Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಜಿಎಸ್‌ಬಿ ಆದರ್ಶ ಸಮುದಾಯ: ಪಾರೀಕರ್‌

46

40ಹೆಜಮಾಡಿ (ಬಸ್ತಿಪಡ್ಪು ಮೈದಾನ): ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದವರು ಕಠಿನ ಪರಿಶ್ರಮ, ದೇಶಪ್ರೇಮ, ಸೇವಾಬದ್ಧತೆ, ಅಪೂರ್ವ ಸಾಮರ್ಥ್ಯಗಳಿಂದ ಸಮಗ್ರ ಸಮಾಜಕ್ಕೆ ಆದರ್ಶ ಯುತರಾಗಿದ್ದಾರೆಂದು ಭಾರತ ಸರಕಾರದ ರಕ್ಷಣಾ ಇಲಾಖೆಯ ಸಚಿವ ಮನೋಹರ ಪ್ರಭು ಪಾರೀಕರ್‌ ಅವರು ಮುಕ್ತಕಂಠದ ಪ್ರಶಂಸೆಯನ್ನು ನೀಡಿದರು. ಮಂಗಳೂರು – ಉಡುಪಿ ನಡುವಣ ಹೆಜಮಾಡಿಯಲ್ಲಿ ಅವರು ರವಿವಾರ ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆಯ ಪರಿಕಲ್ಪನೆಯ, ವಿಶ್ವ ಜಿಎಸ್‌ಬಿ ಸಮ್ಮೇಳನ ಸಮಿತಿ ವತಿಯಿಂದ ಜರಗಿದ ವಿಶ್ವ ಜಿಎಸ್‌ಬಿ ಸಮ್ಮೇಳನದಲ್ಲಿ ಪ್ರಧಾನ ಅತಿಥಿಯಾಗಿದ್ದರು. ಸಮಿತಿ ವತಿಯಿಂದ ರಾಷ್ಟ್ರ ರಕ್ಷಣಾ ನಿಧಿಗೆ ಒಂದು ಕೋಟಿ ರೂ. ಕೊಡುಗೆಯನ್ನು ಸಾಂಕೇತಿಕವಾಗಿ ಸ್ವೀಕರಿಸಿದರು. ನಾಗಾಲ್ಯಾಂಡ್‌ನ‌ ರಾಜ್ಯಪಾಲ ಪಿ.ಬಿ. ಆಚಾರ್ಯ ಸಮ್ಮೇಳನ ಉದ್ಘಾಟಿಸಿದರು. ಮಂಗಳೂರು, ಉಡುಪಿ, ಕಾರವಾರ, ಗೋವಾ, ಕೊಚ್ಚಿ ಮುಂತಾದ ಎಲ್ಲ ಪ್ರದೇಶಗಳಿಂದ ಜಿಎಸ್‌ಬಿ ಬಂಧುಗಳು ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ. ಅಪೂರ್ವ ದೇಶಪ್ರೇಮದ ಈ ಸಮಾಜ ನಿರಂತರವಾಗಿ ದೇಶಕ್ಕೆ ಮಹಣ್ತೀದ ಕೊಡುಗೆಗಳನ್ನು ನೀಡುತ್ತಿದೆ ಎಂದು ಪಾರೀಕರ್‌ ಹೇಳಿದರು.

