Log In
BREAKING NEWS >
ನಡೆದಾಡುವ ದೇವರು “ಸಿದ್ದಗಂಗಾಶ್ರೀ” ಶಿವೈಕ್ಯ......ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ನೋಟು ಗದ್ದಲದಲ್ಲಿ ಕಳೆದುಹೋದ ಚಳಿಗಾಲದ ಅಧಿವೇಶನ : ಮತ್ತೆ ಕೆರಳಿದ ಅಡ್ವಾಣಿ ನನಗೆ ರಾಜೀನಾಮೆ ನೀಡಬೇಕು ಅನ್ನಿಸುತ್ತಿದೆ

pvec16dkadvaniನವದೆಹಲಿ: ಸಂಸತ್‌ನ ಚಳಿಗಾಲದ ಅಧಿವೇಶನ ಮುಕ್ತಾಯದ ಹಂತ ತಲುಪಿದ್ದರೂ ಲೋಕಸಭೆಯಲ್ಲಿ ಒಂದೂ ದಿನ ಪೂರ್ಣ ಪ್ರಮಾಣದ ಚರ್ಚೆಗೆ ಅವಕಾಶ ದೊರೆಯದಿರುವುದು ಬಿಜೆಪಿಯ ಹಿರಿಯ ಮುಖಂಡ ಎಲ್‌.ಕೆ. ಅಡ್ವಾಣಿ ಅವರನ್ನು ಮತ್ತೆ ಕೆರಳಿಸಿದೆ.

ನಿತ್ಯವೂ ಶ್ರದ್ಧೆಯಿಂದ ಲೋಕಸಭೆಗೆ ಹಾಜರಾಗುವ ಅವರು ಗುರುವಾರ ಮಧ್ಯಾಹ್ನ 12.15ಕ್ಕೆ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು ದಿನದ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಿದ್ದನ್ನು ಕಂಡು ಕೆಂಡಾಮಂಡಲವಾದರು.

ಆಡಳಿತ ಮತ್ತು ವಿರೋಧ ಪಕ್ಷಗಳ ಬಹುತೇಕ ಸದಸ್ಯರು ಲೋಕಸಭೆಯಿಂದ ಎದ್ದು ಹೋದರೂ ಅಡ್ವಾಣಿ ಮಾತ್ರ ಮುಂದಿನ ಸಾಲಿನಲ್ಲೇ ಇರುವ ತಮ್ಮ ಆಸನ ಬಿಟ್ಟು ಕದಲದೆ ಧರಣಿ ನಡೆಸಲು ಕುಳಿತುಕೊಳ್ಳುವಂತೆಯೇ ಒಂದಷ್ಟು ಸಮಯ ಅಲ್ಲೇ ಮೌನವಾಗಿ ಕುಳಿತರು. ಆಗ ತಮ್ಮನ್ನು ಸಮಾಧಾನಪಡಿಸಲು ಬಂದ ಸಚಿವರೆದುರು ಸರ್ಕಾರದ ವಿರುದ್ಧ, ಸ್ಪೀಕರ್‌ ವಿರುದ್ಧ ಮಾತಿನ ಚಾಟಿ ಬೀಸಿದರು.

ಮೊದಲು ಸಚಿವೆ ಸ್ಮೃತಿ ಇರಾನಿ ಎದುರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ‘ಕ್ರೋಧಭರಿತ’ ಅಡ್ವಾಣಿ, ನಂತರ ಬಂದ ಕೇಂದ್ರದ ಗೃಹ ಸಚಿವ ರಾಜನಾಥ ಸಿಂಗ್‌ ಬಳಿಯೂ ಚರ್ಚೆಯೇ ನಡೆಯದಿರುವ ಕುರಿತು ದುಃಖ ತೋಡಿಕೊಂಡರು.

