Log In
BREAKING NEWS >
ಮಾರ್ಚ್ 23 ರಿಂದ ಏಪ್ರಿಲ್ 6 ವರಗೆ SSLC ಪರೀಕ್ಷೆ ನಡೆಯಲಿದೆ. ಪರೀಕ್ಷೆ ದಿನಾ ಬೆಳಿಗ್ಗೆ 9 ರಿಂದ 1:30 ರ ವರೆಗೆ ನಡೆಯಲಿದೆ........ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ

ನಾನು ಗೃಹ ಬಂಧನದಲ್ಲಿದ್ದೆ; ಈಗಲೂ ನಾನೇ ತಮಿಳು ನಾಡಿನ ಮುಖ್ಯ ಕಾರ್ಯದರ್ಶಿ: ರಾಮ ಮೋಹನ ರಾವ್

ram-mohanಚೆನ್ನೈ: ನನ್ನನ್ನು ಗೃಹ ಬಂಧನದಲ್ಲಿರಿಸಲಾಗಿತ್ತು. ಮುಖ್ಯ ಕಾರ್ಯದರ್ಶಿ ಕಚೇರಿ ಮೇಲೆ ದಾಳಿ ನಡೆಸುವುದು ಅಸಂವಿಧಾನಿಕ ಹಲ್ಲೆ, ನಾನು ಇನ್ನೂ ಕೂಡ ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿಯೇ ಇದ್ದೇನೆ ಎಂದು ಪಿ.ರಾಮ ಮೋಹನ್ ರಾವ್ ಮಂಗಳವಾರ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದರು.

ತಮ್ಮ  ಕಚೇರಿ ಮತ್ತು ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ನಂತರ ಮೊದಲ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮಗಳದ್ದೇಶಿಸಿ ಮಾತನಾಡಿದರು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನನ್ನ ಜೀವಕ್ಕೆ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ನನ್ನ ನಿವಾಸವನ್ನು ಗನ್ ನೊಂದಿಗೆ ಪ್ರವೇಶಿಸಿದರು. ಶೋಧನೆಯ ವಾರಂಟ್ ತೋರಿಸಿದರು. ನನ್ನ  ಹೆಸರು ಅದರಲ್ಲಿ ಇರಲಿಲ್ಲ. ನನ್ನ ಮಗನ ಹೆಸರಿತ್ತು. ಶೋಧ ನಡೆಸಿದ್ದಕ್ಕೆ ಅವರಿಗೆ ಏನೂ ಸಿಗಲಿಲ್ಲ. ನನ್ನ ಮನೆಯಲ್ಲಿ ಅವರಿಗೆ ಸಿಕ್ಕಿದ್ದು 1,12,320 ರೂಪಾಯಿ  ಮತ್ತು ನನ್ನ ಪತ್ನಿ ಹಾಗೂ ಮಗಳಿಗೆ ಸೇರಿದ ಒಡವೆಗಳು. ಅವೆಲ್ಲವೂ ಒಟ್ಟು ಸೇರಿ 20ರಿಂದ 25 ಕೆಜಿಯಾಗಬಹುದು ಎಂದು ವಿವರ ನೀಡಿದರು.

ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ಗುರಿ ಇಟ್ಟುಕೊಂಡು ದಾಳಿ ಮಾಡಲಾಗಿದೆ. ನನಗೆ ಭೀತಿ ಕಾಡುತ್ತಿದೆ. ನನಗೆ ನ್ಯಾಯ ಸಿಗಲು ಜನತಾ ನ್ಯಾಯಾಲಯದ ಮೊರೆ ಹೋಗುತ್ತೇನೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನು ನೆನಪಿಸಿಕೊಂಡ ರಾಮ ಮೋಹನ್ ರಾವ್, ಇಂದು ಮೇಡಮ್ ಅವರಿದ್ದಿದ್ದರೆ ತಮಿಳುನಾಡಿನಲ್ಲಿ ಹೀಗಾಗಲು ಸಾಧ್ಯವಾಗುತ್ತಿತ್ತೆ? ಜನರಿಗೆ ಏನು ಸುರಕ್ಷತೆಯಿದೆ ಎಂದು ಪ್ರಶ್ನಿಸಿದರು. ನನ್ನನ್ನು ವರ್ಗಾವಣೆ ಮಾಡಿಲ್ಲ, ಮಾಡುವ ಧೈರ್ಯ ಕೂಡ ಸರ್ಕಾರಕ್ಕಿಲ್ಲ ಎಂದರು.

