Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಹಳಿ ತಪ್ಪಿದ ರೈಲು: ಸಾವಿನ ಸಂಖ್ಯೆ 133ಕ್ಕೆ ಏರಿಕೆ

ಪುಖರಾಯಾ (ಉ.ಪ್ರ.): ಇತ್ತೀಚಿನ ದಿವಸಗಳಲ್ಲೇ ಅತೀ ಭೀಕರ ಎನ್ನಬಹುದಾದ ರೈಲು ದುರಂತ ಉತ್ತರಪ್ರದೇಶದ ಕಾನ್ಪುರ ಜಿಲ್ಲೆ ಯಲ್ಲಿ ರವಿವಾರ ನಸುಕಿನ ಜಾವ ಸಂಭವಿಸಿದೆ. ಇಂದೋರ್‌-ಪಟ್ನಾ ಎಕ್ಸ್‌ಪ್ರೆಸ್‌ ರೈಲು ಹಳಿ ತಪ್ಪಿದ ಕಾರಣ 133 ಜನ ಸಾವನ್ನಪ್ಪಿ, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಕಾನ್ಪುರ ಗ್ರಾಮೀಣ ಭಾಗದ ಪುಖರಾಯಾ ಎಂಬಲ್ಲಿ ನಸುಕಿನ 3 ಗಂಟೆ ವೇಳೆಗೆ ದುರಂತ ಸಂಭವಿಸಿದೆ. ಬಿರುಕು ಬಿಟ್ಟ ಹಳಿ ಮೇಲೆ ರೈಲು ಚಲಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಅಪಘಾತದ ಭೀಕರತೆ ಎಷ್ಟಿತ್ತು ಎಂದರೆ 14 ಬೋಗಿಗಳು ಹಳಿ ತಪ್ಪಿವೆ. ಎಸ್‌1, ಎಸ್‌2, ಎಸ್‌3, ಎಸ್‌4 ಬೋಗಿಗಳು ನಜ್ಜುಗುಜ್ಜಾಗಿವೆ. ಅದರಲ್ಲಂತೂ ಎಸ್‌1 ಮತ್ತು ಎಸ್‌ 2 ಬೋಗಿ ಗಳು ಒಂದರ ಮೇಲೊಂದು ಹತ್ತಿದ್ದರಿಂದ ಎರಡೂ ಬೋಗಿಗಳು ಅಪ್ಪಚ್ಚಿಯಾಗಿವೆ. ಈ ಎರಡು ಬೋಗಿಗಳಲ್ಲೇ ಹೆಚ್ಚು ಸಾವು ನೋವು ಸಂಭವಿಸಿವೆ. ಎಸಿ-3 ಟಯರ್‌ ಬೋಗಿಗೂ ಹಾನಿಯಾಗಿದೆಯಾದರೂ ಸಾವು-ನೋವು ಇದರಲ್ಲಿ ಹೆಚ್ಚಾಗಿಲ್ಲ. ಅವಘಡದ ಹಿನ್ನೆಲೆಯಲ್ಲಿ ಈ ಮಾರ್ಗದ 4 ರೈಲುಗಳ ಸಂಚಾರ ರದ್ದುಪಡಿಸಿದ್ದರೆ, 14 ರೈಲುಗಳ ಸಂಚಾರದ ಮಾರ್ಗವನ್ನು ಬದಲಿಸಲಾಗಿದೆ.

ಘಟನೆಗೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ, ರೈಲ್ವೇ ಸಚಿವ ಸುರೇಶ್‌ ಪ್ರಭು, ಉ.ಪ್ರ. ಮುಖ್ಯಮಂತ್ರಿ ಅಖಿಲೇಶ್ ಯಾದವ್‌, ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಆದಿಯಾಗಿ ಅನೇಕರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಪ್ರಭು ಮತ್ತು ರೈಲ್ವೇ ಖಾತೆ ಸಹಾಯಕ ಸಚಿವ ಮನೋಜ್‌ ಸಿನ್ಹಾ ಅವರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಿಕೊಂಡಿದ್ದಾರೆ. ಉತ್ತರ ರೈಲ್ವೇ ವಲಯದ ಸುರಕ್ಷತಾ ಆಯುಕ್ತರಿಗೆ ಘಟನೆಯ ಬಗ್ಗೆ ತನಿಖೆಗೆ ಪ್ರಭು ಆದೇಶಿಸಿದ್ದಾರೆ.