‘ನಿತ್ಯವೂ ಸಂಸತ್‌ನ ಕಲಾಪಕ್ಕೆ ಅವಕಾಶ ದೊರೆಯದಿರುವುದು ನನಗೆ ದಿಗ್ಭ್ರಮೆ ಮೂಡಿಸಿದೆ. ಸಂಸತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು ಅನ್ನಿಸುತ್ತಿದೆ’ ಎಂದೂ ಅವರು ಭಾವುಕರಾಗಿ ನುಡಿದರು.

‘ಅಧಿವೇಶನವನ್ನು ಶುಕ್ರವಾರ ಅನಿರ್ದಿಷ್ಟ ಅವಧಿಗೆ ಮುಂದೂಡಲಾಗುತ್ತದೆ. ಆದರೂ ಚರ್ಚೆಗೆ ಅವಕಾಶ ದೊರೆತಿಲ್ಲ. ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‌ ಚರ್ಚೆಗೆ ಅವಕಾಶ ಕಲ್ಪಿಸಲು ಪ್ರಯತ್ನಿಸಬೇಕಿತ್ತು. ವಿರೋಧ ಪಕ್ಷಗಳು ಚರ್ಚೆಗೆ ಆಸಕ್ತಿ ತಾಳಿದರೂ ಸ್ಪೀಕರ್‌ ಕಲಾಪ ಮುಂದೂಡಿದ್ದೇಕೆ ಎಂಬುದು ಅರ್ಥವಾಗಲಿಲ್ಲ.  ನಾಳೆಯಾದರೂ ಅವರಿಗೆ ನೋಟು ರದ್ದತಿ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ತಿಳಿಸಿ’ ಎಂದು ಖಾರವಾಗಿಯೇ ಹೇಳಿದ್ದು, ಪತ್ರಕರ್ತರ ಗ್ಯಾಲರಿಗೆ ಸ್ಪಷ್ಟವಾಗಿ ಕೇಳಿಸಿತು.

ಡಿ.7ರಂದೂ ಚರ್ಚೆ ನಡೆಯದಿರುವ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದ ಅಡ್ವಾಣಿ, ಈ ಇಬ್ಬರೂ ಸಚಿವರ ಬಳಿ ನೋವು ತೋಡಿಕೊಳ್ಳುತ್ತಿರುವುದು ಅವರ ಮುಖಭಾವದ ಮೂಲಕವೇ ತಿಳಿದುಬಂತು.

ಎಷ್ಟೇ ಸಮಜಾಯಿಷಿ ನೀಡಿದರೂ ಪಕ್ಷದ ಮಾರ್ಗದರ್ಶಕ ಮಂಡಳಿಯ ಸದಸ್ಯರೂ ಆಗಿರುವ ಅಡ್ವಾಣಿ ಅವರು ಸಮಾಧಾನಗೊಳ್ಳದ್ದರಿಂದ ಇಬ್ಬರೂ ಸಚಿವರು ಕೈಚೆಲ್ಲಿ ಅಲ್ಲಿಂದ ಹೊರನಡೆದರು.

ನಂತರವೂ ಒಬ್ಬರೇ ತಮ್ಮ ಆಸನದಲ್ಲಿ ಕುಳಿತು ಗಹನವಾದ ಆಲೋಚನೆಯಲ್ಲಿ ತೊಡಗಿದಂತೆ ಕಂಡುಬಂದ ಕಪ್ಪು ಟೋಪಿ, ಕಪ್ಪು ಕೋಟು ಧರಿಸಿದ್ದ ಅಡ್ವಾಣಿ ಅವರ ಹತ್ತಿರ ಮೆಲ್ಲಗೆ ತೆರಳಿದ ತೃಣಮೂಲ ಕಾಂಗ್ರೆಸ್‌ ಸದಸ್ಯ ಇದ್ರಿಸ್‌ ಅಲಿ ಹೆದರುತ್ತಲೇ ಪಕ್ಕದಲ್ಲಿ ಕುಳಿತು, ಹಿರಿಯ ಸಹೋದ್ಯೋಗಿಯನ್ನು ಮಾತಿಗೆಳೆದರು.

