Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳೊಂದಿಗೆ ಸಮಾಲೋಚನೆ ಚೆಕ್ ಪುಸ್ತಕದಲ್ಲೂ ಆಧಾರ್‌?

check-leadನವದೆಹಲಿ: ಬ್ಯಾಂಕ್‌ ಚೆಕ್‌ ಪುಸ್ತಕಗಳಲ್ಲಿ ಆಧಾರ್‌ ಸಂಖ್ಯೆ ನಮೂದಿಸುವುದನ್ನು ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಗಂಭೀರವಾಗಿ ಯೋಚಿಸುತ್ತಿದೆ.
ಚೆಕ್‌ ಮೂಲಕ ನಡೆಯುವ ಹಣಕಾಸಿನ ವಹಿವಾಟು ಮತ್ತು ಅದರ ದುರ್ಬಳಕೆಯ ಮೇಲೆ ನಿಗಾ ಇಡುವ ಉದ್ದೇಶದಿಂದ ಸರ್ಕಾರ ಈ ಯೋಚನೆ ಮಾಡಿದೆ.

ಎಲ್ಲ ರೀತಿಯ ಬ್ಯಾಂಕ್‌ ವಹಿವಾಟು ಗಳನ್ನು ಆಧಾರ್‌ ಸಂಖ್ಯೆಗೆ ಜೋಡಿಸುವ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯವು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡಾ ಸೇರಿದಂತೆ ಇತರೆ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳೊಂದಿಗೆ ಸಮಾಲೋಚನೆ ನಡೆಸುತ್ತಿದೆ.

ಈ ಯೋಜನೆ ಜಾರಿಗೆ ಬರುವವರೆಗೆ, ಚೆಕ್‌ ಮೂಲಕ ವಹಿವಾಟು ನಡೆಸುವಾಗ ಚೆಕ್‌ ಹಾಳೆಯಲ್ಲಿ ಆಧಾರ್‌ ಸಂಖ್ಯೆ ಬರೆಯುವಂತೆ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಸೂಚಿಸಬಹುದು ಎಂದು ಮೂಲಗಳು ಹೇಳಿವೆ.

ಸದ್ಯ, ಚೆಕ್‌ ಹಾಳೆಯಲ್ಲಿ ಬ್ಯಾಂಕಿನ ವಿವರಗಳ ಜೊತೆಗೆ ಗ್ರಾಹಕರ ಹೆಸರು ಮತ್ತು ಉಳಿತಾಯ ಖಾತೆ ಸಂಖ್ಯೆಯನ್ನು ಮುದ್ರಿಸಲಾಗುತ್ತಿದೆ.
ಬ್ಯಾಂಕ್‌ ಆಫ್‌ ಇಂಡಿಯಾವು  ಈಗಾಗಲೇ ಚೆಕ್‌ ಪುಸ್ತಕಗಳಲ್ಲಿ ಆಧಾರ್‌ ಸಂಖ್ಯೆ ನಮೂದಿಸುವ ಕಾರ್ಯ ಆರಂಭಿಸಿದೆ. ಆದರೆ, ಎಲ್ಲ ಖಾತೆದಾರರಿಗೂ ಇದನ್ನು ಅನ್ವಯಿಸಿಲ್ಲ  ಎನ್ನಲಾಗಿದೆ.

