ಭಾರತ್ ಬಂದ್ ಗೆ ನಮ್ಮ ಬೆಂಬಲ ಇಲ್ಲ: ಸಿಎಂ ಸಿದ್ದರಾಮಯ್ಯ
ಧಾರವಾಡ: 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಪ್ರತಿಪಕ್ಷಗಳು ನವೆಂಬರ್ 28ರಂದು ಕರೆ ನೀಡಿರುವ ಭಾರತ್ ಬಂದ್ ಗೆ ನಮ್ಮ ಬೆಂಬಲ ಇಲ್ಲ ಎಂದು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ.
ನೋಟು ನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಹಾಗೂ ಎಡಪಕ್ಷ ಸೇರಿದಂತೆ ವಿವಿಧ ಪಕ್ಷಗಳು ನ.28ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ಕರೆ ಕೊಟ್ಟಿದ್ದವು. ಏತನ್ಮಧ್ಯೆ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿರುವ ಬಗ್ಗೆ ಬಿಜೆಪಿ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿ, ಸೋಮವಾರದ ಭಾರತ್ ಬಂದ್ ಗೆ ರಾಜ್ಯ ಸರ್ಕಾರ ಪರೋಕ್ಷವಾಗಿ ಬೆಂಬಲ ವ್ಯಕ್ತಪಡಿಸುತ್ತಿದೆ ಎಂದು ಆರೋಪಿಸಿತ್ತು.
ಈ ಹಿನ್ನೆಲೆಯಲ್ಲಿ ಇಂದು ಧಾರವಾಡ ಜಿಲ್ಲಾ ಪಂಚಾಯ್ತಿ ಸಭಾಗಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಎಂ, 500, 1000 ರುಪಾಯಿ ನೋಟು ನಿಷೇಧಿಸಿದ್ದಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಪೂರ್ವ ತಯಾರಿ ಇಲ್ಲದೆ ನಿಷೇಧಿಸಿದ್ದರಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು.
ಇನ್ನು ಸೋಮವಾರ ವಿಧಾನಮಂಡಲದ ಕಲಾಪಕ್ಕೆ ರಜೆ ನೀಡಲು ಸ್ಪೀಕರ್ ನಿರ್ಧಾರ ಕೈಗೊಂಡಿದ್ದಾರೆ ವಿನಃ, ಅದು ಸರ್ಕಾರದ ನಿರ್ಧಾರವಲ್ಲ. ಆದರೆ ಸ್ಪೀಕರ್ ನಿರ್ಧಾರವನ್ನು ಬಿಜೆಪಿ ಮಾತ್ರ ವಿರೋಧಿಸುತ್ತಿದೆ ಎಂದು ಹೇಳಿದರು.