Log In
BREAKING NEWS >
ಉಡುಪಿಯ ಕಿನ್ನಿಮುಲ್ಕಿಯಲ್ಲಿ ಜನವರಿ 17ರ೦ದು ಸಾಯ೦ಕಾಲ 7ಗ೦ಟೆಗೆ ಉಡುಪಿಯ ಖ್ಯಾತ ಉದ್ಯಮಿ ಹಾಗೂ ಕಾ೦ಗ್ರೆಸ್ ಮುಖ೦ಡರಾದ ಕೆ.ಕೃಷ್ಣಮೂರ್ತಿ ಆಚಾರ್ಯ ಹಾಗೂ ನಗರ ಸಭಾ ಸದಸ್ಯರಾದ ಶ್ರೀಅಮೃತ ಕೃಷ್ಣಮೂರ್ತಿ ಆಚಾರ್ಯರವರ ಸಾರಥ್ಯದಲ್ಲಿ ನೂತನ ಯಶೋಧ ಆಟೋ ರಿಕ್ಷಾ ಅಸೋಸಿಯೇಷನ್ ಶುಭಾರ೦ಭಗೊಳ್ಳಲಿದೆ.

ತಾತ್ಕಾಲಿಕ ಪುನರ್ವಸತಿಗೆ ಒಂದು ಕೋಟಿ ರೂಪಾಯಿ ಬಿಡುಗಡೆ, 18 ದಿನಗಳ ಪ್ರತಿಭಟನೆ ಕೊನೆ ದಿಡ್ಡಳ್ಳಿ ನಿರಾಶ್ರಿತರ ಹೋರಾಟ ಅಂತ್ಯ

24dkkoಮಡಿಕೇರಿ: ಮೀಸಲು ಅರಣ್ಯ ಒತ್ತುವರಿ ಮಾಡಿ ಆಶ್ರಯ ಕಳೆದುಕೊಂಡಿದ್ದ ದಿಡ್ಡಳ್ಳಿ ಹಾಡಿ ನಿರಾಶ್ರಿತರ ಹೋರಾಟಕ್ಕೆ ಕೊನೆಗೂ ಪ್ರತಿಫಲ ಸಿಕ್ಕಿದೆ. ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ನೇತೃತ್ವದಲ್ಲಿ ಶುಕ್ರವಾರ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು, 18 ದಿನಗಳ ಹೋರಾಟವನ್ನು ಹಾಡಿವಾಸಿಗಳು ಅಂತ್ಯಗೊಳಿಸಿದರು.

ದಿಡ್ಡಳ್ಳಿ ಹಾಡಿಗೆ ಭೇಟಿ ನೀಡಿ, ನಿರಾಶ್ರಿತರ ಸಮಸ್ಯೆ ಆಲಿಸಿದ ಸಚಿವರು ಬಳಿಕ, ಮಡಿಕೇರಿ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಮೂರು ಗಂಟೆಗಳ ಕಾಲ ಸಂಧಾನ ಸಭೆ ನಡೆಸಿದರು.

ದಿಡ್ಡಳ್ಳಿಯಲ್ಲೇ ವಸತಿಗೆ ಪಟ್ಟು: ಒಂದು ಹಂತದಲ್ಲಿ ಹೋರಾಟಗಾರರು ದಿಡ್ಡಳ್ಳಿಯಲ್ಲೇ ಪುನರ್ವಸತಿಗೆ ಪಟ್ಟು ಹಿಡಿದರು. ದೇವಮಚ್ಚಿ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಗೆ ಬರುವುದರಿಂದ ವಸತಿ ಕಲ್ಪಿಸಲು ಸಾಧ್ಯವಿಲ್ಲವೆಂದು ಮನವರಿಕೆ ಮಾಡಿದರೂ ‘ಪೈಸಾರಿ’ ಭೂಮಿಯೆಂದು ಸಾಬೀತು ಪಡಿಸುವುದಾಗಿ ಮುಖಂಡ ಎ.ಕೆ.ಸುಬ್ಬಯ್ಯ ಪಟ್ಟುಹಿಡಿದರು.

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಉನ್ನತಮಟ್ಟದ ಸಭೆ ನಡೆಸಲು ತೀರ್ಮಾನಿಸಲಾಯಿತು. ಇದೇ ವೇಳೆ 577 ಕುಟುಂಬಗಳ ತಾತ್ಕಾಲಿಕ ಪುನರ್ವಸತಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ₹ 1 ಕೋಟಿ ಚೆಕ್‌ಅನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸಲಾಯಿತು.

