Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ವಿಶ್ವಕಪ್‌ಗೆ ಮುತ್ತಿಕ್ಕಿದ ಭಾರತ ತಂಡ

vvಲಖನೌ: ‘ನವಾಬರ ನಾಡು’ ಲಖನೌನಲ್ಲಿ ಭಾರತದ ಜೂನಿಯರ್ ಹಾಕಿ ತಂಡವು ವಿಶ್ವ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತು. ಭಾನುವಾರ ಸಂಜೆ ನಡೆದ ಟೂರ್ನಿಯ ಫೈನಲ್‌ನಲ್ಲಿ  ಗುರ್ಜಂತ್ ಸಿಂಗ್ ಮತ್ತು ಸಿಮ್ರನ್‌ಜೀತ್ ಅವರು ಹೊಡೆದ ಗೋಲುಗಳ ಬಲದಿಂದ  ಭಾರತ ತಂಡವು 2–1 ಗೋಲುಗಳಿಂದ ಬೆಲ್ಜಿಯಂ  ವಿರುದ್ಧ ಗೆದ್ದು ಐತಿಹಾಸಿಕ ಸಾಧನೆ ಮಾಡಿತು.

15 ವರ್ಷಗಳ ನಂತರ ವಿಶ್ವಕಪ್‌ಗೆ ಮುತ್ತಿಕ್ಕಿತು.  2001ರಲ್ಲಿ ಹೋಬರ್ಟ್‌ನಲ್ಲಿ ವಿಶ್ವ ಚಾಂಪಿಯನ್ ಆಗಿದ್ದ ಭಾರತ ತಂಡವು ಪ್ರಶಸ್ತಿ ಬರ ಎದುರಿಸಿತ್ತು. ಆದರೆ, ಈ ಬಾರಿ ಹರ್ಜೀತ್ ಸಿಂಗ್ ನಾಯಕತ್ವದ ಉತ್ಸಾಹಿ ಯುವಪಡೆಯು ಮೇಜರ್  ಧ್ಯಾನ್‌ಚಂದ್ ಹಾಕಿ ಕ್ರೀಡಾಂಗಣದಲ್ಲಿ   ಪ್ರಶಸ್ತಿ ಗೆದ್ದು ಬೀಗಿತು.
ಹೋದ ಸಲ ನವದೆಹಲಿಯಲ್ಲಿ ನಡೆದಿದ್ದ ಟೂರ್ನಿಯಲ್ಲಿ ಭಾರತ ತಂಡವು 13ನೇ ಸ್ಥಾನ ಪಡೆದಿತ್ತು.

ಮೈದಾನದಲ್ಲಿ ಸೇರಿದ್ದ 15 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ತ್ರಿವರ್ಣ ಧ್ವಜ ಅರಳಿಸಿ ಕುಣಿದಾಡಿದರು.  ಜಯಘೋಷ ಕೂಗಿದರು. ತಂಡದ ಕೋಚ್ ಹರೇಂದರ್ ಸಿಂಗ್ ಮತ್ತು ಮ್ಯಾನೇಜರ್ ರೋಲಂಟ್ ಓಲ್ಟಮನ್ಸ್ ಅವರು ಆಟಗಾರರನ್ನು ಬಿಗಿದಪ್ಪಿ ಅಭಿನಂದಿಸಿದರು.

ಗುರ್ಜಂತ್–ಸಿಮ್ರನ್‌ಜೀತ್ ಮಿಂಚು
ತಂಡದ ಮೊದಲ ಅವಧಿಯಲ್ಲಿಯೇ ಆತಿಥೇಯ ತಂಡದ ಗೆಲುವಿಗೆ ಭದ್ರ ಬುನಾದಿಯನ್ನು ಗುರ್ಜಂತ್ ಸಿಂಗ್ ಮತ್ತು ಸಿಮ್ರನ್‌ಜೀತ್ ಸಿಂಗ್ ಅವರು ಹಾಕಿದರು.

ಎಂಟನೇ ನಿಮಿಷದಲ್ಲಿ  ಸುಮಿತ್ ಸಿಂಗ್ ಅವರು ಸ್ಕೂಪ್ ಮಾಡಿದ ಚೆಂಡನ್ನು ತಡೆದು ಗೋಲುಪೆಟ್ಟಿಗೆ ಸೇರಿಸುವಲ್ಲಿ ಸ್ಟ್ರೈಕರ್‌ ಗುರ್ಜಂತ್ ಸಿಂಗ್ ಸಫಲರಾದರು.

