Log In
BREAKING NEWS >
Smriti Irani says writing on the wall for Rahul Gandhi...

‘ಸ್ವಾತಂತ್ರ್ಯದ ಓಟ’ ಕಾದಂಬರಿಗೆ ಪ್ರಶಸ್ತಿ ಪ್ರಕಟ – ಫೆ. 22ರಂದು ಪ್ರದಾನ ಬೊಳುವಾರುಗೆ ಸಾಹಿತ್ಯ ಅಕಾಡೆಮಿ ಗೌರವ

boluwarನವದೆಹಲಿ: ಕನ್ನಡದ ಹಿರಿಯ ಸಾಹಿತಿ ಬೊಳುವಾರು ಮಹಮ್ಮದ್ ಕುಂಞಿ ಅವರಿಗೆ 2016ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಅವರ ‘ಸ್ವಾತಂತ್ರ್ಯದ ಓಟ’ ಕಾದಂಬರಿ ಈ ಪ್ರಶಸ್ತಿಗೆ ಆಯ್ಕೆಯಾಗಿದೆ.

ಪ್ರಶಸ್ತಿಯು 1 ಲಕ್ಷ ನಗದು ಮತ್ತು ಸ್ಮರಣಿಕೆ ಒಳಗೊಂಡಿದ್ದು, 2017ರ ಫೆಬ್ರುವರಿ 22ರಂದು ಆಯೋಜಿಸಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿಯ ಕಾರ್ಯದರ್ಶಿ ಕೆ. ಶ್ರೀನಿವಾಸರಾವ್‌ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಡಾ.ಎಚ್.ಸಿ. ಬೋರಲಿಂಗಯ್ಯ, ಎಲ್.ಹನುಮಂತಯ್ಯ ಹಾಗೂ ಎಸ್.ಜಿ.  ಸಿದ್ಧರಾಮಯ್ಯ ಅವರಿದ್ದ ಆಯ್ಕೆ ಸಮಿತಿಯು ಕನ್ನಡ ವಿಭಾಗದಿಂದ ಬೊಳುವಾರು ಅವರ ಈ ಕಾದಂಬರಿಯನ್ನು ಪ್ರಶಸ್ತಿಗಾಗಿ ಶಿಫಾರಸು ಮಾಡಿತ್ತು ಎಂದು ಅವರು ಹೇಳಿದರು.

ಭಾರತದ ಒಟ್ಟು 24 ಭಾಷೆಗಳಲ್ಲಿ ಪ್ರಕಟವಾಗಿರುವ ಕೃತಿಗಳಿಗೆ ಪ್ರಶಸ್ತಿ ನೀಡಲಾಗಿದ್ದು, ಕಾವ್ಯ ವಿಭಾಗದ ಎಂಟು, ಸಣ್ಣ ಕಥಾ ಪ್ರಕಾರದ ಏಳು, ಕಾದಂಬರಿ ಪ್ರಕಾರದ ಐದು, ವಿಮರ್ಶಾ ವಿಭಾಗದ ಎರಡು ಹಾಗೂ ಪ್ರಬಂಧ ಮತ್ತು ನಾಟಕ ವಿಭಾಗದ ತಲಾ ಒಂದು ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ವಿವಿಧ ಭಾಷೆಗಳಲ್ಲಿ ಅಪ್ರತಿಮ ಸಾಹಿತ್ಯ ಸೇವೆ ಸಲ್ಲಿಸಿರುವ ಡಾ.ಆನಂದ ಪ್ರಕಾಶ ದೀಕ್ಷಿತ್‌, ನಾಗಲ್ಲ ಗುರುಪ್ರಸಾದ ರಾವ್‌ (ಶಾಸ್ತ್ರೀಯ ಭಾಷೆ), ಡಾ.ನಿರ್ಮಲ್‌ ಮಿಂಝ್‌ (ಕುರುಖ್‌), ಪ್ರೊ.ಲೊಝಾಂಗ್‌ ಜಂಪ್ಸ್‌ಪಾಲ್‌, ಗೆಲಾಂಗ್‌ ಥುಪ್ಸ್ತನ್‌ ಪಲ್ದನ್‌ (ಲಡಾಖಿ), ಹರಿಹರ ವೈಷ್ಣವ (ಹಲ್ಬಿ) ಹಾಗೂ ಡಾ.ಟಿ.ಆರ್‌. ದಾಮೋದರನ್‌, ಟಿ.ಎಸ್‌. ಸರೋಜಾ ಸುಂದರರಾಜನ್‌ (ಸೌರಾಷ್ಟ್ರ) ಅವರಿಗೆ ಅಕಾಡೆಮಿಯು ಭಾಷಾ ಸಮ್ಮಾನ್‌ ಪ್ರಶಸ್ತಿ ನೀಡಿ ಗೌರವಿಸಲಿದೆ ಎಂದು ಅವರು ತಿಳಿಸಿದರು.

