Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಉಡುಪಿ ಕೃಷ್ಣ ಮಠದಲ್ಲಿ ಎಡೆಸ್ನಾನ ಹೊಸ ಸಂಪ್ರದಾಯಕ್ಕೆ ನಾಂದಿ

udupiಉಡುಪಿ: ಷಷ್ಠಿಯ ದಿನವಾದ ಸೋಮವಾರ ಶ್ರೀಕೃಷ್ಣ ಮಠದಲ್ಲಿ ಮಡೆ ಸ್ನಾನಕ್ಕೆ ಬದಲಾಗಿ ಎಡೆ ಸ್ನಾನಕ್ಕೆ ಅವಕಾಶ ನೀಡುವ ಮೂಲಕ ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.

ಮಠದ ಆವರಣದಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಲಾಯಿತು. ದೇವಸ್ಥಾನದ ಸುತ್ತಲೂ ಇಟ್ಟಿದ್ದ ಬಾಳೆ ಎಲೆಯ ಮೇಲೆ ಪ್ರಸಾದ ಬಡಿಸಿದ ನಂತರ, ಭಕ್ತರು ಅದರ ಮೇಲೆ ಉರುಳಿದರು. ಈ ಬಾರಿ ಕೇವಲ ಏಳು ಜನ ಮಾತ್ರ ಎಡೆ ಸ್ನಾನ ಮಾಡಿದರು. ಪೇಜಾವರ ಮಠದ ಆಡಳಿತ ಇರುವ ಮುಚ್ಲಕೋಡು ಸುಬ್ರಹ್ಮಣ್ಯ ದೇವಸ್ಥಾನದಲ್ಲಿಯೂ ಮಧ್ಯಾಹ್ನ ವಿಶೇಷ ಪೂಜೆ ನಡೆಯಿತು. ಬಾಳೆ ಎಲೆಯ ಮೇಲೆ ಬಡಿಸಿದ ನೈವೇದ್ಯದ ಮೇಲೆ ಭಕ್ತರು ಉರುಳುವ ಮೂಲಕ ಹರಕೆ ತೀರಿಸಿದರು. ಭಕ್ತರು ಉರುಳು ಸೇವೆ ಮುಗಿಸಿದ ನಂತರ ಪ್ರಸಾದವನ್ನು ಗೋವುಗಳಿಗೆ ನೀಡಲಾಯಿತು.

‘ದೇವರಿಗೆ ಸಮರ್ಪಿಸಿದ ನೈವೇದ್ಯದ ಮೇಲೆ ಭಕ್ತರು ಉರುಳುವುದು ಎಡೆಸ್ನಾನವಾಗಿದೆ. ಬ್ರಾಹ್ಮಣರು ಊಟ ಮಾಡಿದ ಎಲೆಯ ಮೇಲೆ ಭಕ್ತರು ಉರುಳುವುದಕ್ಕೆ ವಿರೋಧ ಇದೆ. ಆದ್ದರಿಂದ ಯಾವುದೇ ಚರ್ಚೆ ಹಾಗೂ ವಿವಾದಕ್ಕೆ ಆಸ್ಪದ ಮಾಡಿಕೊಡಬಾರದು ಎಂಬ ಕಾರಣಕ್ಕೆ ಎಡೆಸ್ನಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಪ್ರಾಚೀನ ಕಾಲದ ಸಂಪ್ರದಾಯವನ್ನು ಉಳಿಸಿದಂತಾಯಿತು ಹಾಗೂ ವಿವಾದಕ್ಕೆ  ಆಸ್ಪದವಾಗಲಿಲ್ಲ’ ಎಂದು ವಿಶ್ವೇಶತೀರ್ಥ ಸ್ವಾಮೀಜಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಅನ್ನವನ್ನು ವ್ಯರ್ಥ ಮಾಡುವ ಎಡೆ ಹಾಗೂ ಮಡೆಸ್ನಾನಗಳೆರಡೂ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಡೆ ಸ್ನಾನದ ನಂತರ ಅನ್ನವನ್ನು ಗೋವುಗಳಿಗೆ ನೀಡುವುದರಿಂದ ಅದು ವ್ಯರ್ಥವಾಗದು. ಈ ಸಂಪ್ರದಾಯವನ್ನು ಮುಂದುವರೆಸುವಂತೆ ನಾನು ಉಳಿದ ಮಠಾಧೀಶರಿಗೆ ಹೇಳುವುದಿಲ್ಲ. ನನ್ನ ಧೋರಣೆಯನ್ನು ಯಾರ ಮೇಲೆಯೂ ಹೇರುವ ಪ್ರಯತ್ನವನ್ನು ಈವರೆಗೆ ಮಾಡಿಲ್ಲ. ಎಡೆಸ್ನಾನವನ್ನು ಮುಂದುವರೆಸುವುದು ಅಥವಾ ಬಿಡುವುದು ಅವರವರ ತೀರ್ಮಾನಕ್ಕೆ ಬಿಟ್ಟ ವಿಷಯ ಎಂದರು.