ಒಂದು ನಿಮಿಷದ ನಂತರ ನಿಕಾಂತ್ ಶರ್ಮಾ ಅವರು ಬೆಲ್ಜಿಯಂ ರಕ್ಷಣಾ ಕೋಟೆ ಯನ್ನು ಬೇಧಿಸಿ ನುಗ್ಗಿದ್ದರು.  ಚೆಂಡನ್ನು ಗೋಲುಪೆಟ್ಟಿಗೆಯತ್ತ ಬಾರಿಸಿದರು. ಆದರೆ, ಅವರ ಸ್ಟಿಕ್ ಸ್ವಲ್ಪ ವೈಡ್ ಆ್ಯಂಗಲ್‌ನಲ್ಲಿ ಇದ್ದ ಕಾರಣ ಚೆಂಡು ಗೋಲುಪೆಟ್ಟಿಗೆಯ ಪಕ್ಕದಿಂದ ಹೊರಗೆ ಉರುಳಿತು. ಇದರಿಂದ ಭಾರತ ತಂಡದ ಆಟಗಾರರು ನಿರಾಶರಾಗಲಿಲ್ಲ. ಸತತವಾಗಿ  ದಾಳಿ ನಡೆಸುವತ್ತಲೇ ಗಮನ ನೀಡಿದರು.  ಅದಕ್ಕೆ 22ನೇ ನಿಮಿಷದಲ್ಲಿ ಫಲ ಸಿಕ್ಕಿತು.

ನೀಲಕಂಠ ಅವರು ನೀಡಿದ ಪಾಸ್ ಅನ್ನು ಸ್ವೀಕರಿಸಿದ ವೃತ್ತದೊಳಗೆ ಇದ್ದ ಸಿಮ್ರನ್‌ಜೀತ್ ಸಿಂಗ್ ಅವರು ರಿವರ್ಸ್ ಶಾಟ್ ಮೂಲಕ ಚೆಂಡನ್ನು ಗೋಲುಪೆಟ್ಟಿಗೆಗೆ ನುಗ್ಗಿಸಿದರು.

ಇದರೊಂದಿಗೆ ತಂಡಕ್ಕೆ 2–0 ಮುನ್ನಡೆ ಲಭಿಸಿತು. ಈ ಅಂತರವನ್ನು ಕೊನೆಯ ಕ್ಷಣದವರೆಗೂ ಕಾಪಾಡಿಕೊಂಡು ಹೋಗುವಲ್ಲಿ  ತಂಡದ ಎಲ್ಲ ಆಟಗಾರರು ಸಂಘಟಿತ ಹೋರಾಟ ನಡೆಸಿದರು. ತಂಡದ ಯೋಜನೆಗೆ ತಕ್ಕಂತೆ ಆಡಿದ ಆಟಗಾರರು ಎದುರಾಳಿಗಳ ಮೇಲೆ ಸತತ ಒತ್ತಡ ಹೇರಿದರು.

ಪಂದ್ಯದ ಕೊನೆಯ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ ಅನ್ನು ಗೋಲಾಗಿ ಪರಿವರ್ತಿಸಿದ  ಬೆಲ್ಜಿಯಂ ತಂಡವು ಸಂಭ್ರಮಿಸುವ ಅವಕಾಶ ಸಿಗಲಿಲ್ಲ. ಅವಧಿ ಸಂಪೂರ್ಣದ ಸೈರನ್ ಮೊಳಗಿದ್ದರಿಂದ ಭಾರತದ ಪಾಳಯದಲ್ಲಿ ವಿಜಯೋತ್ಸವ ಗರಿಗೆದರಿತು. ಈ ವೇಳೆ ಅಭಿಮಾನಿಗಳೂ ಸಂಭ್ರಮಿಸಿದರು. ಎದುರಾಳಿ ತಂಡದಲ್ಲಿ ನಿರಾಸೆ ಕವಿಯಿತು.