ಕೊಂಕಣಿಯ ಎಡ್ವಿನ್‌ ಜೆ.ಎಫ್‌. ಡಿಸೋಜಾ ಅವರ ‘ಕಾಲೆ ಭಂಗಾರ್‌’ (ಕಾದಂಬರಿ), ಮಲಯಾಳಂನ ಪ್ರಭಾ ವರ್ಮಾ ಅವರ ‘ಶ್ಯಾಮ ಮಾಧವಂ’ (ಕವನ ಸಂಕಲನ), ತಮಿಳಿನ ವಣ್ಣದಾಸನ್‌ ಅವರ ‘ಒರು ಸಿರಿ ಇಸೈ’ (ಸಣ್ಣ ಕಥೆ), ತೆಲುಗಿನ ಪಾಪಿನೇನಿ ಶಿವಶಂಕರ್‌ ಅವರ ‘ರಜನಿಗಂಧ’ (ಕವನ ಸಂಕಲನ) ಮತ್ತು ಮರಾಠಿಯ ಅಸಾರಾಂ ಲೋಮಟೆ ಅವರ ‘ಆಲೋಕ’ (ಸಣ್ಣ ಕಥೆ) ಪ್ರಶಸ್ತಿ ಪಡೆದ ಇತರ ಪ್ರಮುಖ ಕೃತಿಗಳಾಗಿವೆ ಎಂದು ಅವರು ವಿವರಿಸಿದರು. ಅಕಾಡೆಮಿಯ ಉಪ ಕಾರ್ಯದರ್ಶಿ ರೇಣು ಮಾಧವ ಮನ್‌ ಈ ಸಂದರ್ಭ ಹಾಜರಿದ್ದರು.

ಕನ್ನಡದ ಹಿರಿಯ ಕವಿ ಕೆ.ವಿ. ತಿರುಮಲೇಶ್‌ ಅವರು 2015ರ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಅವರ ‘ಅಕ್ಷಯ ಕಾವ್ಯ’ ಕೃತಿಗೆ ಪ್ರಶಸ್ತಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಬೊಳುವಾರು ಪರಿಚಯ: ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಾದ ಬೊಳುವಾರು ಮಹಮ್ಮದ್ ಕುಂಞಿ, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕನ್ನಡ ಸಾಹಿತ್ಯದ ಮೂಲಕ ಮುಸ್ಲಿಂ ಜೀವನ ಶೈಲಿಯನ್ನು ಪರಿಚಯಿಸಿರುವ ಇವರ ನೂರಾರು ಕತೆಗಳು ಕನ್ನಡದ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಭಾರತದ ಇತರ ಭಾಷೆಗಳಿಗೂ ಇವರ ಕತೆಗಳು ಅನುವಾದಗೊಂಡಿವೆ.

1997ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪಡೆದಿರುವ ಇವರ ಕೃತಿಗಳು 1983 ಮತ್ತು 1992ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುಸ್ತಕ ವಿಭಾಗದ ಬಹುಮಾನ ಪಡೆದಿವೆ.