ದಾರ್ಶನಿಕ ಪ್ರಧಾನಿ: ಪ್ರಧಾನಿ ನರೇಂದ್ರ ಮೋದೀಜಿ ಅವರ ನಾಯಕತ್ವದಲ್ಲಿ ದೇಶ ಮಹತ್ತರವಾದ ಪ್ರಗತಿ ಸಾಧಿಸುತ್ತಿದೆ. ಅವರು ದಾರ್ಶನಿಕ ಮಾತ್ರವಲ್ಲ; ಈ ಚಿಂತನೆಗಳನ್ನು ಅನುಷ್ಠಾನಗೊಳಿಸುವ ಧೀಮಂತ, ಧೈರ್ಯವಂತ ಎಂದು ವರ್ಣಿಸಿದರು. ಪ್ರಧಾನಿಯವರಿಗೆ ಸಂಪೂರ್ಣ ಬೆಂಬಲ ನೀಡುವಂತೆ ವಿನಂತಿಸಿದರು. ಮೇಕ್‌ ಇನ್‌ ಇಂಡಿಯಾ ಪರಿಕಲ್ಪನೆಯ ಮೂಲಕ ಭಾರತ ಸಂಪೂರ್ಣ ಸ್ವಾವಲಂಬಿಯಾಗಿದೆ. ಸಮಾಜದ ಏಳಿಗೆಯಿಂದ ದೇಶದ ಏಳಿಗೆ; ದೇಶದ ಏಳಿಗೆಯಿಂದ ಲೋಕದ ಏಳಿಗೆ ಎಂಬುದು ಎಲ್ಲರ ಆಶಯವಾಗಬೇಕು. ಜಿಎಸ್‌ಬಿ ಸಮುದಾಯ ಈ ಬಗ್ಗೆ ನಿರಂತರವಾಗಿ ಕೊಡುಗೆ ನೀಡುತ್ತಿದೆ. ಭ್ರಷ್ಟಾಚಾರಮುಕ್ತ ಸಮಾಜಕ್ಕೆ ನಾವೆಲ್ಲರೂ ಬದ್ಧರಾಗೋಣ ಎಂದರು. ಗೋವಾ ಮತ್ತು ಕೊಂಕಣಿ ಪರಂಪರೆಗೆ ಅನನ್ಯವಾದ ಸಂಬಂಧ. ಗೋವಾದಲ್ಲಿ ಈ ಪರಂಪರೆಯ ಬಗ್ಗೆ ಅಪಾರ ಅಭಿಮಾನವಿದೆ. ಈ ಸಮ್ಮೇಳನದ ಸಂಯೋಜನೆ ಪ್ರಶಂಸನೀಯ ಎಂದು ಹೇಳಿದರು.33

34

35

36

35
38

41

42

43 44

45

46

ಮಾನವೀಯ ಮೌಲ್ಯಕ್ಕೆ ಪ್ರಾಧಾನ್ಯ: ಆಚಾರ್ಯ


ಮಾನವೀಯ ಮೌಲ್ಯಕ್ಕೆ ಪ್ರಾಧಾನ್ಯದ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣವಾಗುವುದು ಎಂದು ವಿಶ್ವ ಜಿಎಸ್‌ಬಿ ಸಮ್ಮೇಳನ ಉದ್ಘಾಟಿಸಿದ ನಾಗಾಲ್ಯಾಂಡಿನ ರಾಜ್ಯಪಾಲ ಪದ್ಮನಾಭ ಬಾಲಕೃಷ್ಣ ಆಚಾರ್ಯ ಅವರು ಅಭಿಪ್ರಾಯಪಟ್ಟರು. ಈ ನಿಟ್ಟಿನಲ್ಲಿ ಜಿಎಸ್‌ಬಿ ಸಮುದಾಯದ ಕೊಡುಗೆ ಅಪೂರ್ವ ಎಂದು ಶ್ಲಾಘಿಸಿದರು. ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆಯು ಈ ಕಾರ್ಯವನ್ನು ಬದ್ಧತೆಯಿಂದ ನಿರ್ವಹಿಸುತ್ತಿದೆ. ಕುಟುಂಬ ಚೈತನ್ಯ ನಿಧಿ, ವಿದ್ಯಾ ಪೋಷಕ್‌ ನಿಧಿ, ಸಂಪೂರ್ಣ ಕುಟುಂಬ ಆರೋಗ್ಯ ವಿಮೆ ಮುಂತಾದ ಯೋಜನೆಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿದೆ. ಈಗ ರಾಷ್ಟ್ರ ಸುರಕ್ಷಾ ನಿಧಿಗೆ ಕೂಡ ಕೊಡುಗೆ ಸಂಚಯನ ಮಾಡಿರುವುದು ತನಗೆ ಸಂತಸ ತಂದಿದೆ ಎಂದು ವಿವರಿಸಿದರು.

