಟಣ ಮುಖ್ಯ ರಸ್ತೆಗೆ ಬಂದಿದ್ದಾನೆ. ಈ ವೇಳೆ ಪೆಟ್ಟಿಗೆ ಅಂಗಡಿ ಮುಂದೆ ಹರೀಶನ ಮೇಲೆ ರಕ್ಷಿತ್‌ ಮತ್ತು ಯೋಗೇಶ್‌ ನೇತೃತ್ವದ ಗುಂಪು ದಾಳಿ ನಡೆಸಿದೆ. ಕಣ್ಣುಗಳಿಗೆ ಇರಿಯಲಾಗಿದೆ. ಅಲ್ಲಿಂದ ಹರೀಶ್‌ ಕಾಪಾಡಿ ಎಂದು ಕೂಗಿಕೊಳ್ಳುತ್ತಾ ಓಡಲು ಆರಂಭಿಸಿದ್ದಾನೆ. ಆತನನ್ನು ಅಟ್ಟಾಡಿಸಿಕೊಂಡು ಬಂದ ಗುಂಪು ಆತನ ಮೇಲೆ ಮತ್ತೆ ದಾಳಿ ನಡೆಸಿ ಎದೆ ಸೇರಿದಂತೆ ಮತ್ತಿತರರೆಡೆಗಳಲ್ಲಿ ಚಾಕುವಿನಿಂದ ಇರಿಯಲಾಗಿದೆ. ಈ ವೇಳೆ ಹರೀಶ್‌ನ ನೆರವಿಗೆ ಬಂದ ಸ್ನೇಹಿತ ಕೃಷ್ಣೇಗೌಡರ ಕೈಗೂ ಇರಿದು ಗಾಯಗೊಳಿಸಲಾಗಿದೆ. ಬಳಿಕ ಅಲ್ಲಿಂದ ಕತ್ತಲಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ.

ಲಾಠಿ ಚಾರ್ಜ್‌: ಹರೀಶನ ಕೊಲೆಯ ಸುದ್ದಿ ತಿಳಿಯುತ್ತಿದ್ದಂತೆ ನಡುರಾತ್ರಿಯಲ್ಲೇ ಗ್ರಾಮಸ್ಥರು ಆರೋಪಿಗಳಾದ ರಕ್ಷಿತ್‌ ಮತ್ತು ಯೋಗೇಶ್‌ ಅವರ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಮನೆ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಇದರಿಂದ ಮನೆಯಲ್ಲಿನ ಪೀಠೊಪಕರಣಗಳು ಸುಟ್ಟು ಬೆಂಕಿ ಆಹುತಿಯಾಗಿವೆ. 1 ಬೋಲೆರೋ, 2 ಟಾಟಾ ಏಸ್‌, ಬೈಕ್‌ ಸಂಪೂರ್ಣ ಸುಟ್ಟಿವೆ. ಅಗ್ನಿ ಶಾಮಕ ದಳ ಆಗಮಿಸಿ ಬೆಂಕಿ ನಂದಿಸಿತು. ಪೊಲೀಸರು ಲಾಠಿ ಚಾರ್ಜ್‌ ನಡೆಸಿ ಪರಿಸ್ಥಿತಿ ಹತೋಟಿಗೆ ತಂದರು.

ಬಳಿಕ ಶವವನ್ನು ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ಪೊಲೀಸರು ಸಾಗಿಸಿದರು. ಭಾನುವಾರ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಸಂಜೆ ವೇಳೆ ಪೊಲೀಸ್‌ ಬಿಗಿ ಭದ್ರತೆಯಲ್ಲಿ  ಅಂತ್ಯಸಂಸ್ಕಾರ ನಡೆಸಲಾಗಿದೆ.

ಕಾರಣವೇನು? 
ಕಳೆದ ಗ್ರಾಮ ಪಂಚಾಯತಿ ಚುನಾವಣೆ ವೇಳೆ ಸಂದರ್ಭದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರು ಪರಸ್ಪರ ಮಾರಾಮಾರಿ ನಡೆದಿತ್ತು. ಮರುಕನಹಳ್ಳಿ ಗ್ರಾಮದ ಐದೂ ಸ್ಥಾನಗಳಲ್ಲಿ ಜೆಡಿಎಸ್‌ ಪಕ್ಷವು ಗೆದ್ದುಕೊಂಡಿತ್ತು. ಅನಂತರ ನಡೆದ ತಾಪಂ ಚುನಾವಣೆಯಲ್ಲೂ ಈಗ ಸಾವನ್ನಪ್ಪಿರುವ ಹರೀಶ್‌ ಅವರ ಸೋದರ ಮಾವ ಎಂ.ಎನ್‌.ವಿಜಯಕುಮಾರ್‌ ಜೆಡಿಎಸ್‌ನಿಂದ ಗೆದ್ದಿದ್ದರು. ಈ ವೇಳೆಯಲ್ಲೂ ಎರಡು ಗುಂಪುಗಳ ಮಧ್ಯೆ ಜಗಳವಾಗಿ ಪೊಲೀಸ್‌ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿವೆ. ಈ ಕಾರಣದಿಂದಾಗಿ ಈ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ.

No Comments

Leave A Comment