ಕಾಪುವಿನಲ್ಲಿ “ಸಂವಿಧಾನ ದಿನ” ಆಚರಣೆ
ಉಡುಪಿ: ಒಬ್ಬ ಮಹಿಳೆ ಮನೆಯಲ್ಲಿ ಶಾಂತಿಯುತವಾಗಿ ನೆಮ್ಮದಿಯಾಗಿ ಸಹಬಾಳ್ವೆಯನ್ನು ನಡೆಸುತ್ತಿದ್ದರೆ ಮಾತ್ರ ಸ್ವಾಸ್ಥ ಸಮಾಜದ ನಿರ್ಮಾಣ ಸಾಧ್ಯವಾಗಿದೆ. ಮಹಿಳೆ ಎಲ್ಲಿಯವರೆಗೆ ನೊಂದಿರುತ್ತಾಳೋ ಅಲ್ಲಿಯವರೆಗೆ ದೇಶದ ಉದ್ಧಾರ ಸಾಧ್ಯವಿಲ್ಲ. ಕೌಟುಂಬಿಕ ಹಿಂಸೆಯಲ್ಲದ ಸಂಸಾರ ನೆಮ್ಮದಿಯ ಆಗರ. ಹಿಂಸೆರಹಿತ ಜೀವನ ಮಹಿಳೆಯರ ಹಕ್ಕಾಗಿದೆ.
ಕುಟುಂಬದೊಳಗೆ ಸಂಭವಿಸುವ ಯಾವುದೇ ಬಗೆಯ ಹಿಂಸೆಗೆ ಒಳಗಾದ ಮಹಿಳೆಯರಿಗೆ, ಸಂವಿಧಾನದ ಮೇರೆಗೆ ಖಾತರಿ ನೀಡಲಾದ ಮಹಿಳಾ ಹಕ್ಕುಗಳಿಗೆ ಹೆಚ್ಚು ಪರಿಣಾಮಕಾರಿ ಸಂರಕ್ಷಣೆ ನೀಡುವುದಕ್ಕಾಗಿ ಮತ್ತು ಅದಕ್ಕೆ ಸಂಬಂಧಿಸಿದ ಅಥವಾ ಅದಕ್ಕೆ ಅನುಷಂಗಿಕವಾದ ವಿಷಯಗಳಿಗಾಗಿ ಉಪಬಂಧಿಸುವ ಅಧಿನಿಯಮವೇ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಅಧಿನಿಯಮವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇದರ ಸದಸ್ಯ ಕಾರ್ಯದರ್ಶಿ ಲತಾ ಹೇಳಿದರು.
ಅವರು, ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಉಡುಪಿ, ರೋಟರಿ ಕ್ಲಬ್ ಕಾಪು ಮತ್ತು ನವೋದಯ ಸ್ವಸಹಾಯ ಗುಂಪುಗಳ ಒಕ್ಕೂಟ, ಕಾಪು ಇವರ ವತಿಯಿಂದ ಸಿ.ಎ.ಬ್ಯಾಂಕ್ ಹಾಲ್, ಭಾಸ್ಕರ ಸೌಧ, ಕಾಪು ಇಲ್ಲಿ ಇತ್ತೀಚಿಗೆ ನಡೆದ ‘ಅಂತರಾಪ್ಟ್ರೀಯ ಮಹಿಳೆಯರ ವಿರುದ್ಧದ ಹಿಂಸಾಚಾರ ನಿರ್ಮೂಲನಾ ದಿನಾಚರಣೆ’ಯ ಅಂಗವಾಗಿ ನಡೆದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಫಾಟಿಸಿ ಮಾತನಾಡುತ್ತಿದ್ದರು. ಹಮ್ಜತ್ ಹೆಚ್.ಕೆ. ವಕೀಲರು ‘ಮಹಿಳಾ ದೌರ್ಜನ್ಯ ತಡೆ ಕಾಯ್ದೆ’ಯ ಬಗ್ಗೆ ಉಪನ್ಯಾಸ ನೀಡಿದರು.
ಕಾಪು ರೋಟರಿ ಕ್ಲಬ್ ಅಧ್ಯಕ್ಷ ರೊ| ಸುಧೀರ್ ಕುಮಾರ್ ಅಧ್ಯಕ್ಷತೆಯನ್ನು ವಹಿಸಿದ್ದರು. ಉಡುಪಿ ವಕೀಲರ ಸಂಘದ ಅಧ್ಯಕ್ಷ ದಯಾನಂದ ಕೆ, ನವೋದಯ ಸ್ವಸಹಾಯ ಸಂಘದ ಜಿಲ್ಲಾ ಮೇಲ್ವಿಚಾರಕರಾದ ಹರಿನಾಥ ಉಪಸ್ಥಿತರಿದ್ದರು. ರೊ| ಮನೋಹರ ರಾವ್ ವಂದಿಸಿದರು. ರೊ| ಬಾಲಕೃಷ್ಣ ಆಚಾರ್ಯ ನಿರೂಪಿಸಿದರು.