ಜರ್ಮನಿಗೆ ಕಂಚು: ಆರು ಬಾರಿಯ ಚಾಂಪಿಯನ್ ಜರ್ಮನಿ ತಂಡವು ಇಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತು. ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಜರ್ಮನಿ ತಂಡವು 3–0 ಗೋಲುಗಳಿಂದ ಆಸ್ಟ್ರೇಲಿಯಾ ವಿರುದ್ಧ ಜಯಿಸಿತು.

‘ಅಂದುಕೊಂಡಿದ್ದನ್ನು ಸಾಧಿಸಿದ್ದೇವೆ’
ಲಖನೌ
(ಪಿಟಿಐ): ‘ನಮ್ಮ ತಂಡದ ಎಲ್ಲ ಆಟಗಾರರದ್ದು ಒಂದೇ ಗುರಿ ಇತ್ತು. ವಿಶ್ವಕಪ್ ಗೆಲ್ಲುವ  ಆ ಗುರಿಯನ್ನು ಈಗ ಸಾಧಿಸಿದ್ದೇವೆ. ಶಿಸ್ತುಬದ್ಧ  ತರಬೇತಿಯಲ್ಲಿ ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿದ್ದಕ್ಕೆ ಫಲ ಲಭಿಸಿದೆ’.

ಭಾರತ ಜೂನಿಯರ್ ಹಾಕಿ ತಂಡದ ನಾಯಕ ಹರ್ಜೀತ್ ಸಿಂಗ್ ಅವರ ಹೆಮ್ಮೆಯ ನುಡಿಗಳಿವು. ಭಾನುವಾರ ಸಂಜೆ ಬೆಲ್ಜಿಯಂ ತಂಡವನ್ನು ಸೋಲಿಸಿ ವಿಶ್ವಕಪ್ ಜಯಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಭವಿಷ್ಯದಲ್ಲಿ ನಮ್ಮ ತಂಡದ ಆಟಗಾರರು ದೇಶಕ್ಕೆ ಇನ್ನೂ ಹೆಚ್ಚಿನ ಕಾಣಿಕೆ ನೀಡುತ್ತೇವೆ. ಸೀನಿಯರ್ ತಂಡದಲ್ಲಿ ಸ್ಥಾನ ಸಿಕ್ಕರೆ ಅತ್ಯುನ್ನತ ಸಾಧನೆಯನ್ನು ಮಾಡುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ತಂಡದ ಎಲ್ಲರಿಗೂ ತಮ್ಮ ಹೊಣೆಯ ಅರಿವು ಚೆನ್ನಾಗಿತ್ತು. ಅದನ್ನು ಶಿಸ್ತಿನಿಂದ ನೆರವೇರಿಸಿದರು. ಆದ್ದರಿಂದಲೇ ಗೆಲುವು ಸಾಧಿಸಲು ಸಾಧ್ಯವಾಯಿತು’ ಎಂದರು.

ಈ ಸಂದರ್ಭದಲ್ಲಿ ಹಾಜರಿದ್ದ ತಂಡದ ಕೋಚ್ ಹರೇಂದರ್ ಸಿಂಗ್, ‘ಮೊದಲರ್ಧದಲ್ಲಿ ಎರಡು ಗೋಲುಗಳ ಮುನ್ನಡೆ ಗಳಿಸಿದ್ದೆವು. ಆ ಮುನ್ನಡೆ ಯನ್ನು ನಿರಂತರವಾಗಿ ಕಾಪಾಡಿ ಕೊಂಡು ಹೋಗುವುದು ಯೋಜನೆ ಯಾಗಿತ್ತು.  ಆದ್ದರಿಂದಲೇ ರಕ್ಷಣಾತ್ಮಕ ಆಟಕ್ಕೆ ಹೆಚ್ಚು ಒತ್ತು ಕೊಡಲಾಯಿತು. ಅದು ಫಲ ನೀಡಿತು’ ಎಂದರು.

*
ಕೊನೆಯಲ್ಲಿ ರಕ್ಷಣಾತ್ಮಕ ಆಟಕ್ಕೆ ಒತ್ತು ಕೊಟ್ಟಿದ್ದರಿಂದ ಗೆಲುವಿನ ಹಾದಿ ಸುಗಮವಾಯಿತು.
-ಹರ್ಜಿತ್‌ ಸಿಂಗ್‌,
ಭಾರತ ತಂಡದ ನಾಯಕ

No Comments

Leave A Comment