ಸಮೂಹ ಕೇಂದ್ರೀಕೃತ
ಶಿಕ್ಷಣದಿಂದ ಶಕ್ತಿ ಎಂಬುದು ಸಾರ್ವತ್ರಿಕ ಸತ್ಯ. ಶಿಕ್ಷಣದಿಂದ ಸಂಚಯಿತ ಶಕ್ತಿ ವ್ಯಕ್ತಿ ಕೇಂದ್ರೀಕೃತವಾಗಿರಬಾರದು. ಅದು ಸಮಾಜದ ಕೇಂದ್ರೀಕೃತವಾಗಿರಬೇಕು ಎಂದು ರಾಜ್ಯಪಾಲ ಆಚಾರ್ಯ ವಿಶ್ಲೇಷಿಸಿದರು. ಈಶಾನ್ಯ ರಾಜ್ಯಗಳಲ್ಲಿ ಈಗ ಸಾರ್ವತ್ರಿಕ ಶಿಕ್ಷಣದ ಪರಿಕಲ್ಪನೆ ಪರಿಪೂರ್ಣವಾಗಿ ಅನುಷ್ಠಾನವಾಗುತ್ತಿದೆ. ದೇಶಾದ್ಯಂತ ಈಗ ಪ್ರಗತಿಯ ಮಹಾ ಅಧ್ಯಾಯ ರೂಪುಗೊಂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಅತ್ಯಾಧುನಿಕ ಶಿಕ್ಷಣ : ಟಿ.ವಿ. ಮೋಹನ್‌ದಾಸ್‌ ಪೈ


ಮಣಿಪಾಲ್‌ ಗ್ಲೋಬಲ್‌ ಎಜುಕೇಶನ್‌ ಸಂಸ್ಥೆಯ ಅಧ್ಯಕ್ಷ ಟಿ.ವಿ. ಮೋಹನ್‌ದಾಸ್‌ ಪೈ ಅವರು ಸುಮತಿ ಶೆಣೈ ಕುಂದಾಪುರ ಅವರ ಸಂಪಾದಕತ್ವದ ‘ಸರಸ್ವತಿ ಹೆರಿಟೇಜ್‌’ ಕೃತಿಯನ್ನು ಬಿಡುಗಡೆಗೊಳಿಸಿ ಸಮ್ಮೇಳನದ ಆಶಯ ಭಾಷಣವಿತ್ತರು. ಮುಂದಿನ 15 ವರ್ಷಗಳಲ್ಲಿ ಜಗತ್ತು ಸಂಪೂರ್ಣವಾಗಿ ಬದಲಾಗಲಿದೆ. ತಾಂತ್ರಿಕತೆ, ಡಿಜಿಟಲೀಕರಣ, ರೋಬೋಟಿಕ್ಸ್‌ ಇತ್ಯಾದಿಗಳು ಜಗತ್ತಿಗೆ ಅನಿವಾರ್ಯ. ಆದ್ದರಿಂದ ಅತ್ಯಾಧುನಿಕ ಶಿಕ್ಷಣವನ್ನು ಸಮಾಜದ ಎಲ್ಲ ಎಳೆಯರು ಪಡೆಯುವಂತಾಗಬೇಕೆಂದು ಸಲಹೆ ನೀಡಿದರು. ಭಾರತ ಈಗ ಜಗತ್ತಿನ ಮುಂಚೂಣಿಯ ರಾಷ್ಟ್ರವಾಗಿದೆ. ಪ್ರಬಲ ಆರ್ಥಿಕತೆಯತ್ತ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಎಸ್‌ಬಿ ಸಮುದಾಯದ ಕೊಡುಗೆ ಅಪೂರ್ವ ಎಂದರು. ಸಮ್ಮೇಳನದ ಸಂಘಟಕರನ್ನು ಅಭಿನಂದಿಸಿದರು.