500ಕ್ಕೂ ಹೆಚ್ಚು  ಕಲ್ಯಾಣ ಯೋಜನೆಗಳನ್ನು ನೇರ ಹಣ ವರ್ಗಾವಣೆ ಯೋಜನೆ (ಡಿಬಿಟಿ) ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ.
ಚೆಕ್‌ ಪುಸ್ತಕಗಳಲ್ಲಿ ಆಧಾರ್‌ ಸಂಖ್ಯೆ ನಮೂದಿಸುವುದರಿಂದ, ಡಿಜಿಟಲ್‌ ಪಾವತಿ ಮತ್ತು ಹಣ ಪಾವತಿಸಿ ರಸೀದಿ ಪಡೆಯುವ ವ್ಯವಸ್ಥೆ ಅಷ್ಟೇನು ಯಶಸ್ವಿಯಾಗದ ಕ್ಷೇತ್ರಗಳಲ್ಲಿ ನೇರ ಹಣ ವರ್ಗಾವಣೆ ಯೋಜನೆಯ ಪರಿಣಾಮ ಕಾರಿ ಅನುಷ್ಠಾನ ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ, 14 ಕೋಟಿ ಆಧಾರ್‌ ಸಂಖ್ಯೆಗಳನ್ನು ಮೊಬೈಲ್‌ ಫೋನ್‌ ಮತ್ತು ಬ್ಯಾಂಕ್‌ ಖಾತೆಗಳಿಗೆ ಜೋಡಿಸಲಾಗಿದೆ. ಮಾರ್ಚ್ 31ರ ಒಳಗಾಗಿ ಎಲ್ಲ ಆಧಾರ್ ಸಂಖ್ಯೆಗಳನ್ನು ಜೋಡಿಸುವ ಪಣವನ್ನು ಕೇಂದ್ರ ತೊಟ್ಟಿದೆ.
*
ರಾಜಕೀಯ ಲಾಭದ ನಿರ್ಧಾರ ಅಲ್ಲ: ಪ್ರಧಾನಿ
ನವದೆಹಲಿ:
ನೋಟು ರದ್ದು ನಿರ್ಧಾರವು ‘ರಾಜಕೀಯ ಲಾಭಕ್ಕಾಗಿ’ ಏಕಾಏಕಿ ತೆಗೆದುಕೊಂಡಿದ್ದಲ್ಲ ಎಂದು ಪ್ರಧಾನಿ ಮೋದಿ ಅವರು ಸ್ಪಷ್ಟಪಡಿಸಿದರು. ಅದು ಅರ್ಥ ವ್ಯವಸ್ಥೆ ಮೇಲೆ ದೀರ್ಘಕಾಲೀನ  ಪರಿಣಾಮ ಬೀರುವಂತಹ ತೀರ್ಮಾನವಾಗಿದ್ದು, ಕಪ್ಪು ಹಣವನ್ನೆಲ್ಲ ಬಯಲಿಗೆಳೆದಿದೆ ಎಂದು ಹೇಳಿದರು.

‘ಇಂಡಿಯಾ ಟುಡೆ’ ನಿಯತಕಾಲಿಕೆಗೆ ನೀಡಿರುವ ಸಂದರ್ಶನದಲ್ಲಿ ಮೋದಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಕಪ್ಪು ಹಣ ಹೊಂದಿರುವವರನ್ನು ಬೆನ್ನು ಹತ್ತಲು ಸರ್ಕಾರಕ್ಕೆ ಇಚ್ಛಾಶಕ್ತಿ, ಜಾಣ್ಮೆ ಮತ್ತು ಸಂಪನ್ಮೂಲಗಳಿವೆ. ಸ್ಪಷ್ಟವಾದ ಮತ್ತು ಪ್ರಾಮಾಣಿಕ ಗುರಿ ಇಟ್ಟುಕೊಂಡು ಕ್ರಮ ಕೈಗೊಂಡರೆ, ಫಲಿತಾಂಶವನ್ನು ಎಲ್ಲರೂ ಕಾಣಬಹುದು. ನನ್ನ ಟೀಕಾಕಾರರು ಏನು ಬೇಕಾದರೂ ಹೇಳಬಹುದು. ಆದರೆ, ಇದರಿಂದ ಎಲ್ಲರಿಗೂ ಒಳ್ಳೆಯದಾಗಲಿ ಎಂದು ನಾನು ಬಯಸುತ್ತೇನೆಯೇ ಹೊರತು ವೈಯಕ್ತಿಕ ಲಾಭವನ್ನಲ್ಲ’ ಎಂದು ಹೇಳಿದರು.

ನ.8ರ ನಂತರ ಆರ್‌ಬಿಐ ಪದೇ ಪದೇ ನಿಯಮಗಳನ್ನು ಬದಲಾಯಿಸಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ, ‘ನೀತಿ’ ಮತ್ತು ‘ರಣ–ನೀತಿ’ ನಡುವಣ ವ್ಯತ್ಯಾಸ ಉಲ್ಲೇಖಿಸಿದರು. ‘ಈ ನಿರ್ಧಾರ ನಮ್ಮ ‘ನೀತಿ’ಯನ್ನು ಪ್ರತಿಫಲಿಸುತ್ತದೆ. ಈ ಬೃಹತ್‌ ಕಾರ್ಯಕ್ಕೆ ನಮ್ಮ ‘ರಣ–ನೀತಿ’ಯೂ ಭಿನ್ನವಾಗಿರಬೇಕಿತ್ತು. ಸಂಕ್ಷಿಪ್ತವಾಗಿ ಹೇಳುವುದಾದರೆ, ಹಿಂದಿನವರು ಹೇಳಿದಂತೆ ನಾವು ಯಾವಾಗಲೂ ವೈರಿಯಿಂದ ಒಂದು ಹೆಜ್ಜೆ ಮುಂದೆ ಇರಬೇಕು’ ಎಂದು ಪ್ರತಿಪಾದಿಸಿದರು.
*
‘ತೆರಿಗೆ ಸಂಗ್ರಹ ಹೆಚ್ಚಿದೆ’
ನವದೆಹಲಿ:
ನೋಟು ರದ್ದತಿಯ ನಂತರ ಆರ್ಥಿಕ ಸ್ಥಿತಿಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ ಎಂಬ ಟೀಕೆಯನ್ನು ತಳ್ಳಿಹಾಕಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ತೆರಿಗೆ ಸಂಗ್ರಹದಲ್ಲಿ ಹೆಚ್ಚಳ ಉಂಟಾಗಿದೆ ಎಂದರು.

