Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ನಾಟಕ, ಸಂಗೀತ, ಕಲೆ ಮೊದಲಾದವುಗಳು ಮನುಷ್ಯನ ಮನೋನೆಲೆಯ ಸೆಲೆಗಳು: ವೈದೇಹಿ

_mg_2643ಬೈಂದೂರು: ನಾಟಕ, ಸಂಗೀತ, ಕಲೆ ಮೊದಲಾದವುಗಳು ಮನುಷ್ಯನ ಮನೋನೆಲೆಯ ಸೆಲೆಗಳು. ಬದುಕಿನ ಅವಕಾಶಗಳನ್ನು ಅರಸಿ ಎಲ್ಲೆಯೋ ನೆಲೆ ಕಾಣಲು ಹೊರಟರೂ ಅಂತಿಮವಾಗಿ ಕಲೆ ಮನುಷ್ಯನ ಕೈಹಿಡಿದು ನಡೆಸುತ್ತದೆ ಎಂದು ಖ್ಯಾತ ಸಾಹಿತಿ ವೈದೇಹಿ ಹೇಳಿದರು.

ಅವರು ಸುರಭಿ ರಿ. ಬೈಂದೂರು ಹಾಗೂ ಯಸ್ಕೋರ್ಡ್ ಟ್ರಸ್ಟ್ ರಿ. ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ‘ರಂಗಸುರಭಿ ೨೦೧೬’ ನಾಟಕ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು.

ರಂಗಭೂಮಿಗೆ ಇಂಡಸ್ಟ್ರಿ ಎಂಬುದಿಲ್ಲ. ರಂಗಭೂಮಿಯನ್ನು ಯಾರೂ ಕೊಂಡುಕೊಳ್ಳಲಾಗುವುದಿಲ್ಲ. ರೂಪಕ ಭಾಷೆಯಾಗಿ ಜನರೊಂದಿಗೆ ಇರುವ ರಂಗಭೂಮಿಗೆ ಸಾವೆಂಬುದಿಲ್ಲ. ಸ್ವಕೇಂದ್ರಿತ ಸಮಾಜ ನಿರ್ಮಾಣವಾಗುತ್ತಿರುವ ಕಾಲಘಟ್ಟದಲ್ಲಿ, ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ರಂಗ ಚಟುವಟಿಕೆಗಳು ಮುಖ್ಯ ಎಂದೆನಿಸಿಕೊಳ್ಳುತ್ತವೆ. ಆ ನೆಲೆಯಲ್ಲಿ ಬೈಂದೂರಿನ ಸುರಭಿ ಸಂಸ್ಥೆಯ ಬಹುದೊಡ್ಡ ಹೆಜ್ಜೆ ಇಟ್ಟಿದೆ ಎಂದವರು ಶ್ಲಾಘಿಸಿದರು.

ನಾವು ಮನುಷ್ಯನ ಅಸ್ಪೃಷ್ಯತೆಗಳ ಬಗೆಗೆ ಬಹಳ ಮಾತನಾಡುತ್ತೇವೆ. ಅಂತಿಮವಾಗಿ ಅವುಗಳನ್ನು ಹೇಗಾದರೂ ನಿವಾರಿಸಬಹುದು. ಆದರೆ ಮನುಷ್ಯನ ಭಾವನೆಗಳ ಅಸ್ಪೃಷ್ಯತೆಯನ್ನು ಹೊಗಲಾಡಿಸಿಕೊಳ್ಳುವು ಹೇಗೆ. ಮನಷ್ಯನ ಮನಸ್ಸುನ್ನು ಅರಿಯುವುದು ಹೇಗೆಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಆನೆಯನ್ನೂ ಇರುವೆಯನ್ನೂ ಒಂದೇ ಎಂದು ಅರ್ಥಮಾಡಿಕೊಳ್ಳುವ ಪ್ರಕೃತಿ ಪ್ರೀತಿಯನ್ನು, ಎಲ್ಲರೂ ನಮ್ಮೊಳಗೆ ಇದ್ದಾರೆಂಬ ತನ್ಮಯತೆಯನ್ನು ರಂಗಭೂಮಿ ಮೂಖಾಂತರ ಮಾತ್ರವೇ ಸಾಧಿಸಿಕೊಳ್ಳಲು ಸಾಧ್ಯವಿದೆ ಎಂದರು.