ಧನ್ಯತೆ: ಸುಬ್ರಾಯ ಬಾಳಿಗಾ
ಸಮಾಜದ ಅಗತ್ಯಗಳಿಗೆ ಸ್ಪಂದಿಸುವುದರಿಂದ ಧನ್ಯತೆಯ ಭಾವ ಲಭಿಸುತ್ತದೆ ಎಂದು ಮೈಸೂರಿನ ಜಿಆರ್‌ಎಸ್‌ ಫ್ಯಾಂಟಸಿ ಪಾರ್ಕ್‌ನ ನಿರ್ದೇಶಕ ಬಂಟ್ವಾಳ ಸುಬ್ರಾಯ ಬಾಳಿಗಾ ಹೇಳಿದರು. ರಾಷ್ಟ್ರ ರಕ್ಷಣಾ ನಿಧಿಗೆ ಸಮಿತಿಯ ಕೊಡುಗೆಯನ್ನು ಅವರು ಸಚಿವ ಪಾರೀಕರ್‌ ಅವರಿಗೆ ಹಸ್ತಾಂತರಿಸಿದರು. ಕವಿತಾ ಪದ್ಮನಾಭ ಆಚಾರ್ಯ, ಪುಷ್ಪಲತಾ ಬಾಳಿಗ, ಸುಬ್ರಾಯ ಬಾಳಿಗ, ಮೋಹಿನಿ ದಯಾನಂದ ಪೈ ಭಾಗವಹಿಸಿದ್ದರು.

ಪರಂಪರೆ: ಅನಂತ ಪೈ
ಜಿಎಸ್‌ಬಿ ಸಮಾಜ ಹೆಮ್ಮೆಯ ಪರಂಪರೆ ಹೊಂದಿದೆ ಎಂದು ಹೈದರಾಬಾದ್‌ ಉದ್ಯಮಿ ಅನಂತ ಪೈ ಹೇಳಿದರು.

ಸ್ಫೂರ್ತಿಶಕ್ತಿ : ದಯಾನಂದ ಪೈ
ಸಮ್ಮೇಳನ ಸಮಿತಿ ಅಧ್ಯಕ್ಷ ಡಾ| ಪಿ. ದಯಾನಂದ ಪೈ ಸ್ವಾಗತಿಸಿದರು. ಸಮ್ಮೇಳನಕ್ಕೆ ಜನಸಾಗರವೇ ಸೇರಿರುವುದು ಧನ್ಯತಾ ಭಾವವನ್ನು ನೀಡಿದೆ. ಸಾಮಾಜಿಕ ಸೇವೆಯ ಮತ್ತು ದುರ್ಬಲರಿಗೆ ಸಹಕಾರ ನೀಡುವ ಮಹತ್ತರಆಶಯದೊಂದಿಗೆ ಈ ಸಮ್ಮೇಳನದ ಸಂಘಟನೆಯಾಗಿದೆ. ಬಹುತೇಕ ಯುವಜನತೆಯೇ ಹೊಣೆಗಾರಿಕೆ ವಹಿಸಿದ್ದಾರೆ. ಸಮಾಜಕ್ಕೆ ಮತ್ತಷ್ಟು ಶಕ್ತಿ ನೀಡಲು ಈ ಸಮ್ಮೇಳನದ ಯಶಸ್ಸು ಸ್ಫೂರ್ತಿಯಾಗಿದೆ ಎಂದರು.

