Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ಶಿಕ್ಷಕ ಸೇರಿ 8 ಭ್ರಷ್ಟರ ಮೇಲೆ ಎಸಿಬಿ ದಾಳಿ: ಅಪಾರ ಆಸ್ತಿ ದಾಖಲೆ ವಶ

yyಬೆಂಗಳೂರು : ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ಗುರುವಾರ ದಂಪತಿ ಸೇರಿ ರಾಜ್ಯದ ಎಂಟು ಭ್ರಷ್ಟ ಸರ್ಕಾರಿ ನೌಕರರ ಕಚೇರಿ ಮತ್ತು ನಿವಾಸಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣ ಮೌಲ್ಯದ ಆಸ್ತಿಗಳ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ದಾಳಿಗೊಳಗಾದವರಲ್ಲಿ ಶಿಕ್ಷಕನೂ ಇರುವುದು ವಿಶೇಷ.

ಆದಾಯ ಮೀರಿ ಗಳಿಕೆ ಮಾಡಿರುವ ಮಾಹಿತಿ ಮೇರೆಗೆ ಬೆಂಗಳೂರು, ಚಿತ್ರದುರ್ಗ, ಬಳ್ಳಾರಿ, ದಕ್ಷಿಣ ಕನ್ನಡ, ಚಾಮರಾಜನಗರ ಸೇರಿದಂತೆ ಆರು ಜಿಲ್ಲೆಯ ಎಂಟು ಸರ್ಕಾರಿ ನೌಕರರಿಗೆ ಸೇರಿದ ವಿವಿಧ ಸ್ಥಳಗಳಲ್ಲಿ ಗುರುವಾರ ಮುಂಜಾನೆ ಏಕಕಾಲಕ್ಕೆ ದಾಳಿ ನಡೆಸಿ ತಡರಾತ್ರಿವರೆಗೆ ದಾಖಲೆಗಳನ್ನು ಪರಿಶೀಲನೆ ನಡೆಸಿದರು.

ಬೆಳ್ತಂಗಡಿ ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ ಗೋವಿಂದ ನಾಯ್ಕ ಮತ್ತು ಪುಂಜಾಲಕಟ್ಟೆ ಆರೋಗ್ಯ ಕೇಂದ್ರದ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಲೀಲಾವತಿ ದಂಪತಿಯಾಗಿದ್ದು, ಎಸಿಬಿ ಅಧಿಕಾರಿಗಳು ಇದೇ ಮೊದಲ ಬಾರಿಗೆ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಮಹಿಳಾ ಸರ್ಕಾರಿ ಸಿಬ್ಬಂದಿ ಕಚೇರಿ ಮತ್ತು ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಇದಲ್ಲದೆ, ಬಿಬಿಎಂಪಿಯ ಪುಟ್ಟೇನಹಳ್ಳಿ ವಾರ್ಡ್‌ನ ಕಂದಾಯ ವಸೂಲಿಗಾರ ಸಿ.ಎಸ್‌.ವಿನಯ್‌ಕುಮಾರ್‌ ನಿವಾಸದಲ್ಲಿ 4,186 ಅಮೆರಿಕನ್‌ ಡಾಲರ್‌ ಪತ್ತೆಯಾಗಿರುವುದು ದಾಳಿಯ ವಿಶೇಷವಾಗಿದೆ.

ಇನ್ನುಳಿದಂತೆ ಬಿಬಿಎಂಪಿಯ ನಗರ ಯೋಜನಾ ಇಲಾಖೆ ಸಹಾಯ ನಿರ್ದೇಶಕ ಬಸವರಾಜು, ಚಿತ್ರದುರ್ಗ ಜಿಲ್ಲೆಯ ಹಾನಗಲ್‌ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಹಾಯಕ ಎಂಜಿನಿಯರ್‌ ಎಚ್‌.ಎಲ್‌.ಪುಟ್ಟಲಿಂಗಯ್ಯ , ದಾವಣಗೆರೆಯ ಕೆಆರ್‌ಐಡಿಎಲ್‌ ಉಪವಿಭಾಗ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಉಮೇಶ್‌ ಎನ್‌. ಪಾಟೀಲ್‌, ಬಳ್ಳಾರಿಯ ಜಿಲ್ಲಾ ತರಬೇತಿ ಕೇಂದ್ರ ಪ್ರಾಂಶುಪಾಲ ಪಂಪಾಪತಿ, ಚಾಮರಾಜನಗರದಲ್ಲಿ ಉಪಾಧ್ಯಾಯರಾಗಿರುವ ಎಚ್‌.ಆರ್‌.ರೇಚಣ್ಣ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.