ಬಳಿಕ ಸಚಿವ ಆಂಜನೇಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ದಿಡ್ಡಳ್ಳಿಗೆ ಬಂದು ನೆಲೆಸಿದವರು ಕಂಪೆನಿ ಕಾಫಿ ಎಸ್ಟೇಟ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರು. ಬಹಳ ದಿನಗಳ ಬಳಿಕ ಸ್ವಂತ ಸೂರಿಗೆ ಎಚ್ಚೆತ್ತುಕೊಂಡಿದ್ದಾರೆ. ಅವರ ಬೇಡಿಕೆ ನ್ಯಾಯಯುತವಾಗಿದೆ. ತಿಂಗಳ ಒಳಗೆ ಜಿಲ್ಲಾಡಳಿತ ಪೈಸಾರಿ ಜಮೀನು ಗುರುತಿಸಿ, ನಿವೇಶನ ಹಂಚಿಕೆ ಮಾಡಲು ಕ್ರಮ ತೆಗೆದುಕೊಳ್ಳಲು ಆದೇಶಿಸಿದ್ದೇನೆ. ನಾಳೆಯಿಂದ ಆದಿವಾಸಿಗಳು ಕೆಲಸಕ್ಕೆ ತೆರಳಲಿದ್ದಾರೆ. ಆದಿವಾಸಿಗಳನ್ನು ಉತ್ತಮ ಪ್ರಜೆಗಳಾಗಿ ಮಾಡುವುದು ಸರ್ಕಾರದ ಉದ್ದೇಶ. ಕಣ್ಣೀರು ಒರೆಸುವ ಕೆಲಸ ಮಾಡಲಿದ್ದೇವೆ’ ಎಂದು ಭರವಸೆ ನೀಡಿದರು.

‘ಅರಣ್ಯ ಪ್ರದೇಶದಲ್ಲಿ ನಿವೇಶನ ಕೊಡಿಸುತ್ತೇವೆ ಎಂದು ಅಧಿಕಾರಿಗಳು, ಮುಖಂಡರು ಆದಿವಾಸಿಗಳ ಬಳಿಯಿಂದ ಹಣ ವಸೂಲಿ ಮಾಡಿದ್ದಾರೆ ಎಂಬ ಆರೋಪ ಕುರಿತಂತೆ ಪರಿಶೀಲನೆ ನಡೆಸಲಾಗುವುದು’ ಎಂದರು.

‘ಚಳವಳಿಗಾರರು ತಾಳ್ಮೆಯಿಂದ ಇರಬೇಕು. ನಿರಾಶ್ರಿತರ ಆಶ್ರಯಕ್ಕೆ ಟಾರ್ಪಲ್‌, ನೀರು, ತಾತ್ಕಾಲಿಕ ಶೆಡ್‌, ಶೌಚಾಲಯ ನಿರ್ಮಿಸಲು ಸೂಚಿಸಲಾಗಿದೆ’ ಎಂದು ಅವರು ಹೇಳಿದರು.

ಸೌಲಭ್ಯ, ಸಂಧಾನ ಸೂತ್ರಗಳು

* ಆಶ್ರಮ ಶಾಲೆ ಎದುರು ತಾತ್ಕಾಲಿಕ ಆಶ್ರಯ. ನೀರು, ಪಡಿತರ ವಿತರಣೆಗೆ ಕ್ರಮ
* ಕಂದಾಯ, ಅರಣ್ಯ ಇಲಾಖೆ ಜಂಟಿ ಸರ್ವೆ, ಸೂಕ್ತ ಸ್ಥಳ ದೊರೆತ ತಕ್ಷಣ ನಿರಾಶ್ರಿತರ ಸ್ಥಳಾಂತರ
* 30 ಎಕರೆ ಪೈಸಾರಿ ಪ್ರದೇಶದಲ್ಲಿ (ವಸತಿ ವಂಚಿತರಿಗೆ ಹಂಚಿಕೆಗೆ ಲಭ್ಯವಿರುವ ಭೂಮಿ) 577 ಕುಟುಂಬಗಳಿಗೆ 30X40 ವಿಸ್ತೀರ್ಣದ ನಿವೇಶನದ ಭರವಸೆ
* ದಿಡ್ಡಳ್ಳಿ ವ್ಯಾಪ್ತಿಯಲ್ಲೇ ಖಾಸಗಿಯವರು ಜಮೀನು ಮಾರಿದರೆ ಖರೀದಿಗೂ ಕ್ರಮ
* ‘ಆದಿವಾಸಿಗಳ ಮಾದರಿ ಬಡಾವಣೆ’ಗೆ ಕ್ರಮ. ಸಮಗ್ರ ಸೌಲಭ್ಯ