ಸೇವೆಯಿಂದ ಸಂಘಟನೆ; ಸಂಘಟನೆಯಿಂದ ಸೇವೆ ಎಂದು ಪೈ ವ್ಯಾಖ್ಯಾನಿಸಿದರು. ಜಿಎಸ್‌ಬಿ ಸಮಾಜದ ಜನಸಂಖ್ಯೆ ಕಡಿಮೆ. ಆದರೆ, ಸಮಗ್ರ ಸಮಾಜಕ್ಕೆ ಶಿಕ್ಷಣ, ಬ್ಯಾಂಕಿಂಗ್‌, ಆರೋಗ್ಯ ಸಂಸ್ಕೃತಿ ಮುಂತಾದ ಕ್ಷೇತ್ರಧಿಗಳ ಮೂಲಕ ಜಿಎಸ್‌ಬಿ ಸಮಾಜದ ಸಾಧಕರು ನೀಡುತ್ತಿರುವ ಕೊಡುಗೆ ಅನನ್ಯ ಎಂದರು. ಇಂದಿನ ಸಮಾವೇಶವು ಜಿಎಸ್‌ಬಿ ಸಮಾಜಕ್ಕೆ ಸುವರ್ಣಾಕ್ಷರದಲ್ಲಿ ಬರೆಯಬೇಕಾದ ದಿನವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆಯ ಸಂಚಾಲಕ ಆರ್‌. ವಿವೇಕಾನಂದ ಶೆಣೈ ಪ್ರಸ್ತಾವನೆಗೈದರು. ಈ ಬೃಹತ್‌ ಸಮ್ಮೇಳನದ ಮೂಲಕ ಸಾಮಾಜಿಕ ಜಾಗೃತಿ ಸಾಧ್ಯವಾಗಿದೆ ಎಂದು ಹೇಳಿದರು. ಜಿಎಸ್‌ಬಿ ಸಮಾಜ ಈ ಸಮ್ಮೇಳನಕ್ಕೆ ಸ್ಪಂದಿಸಿದ ರೀತಿಯು ಅಪೂರ್ವವಾಗಿದೆ. ಮತ್ತಷ್ಟು ಸಮಾಜಮುಖೀ ಕಾರ್ಯಗಳನ್ನು ವೇದಿಕೆ ಹಮ್ಮಿಕೊಳ್ಳಲಿದೆ ಎಂದು ತಿಳಿಸಿದರು.

ಸಮಿತಿಯ ಚೀಫ್ ಮೆಂಟರ್ ಸಿಎಯು ರಾಮದಾಸ್‌ ಕಾಮತ್‌, ಸಿಎ ಉಲ್ಲಾಸ್‌ ಕಾಮತ್‌, ಪ್ರದೀಪ್‌ ಜಿ. ಪೈ, ಸಿಎ ಗುಜ್ಜಾಡಿ ಪ್ರಭಾಕರ್‌ ಎನ್‌. ನಾಯಕ್‌, ಸಂಸದ ನಳಿನ್‌ ಕುಮಾರ್‌ ಕಟೀಲು, ಮಾಜಿ ಶಾಸಕ ಎನ್‌. ಯೋಗೀಶ್‌ ಭಟ್‌, ಮಣಿಪಾಲ ಮೀಡಿಯಾ ನೆಟ್‌ವರ್ಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಟಿ. ಗೌತಮ್‌ ಪೈ, ಶಾಸಕ ವಿನಯಕುಮಾರ್‌ ಸೊರಕೆ, ವೇದಿಕೆಯ ಅಧ್ಯಕ್ಷ ಜಿ. ಸತೀಶ್‌ ಹೆಗ್ಡೆ, ಸಮಿತಿ ಮತ್ತು ವೇದಿಕೆಯ ಪದಾಧಿಕಾರಿಗಳಾದ ಡಾ| ಅನ್ನಪೂರ್ಣ ಎಸ್‌. ಕಾಮತ್‌, ಎಂ. ವೆಂಕಟೇಶ ಬಾಳಿಗಾ, ಪಾಂಗಾಳ ವಿಲಾಸ್‌ ನಾಯಕ್‌, ಸಿಎಎಸ್‌ ಶಾಂತಾರಾಮ ನಾಯಕ್‌, ಎಂ. ಗಣೇಶ್‌ ಕಾಮತ್‌, ಉಲ್ಲಾಸ್‌ ಗಡಿಯಾರ್‌, ಕೆ. ಶ್ರೀನಿವಾಸ ಪ್ರಭು, ರಘುನಂದನ್‌ ಕಾಮತ್‌, ಅನಂತ್‌ ಜಿ. ಪೈ, ಉಲ್ಲಾಸ್‌ ಡಿ. ಕಾಮತ್‌, ಶ್ರೀಕರ್‌ ಪ್ರಭು, ಹಾಲಾಡಿ ಲಕ್ಷ್ಮೀದೇವಿ ಕಾಮತ್‌, ಡಾ| ಗೌರಿ ಪೈ, ಎಸ್‌.ಎಸ್‌. ನಾಯಕ್‌ ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿಎ ನಂದಗೋಪಾಲ್‌ ಶೆಣೈ ವಂದಿಸಿದರು. ವೇದಿಕೆಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್‌  ಕಾರ್ಯಕ್ರಮ ನಿರೂಪಿಸಿದರು.

