Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಉಡುಪಿ ನಗರದಲ್ಲಿ 5 ತಿಂಗಳು ನೀರಿಗೆ ಸಮಸ್ಯೆಯಾಗದು

27udp-cmc-meetingಉಡುಪಿ: ನಗರಕ್ಕೆ ನೀರು ಪೂರೈಸುವ ಬಜೆ ಜಲಾಶಯದಲ್ಲಿ ಈಗಲೂ ಒಳ ಹರಿವು ಇದ್ದು, ಅದು ಇನ್ನೂ ಹತ್ತು ದಿನ ಮುಂದುವರೆಯುವ ನಿರೀಕ್ಷೆ ಇದೆ. ಒಳ ಹರಿವು ನಿಂತ ನಂತರ ಐದು ತಿಂಗಳ ಕಾಲ ನೀರು ಪೂರೈಕೆ ಮಾಡಲು ಯಾವುದೇ ತೊಂದರೆ ಇಲ್ಲ ಎಂದು ನಗರಸಭೆ ಅಧಿಕಾರಿಗಳು ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದರು.

ಸಭೆಯ ಆರಂಭದಲ್ಲಿಯೇ ಸದಸ್ಯ ರಮೇಶ್ ಕಾಂಚನ್‌ ಅವರು ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಈಗಲೇ ಕ್ರಮ ಕೈಗೊಳ್ಳಿ. ಆ ಬಗ್ಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಎಂದು ಮನವಿ ಮಾಡಿದರು. ನಗರದಲ್ಲಿರುವ ತೆರೆದ ಬಾವಿಗಳ ಬಗ್ಗೆ ಈಗಾಗಲೇ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅಗತ್ಯ ಬಿದ್ದರೆ ಅವುಗಳನ್ನು ಬಳಸಿಕೊಂಡು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು. ಈಗಾಗಲೇ ಕೆಲವು ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸಿರುವ ಬಗ್ಗೆ ಸದಸ್ಯ ಚಂದ್ರಕಾಂತ್‌ ಗಮನ ಸೆಳೆದರು.

ಸದಸ್ಯ ಯಶ್‌ಪಾಲ್‌ ಸುವರ್ಣ ಮಾತನಾಡಿ, ಜಲಾಶಯದ ಹೂಳೆತ್ತಲು ತಡ ಮಾಡಬೇಡಿ. ಒಳ ಹರಿವು ಇದ್ದಾಗಲೇ ಹೂಳೆತ್ತಿದ್ದರೆ ಮಾತ್ರ ಅದರಿಂದ ಉಪಯೋಗವಾಗುತ್ತದೆ. ನಗರಸಭೆಯೇ ಹೂಳೆತ್ತುವ ಯಂತ್ರ ಖರೀದಿಸಿ ಸಂಬಂಧಿಸಿದ ಇಲಾಖೆಯ ಅನುಮತಿ ಪಡೆದು ಹೂಳೆತ್ತಬೇಕು ಎಂದು ಸಲಹೆ ನೀಡಿದರು.

ನಗರಸಭೆಗೆ ಮೇ ತಿಂಗಳ ವರೆಗೆ ಆಗುವಷ್ಟು ಮಾತ್ರ ನೀರು ಇರುವುದರಿಂದ ಪಂಚಾಯಿತಿಗಳಿಗೆ ನೀರು ಸರಬರಾಜು ನಿಲ್ಲಿಸಿ, ಇಲ್ಲದಿದ್ದರೆ ಸಮಸ್ಯೆ ಗಂಭೀರವಾಗಲಿದೆ ಎಂದು ಕೆಲವರು ಸಲಹೆ ನೀಡಿದರು.

