Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಬಿಜೆಪಿ ಪರ ಅನುಕಂಪದ ಅಲೆ…ಬೆಂಗಳೂರಿನ ಲಕ್ಕಸಂದ್ರ ವಾರ್ಡ್‌ನಲ್ಲಿ ಮತ್ತೆ ಅರಳಿದ ಕಮಲ

ಮಂಡ್ಯ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದ ಬಿಜೆಪಿ ಕಾರ್ಪೋರೇಟರ್ ಮಹೇಶ್‌ ಬಾಬುರಿಂದ ತೆರವಾಗಿದ್ದ ಸ್ಥಾನಕ್ಕೆ ಕೆಎಂಸಿ ಕಾಯ್ದೆ ಪ್ರಕಾರ ಮೂರು ತಿಂಗಳ ಒಳಗೆ ಚುನಾವಣೆ ನಡೆದಿತ್ತು. ನ.20ರಂದು ಮತದಾನ ನಡೆದಿತ್ತು. ಇಂದು ಮತ ಎಣಿಕೆ ಪೂರ್ಣಗೊಂಡಿದ್ದು ಸರಳಾ ಅವರು ಕಾಂಗ್ರೆಸ್‌ನ ಪ್ರತಿಸ್ಪರ್ಧಿ ಬಿ. ಮೋಹನ್ ವಿರುದ್ಧ 2,414 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಈ ಮೂಲಕ ಲಕ್ಕಸಂದ್ರ ವಾರ್ಡ್ ಮತ್ತೆ ಬಿಜೆಪಿ ಪಾಲಾಗಿದ್ದು, ಅನುಕಂಪದ ಅಲೆಗೆ ಬೆಲೆ ಸಿಕ್ಕಿದೆ. ಪತಿ ಪಾಲಿಕೆ ಸದಸ್ಯರಾಗಿದ್ದ ಸಂದರ್ಭದಲ್ಲಿ ಸಹಜವಾಗಿ ರಾಜಕೀಯ ಚಟುವಟಿಕೆಯಲ್ಲಿ ತೊಡಗಿದ್ದನ್ನು ಬಿಟ್ಟರೆ ಸರಳಾರಿಗೆ ಯಾವುದೇ ರಾಜಕೀಯ ಅನುಭವ ಇರಲಿಲ್ಲ. ಆದರೆ ಪ್ರತಿಸ್ಪರ್ಧಿ ಮೋಹನ್ ಸಕ್ರಿಯವಾಗಿ ರಾಜಕಾರಣದಲ್ಲಿ ತೊಡಗಿದ್ದು, ಹಿಂದೆ ಮಹೇಶ್‌ಬಾಬು ವಿರುದ್ಧ ಸ್ಪರ್ಧಿಸಿ ಸೋತಿದ್ದರು.

ಸಮಬಲ ಸ್ಪರ್ಧೆಯಲ್ಲಿ ರಾಜಕೀಯ ಅನುಭವ ಮೋಹನ್‌ಗೆ ಇದ್ದರೆ, ಅನುಕಂಪದ ಅಲೆ ಸರಳಾ ಪರ ಇತ್ತು. ಇದರಿಂದ ಗೆಲುವು ಯಾರದ್ದಾಗಲಿದೆ ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿತ್ತು. ಸುಮಾರು 28 ಸಾವಿರ ಮತದಾರರನ್ನು ಒಳಗೊಂಡ ಲಕ್ಕಸಂದ್ರ ವಾರ್ಡ್‌ನಲ್ಲಿ ಶೇ.45ರಷ್ಟು ಮತದಾನವಾಗಿತ್ತು. ಕಳೆದ ಚುನಾವಣೆಗೆ ಹೋಲಿಸಿದರೆ ಶೇ.3ರಷ್ಟು ಹೆಚ್ಚಿನ ಮತದಾನವಾಗಿತ್ತು.

ಗೆಲುವಿನ ನಂತರ ಮಾತನಾಡಿದ ಸರಳಾ ಮಹೇಶ್‌ಬಾಬು, ಪತಿ ಮಾಡಿದ ಅಭಿವೃದ್ಧಿ ಕಾರ್ಯವನ್ನೇ ಮುಂದುವರಿಸುವಂತೆ ಜನ ನನಗೆ ತಿಳಿಸಿದ್ದಾರೆ. ಜನರ ಆಶೀರ್ವಾದ ನನಗೆ ಸಿಕ್ಕಿದ್ದು, ಅವರ ಆಶಯದಂತೆ ನಡೆದುಕೊಳ್ಳುತ್ತೇನೆ. ಈ ಗೆಲುವನ್ನು ಪತಿ ಮಹೇಶ್‌ಬಾಬು ಹಾಗೂ ಕಾರ್ಯಕರ್ತರಿಗೆ ಅರ್ಪಿಸುತ್ತೇನೆ. ಪತಿ ವಾರ್ಡ್‌ನಲ್ಲಿ ಮಾಡಿದ ಅಭಿವೃದ್ಧಿ ಕೆಲಸ ಮುಂದುವರಿಸುತ್ತೇನೆ. ಜನರು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ. ಅವರು ಸಾಗಿದ ಮಾರ್ಗದಲ್ಲಿಯೇ ಸಾಗುತ್ತೇನೆ ಎಂದು ತಿಳಿಸಿದ್ದಾರೆ.

No Comments

Leave A Comment