‘ಸದನ ನಡೆಯದಿದ್ದರೆ ಸಂಸತ್‌ನ ಹೆಸರು ಹಾಳಾಗುತ್ತದೆ. ಅದಕ್ಕೇ ಸದನ ನಡೆಯುವಂತಾಗಬೇಕು. ಆದರೆ, ಸದನದಲ್ಲಿ ಎಲ್ಲರೂ ಗೆಲ್ಲಲು ಬಯಸುತ್ತಾರೆ. ಅವರ ಹಟದಿಂದ ಸಂಸತ್ತು ಸೋಲನುಭವಿಸುತ್ತದೆ’ ಎಂದು ಅವರು ಜೋರಾಗಿಯೇ ಹೇಳಿದ್ದು ಸೂಜಿ ಬಿದ್ದರೂ ಕೇಳುವಂತಹ ಮೌನಕ್ಕೆ ಜಾರಿದ್ದ ಸದನದಲ್ಲಿ ಕೇಳಿಬಂತು. ಅವರೆದುರು ನಿಂತಿದ್ದ ಕೇಂದ್ರದ ರಾಜ್ಯ ಖಾತೆ ಸಚಿವ ಮಹೇಂದ್ರನಾಥ ಪಾಂಡೆ, ಪತ್ರಕರ್ತರು ಇಡೀ ಪ್ರಸಂಗವನ್ನು ವೀಕ್ಷಿಸುತ್ತಿರುವುದನ್ನು ಕಂಡವರೇ ಅಲ್ಲಿಂದ ಜಾಗಕಿತ್ತರು. ಅಲಿ ಅವರೊಂದಿಗೆ ಇದ್ದ ಬಿಜೆಪಿಯ ಸಂಸದ ನಾನಾ ಪಟೋಲೆ ಅವರು ಈ ಬೆಳವಣಿಗೆಗೆ ಸಾಕ್ಷಿಯಾದರು.

ಮುಂದುವರಿದ ಗದ್ದಲ: ಕಲಾಪ ಮುಂದಕ್ಕೆ
ನವದೆಹಲಿ: ಇದಕ್ಕೂ ಮೊದಲು ಬೆಳಿಗ್ಗೆ 11ಕ್ಕೆ ಕಲಾಪ ಆರಂಭವಾದೊಡನೆಯೇ ಆಡಳಿತ ಮತ್ತು ಪ್ರತಿಪಕ್ಷಗಳ ಗದ್ದಲ ಮುಂದುವರಿದಿದ್ದರಿಂದ ಮಧ್ಯಾಹ್ನ 12ಕ್ಕೆ ಮುಂದೂಡಿದ ಸ್ಪೀಕರ್‌, ಮಧ್ಯಾಹ್ನ ಪ್ರತಿಪಕ್ಷಗಳು ಯಾವುದಾದರೂ ನಿಯಮದಡಿ ಚರ್ಚೆಗೆ ಸಿದ್ಧ ಎಂದು ತಿಳಿಸಿದರೂ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‌ ಅವರ ಮಾತಿನಿಂದ ಗದ್ದಲ ಆರಂಭವಾಗಿದ್ದರಿಂದ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಿದರು.

ಯುಪಿಎ ಆಡಳಿತದ ಅವಧಿಯಲ್ಲಿ ನಡೆದಿದೆ ಎನ್ನಲಾದ ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಹಗರಣದ ಕುರಿತು ಸಮಗ್ರ ಚರ್ಚೆ ನಡೆಯಬೇಕು ಎಂದು ಅನಂತಕುಮಾರ್‌ ಅವರು ಹೇಳಿದ್ದೇ ಕಾಂಗ್ರೆಸ್‌ ಸದಸ್ಯರು ಗದ್ದಲದಲ್ಲಿ ತೊಡಗಲು ಕಾರಣವಾಯಿತು.

No Comments

Leave A Comment