ದಾಳಿಗೊಳಗಾದ ಭ್ರಷ್ಟ ಸರ್ಕಾರಿ ನೌಕರರ ವಿವರ:
1. ಬಸವರಾಜು, ಸಹಾಯಕ ನಿರ್ದೇಶಕ, ನಗರ ಯೋಜನಾ ಇಲಾಖೆ, ಬಿಬಿಎಂಪಿ, ಬೆಂಗಳೂರು.
ರಾಜರಾಜೇಶ್ವರಿ ನಗರದ ಯೂನಿವರ್ಸಿಟಿ ಲೇಔಟ್‌ನಲ್ಲಿನ ನಿವಾಸದಲ್ಲಿ ಎಸಿಬಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದು, ಆಸ್ತಿಗಳ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ವೇಳೆ ಯೂನಿವರ್ಸಿಟಿ ಲೇಔಟ್‌ನಲ್ಲಿ ಒಂದು ನಿವೇಶನ ಮತ್ತು ಮೂರು ಅಂತಸ್ತಿನ ಮನೆ, ಪದ್ಮನಾಭನಗರ ಕದಿರೇನಹಳ್ಳಿಯಲ್ಲಿ ರಡು ಅಂತಸ್ತಿನ ಮನೆ, ಮಾಗಡಿ ತಾಲೂಕಿನಲ್ಲಿ 1.8 ಎಕರೆ ಕೃಷಿ ಭೂಮಿ, 4.6 ಎಕರೆ ಕೃಷಿ ಭೂಮಿ, ಬೆಂಗಳೂರಿನ ಕೊಟ್ಟಿಗೆಪಾಳ್ಯದಲ್ಲಿ ನಿವೇಶನ ಇರುವುದನ್ನು ಪತ್ತೆ ಹಚ್ಚಲಾಗಿದೆ. ಸ್ಕೋಡಾ ಕಾರ್‌, ದ್ವಿಚಕ್ರ ವಾಹನ ಮತ್ತು ಚಿನ್ನಾಭರಣ ಮೌಲ್ಯದ ಬಗ್ಗೆ ಲೆಕ್ಕಾಚಾರ ಹಾಕಲಾಗುತ್ತಿದೆ. ಕರ್ತವ್ಯ ನಿರ್ವಹಿಸುತ್ತಿರುವ ಮಹದೇವಪುರ ವಾರ್ಡ್‌ನ ಕಚೇರಿಯಲ್ಲಿ ಅಕ್ರಮ ಆಸ್ತಿಯ ವಿವರಗಳ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.

2. ಎಚ್‌.ಎಲ್‌.ಪುಟ್ಟಲಿಂಗಯ್ಯ, ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಹಾಯಕ ಎಂಜಿನಿಯರ್‌, ಚಿತ್ರದುರ್ಗ ಜಿಲ್ಲೆಯ ಹಾನಗಲ್‌ ಉಪವಿಭಾಗ.
ತರಳಬಾಳು ನಗರದಲ್ಲಿನ ನಿವಾಸದ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಲಾಗಿದೆ. ಈ ವೇಳೆ ಕೆಳಗೋಟೆ ಗ್ರಾಮದಲ್ಲಿ ಎರಡು ನಿವೇಶನ, ಮೆದೇಹಳ್ಳಿಯಲ್ಲಿ ಮೂರು ನಿವೇಶನ, ಮದಕರಿಪುರದ ಮಹೇಶ್ವರ ಎಸ್ಟೇಟ್‌ನಲ್ಲಿ ನಿವೇಶನ, ಚೆನ್ನೇಹಳ್ಳಿಯಲ್ಲಿ ನಿವೇಶನ, ಮೆದೇಹಳ್ಳಿಯಲ್ಲಿ ಮೂರು ಅಂತಸ್ತಿನ ಕಟ್ಟಡ ಮತ್ತು ಒಂದು ಅಂತಸ್ತಿನ ಕಟ್ಟಡ  ಇರುವುದು ಪತ್ತೆ ಮಾಡಲಾಗಿದೆ. ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳ ಮೌಲ್ಯವನ್ನು ಲೆಕ್ಕ ಹಾಕಲಾಗುತ್ತಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