ಕೋಲ್ಕತದ ಭಾಷಾ ಸಂಸ್ಥಾನವು 1983ರಲ್ಲಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದು, 1991ರಲ್ಲಿ ‘ಆರ್ಯಭಟ’, 1992ರಲ್ಲಿ ‘ಪರಶುರಾಮ’, 1994ರಲ್ಲಿ ದೆಹಲಿಯ ಕಥಾ ಪ್ರಶಸ್ತಿ, 2010ರಲ್ಲಿ ‘ತೌಳವ’ ಪ್ರಶಸ್ತಿಗಳನ್ನೂ ಬೊಳುವಾರು ಗಳಿಸಿದ್ದಾರೆ.

ಚಲನಚಿತ್ರ ಕ್ಷೇತ್ರದಲ್ಲೂ ಕಾರ್ಯ ನಿರ್ವಹಿಸಿರುವ ಬೊಳುವಾರು ಅವರ ‘ಮುನ್ನುಡಿ’ ಮತ್ತು ‘ಅತಿಥಿ’ ಚಿತ್ರಗಳು ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರವಾಗಿವೆ.

‘ಖುಷಿಯಲ್ಲದೆ ಮತ್ತೇನಾಗಲು ಸಾಧ್ಯ’
ಬೆಂಗಳೂರು:
‘ಹೌದು, ಪ್ರಶಸ್ತಿಯಿಂದ ಖುಷಿಯಾಗಿದೆ; ಮತ್ತೆ ಇನ್ನೇನಾಗಲು ಸಾಧ್ಯ’ –ಹೀಗೆಂದು ಪ್ರಶ್ನಿಸಿದವರು ಸಾಹಿತಿ ಬೋಳುವಾರು ಮಹಮ್ಮದ್‌ ಕುಂಞ. ತಮ್ಮ ‘ಸ್ವಾತಂತ್ರ್ಯ ಓಟ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ಕ್ಷಣದಲ್ಲಿ ಅವರು ‘ಪ್ರಜಾವಾಣಿ’ ಜತೆ ಮಾತನಾಡಿದರು.

‘ನನಗೆ ಪ್ರಶಸ್ತಿ ಬಂದಿದ್ದರಿಂದ ನಿಮಗೂ ಖುಷಿಯಾಗಿದೆ ಅಲ್ಲವೆ’ ಎಂದೂ ಕೇಳಿದರು. ‘ನನ್ನ ಪ್ರಕಾರ, ಪ್ರಪಂಚದಲ್ಲಿ ಯಾರೂ ಕೆಟ್ಟವರಿಲ್ಲ. ನಾನು ದ್ವೇಷವನ್ನು ದ್ವೇಷಿಸುತ್ತೇನೆಯೇ ಹೊರತು ದ್ವೇಷ ಮಾಡುವವರನ್ನಲ್ಲ. ನನ್ನೆಲ್ಲ ಸಾಹಿತ್ಯದ ಹೂರಣವೂ ಇದೇ ಆಗಿದೆ’ ಎಂದು ತಿಳಿಸಿದರು.

‘ಕಥೆ ಹೇಳುವುದೆಂದರೆ ಸುಳ್ಳು ಹೇಳುವುದೇ ಅಲ್ಲವೆ? ಹಾಗೆ ಕಥೆ ಹೇಳುವಾಗ ಜನರ ಸಣ್ಣ–ಪುಟ್ಟ ಲೋಪಗಳನ್ನೆಲ್ಲ ಮರೆತು ಎಲ್ಲ ಮನುಷ್ಯರೂ ಒಳ್ಳೆಯವರೆಂದು ಸ್ವಲ್ಪ ಜಾಸ್ತಿ ಸುಳ್ಳನ್ನೇ ಹೇಳಿ, ಇದರಿಂದ ಯಾವ ತೊಂದರೆಯೂ ಇಲ್ಲ’ ಎಂದು ಹೇಳಿದರು.
‘ಸಾಹಿತ್ಯ ಬದುಕಿನ ಪ್ರತಿಬಿಂಬ ಎನ್ನುವುದನ್ನು ನಾನು ಒಪ್ಪಲಾರೆ. ಅದು ಬದುಕಿನ ಗತಬಿಂಬ’ ಎಂದು ವ್ಯಾಖ್ಯಾನಿಸಿದರು.

No Comments

Leave A Comment