ಸಮ್ಮೇಳನದ ಮುಖ್ಯಾಂಶಗಳು…
– ಸಮ್ಮೇಳನದಲ್ಲಿ 30,000ಕ್ಕೂ ಹೆಚ್ಚು ಮಂದಿ ಪ್ರತಿನಿಧಿಗಳಾಗಿ ನೋಂದಣಿಯಾಗಿದ್ದಾರೆ. ಬೆಳಗ್ಗೆ 15,000ಕ್ಕೂ ಹೆಚ್ಚು ಮಂದಿ ಉಪಾಹಾರ ಸೇವಿಸಿದರೆ, ಮಧ್ಯಾಹ್ನ 25,000ಕ್ಕೂ ಹೆಚ್ಚು ಮಂದಿ ಭೋಜನ ಸ್ವೀಕರಿಸಿದರು.

– ಬೆಳಗ್ಗಿನಿಂದ ಸಂಜೆವರೆಗೂ ಭಾರೀ ಸಂಖ್ಯೆಯಲ್ಲಿ ಜಿಎಸ್‌ಬಿ ಸಮಾಜದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಒಂದಿನಿತೂ ಸಮಸ್ಯೆಯಾಗದಂತೆ ಅಚ್ಚುಕಟ್ಟಾಗಿ ನಡೆಯಿತು. ಮುಖ್ಯವಾಗಿ ವೃತ್ತಿಪರರ ರೀತಿಯಲ್ಲಿ ಸ್ವಯಂ ಸೇವಕರು ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿದರು. ಹಿರಿಯರ ಮಾರ್ಗದರ್ಶನವು ಯಾವುದಕ್ಕೂ ಚ್ಯುತಿಯಾಗದಂತೆ ನೋಡಿಕೊಂಡಿತು.

– ವಿಶಾಲವಾದ ಪ್ರದೇಶದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿತ್ತು. ವಾಹನಗಳನ್ನು ಶಿಸ್ತಿನಲ್ಲಿ ಪಾರ್ಕ್‌ ಮಾಡಿದ್ದರಿಂದ ಬರುವವರಿಗಾಗಲಿ, ಹೊರಗೆ ಹೋಗುವವರಿಗಾಗಲಿ ಯಾವುದೇ ಸಮಸ್ಯೆಯಾಗಲಿಲ್ಲ.

– 250 ಕ್ವಿಂಟಾಲ್‌ ಅಕ್ಕಿಯ ಅನ್ನ ತಯಾರಿಸಲಾಗಿತ್ತು. ವಿವಿಧ ಪದಾರ್ಥಗಳಿಗೆ 5 ಕ್ವಿಂಟಾಲ್‌ ಟೊಮೆಟೊ, 1.2 ಕ್ವಿಂಟಾಲ್‌ ಗುಜ್ಜೆ, 6 ಕ್ವಿಂಟಾಲ್‌ ತೊಂಡೆ, 6 ಕ್ವಿಂಟಾಲ್‌ ಕುಂಬಳಕಾಯಿ, 4 ಕ್ವಿಂಟಾಲ್‌ ಬಟಾಟೆ, 2 ಕ್ವಿಂಟಾಲ್‌ ದೊಣ್ಣೆ ಮೆಣಸು ಸಹಿತ ಇತರ ತರಕಾರಿಗಳನ್ನು ಬಳಸಲಾಯಿತು.

