Log In
BREAKING NEWS >
2020 ಮು೦ದಿನ ಪರ್ಯಾಯ ಮಹೋತ್ಸವವನ್ನು ನೆರವೇರಿಸಲಿರುವ ಶ್ರೀಅದಮಾರು ಮಠದ ಪರ್ಯಾಯಕ್ಕೆ ಶುಕ್ರವಾರದ೦ದು ಬಾಳೆ ಮಹೂರ್ತ-ಬೆಳಿಗ್ಗೆ 7.30ಕ್ಕೆ

4,703 ಕೋಟಿ ಬರ ಪರಿಹಾರಕ್ಕೆ ಮೊರೆ: ಮಹಾದಾಯಿ ಮಧ್ಯಸ್ಥಿಕೆ ಬಗ್ಗೆ ಮೌನ

45ಹೊಸದಿಲ್ಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಸರ್ವ ಪಕ್ಷಗಳ ನಿಯೋಗ ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದು, ಪ್ರಕೃತಿ ವಿಕೋಪದಿಂದಾಗಿ ತೀವ್ರ ಬಾಧಿತವಾಗಿರುವ ರಾಜ್ಯಕ್ಕೆ 4,702.54 ಕೋಟಿ ರೂ.ಗಳ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದೆ. ಅಲ್ಲದೆ, ಮಹಾದಾಯಿ ವಿವಾದ ಬಗೆಹರಿಸಲು ಮಧ್ಯಸ್ಥಿಕೆ ವಹಿಸಬೇಕು, ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿ ಬಾಕಿ ಇರುವ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದೆ.

ಸಿದ್ದರಾಮಯ್ಯ ನೇತೃತ್ವದ ರಾಜ್ಯದ ನಿಯೋಗ ಶುಕ್ರವಾರ ಸಂಜೆ ಪ್ರಧಾನಿ ಅವರನ್ನು ಲೋಕ ಕಲ್ಯಾಣ ಮಾರ್ಗದಲ್ಲಿರುವ ಅವರ ನಿವಾಸದಲ್ಲಿ ಭೇಟಿ ಮಾಡಿ, ಸುಮಾರು 30 ನಿಮಿಷಗಳ ಕಾಲ ಮಾತುಕತೆ ನಡೆಸಿತು. ನಿಯೋಗದ ಅಹವಾಲನ್ನು ಶಾಂತಚಿತ್ತದಿಂದ ಆಲಿಸಿದ ಮೋದಿ, ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಪರಿಹಾರ ನೀಡಬೇಕಾದರೆ ಕೇಂದ್ರ ಗೃಹ ಸಚಿವರ ನೇತೃತ್ವದಲ್ಲಿ ವಿತ್ತ ಸಚಿವರು ಮತ್ತು ಕೃಷಿ ಸಚಿವರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿ ಸಭೆ ನಡೆಸಬೇಕಿದೆ. ಜನವರಿ 4ಕ್ಕೆ ಈ ಸಭೆ ನಡೆಯಲಿದೆ ಎಂದು ತಿಳಿಸಿದರು. ಆದರೆ, ಮಹಾದಾಯಿ ಸಮಸ್ಯೆ ಬಗೆಹರಿಸಲು ಮಧ್ಯಸ್ಥಿಕೆ ವಹಿಸುವ ಬಗ್ಗೆ ಯಾವುದೇ ಭರವಸೆ ನೀಡಲಿಲ್ಲ.

ಭೇಟಿ ಬಳಿಕ ಕರ್ನಾಟಕ ಭವನದಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, ಭೇಟಿಯ ವಿವರ ನೀಡಿದರು. “ರಾಜ್ಯದ 139 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸ ಲಾಗಿದೆ. ಬರದಿಂದ 36.35 ಲಕ್ಷ ಹೆಕ್ಟೇರ್‌ ಪ್ರದೇಶ ದಲ್ಲಿನ ಕೃಷಿಗೆ ಹಾನಿಯಾಗಿದ್ದು,35 ಲಕ್ಷ ರೈತರಿಗೆ ಒಟ್ಟು 17,183 ಕೋಟಿ ರೂ.ನಷ್ಟು ನಷ್ಟವಾಗಿದೆ. ರಾಜ್ಯ ಸತತ 6 ವರ್ಷಗಳಿಂದ ಬರ ಎದುರಿಸುತ್ತಿದೆ. ಬರ ಪರಿಹಾರವಾಗಿ 4702.54 ಕೋಟಿ ರೂ.ಬಿಡುಗಡೆ ಮಾಡುವಂತೆ ಪ್ರಧಾನಿಯನ್ನು ಕೋರಲಾಗಿದೆ’ ಎಂದರು.

