Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಕರ್ನಾಟಕದ ಮಗಳಾಗಿ ಹುಟ್ಟಿ ತಮಿಳುನಾಡಿಗೆ ಅಮ್ಮನಾಗಿ ಬೆಳೆದ ಜಯಲಲಿತಾ!

jaya-mgrಸಿನಿಮಾ ಮತ್ತು ರಾಜಕೀಯ ಎರಡು ಭಿನ್ನ ಕ್ಷೇತ್ರಗಳು. ಆದರೆ ಈ ಎರಡೂ ಕ್ಷೇತ್ರಗಳಲ್ಲಿ ಪಾದಾರ್ಪಣೆ ಮಾಡಿ ಅಭೂತಪೂರ್ವ ವಿಜಯ ಸಾಧಿಸಿದ ದಿಟ್ಟ ಮಹಿಳೆ ಜಯಲಲಿತಾ.

ತಮ್ಮ ಯೌವ್ವನದಲ್ಲಿ ಸಿನಿಮಾ ನಟಿಯಾಗಿ ಸಿನಿ ಅಭಿಮಾನಿಗಳ ರಂಜಿಸಿದ ಜಯಲಲಿತಾ, ಮಧ್ಯವಯಸ್ಸಿನಲ್ಲಿ ಪ್ರಜಾಪ್ರತಿನಿಧಿಯಾಗಿ ಒಂದು ರಾಜ್ಯದ ಜನತೆ ಅಮ್ಮಾ ಎಂದು ಕರೆಯುವಷ್ಟರಮಟ್ಟಿಗೆ ರಾಜಕೀಯವಾಗಿ ಬೆಳೆದು ನಿಂತರು. ವಿವಾದ, ಭ್ರಷ್ಟಾಚಾರ ಆರೋಪ ಮತ್ತು ಹಲವು ಅವಮಾನಗಳು ಎದುರಾದರೂ ಅವುಗಳನ್ನು ಏಕಾಂಗಿಯಾಗಿಯೇ ಎದುರಿಸಿ ಜಯಶೀಲರಾಗಿ ಮತ್ತೆ ರಾಜಕೀಯದಲ್ಲಿ ಯಶಸ್ಸು ಸಾಧಿಸಿದ್ದ ಧೀರ ಮಹಿಳೆ ಜಯಲಲಿತಾ ಅವರ ಜೀವನದ ಕೆಲ ಮಹತ್ವದ ಮಾಹಿತಿಗಳು ಇಲ್ಲಿವೆ.

ಜಯಲಲಿತಾ ಅವರ ಮೂಲ ಹೆಸರು ಜಯಲಲಿತಾ ಜಯರಾಮ್. ಹುಟ್ಟಿದ್ದು 1948 ಫೆಬ್ರವರಿ 24 ಕರ್ನಾಟಕದ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ. (ಅಂದಿನ ಮೈಸೂರು ಸಂಸ್ಥಾನ) ತಂದೆ ಹೆಸರು ಜಯರಾಮ್ ಹಾಗೂ ತಾಯಿ ಸಂಧ್ಯಾ. ಸಂಧ್ಯಾ ಅವರ ಮೂಲ ಹೆಸರು ವೇದವಲ್ಲಿ ಅಥವಾ ವೇದಾವತಿ ಎಂದು. ಸಂಧ್ಯಾ ಅವರು ಕೂಡ ನಟಿಯಾಗಿದ್ದು, ನಾಟಕರಂಗ ಮತ್ತು ಸಿನಿಮಾದಲ್ಲಿ ಗುರುತಿಸಿಕೊಂಡಿದ್ದರು.