– ಸಮ್ಮೇಳನದಲ್ಲಿ ಭಾಗವಹಿಸಿದವರಿಗೆ ನ್ಯಾಚುರಲ್‌ ಐಸ್‌ಕ್ರೀಂ ನೀಡಲಾಯಿತು. ಐಸ್‌ಕ್ರೀಂ ಅನ್ನು ಮುಂಬಯಿಯಿಂದ ರೈಲ್ವೇ ವ್ಯಾಗನ್‌ನಲ್ಲಿ ತರಲಾಗಿತ್ತು. 27,000 ಐಸ್‌ಕ್ರೀಮ್‌ಗಳು ಖಾಲಿಯಾದವು. ಹ್ಯಾಂಗ್ಯೊ ಸಂಸ್ಥೆ ವತಿಯಿಂದ ಮಜ್ಜಿಗೆ, ಲಸ್ಸಿ ವ್ಯವಸ್ಥೆ ಮಾಡಲಾಗಿತ್ತು. 25,000 ಮಿಲ್ಕ್ಶೇಕ್‌ ಖಾಲಿಯಾದವು. ಬೊಂಡ ಜ್ಯೂಸ್‌ಗೆ 3,000 ಎಳನೀರು ಬಳಸಲಾಯಿತು.

– ಬೆಳಗ್ಗೆ 8.45ಕ್ಕೆ ಆರಂಭಗೊಂಡ ಕಾರ್ಯಕ್ರಮವು ರಾತ್ರಿ 8.30ರವರೆಗೂ ನಿರಂತರ ಸುಮಾರು 12 ಗಂಟೆ ಕಾಲ ನಡೆಯಿತು.

ಬಂಟ್ವಾಳ ಸುಬ್ರಾಯ ಬಾಳಿಗಾ ಕೊಡುಗೆ
ಬಂಟ್ವಾಳ ಸುಬ್ರಾಯ ಬಾಳಿಗಾ ಅವರ ಕೊಡುಗೈ ದಾನ – ಸಾಮಾಜಿಕ ಸೇವಾ ಸ್ಪಂದನದ ಬಗ್ಗೆ ಅತಿಥಿಗಳು ವಿಶೇಷ ಪ್ರಶಂಸೆ ವ್ಯಕ್ತಪಡಿಸಿದರು. ಸುಬ್ರಾಯ ಬಾಳಿಗಾ – ಪುಷ್ಪಲತಾ ಬಾಳಿಗಾ ದಂಪತಿ ಈಗಾಗಲೇ ದೇಶದ ಸೈನಿಕರ ಅಭಿವೃದ್ಧಿ ನಿಧಿಗೆ – ಆಗಿನ ರಾಷ್ಟ್ರಪತಿ ಪ್ರತಿಭಾ ಪಾಟೀಲರ ಮೂಲಕ 30 ಕೋಟಿ ರೂ.ಗಳನ್ನು ದಾನವಾಗಿ ನೀಡಿದವರು. ಸಮಿತಿಯ ರಾಷ್ಟ್ರ ಸುರಕ್ಷಾ ನಿಧಿಗೂ ಅವರು ವಿಶೇಷ ಕೊಡುಗೆ ಘೋಷಿಸಿದ್ದಾರೆ. ದಯಾನಂದ ಪೈ ಅವರು ಸಮಿತಿಗೆ ಮೊದಲ ಕಂತಾಗಿ 10 ಲಕ್ಷ ರೂ. ನೀಡಿದರು. ದಾನಿಗಳನ್ನು ಸಮ್ಮಾನಿಸಲಾಯಿತು.

ತುಮೀ ಮುಕಾರ್‌ ವಚ್ಚಾತೀ…
ಸಚಿವ ಪಾರೀಕರ್‌ ಅವರು ನಿರ್ಗಮಿಸುತ್ತಿದ್ದಂತೆಯೇ ಸಭಾಂಗಣದಲ್ಲಿ ಮೊಳಗಿದ ಘೋಷಣೆ: ಪಾರೀಕರ್‌ ಮಾಮ್‌, ತುಮೀ ಮುಕಾರ್‌ ವಚ್ಚಾತಿ; ಆಮ್ಮಿ ತುಮ್ಗೆಲ್‌ ಮಾಕ್ಸಿ ಆಸಾತಿ… (ಪಾರೀಕರ್‌ ಅವರೇ, ನೀವು ಮುಂದೆ ಸಾಗಿ; ನಾವು ನಿಮ್ಮ ಹಿಂದೆ ಜತೆಯಲ್ಲಿರುತ್ತೇವೆ)!

