Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ಉಡುಪಿಯಲ್ಲಿ ರಾಜ್ಯದ ಮೊದಲ ನಗದು ರಹಿತ ಎಲ್‌ಪಿಜಿ ವಿತರಣೆಗೆ ಚಾಲನೆ

dscn4182ಉಡುಪಿ:ರಾಜ್ಯದಲ್ಲೇ ಪ್ರಥಮ ಬಾರಿಗೆ ನಗದು ರಹಿತ ಎಲ್.ಪಿ.ಜಿ ವಿತರಣೆಗೆ ಉಡುಪಿಯ ರಾಘವೇಂದ್ರ ಆಚಾರ್ಯ ಗ್ಯಾಸ್ ಏಜೆನ್ಸಿಯಲ್ಲಿ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಬುಧವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಶೋಭಾ ಕರಂದ್ಲಾಜೆ, ಪ್ರಧಾನಮಂತ್ರಿಯವರ ನಗದುರಹಿತ ಸೇವೆಗಳ ಕಲ್ಪನೆಯನ್ನು ಸಕಾರಗೊಳಿಸುವ ನಿಟ್ಟಿನಲ್ಲಿ ಇಂದು ಉದ್ಘಾಟಿಸಿದ ನಗದು ರಹಿತ ಎಲ್.ಪಿ.ಜಿ ಸೇವೆ ಪ್ರಮುಖವಾಗಿದೆ, ಜಿಲ್ಲೆಯಲ್ಲಿ ೨,೩೪,೦೦೦ ಗ್ಯಾಸ್ ಸಂಪರ್ಕಗಳಿದ್ದು ಎಲ್ಲಾ ಗ್ರಾಹಕರನ್ನು ಈ ಸೇವೆಗೆ ಒಳಪಡಿಸಬೇಕು, ಜಿಲ್ಲೆಯಲ್ಲಿನ ಎಲ್ಲಾ ಗ್ರಾಮಾಂತರ ಪ್ರದೇಶದಲ್ಲಿ ಬ್ಯಾಂಕ್‌ನ ಪ್ರತಿನಿಧಿಗಳು ಮನೆ ಮನೆಗೂ ಭೇಟಿ ನೀಡಿ ನಗದುರಹಿತ ಸೇವೆ ಉಪಯೋಗಿಸುವ ಬಗ್ಗೆ ತರಬೇತಿ ನೀಡುವಂತೆ ಈಗಾಗಲೇ ಸೂಚನೆ ನೀಡಲಾಗಿದ್ದು, ೨೦೧೭ ರ ಮಾರ್ಚ್ ವರೆಗೆ ಜಿಲ್ಲೆಯ ಎಲ್ಲಾ ಸರಕಾರಿ ಸೇವೆಗಳ ವ್ಯವಹಾರಗಳನ್ನು ನಗದುರಹಿತವಾಗಿ ಮತ್ತು ಜಿಲ್ಲೆಯ ಇತರೆ ಸೇವೆಗಳಲ್ಲಿ ಶೇ.೫೦ ಹಾಗೂ ೨೦೧೮ ರ ಮಾರ್ಚ್ ವೇಳೆಗೆ ಜಿಲ್ಲೆಯಲ್ಲಿ ಸಂಪೂರ್ಣವಾಗಿ ನಗದುರಹಿತ ವ್ಯವಹಾರ ನಿರ್ವಹಿಸುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಂಸದರು ಹೇಳಿದರು.

ದೇಶದಲ್ಲಿ ಪ್ರತಿದಿನ ಸುಮಾರು ೧.೨೫ ಕೋಟಿ ಜನರು ರೈಲಿನಲ್ಲಿ ಸಂಚರಿಸುತ್ತಿದ್ದು, ಇವರಲ್ಲಿ ಶೇ.೫೦ ರಷ್ಟು ಜನ ಆನ್‌ಲೈನ್ ಮೂಲಕ ಟಿಕೆಟ್ ಖರೀದಿಸುತ್ತಿದ್ದು, ಇದು ನಗದುರಹಿತ ವ್ಯವಹಾರಕ್ಕೆ ದೇಶ ಸಮೀಪಿಸುತ್ತಿದೆ ಎಂಬುದಕ್ಕೆ ಉದಾಹರಣೆ, ನಗದುರಹಿತ ವ್ಯವಹಾರದಿಂದ ಕಪ್ಪು ಹಣ ಮತ್ತು ಭ್ರಷ್ಟಾಚಾರ ನಿಯಂತ್ರಣ ಸಾಧ್ಯವಿದ್ದು, ದೇಶದ ಪ್ರಗತಿಗೆ ಅನುಕೂಲವಾಗಲಿದೆ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ನಗದುರಹಿತ ವ್ಯವಹಾರ ಮಾಡುವಂತೆ ಹಾಗೂ ಎಲ್ಲಾ ಚುನಾಯಿತ ಜನಪ್ರತಿನಿಧಿಗಳು ಈ ಕಾರ್ಯಕ್ರಮಕ್ಕೆ ಸಹಕರಿಸುವಂತೆ ಸಂಸದರು ತಿಳಿಸಿದರು.

ನಗದುರಹಿತ ವ್ಯವಹಾರ ಕೈಗೊಳ್ಳಲು ಸ್ಮಾರ್ಟ್ ಫೋನ್, ಇಂಟರ್‌ನೆಟ್ ಅಥವಾ ಲ್ಯಾಪ್ ಟಾಪ್ ಗಳು ಬೇಕಿಲ್ಲ, ಸಾಧಾರಾಣ ಮೊಬೈಲ್ ನಿಂದ ವ್ಯವಹಾರ ನಿರ್ವಹಿಸಬಹುದು ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.
ಹೆಚ್.ಪಿ.ಸಿ.ಲ್ ನ ಮಾರ್ಕೆಟಿಂಗ್ ಮ್ಯಾನೇಜರ್ ನವೀನ್ ಕುಮಾರ್ ನಗದುರಹಿತ ವ್ಯವಹಾರ ನಿರ್ವಹಿಸುವ ವಿಧಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಹೆಚ್.ಪಿ.ಸಿ.ಲ್ ನ ಹಿರಿಯ ಮಾರಾಟ ಅಧಿಕಾರಿ ಮಣಿಕಂಠನ್ ಮತ್ತಿತರರು ಉಪಸ್ಥಿತರಿದ್ದರು. ರಾಘವೇಂದ್ರ ಆಚಾರ್ಯ ಸ್ವಾಗತಿಸಿ, ನಿರೂಪಿಸಿದರು, ಹೆಚ್.ಪಿ.ಸಿ.ಲ್ ನ ಪ್ರಾದೇಶಿಕ ಮುಖ್ಯ ಪ್ರಬಂಧಕ ಶಂತನು ಗುಹಾ ವಂದಿಸಿದರು

No Comments

Leave A Comment