3. ಉಮೇಶ್‌ ಎನ್‌. ಪಾಟೀಲ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಕೆಆರ್‌ಐಡಿಎಲ್‌ ಉಪವಿಭಾಗ, ದಾವಣಗೆರೆ
ದಾವಣಗೆರೆಯ ವಿವೇಕಾನಂದ ಬಡಾವಣೆಯಲ್ಲಿನ ನಿವಾಸ ಮತ್ತು ಕಚೇರಿಯಲ್ಲಿ ಎಸಿಬಿ ಅಧಿಕಾರಿಗಳು ಶೋಧ ನಡೆಸಿದ್ದು, ದಾಖಲೆ ಮತ್ತು ಕಡತಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.

ಶಬನೂರು ಗ್ರಾಮದಲ್ಲಿ ನಾಲ್ಕು ನಿವೇಶನ ಮತ್ತು ಮೂರು ಅಂತಸ್ತಿನ ಕಟ್ಟಡ, ಹಳೇಖಾಲೆ ಗ್ರಾಮದಲ್ಲಿ 2 ಎಕರೆ 16.5 ಗುಂಟೆ ಕೃಷಿ ಭೂಮಿ ಮತ್ತು 26 ಗುಂಟೆ ಕೃಷಿ ಭೂಮಿ, ದಾವಣಗೆರೆ ನಗರದಲ್ಲಿ ಎರಡಂತಸ್ತಿನ ಕಟ್ಟಡ, ಅಗಸನಕಟ್ಟೆ ಗ್ರಾಮದಲ್ಲಿ 1.19 ಎಕರೆ ಕೃಷಿ ಭೂಮಿ, ತೆರೇದಹಳ್ಳಿ ಗ್ರಾಮದಲ್ಲಿ 2.11 ಎಕರೆ ಕೃಷಿ ಭೂಮಿ, ಕುಂದವಾಡ, ಕಾಬನೂರು ಗ್ರಾಮಗಳಲ್ಲಿ ತಲಾ ಎರಡು ನಿವೇಶನ, ಹೊಸಕೋಟೆಯಲ್ಲಿ 1.9 ಎಕರೆ ಕೃಷಿ ಭೂಮಿ ಇರುವುದು ಪತ್ತೆಯಾಗಿದೆ.

250 ಗ್ರಾಂ ಚಿನ್ನಾಭರಣ, ಸ್ಕೋಡಾ ರ್ಯಾಪಿಡ್‌ ಕಾರ್‌, ಬ್ಯಾಂಕ್‌ನಲ್ಲಿ ನಾಲ್ಕು ಲಕ್ಷ ರೂ. ಠೇವಣಿ, ವಿವಿಧ ಬ್ಯಾಂಕ್‌ನಲ್ಲಿರುವ ಲಾಕರ್‌ಗಳ ವಿವರ ಲಭ್ಯವಾಗಿದ್ದು, ಮಾಹಿತಿ ಸಂಗ್ರಹಿಸಬೇಕಿದೆ.