ಆದಿವಾಸಿಗಳ ‘ಮಡಿಕೇರಿ ಚಲೋ’ ಯಶಸ್ವಿ

ಮಡಿಕೇರಿ: ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಹಾಗೂ ಕರ್ನಾಟಕ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಆದಿವಾಸಿಗಳು ನಗರದ ಗಾಂಧಿ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂಕಲ್ಪ ಸಮಾವೇಶ ಯಶಸ್ವಿಯಾಯಿತು.

ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಪ್ರತಿಭಟನಾಕಾರರು ‘ಮಡಿಕೇರಿ ಚಲೋ’ದಲ್ಲಿ ಪಾಲ್ಗೊಂಡಿದ್ದರು. ಹಿರಿಯ ವಕೀಲ ಎ.ಕೆ.ಸುಬ್ಬಯ್ಯ ಮಾತನಾಡಿ, ‘ಆದಿವಾಸಿಗಳ ಒಕ್ಕಲೆಬ್ಬಿಸಿದ ಪ್ರಕರಣದಲ್ಲಿ ಭೂಮಾಲೀಕರ ಕೈವಾಡವಿದೆ. ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸೇರಿ ಪಿತೂರಿ ನಡೆಸಿದ್ದಾರೆ’ ಎಂದು ಆರೋಪಿಸಿದರು.

ಹೋರಾಟವನ್ನು ಹತ್ತಿಕ್ಕುವ ಉದ್ದೇಶದಿಂದ ದಲಿತರನ್ನೇ ಎತ್ತಿಕಟ್ಟುವ ಕೆಲಸ ಮಾಡಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳ ಸಿದ್ಧಾಂತ ಬಡವರ ಮೇಲೆ ದಬ್ಬಾಳಿಕೆ ನಡೆಸುವುದು. ಮೂರು ವರ್ಷದ ಆಡಳಿತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಜನಪರ ಕೆಲಸ ಮಾಡಿಲ್ಲ. 577 ಕುಟುಂಬದ ಮೇಲೆ ದೌರ್ಜನ್ಯ ಎಸಗಿತು’ ಎಂದರು.

* ಸೂರು ವಂಚಿತರಿಗೆ ಆಶ್ರಯ ಕಲ್ಪಿಸಲು ಸರ್ಕಾರ ಬದ್ಧವಿದೆ. ಅರಣ್ಯ ಹಕ್ಕು ಕಾಯ್ದೆಯಡಿ ಸೂಕ್ತ ದಾಖಲೆಗಳಿದ್ದರೆ ಭೂಮಿ ಮಂಜೂರು ಮಾಡಿಕೊಡಬೇಕು.

– ಎಚ್‌.ಆಂಜನೇಯ, ಸಮಾಜ ಕಲ್ಯಾಣ ಸಚಿವ

ಕೊಡಗಿನಲ್ಲಿ ನಕ್ಸಲ್‌ ಚಟುವಟಿಕೆ ಕಂಡುಬಂದಿಲ್ಲ. ಕೇರಳದಿಂದ 10 ನಕ್ಸಲೀಯರು ಬಂದಿದ್ದಾರೆ ಎಂಬುದು ವದಂತಿ. ಭದ್ರತೆಗಾಗಿ ನಕ್ಸಲ್‌ ನಿಗ್ರಹ ಪಡೆಯನ್ನು ದಿಡ್ಡಳ್ಳಿ ವ್ಯಾಪ್ತಿಯಲ್ಲಿ ನಿಯೋಜಿಸಲಾಗಿದೆ.

– ಬಿ.ಕೆ.ಸಿಂಗ್‌, ಐಜಿಪಿ, ದಕ್ಷಿಣ ವಲಯ

No Comments

Leave A Comment