ನೆರವಿಗೆ ಮನವಿ: ಇದೇ ವೇಳೆ, ಉತ್ತರ ಕರ್ನಾಟಕದ 5 ಜಿಲ್ಲೆಗಳಲ್ಲಿ ಸೆಪ್ಟೆಂಬರ್‌ ತಿಂಗಳಿನಲ್ಲಿ ಭಾರಿ ಮಳೆ ಬಂದು ಹಾನಿಯಾಗಿದೆ. ನೆರೆ ಪರಿಹಾರವಾಗಿ 386.44 ಕೋಟಿ ರೂ. ನೆರವನ್ನು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ನೀಡಬೇಕು ಎಂದು ಕೋರಲಾಗಿದೆ. ಅಲ್ಲದೆ, ನರೇಗಾ ಯೋಜನೆಯಡಿ ರಾಜ್ಯಕ್ಕೆ ಕೇಂದ್ರದಿಂದ 2,856.72 ಕೋಟಿ ರೂ.ಗಳಷ್ಟು ಬಾಕಿ ಇದೆ. ಅದನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಪ್ರಧಾನಿಯನ್ನು ಕೋರಲಾಗಿದೆ. ಜತೆಗೆ, ಈಗ ಇರುವ 100 ದಿನಗಳ ಮಾನವ ಕೆಲಸದ ಮಿತಿಯನ್ನು 200 ದಿನಗಳಿಗೆ ಏರಿಸಿದರೆ ಬರ ಪೀಡಿತ ಜನರಿಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಲಾಗಿದೆ ಎಂದರು.

ಮಹಾದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಮಹಾದಾಯಿ ನ್ಯಾಯಮಂಡಳಿ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮಧ್ಯಸ್ಥಿಕೆ ಕೋರಲಾಯಿತು. ಆದರೆ ಅವರು ಏನೂ ಭರವಸೆ ಕೊಟ್ಟಿಲ್ಲ. ನೋಡೋಣ ಎಂದರು. ಶಾಂತ ಚಿತ್ತದಿಂದ ನಮ್ಮೆಲ್ಲಾ ಬೇಡಿಕೆಗಳನ್ನು ಆಲಿಸಿದರು ಎಂದು ಹೇಳಿದರು.

ಕೇಂದ್ರ ಸಚಿವರಾದ ಅನಂತ ಕುಮಾರ್‌, ಡಿ.ವಿ.ಸದಾನಂದ ಗೌಡ, ನಿರ್ಮಲಾ ಸೀತಾರಾಮನ್‌, ರಮೇಶ್‌ ಜಿಗಜಿಣಗಿ, ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಎಚ್‌.ಕೆ. ಪಾಟೀಲ್‌, ಕೃಷ್ಣ ಬೈರೇಗೌಡ, ವಿಧಾನಸಭೆಯಲ್ಲಿ ಬಿಜೆಪಿ ನಾಯಕರಾಗಿರುವ ಜಗದೀಶ ಶೆಟ್ಟರ್‌, ವಿಧಾನಪರಿಷತ್‌ನಲ್ಲಿ ಬಿಜೆಪಿ ನಾಯಕರಾಗಿರುವ ಕೆ.ಎಸ್‌.ಈಶ್ವರಪ್ಪ, ಜೆಡಿಎಸ್‌ ನಾಯಕ ಎಚ್‌. ಡಿ. ರೇವಣ್ಣ, ಅಪ್ಪಾಜಿ ಗೌಡ, ರಾಜ್ಯ ಸರಕಾರದ ದಿಲ್ಲಿ ಪ್ರತಿನಿಧಿ ಅಪ್ಪಾಜಿ ನಾಡಗೌಡ, ರಾಜ್ಯದ ಮುಖ್ಯ ಕಾರ್ಯದರ್ಶಿ ಸುಭಾಷ್‌ ಕುಂಟಿಯಾ ನಿಯೋಗದಲ್ಲಿದ್ದರು.

No Comments

Leave A Comment