ಸಂಧ್ಯಾ ಮತ್ತು ಜಯರಾಮ್ ಅವರದ್ದು ಬ್ರಾಹ್ಮಣ ಕುಟುಂಬ. ಅಂದಿನ ಕಾಲದಲ್ಲಿ ಮಕ್ಕಳಿಗೆ ಎರಡೆರಡು ಹೆಸರುಗಳನ್ನು ಇಡುವ ರೂಢಿ ಇತ್ತು. ಇದೇ ಕಾರಣಕ್ಕಾಗಿ ಜಯಲಲಿತಾ ಅವರಿಗೂ ಎರಡೆರಡು ಹೆಸರುಗಳಿದ್ದವು. ಒಂದು ಜಯಲಲಿತಾ ಮತ್ತೊಂದು ಕೋಮವಲ್ಲಿ. ಆದರೆ ಬಳಿಕ ಅವರ ಹೆಸರು ಜಯಲಲಿತಾ ಆಗಿಯೇ ಶಾಶ್ವತವಾಯಿತು.ಜಯಲಲಿತಾ ಅವರ ತಂದೆ ಕಾನೂನು ವ್ಯಾಸಂಗ ಮಾಡಿದ್ದರಾದರೂ ಅವರು ಕೆಲಸಕ್ಕೆ ಹೋಗುತ್ತಿರಲಿಲ್ಲವಂತೆ. ಜಯಲಲಿತಾ ಅವರ ತಂದೆ ಕುಡಿತ ಮತ್ತು ದುಷ್ಚಟಗಳಿಗೆ ಬಲಿಯಾಗಿ ತೀರಾ ಚಿಕ್ಕವಯಸ್ಸಿನಲ್ಲಿ 1950ರಲ್ಲಿ ನಿಧನರಾಗಿದ್ದರು.

ತಂದೆ ನಿಧನರಾದಾಗ ಜಯಲಲಿತಾ ಅವರ ವಯಸ್ಸು ಕೇವಲ 2 ವರ್ಷ. ಇದೇ ಕಾರಣಕ್ಕೆ ಇಡೀ ಸಂಸಾರದ ಜವಾಬ್ದಾರಿ ಜಯಲಲಿತಾ ಅವರ ತಾಯಿ ಸಂಧ್ಯಾ ಅವರ ಮೇಲಿತ್ತು. ಸಾಕಷ್ಟು ಕಷ್ಟ ಪಟ್ಟು ಮಕ್ಕಳನ್ನು ಸಾಕಿದ್ದ ಸಂಧ್ಯಾ ಅವರು ಜಯಲಲಿತಾ ಅವರನ್ನು ಮೆಟ್ರಿಕ್ಯುಲೇಷನ್ ವರೆಗೂ ಓದಿಸಿದ್ದರು.

ಓದಿನಲ್ಲಿ ಸಾಕಷ್ಟು ಚುರುಕಾಗಿದ್ದ ಜಯಾಗೆ ಅಂದಿನ ಸರ್ಕಾರ ಸ್ಕಾಲರ್ ಷಿಪ್ ಕೂಡ ನೀಡಿತ್ತು.ಸಂಸಾರದ ನೊಗ ಹೊತ್ತಿದ್ದ ಜಯಲಲಿತಾ ಅವರ ತಾಯಿ ಸಂಧ್ಯಾ ಅವರು, ಜಯರಾಮ್ ನಿಧನದ ಬಳಿಕ ತಮ್ಮ ಸಹೋದರಿಯ ನೆರವಿನೊಂದಿಗೆ ಚೆನ್ನೈ ಸೇರಿಕೊಂಡಿದ್ದರು. ಸಂಧ್ಯಾ ಅವರು ಕೂಡ ನಟಿಯಾಗಿದ್ದು, ಚೆನ್ನೈನಲ್ಲಿ ಹಲವು ನಾಟಕಗಳಲ್ಲಿ ಮತ್ತು ಸಿನಿಮಾಗಳಲ್ಲಿ ಅಭಿನಯಿಸಿ ಅದರಿಂದ ಬಂದ ಹಣದಲ್ಲಿ ಸಂಸಾರ ನಡೆಸುತ್ತಿದ್ದರು. ಜಯಾ ಕೂಡ ತಮ್ಮ ತಾಯಿಯೊಂದಿಗೆ ಶೂಟಿಂಗ್ ಗೆ ತೆರಳುತ್ತಿದ್ದರು.