ಕುಂದಾಪ್ರ ಕನ್ನಡ ಭಾಷೆಯಲ್ಲಿಯೇ ರಂಗಭೂಮಿ ನಿರ್ಮಾಣಗೊಳಲಿ:

ರಂಗಕರ್ಮಿ ಬಿ.ವಿ.ಕಾರಂತರು ಆಯಾಯ ಭಾಷೆಯದ್ದೇ ಒಂದು ಥಿಯೇಟರ್ ನಿರ್ಮಾಣಗೊಳ್ಳಬೇಕು ಎಂದು ಆಶಿಸಿದ್ದರು. ಭಾಷೆ, ಉಚ್ಚಾರವನ್ನು ತಿದ್ದುವ, ಮಾತನಾಡುವ ಅವಕಾಶ ಇರುವುದು ರಂಗಭೂಮಿಯಲ್ಲಿ. ಹಾಗಾಗಿ ನಮ್ಮ ಕುಂದಾಪುರ ಕನ್ನಡ ಭಾಷೆಯಲ್ಲಿಯೂ ರಂಗಭೂಮಿ ನಿರ್ಮಾಣಗೊಳ್ಳೂವ ಅಗತ್ಯತೆ ಇದೆ ಎಂದರು.

ಟಿವಿ ಮಾಧ್ಯಮ ಭಾಷೆಯನ್ನು ಕೊಲ್ಲುತ್ತಿದೆ. ಹೆಣ್ಣಲ್ಲದ ಹೆಣ್ಣನ್ನು ಹೆಣ್ಣಿನ ಮೂಲಕವೇ ಚಿತ್ರಸಿ ಅಪಸವ್ಯವನ್ನು ಮಾಡುತ್ತಿದೆ. ಸ್ರೀಪರವಾದ ಧ್ವನಿ ಹಾಗೂ ಹೆಣ್ಣಿನ ಶೋಷಣೆಯನ್ನು ಪರಿಣಾಮಕಾರಿಯಾಗಿ ತೆರೆದಿಡುವುದು ರಂಗಭೂಮಿ ಮಾತ್ರ ಎಂದವರು ಹೇಳಿದರು.

ಸುರಭಿಯ ಗೌರವಾಧ್ಯಕ್ಷ, ಹಿರಿಯ ಸಾಹಿತಿ ಯು. ಚಂದ್ರಶೇಖರ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು.

ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯ ಶಂಕರ ಪೂಜಾರಿ, ಯಡ್ತರೆ ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜ ಶೆಟ್ಟಿ, ಬೈಂದೂರು ಶ್ರೀ ಸೇನೇಶ್ವರ ದೇವಳದ ಆಡಳಿತ ಧರ್ಮದರ್ಶಿ ಚನ್ನಕೇಶವ ಉಪಾಧ್ಯಾಯ, ಸುರಭಿ ರಿ. ಬೈಂದೂರು ಅಧ್ಯಕ್ಷ ಶಿವರಾಮ ಕೊಠಾರಿ ಯಡ್ತರೆ, ಯಸ್ಕೋರ್ಡ್ ಟ್ರಸ್ಟ್‌ನ ಕೃಷ್ಣಮೂರ್ತಿ ಉಡುಪ ಕಬ್ಸೆ ಉಪಸ್ಥಿತರಿದ್ದರು.

ರಂಗ ನಿರ್ದೇಶಕ ಪ್ರಕಾಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಾಹಿತಿ ಯು. ಚಂದ್ರಶೇಖರ ಹೊಳ್ಳ ಸುರಭಿ ಕಲಾಗ್ರಾಮಕ್ಕೆ ನಿರ್ಮಾಣಕ್ಕೆ ೧ ಲಕ್ಷ ದೇಣಿಗೆ ಘೋಷಿಸಿದರು.
ಸುರಭಿಯ ನಿರ್ದೇಶಕ ಸುಧಾಕರ ಪಿ. ಬೈಂದೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ಅಶೋಕ್ ಸನ್ಮಾನಿತರ ಪರಿಚಯ ಪತ್ರ ವಾಚಿಸಿದರು. ನಿರ್ದೇಶಕ ಗಣಪತಿ ಹೋಬಳಿದಾರ್ ಸ್ವಾಗತಿಸಿದರು. ಕಾರ್ಯದರ್ಶಿ ಲಕ್ಷ್ಮಣ್ ವೈ ಕೊರಗ ವಂದಿಸಿದರು. ಶಿಕ್ಷಣ ರಾಘವೇಂದ್ರ ದಡ್ಡು ಹಾಗೂ ನಿಶ್ಚಿತ ಕಾರ್ಯಕ್ರಮ ನಿರೂಪಿಸಿದರು.

No Comments

Leave A Comment