ಮೃತರ ಕುಟುಂಬಗಳಿಗೆ ಉತ್ತರಪ್ರದೇಶ ಸಿಎಂ ಅಖೀಲೇಶ್‌ ಯಾದವ್‌ ತಲಾ 5 ಲಕ್ಷ ರೂ.,  ರೈಲ್ವೇ ಸಚಿವಾಲಯವು ತಲಾ 3.5 ಲಕ್ಷ ರೂ., ಪ್ರಧಾನಿ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ., ಮಧ್ಯಪ್ರದೇಶ ಸಿಎಂ ಶಿವರಾಜ್‌ಸಿಂಗ್‌ ಚೌಹಾಣ್‌ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಜತೆಗೆ ಗಾಯಾಳುಗಳಿಗೆ ರೈಲ್ವೇ, ಪ್ರಧಾನಿ ನಿಧಿ, ಯುಪಿ ಸಿಎಂ ನಿಧಿ, ಮಧ್ಯಪ್ರದೇಶ ಸಿಎಂ ತಲಾ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.

ಬದುಕುಳಿದವರನ್ನು ಅಡೆತಡೆಯಿಲ್ಲದೇ ಆಸ್ಪತ್ರೆಗೆ ದಾಖಲಿಸಲು ಗ್ರೀನ್‌ ಕಾರಿಡಾರ್‌ ಸೃಷ್ಟಿಸಲಾಗಿತ್ತು. ಅಲ್ಲದೆ, ರಾಷ್ಟ್ರೀಯ ವಿಪತ್ತು ನಿರ್ವಹಣ ತಂಡ, ಅಗ್ನಿಶಾಮಕ ದಳ, ಪೊಲೀಸರು, ರೈಲ್ವೇ ಅಧಿಕಾರಿಗಳು, ವೈದ್ಯರು ಸ್ಥಳದಲ್ಲಿ ಇಡೀ ದಿನ ಅವಿರತ ರಕ್ಷಣಾ ಕಾರ್ಯ ನಡೆಸಿದರು. ಬೋಗಿಗಳಲ್ಲಿ ಸಿಲುಕಿದ 53 ಮಂದಿಯನ್ನು ಎನ್‌ಡಿಆರ್‌ಎಫ್ ರಕ್ಷಿಸಿದ್ದು, ಈ ಪೈಕಿ ಅಪ್ಪಚ್ಚಿಯಾದ ಬೋಗಿಯಲ್ಲಿದ್ದ 16 ಮಂದಿಯನ್ನು ಪವಾಡಸದೃಶವಾಗಿ ರಕ್ಷಿಸಿದೆ.

ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಕಾನ್ಪುರ ವಲಯದ ಆಯುಕ್ತ ಇಫ್ತಿಕಾರುದ್ದೀನ್‌ ತಿಳಿಸಿದ್ದಾರೆ. ಘಟನೆ ಯಿಂದಾಗಿ ಈ ಮಾರ್ಗದ ಅನೇಕ ರೈಲುಗಳು ರದ್ದಾಗಿವೆ. ರೈಲು ಪ್ರಯಾಣಿಕರಿಗೆಲ್ಲ ಬಸ್ಸಿನ ಮೂಲಕ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

ಜಾರಿಗೆ ಬಾರದ ಹಳಿ ಸುರಕ್ಷತಾ ವ್ಯವಸ್ಥೆ
ಹಳಿಗಳ ಮೇಲೆ ಸ್ಥಿತಿ ನಿಗಾ ಇಡುವ “ಹಳಿ ನಿರ್ವಹಣ ವ್ಯವಸ್ಥೆ’ ಎಂಬ ಕಂಪ್ಯೂಟರೀಕೃತ ವ್ಯವಸ್ಥೆಯನ್ನು ಜಾರಿಗೆ ತರುವುದಾಗಿ ಸರಕಾರ ಕಳೆದ ವರ್ಷವೇ ಹೇಳಿಕೊಂಡಿತ್ತಾದರೂ ಅದಿನ್ನೂ ಸಂಪೂರ್ಣವಾಗಿ ಜಾರಿಗೆ ಬಂದಿಲ್ಲ. ಅಲ್ಲದೆ, ಆಧುನಿಕ “ಲಿಂಕ್‌ ಹಾಫ್ಮನ್‌ ಬುಷ್‌’ (ಎಲ್‌ಎಚ್‌ಬಿ) ಬೋಗಿಗಳನ್ನು ಅಳವಡಿಸಲಾಗಿದ್ದರೆ, ಅಪಘಾತದ ಸಂದರ್ಭದಲ್ಲಿ ಹೆಚ್ಚು ಸಾವು ನೋವು ಆಗುತ್ತಿರಲಿಲ್ಲ. ಎಲ್‌ಎಚ್‌ಬಿ ಕೋಚ್‌ಗಳು ಸ್ಟೇನ್‌ಲೆಸ್‌ ಸ್ಟೀಲ್‌ ಆಗಿದ್ದು, ಶಾಕ್‌ ಅಬಾÕರ್ಬರ್‌ಗಳನ್ನು ಹೊಂದಿವೆ. ಇದರಿಂದ ಅಪಘಾತದ ಸಂದರ್ಭದಲ್ಲಿ ಹಾನಿಯ ಪ್ರಮಾಣ ತಗ್ಗುತ್ತದೆ.