ಜನಸಾಗರವಾಯ್ತು ಬಸ್ತಿಪಡ್ಪು ಮೈದಾನ
ವಿಶ್ವ ಜಿಎಸ್‌ಬಿ ಸಮ್ಮೇಳನ ಜರಗಿದ ಬಸ್ತಿಪಡ್ಪು ಮೈದಾನ ವಸ್ತುಶಃ ಶಿಸ್ತಿನ ಜನಸಾಗರವಾಯಿತು. ಪಡುಬಿದ್ರಿಯಿಂದ 3 ಕಿ.ಮೀ. ಹೆದ್ದಾರಿಯಲ್ಲಿ ಹೆಜಮಾಡಿಯಿಂದ 1 ಕಿ.ಮೀ. ಅಂತರದಲ್ಲಿ ಕಡಲ ಕಿನಾರೆಯ ಮಡಿಲಲ್ಲಿದೆ ಬಸ್ತಿಪಡ್ಪು. ಇಲ್ಲಿ ಸಮ್ಮೇಳನಕ್ಕೆ ನಿರ್ಮಾಣವಾದ ಸಭಾ ಮಂಟಪಕ್ಕೆ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸಭಾಂಗಣ ವೇದಿಕೆಗೆ ಉಳ್ಳಾಲ ಶ್ರೀನಿವಾಸ ಮಲ್ಯ ಅವರ ಹೆಸರನ್ನು ಇರಿಸಲಾಗಿತ್ತು.

ಆಮ್ಮಿ ಆದರ್ಶ್‌ ಸಮಾಜ್‌ ಜಾವ್ನು ಮುಕಾರಿ ವಚ್ಚುಕ.
– ಮೋಹನದಾಸ್‌ ಪೈ

ದುರ್ಬಳ್‌ಪಣ್‌ ದೂರ್‌ ಜಾವಾR ಜಲ್ಲಾರಿ ಶಿಕ್ಷಣ ಏಕ್‌ ಮಾತ್ರ ವಾಟ್‌. (ಬಡತನ ನಿವಾರಣೆಗೆ ಶಿಕ್ಷಣವೇ ಏಕೈಕ ಮಾರ್ಗ).
– ರಾಜ್ಯಪಾಲ ಆಚಾರ್ಯ

ಮಾತೃಭಾಷೆಯ ಬಗ್ಗೆ  ಮೊದಲ ಆದ್ಯತೆ ಇರಬೇಕು. ಈ ಮೂಲಕ ಸುಸಂಸ್ಕೃತವಾದ ವ್ಯಕ್ತಿತ್ವಗಳು ರೂಪುಗೊಳ್ಳುತ್ತವೆ. ಇಂತಹ ವ್ಯಕ್ತಿತ್ವಗಳೇ ಸದೃಢ ಸಮಾಜದಲ್ಲಿ ನಿರ್ಮಾಣದ ಮೂಲಸ್ತಂಭಗಳು. ಸಂಖ್ಯೆಯಲ್ಲಿ  ಕಡಿಮೆ ಆಗಿದ್ದರೂ ಜಿಎಸ್‌ಬಿ ಸಮಾಜದವರ ಸಾಧನೆ ಮತ್ತು ಕೊಡುಗೆ ಅಪಾರವಾಗಿದೆ. ಎಲ್ಲ  ಕ್ಷೇತ್ರಗಳಲ್ಲೂ ಈ ಸಾಧನೆ ಗಮನಾರ್ಹ. ದುರ್ಬಲ ವರ್ಗದವರು ಎಲ್ಲ  ಸಮಾಜಗಳಲ್ಲಿದ್ದಾರೆ. ಅವರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಂಘ – ಸಂಸ್ಥೆಗಳು ಗಮನಹರಿಸಬೇಕು. ತನ್ಮೂಲಕ ಸಮಾಜಕ್ಕೆ ಮತ್ತಷ್ಟು ಶಕ್ತಿ ಸಂಚಯನ ಸಾಧ್ಯವಾಗುತ್ತದೆ.
-ಪಿ.ಬಿ. ಆಚಾರ್ಯ,  ನಾಗಾಲ್ಯಾಂಡ್‌ ರಾಜ್ಯಪಾಲ

No Comments

Leave A Comment