ಪೌರಾಯುಕ್ತ ಡಿ. ಮಂಜುನಾಥಯ್ಯ ಮಾತನಾಡಿ, ಜನವರಿ 15ರ ನಂತರ ಕೃಷಿಗೆ ನೀರು ಪೂರೈಕೆ ಆಗುವುದನ್ನು ನಿಲ್ಲಿಸಲು ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಡಿತ ಮಾಡಿ ಎಂದು ಜಿಲ್ಲಾಧಿಕಾರಿ ಅವರು ಈಗಾಗಲೇ ಸಂಬಂಧಿಸಿದ ಇಲಾಖೆಯವರಿಗೆ ಸೂಚನೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ನಗರದ ವಿಶ್ವೇಶ್ವರಯ್ಯ ಮಾರುಕಟ್ಟೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಕರೆದಿದ್ದ ಟೆಂಡರ್ ಅನ್ನು ನಗರಾಭಿವೃದ್ಧಿ ಇಲಾಖೆ ರದ್ದುಪಡಿಸಿರುವ ಬಗ್ಗೆ ವಿರೋಧ ಪಕ್ಷದ ಸದಸ್ಯರು ಪ್ರಶ್ನೆ ಕೇಳಿದ್ದು ವಾಗ್ವಾದಕ್ಕೆ ಕಾರಣವಾಯಿತು. ಟೆಂಡರ್ ರದ್ದಾಗಿರುವ ಕಾರಣ ನಗರಸಭೆಗೆ ಮುಖಭಂಗವಾಗಿದೆ ಎಂದು ಅವರು ಛೇಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಮೀನಾಕ್ಷಿ ಮಾಧವ, ನಗರಸಭೆಗೆ ಯಾವುದೇ ಮುಖಭಂಗ ಆಗಿಲ್ಲ ಎಂದು ಸಮರ್ಥಿಸಿಕೊಂಡರು. ನಗರಾಭಿವೃದ್ಧಿ ಇಲಾಖೆ ಟೆಂಡರ್ ರದ್ದುಪಡಿಸಿಲ್ಲ, ಬದಲಾಗಿ ಒಬ್ಬರೇ ಟೆಂಡರ್‌ದಾರರು ಇರುವುದರಿಂದ ಅದನ್ನು ರದ್ದುಪಡಿಸಿ ಇನ್ನೊಮ್ಮೆ ಹೆಚ್ಚಿನ ಪ್ರಚಾರ ನೀಡಿ ಟೆಂಡರ್ ಕರೆಯಿರಿ ಎಂದು ಸೂಚನೆ ನೀಡಿದೆ. ಅದರಂತೆ ನಡೆದುಕೊಳ್ಳಲಾಗುವುದು ಎಂದು ಹೇಳಿದರು.

ಹಳೆಯ ಮಾರುಕಟ್ಟೆ ಇರುವ ಸ್ಥಳದಲ್ಲಿ ಧೂಮಾವತಿ ದೈವಸ್ಥಾನ ಇದ್ದು ಅವರು ಕೆಲವು ಬೇಡಿಕೆ ಮುಂದಿಟ್ಟಿದ್ದಾರೆ. ಅಲ್ಲದೆ ಈಗಾಗಲೇ ಇರುವ ಅಂಗಡಿ ಮಾಲೀಕರ ಸಮಸ್ಯೆಗೆ ಪರಿಹಾರ ಒದಗಿಸಿ ಆ ನಂತರ ಮರು ಟೆಂಡರ್ ಕರೆಯಿರಿ ಎಂದು ಹೇಳಿದರು. ಮಾರುಕಟ್ಟೆಗೆ ಸಂಬಂಧಿಸಿದಂತೆ ಸರಿಯಾದ ಉತ್ತರ ಬಂದಿಲ್ಲ ಎಂದು ವಿರೋಧ ಪಕ್ಷದವರು ಅಧ್ಯಕ್ಷರ ಎದುರು ನಿಂತು ಪ್ರತಿಭಟನೆ ಸಹ ಮಾಡಿದರು.

ಅಪಾಯಕಾರಿ ಮರಗಳನ್ನು ಕತ್ತರಿಸುವಂತೆ ಹಲವರು ಒತ್ತಾಯಿಸಿದರು. ಮಣಿಪಾಲ್ ವಿಶ್ವವಿದ್ಯಾಲಯದವರು ನಿರ್ಮಾಣ ಮಾಡಿರುವ ಕಟ್ಟಡ, ರಸ್ತೆ, ತೆರಿಗೆ ಮುಂತಾದ ವಿಷಯಗಳ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಲು ಸಮಿತಿ ರಚಿಸಲು ನಿರ್ಣಯ ಮಾಡಲು ತೀರ್ಮಾನಿಸಲಾಯಿತು.

No Comments

Leave A Comment