ತಾಯಿ ನಟನೆಯನ್ನು ನೋಡಿ ಸ್ಫೂರ್ತಿಗೊಂಡಿದ್ದರು. ಆ ಮೂಲಕ ಸಿನಿಮಾರಂಗಕ್ಕೆ ಜಯಾ ಹತ್ತಿರವಾಗಿದ್ದರು.1961ರಲ್ಲಿ ಮೊದಲ ಬಾರಿಗೆ ಬಾಲನಟಿಯಾಗಿ ಸಿನಿಮಾರಂಗ ಪ್ರವೇಶಿಸಿದ ಜಯಾ ಶ್ರೀಶೈಲ ಮಹಾತ್ಮೆ ಎಂಬ ಕನ್ನಡ ಚಿತ್ರದಲ್ಲಿ ಪಾರ್ವತಿ ದೇವಿ ಪಾತ್ರದಲ್ಲಿ ನಟಿಸಿದ್ದರು. ಬಳಿಕ ತಮ್ಮ 15ನೇ ವಯಸ್ಸಿನಲ್ಲಿ 1964ರಲ್ಲಿ ಚಿನ್ನದ ಗೊಂಬೆ ಎಂಬ ಚಿತ್ರದ ಮೂಲಕ ನಾಯಕ ನಟಿಯಾಗಿ ಜಯಾ ಭಡ್ತಿ ಪಡೆದರು.

ಆ ಚಿತ್ರದಲ್ಲಿನ ಅಭಿನಯಕ್ಕಾಗಿ ಅಂದು ಜಯಾ ಪಡೆದಿದ್ದು 3ಸಾವಿರ ರು ಸಂಭಾವನೆ. ಬಳಿಕ ಹಿಂದೆ ತಿರುಗಿ ನೋಡದ ಜಯ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ತಾರೆಯಾಗಿ ಬೆಳೆದರು. ಮನಸುಮಮತಾ ಎಂಬ ಚಿತ್ರದ ಮೂಲಕ ತೆಲುಗುಚಿತ್ರರಂಗ ಪ್ವೇಶಿಸಿದ ಜಯಾ, ಅಂದಿನ ಸೂಪರ್ ಸ್ಟಾರ್ ನಾಗೇಶ್ವರರಾವ್ ಅವರೊಂದಿಗೆ ನಟಿಸಿದ್ದರು. ಈ ಚಿತ್ರದ ಬಳಿಕ ತೆಲುಗಿನಲ್ಲೂ ತಮ್ಮ ಛಾಪು ಮೂಡಿಸಿದ ಜಯಾ ಅಂದಿನ ಕಾಲದ ಸೂಪರ್ ಸ್ಟಾರ್ ಗಳಾದ ಎನ್ ಟಿಆರ್, ಕೃಷ್ಣ, ಶೋಭನ್ ಬಾಬು ಅವರೊಂದಿಗೆ ಹಲವು ಚಿತ್ರಗಳಲ್ಲಿ ಅಭಿನಯಿಸಿದರು.

ಬಹುಮುಖ ಪ್ರತಿಭೆಯಾಗಿದ್ದ ಜಯಾ ಕೇವಲ ನಟನೆ ಮತ್ತು ನೃತ್ಯ ಮಾತ್ರವಲ್ಲ. ಹಾಡುಗಾರಿಕೆಯಲ್ಲೂ ಮಿಂಚಿದ್ದರು. ತಮ್ಮ ಹಲವು ಚಿತ್ರಗಳಲ್ಲಿ ಹಿನ್ನಲೆಗಾಯನ ನೀಡಿದ್ದ ಜಯಾ ಹಲವು ಕಾರ್ಯಕ್ರಮಗಳ ವೇದಿಕೆಯಲ್ಲಿ ಹಾಡಿದ್ದರು.ಎಂಜಿಆರ್ ಜೊತೆ ಜಯಾ ಮೊದಲ ಚಿತ್ರದಲ್ಲಿ ನಟಿಸುವಾಗ ಅವರಿಗೆ ಕೇವಲ 17 ವರ್ಷ ವಯಸ್ಸಂತೆ. ಎಂಜಿಆರ್ ಗೆ ಅಂದು 48 ವರ್ಷ ವಯಸ್ಸು.

ಈ ಭಾರಿ ವಯಸ್ಸಿನ ಅಂತರದ ನಡುವೆಯೂ ಈ ಜೋಡಿ ತಮಿಳುನಾಡಿನಲ್ಲಿ ಮೋಡಿ ಮಾಡಿತ್ತು. ಈ ಜೋಡಿ ಅಭಿನಯಿಸಿದ್ದ 28 ಚಿತ್ರಗಳ ಪೈಕಿ 24 ಚಿತ್ರಗಳು ಬ್ಲಾಕ್ ಬಸ್ಟರ್ ಆಗಿದ್ದವು. ಇದು ಈ ಜೋಡಿ ಯಶಸ್ಸಿಗೆ ಹಿಡಿದ ಕೈಗನ್ನಡಿ.

No Comments

Leave A Comment