ವರ್ಧಾ ಚಂಡಮಾರುತಕ್ಕೆ ನಲುಗಿದ ಚೆನ್ನೈ; ಸಾವಿನ ಸಂಖ್ಯೆ 10ಕ್ಕೆ ಏರಿಕೆ
ಚೆನ್ನೈ: ಸೋಮವಾರ ಅಪ್ಪಳಿಸಿದ ವರ್ಧಾ ಚಂಡಮಾರುತದಿಂದಾಗಿ ಚೆನ್ನೈ ನಗರ ಸಂಪೂರ್ಣ ನಲುಗಿ ಹೋಗಿದ್ದು, ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
ಭಾರಿ ಮಳೆ ಹಾಗೂ ಬಿರುಗಾಳಿಯಿಂದಾಗಿ ಚೆನ್ನೈ ಹೊರವಲಯದಲ್ಲಿ ಭೂಕುಸಿತವಾಗಿದ್ದು, ಸುಮಾರ 120ರಿಂದ 130 ಕಿಮೀ ವೇಗದಲ್ಲಿ ಬೀಸಿದ ಗಾಳಿ ಕರಾವಳಿ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಹಾನಿಯುಂಟು ಮಾಡಿದೆ ಎಂದು ತಿಳಿದುಬಂದಿದೆ. ಅಂತೆಯೇ ಮುಂದಿನ 12 ಗಂಟೆಗಳಲ್ಲಿ ಚೆನ್ನೈನಾದ್ಯಂತ ಭಾರಿ ಮಳೆಯಾಗುವ ಕುರಿತು ಕೇಂದ್ರ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಚೆನ್ನೈ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ತಗ್ಗು ಪ್ರದೇಶಗಳಲ್ಲಿ ಅಪಾಯಕ್ಕೆ ಸಿಲುಕಿದ್ದ ಸುಮಾರು 20 ಸಾವಿರ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ರವಾನಿಸಲಾಗಿದೆ.
ಇನ್ನು ವರ್ಧಾ ಚಂಡಮಾರುತಕ್ಕೆ ಸುಮಾರು 10 ಮಂದಿ ಬಲಿಯಾಗಿದ್ದು, ಚೆನ್ನೈನಗರದಲ್ಲಿ 4 ಮತ್ತು ಕಾಂಚಿಪುರಂ, ತಿರುವಳ್ಳೂರ್ ನಲ್ಲಿ ತಲಾ ಎರಡು ಹಾಗೂ ವಿಳ್ಳುಪುರಂ ಮತ್ತು ನಾಗಪಟ್ಟಣಂನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ವರ್ಧಾ ಚಂಡಮಾರುತದಿಂದಾಗಿ ರಾಜಧಾನಿ ಚೆನ್ನೈ ನಗರಾದ್ಯಂತ ಸುಮಾರು 1500ಕ್ಕೂ ಅಧಿಕ ಮರಗಳು ಧರೆಗುರುಳಿದ್ದು, ಸಿಎಂ ಪನ್ನೀರ್ ಸೆಲ್ವಂ ಅವರು ಅಧಿಕಾರಿಗಳೊಂದಿಗೆ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ.
ಸಂತ್ರಸ್ತರ ಕುಟುಂಬಕ್ಕೆ ಪರಿಹಾರ
ಅಂತೆಯೇ ಪ್ರಕೃತಿ ವಿಕೋಪಕ್ಕೆ ಬಲಿಯಾದವರ ಕುಟುಂಬಗಳಿಗೆ ತಲಾ 4 ಲಕ್ಷ ಹಣ ನೀಡುವುದಾಗಿ ತಮಿಳುನಾಡು ಸರ್ಕಾರ ಘೋಷಣೆ ಮಾಡಿದೆ.