4. ಪಂಪಾಪತಿ, ಪ್ರಾಂಶುಪಾಲ, ಜಿಲ್ಲಾ ತರಬೇತಿ ಕೇಂದ್ರ, ಬಳ್ಳಾರಿ
ಬಳ್ಳಾರಿಯ ಕುವೆಂಪುನಗರದಲ್ಲಿನ ಮನೆ ಮತ್ತು ಕಚೇರಿಯಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ರಾಮಾಂಜನೇಯ ನಗರದಲ್ಲಿ ನಿವೇಶನ, ಗಾಂಧಿನಗರದಲ್ಲಿ ನಿವೇಶನ, ಕುವೆಂಪುನಗರದಲ್ಲಿ ನಾಲ್ಕು ನಿವೇಶನ ಮತ್ತು ಒಂದು ಕಟ್ಟಡ, ಬೆಂಗಳೂರು ನಗರದ ದೊಡ್ಡ ಆನೆಕುಂದಿ ಗ್ರಾಮದಲ್ಲಿ ನಿವೇಶನ ಇರುವ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಫಿಯಟ್‌ ಕಾರ್‌, ಎರಡು ದ್ವಿಚಕ್ರ ವಾಹನ, ಬ್ಯಾಂಕ್‌ ಖಾತೆಯಲ್ಲಿ 10.29 ಲಕ್ಷ ರೂ. ಠೇವಣಿ, 226.8 ಗ್ರಾಂ ಚಿನ್ನ, ಒಂದು ಕೆಜಿ ಬೆಳ್ಳಿಯ ವಸ್ತುಗಳು ಲಭ್ಯವಾಗಿವೆ.

5. ಎಚ್‌.ಆರ್‌.ರೇಚಣ್ಣ, ಉಪಾಧ್ಯಾಯ, ಚಾಮರಾಜನಗರ
ಚಾಮರಾಜನಗರದ ಶಂಕರಪುರ ಬಡಾವಣೆಯಲ್ಲಿನ ಮನೆ, ಆಲೂರು ಮತ್ತು ಆಂಡ್ರಕ್ಕಳಿನಲ್ಲಿರುವ ಸಂಬಂಧಿಕರ ಮನೆಗಳನ್ನು ಶೋಧ ನಡೆಸಲಾಗಿದ್ದು, ದಾಖಲೆ ಮತ್ತು ಕಡತಗಳನ್ನು ವಶಕ್ಕೆ ಪಡೆಯಲಾಗಿದೆ.

ಕಸಬಾ ಗ್ರಾಮದಲ್ಲಿ 5 ಗುಂಟೆ ಕೃಷಿ ಭೂಮಿ, ಸಿಎಂಸಿಯಲ್ಲಿ ನಿವೇಶನ, ಮುತ್ತಿಗೆ ಗ್ರಾಮದಲ್ಲಿ 1.13 ಗುಂಟೆ ಕೃಷಿ ಭೂಮಿ, ಒಂದು ಎಕರೆ ಕೃಷಿ ಭೂಮಿ, ಕೆಇಬಿ ಪೂರ್ವ ಬಡಾವಣೆಯಲ್ಲಿ ನಿವೇಶನ, ಮಾದಾಪುರ ಗ್ರಾಮದಲ್ಲಿ 9 ಗುಂಟೆ ಕೃಷಿ ಭೂಮಿ, ರೈಲ್ವೆ ರಸ್ತೆಯಲ್ಲಿ 1 ಕುಂಟೆ ಕೃಷಿ ಭೂಮಿ, ಮೇಧರ ರಸ್ತೆಯಲ್ಲಿ ಎರಡು ನಿವೇಶಣ ಮತ್ತು ಮನೆ, ಸರ್ಕಾರಿ ಪಾಲಿಟೆಕ್ನಿಕ್‌ ಮುಂಭಾಗದಲ್ಲಿ 5 ಗುಂಟೆ ಕೃಷಿ ಭೂಮಿ, ಮೈಸೂರಿನ ಎಚ್‌.ಡಿ.ಕೋಟೆ ರಸ್ತೆ ಮತ್ತು ರಿಂಗ್‌ ರಸ್ತೆ ಜಂಕ್ಷನ್‌ನಲ್ಲಿ ನಿವೇಶನ ದಾಖಲೆಗಳು ಪತ್ತೆಯಾಗಿವೆ. 1.30 ಲಕ್ಷ ರೂ. ನಗದು ಮತ್ತು ಚಿನ್ನಾಭರಣ ಪತ್ತೆ ಹಚ್ಚಲಾಗಿದೆ.