ಏಕಾಏಕಿ ಸರ್ಕಾರದ ಮುಖ್ಯ ಕಾರ್ಯದರ್ಶಿಯೊಬ್ಬರ ಮನೆಯೊಳಗೆ ನುಗ್ಗುವುದು ಅಸಂವಿಧಾನಿಕ ಹಲ್ಲೆಯಲ್ಲವೆ? ರಾಜ್ಯ ಸರ್ಕಾರ ಏನು ಮಾಡುತ್ತಿದೆ, ಕೇಂದ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ನನ್ನ ಮನೆಯೊಳಗೆ ಪ್ರವೇಶಿಸುವಾಗ ಯಾರ ಅನುಮತಿ ಪಡೆದಿದ್ದರು? ಮುಖ್ಯ ಕಾರ್ಯದರ್ಶಿಯೊಬ್ಬರ ಕಚೇರಿ, ಮನೆಗೆ ಪ್ರವೇಶಿಸಲು ಕೇಂದ್ರ ಸರ್ಕಾರ, ಸಿಆರ್ ಪಿಎಫ್ ಪಾತ್ರವೇನು, ಅವರು ಮುಖ್ಯಮಂತ್ರಿಯವರ ಅನುಮತಿ ಪಡೆದಿದ್ದರೇ ಎಂದು ಕೇಳಿದರು.

ವಾರಂಟ್ ನಲ್ಲಿ ನನ್ನ ಹೆಸರಿರಲಿಲ್ಲ, ನನ್ನ ಪುತ್ರನ ಹೆಸರು ಅದರಲ್ಲಿತ್ತು. ನನ್ನ ಪುತ್ರನ ಮನೆಗೂ ದಾಳಿ ನಡೆಸಿದ್ದಾರೆ.ಇಡೀ ಮನೆಯನ್ನು ಹುಡುಕಿದ್ದಕ್ಕೆ ಅವರಿಗೆ ಏನೂ ಸಿಗಲಿಲ್ಲ. ಐಟಿ ಇಲಾಖೆಗೆ ನನ್ನ ಮನೆಯನ್ನು ಹುಡುಕಾಡಿದಾಗ ಏನು ಸಿಕ್ಕಿತು ಎಂಬ ಬಗ್ಗೆ ನಾನು ಪಂಚನಾಮವನ್ನು ನಿಮ್ಮ ಮುಂದೆ ತೋರಿಸುತ್ತಿದ್ದೇನೆ ಎಂದು ಮಾಧ್ಯಮದ ಮುಂದೆ ಬಹಿರಂಗಪಡಿಸಿದರು.

ಈ ಸಂಕಷ್ಟ ಪರಿಸ್ಥಿತಿಯಲ್ಲಿ ನನ್ನ  ಪರವಾಗಿ ರಾಹುಲ್ ಗಾಂಧಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ನಿಂತಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಅವರು ತಮಗೂ ಶೇಖರ್ ರೆಡ್ಡಿಗೂ ಯಾವುದೇ ಸಂಪರ್ಕವಿಲ್ಲ. ಅವರೊಂದಿಗೆ ಯಾವ ವ್ಯವಹಾರವೂ ಇಲ್ಲ. ಅವರು ಸರ್ಕಾರದ ಕೆಲಸದಲ್ಲಿ ಮಧ್ಯ ಪ್ರವೇಶ ಮಾಡಿಲ್ಲ ಎಂದು ಹೇಳಿದರು.

No Comments

Leave A Comment