ಕಾಶ್ಮೀರ: ಉಗ್ರರಿಂದ ಬ್ಯಾಂಕ್ ಲೂಟಿ; ಸೇನೆ ಗುಂಡಿಗೆ 3 ಉಗ್ರರು ಬಲಿ
ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅರಿಹಾಳ್ ಎಂಬಲ್ಲಿ ಖಾಸಗಿ ಬ್ಯಾಂಕ್ವೊಂದಕ್ಕೆ ಗುರುವಾರ ದಾಳಿ ನಡೆಸಿದ ಶಸ್ತ್ರಸಜ್ಜಿತ ಉಗ್ರರು 10 ಲಕ್ಷ ರೂಪಾಯಿ ಹಣದೊಂದಿಗೆ ಪರಾರಿಯಾದ ಘಟನೆ ನಡೆದಿದ್ದು, ಕೆಲವೇ ಕ್ಷಣದಲ್ಲಿ ನಡೆದ ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ಅನಂತ್ನಾಗ್ನಲ್ಲಿ ಸೇನಾ ಪಡೆಗಳು ಗುಂಡಿನ ಚಕಮಕಿ ನಡೆಸಿ ಮೂವರು ಉಗ್ರರನ್ನು ಹತ್ಯೆಗೈದಿದ್ದಾರೆ.
ಅರಿಹಾಳ್ ಗ್ರಾಮದಲ್ಲಿ 4 ರಿಂದ 5 ಮಂದಿ ಉಗ್ರರೆನ್ನಲಾದ ಶಸ್ತ್ರಧಾರಿಗಳು ಬ್ಯಾಂಕ್ಗೆ ನುಗ್ಗಿ ದರೋಡೆಗೈದು ಪರಾರಿಯಾಗಿದ್ದು, ಸ್ಥಳದಲ್ಲಿ ಸೇನಾಪಡೆಗಳು ಮತ್ತು ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ. ಬುದ್ಗಾಮ್ನಲ್ಲೂ ಶಸ್ತ್ರಧಾರಿಯೊಬ್ಬ ಬ್ಯಾಂಕ್ ಲೂಟಿಗೆ ವಿಫಲ ಯತ್ನ ನಡೆಸಿರುವುದಾಗಿ ವರದಿಯಾಗಿದೆ. ನೋಟು ಅಪನಗದೀಕರಣ ನಡೆದ ಬಳಿಕ ಉಗ್ರರು ಬ್ಯಾಂಕ್ ಮೇಲೆ ನಡೆಸಿದ 2 ನೇ ದಾಳಿ ಇದಾಗಿದೆ.
ಅನಂತ್ನಾಗ್ ಜಿಲ್ಲೆಯ ಅರ್ವಾನಿಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಮೂವರು ಲಷ್ಕರ್ ಎ ತೋಯ್ಬಾ ಉಗ್ರರು ಹತವಾಗಿರುವ ಬಗ್ಗೆ ಸೇನಾ ಮೂಲಗಳು ತಿಳಿಸಿವೆ.
ಮನೆಯೊಂದರಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿಯ ಮೇಲೆ ಸೇನಾಪಡೆ ಕಾರ್ಯಾಚರಣೆಗಿಳಿದಿತ್ತು. ಉಗ್ರರ ಪೈಕಿ ಲಷ್ಕರ್ ಎ ತೋಯ್ಬಾ ಕಮಾಂಡರ್ ಅಬು ದುಜಾನಾ ಸೇರಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಸ್ಥಳದಲ್ಲಿ ಸೇನಾ ಶೋಧ ಮುಂದುವರೆದಿದೆ.