ನೋಟು ರದ್ದು ನಿರ್ಧಾರದ ನಂತರ ಚಳಿಗಾಲದ ಬಿತ್ತನೆ ಕಾರ್ಯ ಸೇರಿದಂತೆ ಆರ್ಥಿಕ ಚಟುವಟಿಕೆ ಏರುಮುಖವಾಗಿದೆ ಎಂದು ಅವರು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.

₹500 ಮತ್ತು ₹1000 ಮುಖಬೆಲೆಯ ನೋಟುಗಳು ರದ್ದಾದ ನಂತರ ಹೊಸ ನೋಟು ಚಲಾವಣೆಯ ಪ್ರಕ್ರಿಯೆ ಅಡೆತಡೆ ಇಲ್ಲದೆ ನಡೆದಿದೆ ಹಾಗೂ ದೇಶದ ಯಾವುದೇ ಭಾಗದಲ್ಲಿ ಅಹಿತಕರ ಘಟನೆ ನಡೆದಿಲ್ಲ ಎಂದರು. ರದ್ದಾದ ಹಳೆ ನೋಟು ಜಮೆ ಮಾಡುವ ಗಡುವು ಮುಗಿಯುವ ಮುನ್ನಾ ದಿನ ಸುದ್ದಿ ಸಂಸ್ಥೆಯ ಜತೆ ಮಾತನಾಡಿದ ಹಣಕಾಸು ಸಚಿವರು, 2017–18ನೇ ಸಾಲಿನ ಬಜೆಟ್‌ ಪ್ರಸ್ತಾವಗಳು ಮತ್ತು ಜಿಡಿಪಿ ವೃದ್ಧಿಯಾಗುವ ಬಗ್ಗೆ ಚರ್ಚಿಸಲು ನಿರಾಕರಿಸಿದರು.

ಹಣ ಪಡೆಯಲು ವಿಧಿಸಿರುವ ಮಿತಿಯನ್ನು ಯಾವಾಗ ತೆಗೆದು ಹಾಕಲಾಗುತ್ತದೆ ಎಂದು ಕೇಳಿದಾಗ, ‘ಎಲ್ಲರ ಜತೆ ಸಮಾಲೋಚಿಸಿದ ನಂತರ ಆರ್‌ಬಿಐ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದರು. ನೋಟು ರದ್ದು  ಕ್ರಮವು ತ್ರೈಮಾಸಿಕ ಆರ್ಥಿಕ ಚಟುವಟಿಕೆಯ ಮೇಲೆ ಸ್ವಲ್ಪ ಪರಿಣಾಮ ಬೀರಬಹುದು. ದೀರ್ಘಾವಧಿಯಲ್ಲಿ ಅರ್ಥ ವ್ಯವಸ್ಥೆಗೆ ಅನುಕೂಲವಾಗಲಿದೆ ಎಂದು ಜೇಟ್ಲಿ ಹೇಳಿದರು.
*
ನಾಳೆ ಮೋದಿ ಮಾತು
ನವದೆಹಲಿ:
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ಡಿ.31) ಸಂಜೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನೋಟು ರದ್ದತಿಯ ನಂತರ ಹಳೆಯ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಜಮೆ ಮಾಡಲು ವಿಧಿಸಲಾಗಿದ್ದ 50 ದಿನಗಳ ಗಡುವು ಮುಗಿದ ನಂತರದ ಆರ್ಥಿಕ ನೀಲನಕ್ಷೆಯನ್ನು ಅವರು ದೇಶದ ಜನರ ಮುಂದಿಡುವ ನಿರೀಕ್ಷೆ ಇದೆ.

ನವೆಂಬರ್‌ 8ರಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದ ಮೋದಿ, ₹1000, ₹500 ಮುಖಬೆಲೆಯ ನೋಟುಗಳ ಚಲಾವಣೆ ರದ್ದು ಮಾಡುವ ಘೋಷಣೆ ಮಾಡಿದ್ದರು. ಈ ಪ್ರಕ್ರಿಯೆನ್ನು ಪೂರ್ಣಗೊಳಿಸಲು 50 ದಿನಗಳ ಕಾಲಾವಕಾಶ ಕೊಡುವಂತೆಯೂ ಮನವಿ ಮಾಡಿದ್ದರು.

No Comments

Leave A Comment