ಈ ಹಿಂದೆ ನಾನು ದಲಿತರ ಕೇರಿಗೆ ಭೇಟಿ ನೀಡಿದಾಗ ವಿರೋಧಿಸಿದವರೇ ಈಗ ಅದನ್ನು ಒಪ್ಪಿಕೊಂಡಿದ್ದಾರೆ. ಮಂತ್ರಾಲಯ ಶ್ರೀಗಳು ಸಹ ಶಿವಮೊಗ್ಗದಲ್ಲಿ ದಲಿತರ ಕೇರಿಗೆ ಇತ್ತೀಚೆಗೆ ಭೇಟಿ ನೀಡಿದ್ದಾರೆ. ಕಂಚಿ ಕಾಮಕೋಟಿ ಶ್ರೀಗಳು, ದ್ವಾರಕಾಪೀಠದ ಶ್ರೀಗಳು ಸಹ ಆ ಕೆಲಸ ಮಾಡುತ್ತಿದ್ದಾರೆ ಎಂದರು.

ಒಳ್ಳೆಯದಾಗಲಿ ಎಂದು ಎಡೆಸ್ನಾನ: ಕಣ್ಣಿಗೆ ಕಾಣುವ ದೇವರು ಎಂದರೆ ಅದು ನಾಗ, ಆದ್ದರಿಂದ ಆತನಲ್ಲಿ ನನಗೆ ಅಪಾರ ಭಕ್ತಿ. ಹರಕೆ ಹೊತ್ತು ನಾನು ಎಡೆಸ್ನಾನ ಮಾಡಲಿಲ್ಲ.

ದೇವರು ಒಳ್ಳೆಯದು ಮಾಡಲಿ ಎಂಬ ಕಾರಣಕ್ಕೆ ಹಲವು ವರ್ಷಗಳಿಂದ ಇದನ್ನು ಮಾಡುತ್ತಿದ್ದೇನೆ. ನನ್ನ ಮಕ್ಕಳೆಲ್ಲ ಚೆನ್ನಾಗಿ ಓದಿ ಉದ್ಯೋಗಸ್ಥರಾಗಿದ್ದಾರೆ. ಎಲ್ಲರಿಗೂ ಮದುವೆಯಾಗಿ ಒಳ್ಳೆಯದಾಗಿದೆ ಎನ್ನುತ್ತಾರೆ ಮಠದ ಭಕ್ತ ಪೆರ್ಣಂಕಿಲ ಗುರುರಾಜ ಭಟ್‌.

8 ವರ್ಷದಿಂದ ಮಡೆಸ್ನಾನ
ಎಂಟು ವರ್ಷದ ಹಿಂದೆ ಆರೋಗ್ಯ ಕೈಕೊಟ್ಟು, ಕೈ– ಕಾಲು ನೋವು ಆರಂಭವಾಗಿತ್ತು. ಆರೋಗ್ಯವಂತನಾದರೆ ಮಡೆ ಸ್ನಾನ ಮಾಡುವುದಾಗಿ ಹರಕೆ ಹೊತ್ತಿದ್ದೆ. ಆರೋಗ್ಯ ಸುಧಾರಿಸಿದ ಪರಿಣಾಮ ಮಡೆಸ್ನಾನ ಮಾಡಿದೆ. ಆ ನಂತರ ಪ್ರತಿ ವರ್ಷ ಮಡೆಸ್ನಾನ ಮಾಡುತ್ತಿದ್ದೇನೆ. ಮುಚ್ಲಕೋಡು ಸುಬ್ರಹ್ಮಣ್ಯ ದೇವಸ್ಥಾನದಲ್ಲಿಯೂ ಮಡೆಸ್ನಾನ ಮಾಡಿದ್ದೇನೆ. ಈ ಬಾರಿ ಸ್ವಾಮೀಜಿ ಅವರು ಮಡೆಗೆ ಬದಲಾಗಿ ಎಡೆಸ್ನಾನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಅವರ ಮಾತನ್ನು ಗೌರವಿಸಿದ್ದೇನೆ ಎನ್ನುತ್ತಾರೆ ಮಠದ ಸಿಬ್ಬಂದಿ ಸುಬ್ರಹ್ಮಣ್ಯ ಆಚಾರ್ಯ.

ಬ್ರಾಹ್ಮಣ ಬ್ರಾಹ್ಮಣೇತರ ಎಂಬ ಜಾತಿ ವಿವಾದಕ್ಕೆ ಅವಕಾಶ ಬೇಡ ಎಂಬ ಕಾರಣಕ್ಕೆ ಮಡೆಯ ಬದಲು ಎಡೆ ಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿದೆ.
-ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ

No Comments

Leave A Comment