6. ಗೋವಿಂದ ನಾಯ್ಕ, ಪ್ರಥಮ ದರ್ಜೆ ಸಹಾಯಕ, ಬೆಳ್ತಂಗಡಿ ತಾಲೂಕು ಕಚೇರಿ ಮತ್ತು ಲೀಲಾವತಿ, ಹಿರಿಯ ಮಹಿಳಾ ಆರೋಗ್ಯ ಸಹಾಯಕಿ, ಆರೋಗ್ಯ ಕೇಂದ್ರ, ಪುಂಜಾಲಕಟ್ಟೆ
ದಕ್ಷಿಣಕನ್ನಡ ಜಿಲ್ಲೆಯ ಗುರುವಾಯನಕೆರೆಯಲ್ಲಿ ದಂಪತಿ ಹೊಂದಿರುವ ನಿವಾಸ ಮತ್ತು ಅವರು ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿಗಳಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು, ದಾಖಲೆ ಮತ್ತು ಕಡತಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ.
ಬೆಳ್ತಂಗಡಿಯ ಕುವೆಟ್ಟು ಗ್ರಾಮದಲ್ಲಿ 26 ಗುಂಟೆ ಕೃಷಿ ಭೂಮಿ, ಮನೆ ಮತ್ತು ಮೂರು ಮನೆ ಬಾಡಿಗೆ ನೀಡಿರುವ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. 12.80 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 10 ಲಕ್ಷ ರೂ. ಠೇವಣಿ, ಮಾರುತಿ ಆಲ್ಟೋ ಕಾರ್‌, ಎರಡು ದ್ವಿಚಕ್ರ ವಾಹನಗಳು ಪತ್ತೆಯಾಗಿವೆ.

7. ಸಿ.ಎಸ್‌.ವಿನಯಕುಮಾರ್‌, ಕಂದಾಯ ವಸೂಲಿಗಾರ, ಬಿಬಿಎಂಪಿ, ಪುಟ್ಟೇನಹಳ್ಳಿ ವಾಡ್‌, ಬೆಂಗಳೂರು.
ವಿಜಯನಗರದಲ್ಲಿನ ಮನೆ ಮತ್ತು ಬಾಡಿಗೆಗೆ ನೀಡಿರುವ ನಿವಾಸ ಹಾಗೂ ಕತ್ರಿಗುಪ್ಪೆಯಲ್ಲಿನ ನಿವಾಸಗಳಲ್ಲಿ ಆಸ್ತಿಯ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.

ಬೆಂಗಳೂರು ನಗರದ ಕೆಂಪಾಪುರ ಆಗ್ರಹಾರ, ಬಸವೇಶ್ವರ ಲೇಔಟ್‌ನಲ್ಲಿ ಒಂದು ನಿವೇಶನ ಮತ್ತು ಎರಡು ಅಂತಸ್ತಿನ ಮನೆ, ಕೆಂಗೇರಿಯ ಬಿ.ಎಂ.ಕಾವಲ್‌ನಲ್ಲಿ 1.26 ಎಕರೆ ಕೃಷಿ ಭೂಮಿ, 1.35 ಕೃಷಿ ಭೂಮಿ, ವಿಜಯನಗರ 2ನೇ ಹಂತ ಪೈಪ್‌ಲೈನ್‌ ರಸ್ತೆಯಲ್ಲಿ ಫ್ಲಾಟ್‌ ಹೊಂದಿರುವುದು ಪತ್ತೆಯಾಗಿದೆ. ಬ್ಯಾಂಕ್‌ನಲ್ಲಿ 31 ಲಕ್ಷ ರೂ. ಠೇವಣಿ, 1.160 ಕೆ.ಜಿ.ಚಿನ್ನಾಭರಣ, ಎಂಟು ಕೆ.ಜಿ.ಬೆಳ್ಳಿ ವಸ್ತುಗಳು, 1.16 ನಗದು, 4,186 ಅಮೆರಿಕನ್‌ ಡಾಲರ್‌ ಪತ್ತೆ ಹಚ್ಚಲಾಗಿದೆ.

No Comments

Leave A Comment