ರೈಲ್‌ ಫ್ರಾಕ್ಚರ್‌  ಎಂದರೇನು?
ಇಂದೋರ್‌- ಪಟ್ನಾ ಎಕ್ಸ್‌ಪ್ರೆಸ್‌ ರೈಲು ದುರಂತಕ್ಕೆ “ರೈಲ್‌ ಫ್ರಾಕ್ಚರ್‌’ ಕಾರಣ ಎಂದು ಹೇಳಲಾಗಿದೆ.”ಹಳಿಗಳ ಬಿರುಕು ಬಿಡುವಿಕೆ’ಗೆ ರೈಲ್‌ ಫ್ರಾಕ್ಚರ್‌ ಎನ್ನುತ್ತಾರೆ. ಹವಾಮಾನ ವೈಪರೀತ್ಯ ತುಂಬಾ ಆದ ಸಂದರ್ಭದಲ್ಲಿ (ಅಂದರೆ ಅತಿಯಾದ ತಾಪಮಾನ ಉಂಟಾದರೆ ಅಥವಾ ಅತಿ ಯಾಗಿ ಚಳಿ ಸೃಷ್ಟಿಯಾದರೆ) ರೈಲು ಹಳಿಗಳು ಬಿರುಕು ಬಿಡುತ್ತವೆ. ಹವಾಮಾನ ವೈಪರೀತ್ಯ ಅತಿಯಾದ ಪ್ರಮಾಣದಲ್ಲಿದ್ದರೆ ಹಳಿಗಳು ಬಿರುಕು ಬಿಡುವುದಷ್ಟೇ ಅಲ್ಲ, ಸಂಪೂರ್ಣ ಬೇರ್ಪಟ್ಟು  ತುಂಡಾಗಿ ಬಿಡುತ್ತವೆ. ಬೇಸಗೆಯಲ್ಲಿ ಹಿಗ್ಗುವಿಕೆಯಿಂದ ಹಳಿ ತುಂಡಾ ದರೆ, ಚಳಿಗಾಲದಲ್ಲಿ ಕುಗ್ಗುವಿಕೆಯಿಂದ ತುಂಡಾಗುತ್ತವೆ. ಇದಕ್ಕೆ “ರೈಲ್‌ ಫ್ರಾಕ್ಚರ್‌’ ಎನ್ನುತ್ತಾರೆ. ಅಂತೆಯೇ ಉತ್ತರ ಭಾರತದಲ್ಲಿ ಈಗ ಕೊರೆವ ಚಳಿಗಾಲ ಆರಂಭವಾಗಿದ್ದು, ಇದೇ ಹಳಿ ಬಿರುಕಿಗೆ ಕಾರಣ ಎನ್ನಲಾಗುತ್ತಿದೆ.

- ಉತ್ತರಪ್ರದೇಶದ ಕಾನ್ಪುರದಲ್ಲಿ  ಹಳಿಯಲ್ಲಿ  ಬಿರುಕು ಕಾಣಿಸಿಕೊಂಡು ದುರಂತ
- ಉರುಳಿಬಿತ್ತು ಇಂದೋರ್‌-ಪಟ್ನಾ ಎಕ್ಸ್‌ಪ್ರೆಸ್‌ನ 14 ಬೋಗಿಗಳು
– 2 ಅಪ್ಪಚ್ಚಿ

No Comments

Leave A Comment